Wednesday, 29th June 2022

ಕಾಮ ವರ್ಜ್ಯವಲ್ಲ; ಭಗವಂತನ ಕಡೆಗೆ ಹೋಗುವ ದಾರಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಧ್ಯಾತ್ಮ ಚಿಂತಕಿ, ಲೇಖಕಿ ವೀಣಾ ಬನ್ನಂಜೆ ಅವರಿಂದ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಸಂವಾದ – ೩೨೩

ಕಾಮವೆಂದರೆ ಕೇವಲ ದೈಹಿಕ ಸುಖವಲ್ಲ. ಅದರಲ್ಲಿ ದೈಹಿಕ, ಇಂದ್ರಿಯ, ಮಾನಸಿಕ ಹಾಗೂ ಭಗವತ್ ಕಾಮ ಎಲ್ಲವೂ ಇರುತ್ತದೆ. ಭಗವಂತನನ್ನು ಕಂಡುಕೊಳ್ಳುವುದಕ್ಕೆ ಕಾಮವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧ್ಯಾತ್ಮ ಚಿಂತಕಿ, ಲೇಖಕಿ ವೀಣಾ
ಬನ್ನಂಜೆ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ‘ಕಾಮ, ಬ್ರಹ್ಮಚರ್ಯ ಮತ್ತು ಅಧ್ಯಾತ್ಮ ’ ವಿಷಯದ ಅರಿವಿನ ಉಪನ್ಯಾಸ ನೀಡಿದ ಅವರು, ಕಾಮ ಮತ್ತು ಬ್ರಹ್ಮಚರ್ಯ ಅನೇಕರಿಗೆ ಕುತೂಹಲ. ಈ ಕುತೂಹಲ ಕೆಲವೊಮ್ಮೆ ಅಪಾಯವನ್ನು ತರುತ್ತದೆ. ‘ಕಾಮ’ ಎನ್ನುವುದನ್ನು ಕೇವಲ ದೈಹಿಕ ಕಾಮಕ್ಕೆ ಸೀಮಿತಗೊಳಿಸುವುದು ತಪ್ಪು. ಕಾಮ ಎಂದರೆ ಅಪೇಕ್ಷೆ. ಅದರಲ್ಲಿ ದೈಹಿಕ ಕಾಮವಿದೆ.

ಆದರೆ, ಅದನ್ನು ಮೀರಿದ ಹಲವು ಆಪೇಕ್ಷೆಗಳೂ ಇರುತ್ತವೆ. ಮಾನಸಿಕ ಅಪೇಕ್ಷೆಯೂ ಇದೆ ಎನ್ನುವುದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು. ಹಾಗೇ ನೋಡಿದರೆ, ಹುಟ್ಟಿನಿಂದ ಸಾವಿನ ತನಕ ಕಾಮ ಇರುತ್ತದೆ. ನನಗೊಂದು ಚಪ್ಪಲಿ ಬೇಕು, ಅವನೇ ಬೇಕು, ಇವಳೇ ಬೇಕು ಎನ್ನುವುದು ಅಪೇಕ್ಷೆಯ ಭಾಗ. ಕೆಲವೊಮ್ಮೆ ಮಾನಸಿಕ ಅಪೇಕ್ಷೆಯಿಂದ ಆರಂಭವಾಗಿ ಅದು ದೈಹಿಕ ಅಪೇಕ್ಷೆಗೆ ತಿರುಗುತ್ತದೆ.

ಆದರೆ, ಮಾನಸಿಕ ಹಾಗೂ ದೈಹಿಕ ಎರಡಲ್ಲಿ ಮೊದಲು ಯಾವುದು ಎನ್ನುವುದು ಬೇರೆಯ ವಿಷಯ. ಇಂದ್ರಿಯದ ಯಾವುದೇ ಅಪೇಕ್ಷೆ ಆಗಬಹುದು. ಇನ್ನು ಕೆಲವೊಮ್ಮೆ ನಾವು ನೋಡಿರದ ವಿಷಯಗಳ ಮೇಲೆಯೂ ಆಪೇಕ್ಷೆಗಳು ಇರುತ್ತದೆ. ಅದು ಭಗವತ್ ಕಾಮವಿರಬಹುದು ಎಂದರು.

ಭಗವಂತ ಬೇಕು ಎನ್ನುವುದು ಕಾಮದ ಭಾಗವೇ: ಭಗವಂತ ಬೇಕು ಎನ್ನುವುದು ಸಹ ಕಾಮದ ಒಂದು ಭಾಗವೇ ಆಗಿರುತ್ತದೆ. ಆದರೆ, ಅದು ದೈಹಿಕ ಕಾಮವಲ್ಲ. ಕೆಲವರಿಗೆ ಹುಟ್ಟುತ್ತಿದ್ದಂತೆ ದೇವರ ಮೇಲೆ ಅಪೇಕ್ಷೆಯಿರುತ್ತದೆ. ಅದು ಜೀವ ಕಾಮ. ಆದರಿದು ಇಂದ್ರಿಯ ಕರ್ಮಗಳ ಆಕರ್ಷಣೆಯಾಗುವುದಿಲ್ಲ. ಆಂತರಂಗವಾಗಿ ಕಾಣುವ ಕಾಮ. ಅದನ್ನು ‘ಅಭೀಕ್ಷೆ’ ಎನ್ನುತ್ತಾರೆ.

ಆದ್ದರಿಂದ ಕಾಮ ಇಲ್ಲದೆ ಏನೂ ನಡೆಯುವುದಿಲ್ಲ. ಭಗವಂತ ಬೇಕು ಎನ್ನುವುದು ದೈಹಿಕ ಕಾಮವಲ್ಲ. ಆದರೆ ಅದು ಅಲೌಖಿಕ ಅಪೇಕ್ಷೆಯಾಗಿರುತ್ತದೆ. ಕಾಮವಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಮಹಾಭಾರತದಲ್ಲಿ ಎಲ್ಲಕಿಂತ
ದೊಡ್ಡದು ಯಾವುದು ಎಂದು ಕೃಷ್ಣ ಪ್ರಶ್ನಿಸಿದಾಗ, ‘ಕಾಮ’ ಎಂದು ಭೀಮಸೇನ ಉತ್ತರಿಸಿದ್ದ. ಅದನ್ನು ಕೃಷ್ಣ ಸಹ ಬೆಂಬಲಿಸಿದ್ದ ಎಂದು ಹೇಳಿದರು.

ಸೆಕ್ಸ್ ಎನ್ನುವುದು ಒಂದು ಆಸೆ ‘ಕಾಮ’ ಪದಕ್ಕೆ ಇರುವ ಮತ್ತೊಂದು ಅರ್ಥ ಸೆಕ್ಸ್. ಇದೊಂದು ಪ್ರಕೃತಿ ತತ್ವದಲ್ಲಿರುವ ಆಸೆ.
ದೇಹಕ್ಕೆ ಕೆಲವು ಅವಶ್ಯಕತೆಗಳಿರುತ್ತವೆ. ಅದು ನೈಸರ್ಗಿಕವಾಗಿ ಇರುತ್ತವೆ. ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ಬೆತ್ತಲೆ ಚಿತ್ರ, ಬೆತ್ತಲೆ ಹೆಣ್ಣು ಅಥವಾ ಹೆಣ್ಣನ್ನು ಏಕಾಂತದಲ್ಲಿ ನೋಡಿದಾಗ ಕಾಮ ಎದುರಾಗುತ್ತದೆ. ಇದು ದೈಹಿಕ ಕಾಮ. ಇದು ನೈಸರ್ಗಿಕ. ಪ್ರತಿ ಮನುಷ್ಯನ ಹುಟ್ಟಿನ ಧ್ಯೇಯ ಇನ್ನೊಂದು ಜೀವವನ್ನು ಹುಟ್ಟಿಸಬೇಕಾದದ್ದು. ಅದು ಇರಲೇಬೇಕು. ಇದು ಪ್ರತಿಯೊಬ್ಬರಲ್ಲಿಯೂ ಇದೆ.

ಆದರೆ, ಈ ಆಸೆ ಹೆಣ್ಣಿಗಿಂತ ಗಂಡಿನಲ್ಲಿ ಹೆಚ್ಚಿರುತ್ತದೆ. ಹೆಣ್ಣು ಕಾಮಕ್ಕಿಂತ ಮೊದಲು ಪ್ರೇಮವನ್ನು ಅಪೇಕ್ಷಿಸುತ್ತಾಳೆ ಎಂದರು.
ಇಂತಹ ಇಂದ್ರಿಯ ಕಾಮವನ್ನು ಪ್ರಜ್ಞಾವಸ್ಥೆಯಲ್ಲಿ ಹಿಡಿತದಲ್ಲಿಟ್ಟುಕೊಳ್ಳುವುದು ಸಾಮಾನ್ಯ. ಆದರೆ ನಿದ್ರೆಯಲ್ಲಿರುವಾಗ, ಕನಸಿನಲ್ಲಿ ಬರುವ ಇಂದ್ರಿಯ ಕಾಮವನ್ನು ನಿಯಂತ್ರಿಸುವುದು ಬಹುದೊಡ್ಡ ಸಾಧನೆ. ಅದಕ್ಕೆ ಶ್ರಮ ಬೇಕು. ಇದನ್ನು
ದಾಟಿ ಮುನ್ನಡೆಯಬೇಕು ಎಂದರು.

ಭಗವಂತನ ಕಾಮವು ಇಂತಹ ಎಲ್ಲ ಕಾಮವನ್ನು ಕಿತ್ತೆಸೆಯುತ್ತದೆ. ಕನಸು, ನಿದ್ರೆಯಲ್ಲಿ ಇಂದ್ರಿಯ ಆಪೇಕ್ಷೆಯನ್ನು ದಾಟಿದ್ದೇವೆ ಎಂದು ಹೇಳಲು ಭಾರೀ ಪ್ರಯತ್ನ ಅಗತ್ಯ. ಅದನ್ನು ಕಲಿಯುವುದು ದೊಡ್ಡ ಸವಾಲು ಹಾಗೂ ಕೆಲಸ. ಇದು ಒಂದು ತಪ್ಪಸ್ಸು.
ಭಗವಂತನನ್ನು ಹುಡುಕುವಾಗ ಶೇ.೧೦೦ರಷ್ಟು ಅವನಿಗೆ ಸಮರ್ಪಿಸಿಕೊಳ್ಳಬೇಕು. ಅವನ ಹೊರತಾಗಿ ಇನ್ನೊಂದು ನೆನಪಾದರೆ ಆಗ ಭಗವಂತನಿರುವುದಿಲ್ಲ ಎಂದು ಹೇಳಿದರು.

ಕಾಮಕ್ಕೆ ಧಣಿವಾಗುತ್ತದೆ. ಆದರೆ ಪ್ರೇಮ ಎನ್ನುವುದು ಅವಿಶ್ರಾಂತ. ಆಗ ತಾನೆ ಹುಟ್ಟಿರುವ ಮಗುವನ್ನು ಪ್ರೀತಿಸುತ್ತೇವೆ. ಅಲ್ಲಿ ನಮಗೆ ಪ್ರೇಮವಿರುತ್ತದೆಯೇ ಹೊರತು ಕಾಮವಲ್ಲ. ಆದ್ದರಿಂದ ಅಧ್ಯಾತ್ಮ ಸಾಧಕರ ಹತ್ತಿರ ಹೋದರೆ, ಅವರು ನಮ್ಮನ್ನು ಪ್ರೀತಿಸುತ್ತಾರೆ ಎನ್ನಿಸುತ್ತದೆ. ಏಕೆಂದರೆ ಅವರು ಎಲ್ಲರಲ್ಲೂ ಭಗವಂತನ್ನು ಅನುಭವಿಸುತ್ತಾರೆ. ಈ ಭಾವ ಕನೆಕ್ಟ್ ಆದರೆ, ದೈಹಿಕ
ಪ್ರಶ್ನೆ ಅನಗತ್ಯವಾಗುತ್ತದೆ ಎಂದು ವಿವರಿಸಿದರು.

ಭಾವ ಶುದ್ಧವಿದ್ದರೆ ನಷ್ಟವಾಗುವುದಿಲ್ಲ
ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನ ಪ್ರಸಂಗ ಬರುತ್ತದೆ. ಅದರಲ್ಲಿ ರಾವಣನ ಅಂತಃಪುರಕ್ಕೆ ರಾತ್ರಿಯ ವೇಳೆ ಹೊಕ್ಕುತ್ತಾನೆ. ಆ ಸಮಯದಲ್ಲಿ ಹೆಣ್ಣು ಮಕ್ಕಳು ದುರಾವಸ್ಥೆಯಲ್ಲಿ ಇರುವುದನ್ನು, ನೋಡಬಾರದ ಅವಸ್ಥೆಯಲ್ಲಿ ನೋಡುತ್ತಾನೆ.
ಅದರಲ್ಲಿ ನಗ್ನತೆ ಇರುತ್ತದೆ. ಈ ಬಗ್ಗೆ ಕೊಂಚ ಹೆಚ್ಚು ಅನಿಸುವ ವಿವರಣೆಯನ್ನು ವಾಲ್ಮೀಕಿ ನೀಡಿದ್ದಾರೆ. ಆದರೆ ಇದಾದ ಬಳಿಕ ಹನುಮಂತ ತಾನು ಧರ್ಮಚ್ಯುತಿ ಮಾಡಿದ್ದೇನೆಯೇ ಎನ್ನುವ ಗೊಂದಲಕ್ಕೆ ಬೀಳುತ್ತಾನೆ. ಆದರೆ, ಆತನ ನೋಟದಲ್ಲಿ ಭಾವ ಶುದ್ಧತೆ ಇದ್ದಿದ್ದರಿಂದ ಅದು ಧರ್ಮ ಚ್ಯುತಿಯಲ್ಲ. ಐಂದ್ರಿಕ ಪ್ರಚೋದನೆಯಿದ್ದರೆ ಶುದ್ಧ. ನೋಡದೇ ಇರುವು ದರಿಂದ, ನೋಡು ವುದರಿಂದ ನಷ್ಟವಾಗುವುದಿಲ್ಲ. ಆದರೆ, ನೋಟದ ಹಿಂದಿನ ಭಾವ ಮುಖ್ಯ. ಬ್ರಹ್ಮಚರ್ಯದ ಗಟ್ಟಿತನ ಮುಖ್ಯ ಎನ್ನುವುದನ್ನು ವಾಲ್ಮೀಕಿ ಮಹರ್ಷಿ ರಾಮಾಯಾಣದಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ವೀಣಾ ಬನ್ನಂಜೆ ವಿವರಿಸಿದರು.

ಸನ್ಯಾಸಿಗಳೊಂದಿಗೆ ಅಂತರವಿರಲಿ
ಭಾರತ ಪರಂಪರೆಯಲ್ಲಿ ಕೆಲವು ಮಠಾಧೀಶರು ಬ್ರಹ್ಮಚರ್ಯೆಯನ್ನು ಪಾಲಿಸಿಕೊಂಡು ಬರುತ್ತಿರುತ್ತಾರೆ. ಈ ಬ್ರಹ್ಮಚರ್ಯ ವನ್ನು ಪಾಲಿಸುವುದು ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಏಕೆಂದರೆ ದೊಡ್ಡ ದೊಡ್ಡ ಮಠಾಧೀಪತಿಗಳು, ನಿತ್ಯ ಅನೇಕರನ್ನು ಭೇಟಿಯಾ ಗಬೇಕಾಗುತ್ತದೆ. ಆದ್ದರಿಂದ ಇಂತಹ ಮಠಾಧೀಪತಿಗಳು, ಬ್ರಹ್ಮಚರ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಹ ಅವರ ಶಿಷ್ಯಂದಿರ ಕರ್ತವ್ಯವಾಗಿರುತ್ತದೆ. ಆದ್ದರಿಂದ ಮಹಿಳೆಯರು ಮಠಾಧೀಶರನ್ನು ಏಕಾಂತದಲ್ಲಿ ಭೇಟಿಯಾಗಲು ಹೋಗಬಾರದು ಎಂದು ವೀಣಾ ಬನ್ನಂಜೆ ಸಲಹೆ ನೀಡಿದರು.

ಅರಿಷಡ್ವರ್ಗಕ್ಕೆ ಮೂಲವೇ ದೈಹಿಕ ಕಾಮ 
ಅರಿಷಡ್ವರ್ಗವೆಂದು ಹೇಳಲಾಗುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳಿಗೆ ಮೂಲವೇ ಕಾಮ. ಶ್ರೀಕೃಷ್ಣ ಲೌಖಿಕ ಕಾಮದ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ. ದೈಹಿಕ ಕಾಮ ಸಿಗದಿದ್ದರೆ, ಲೌಖಿಕ ಕಾಮ ಸಿಗದಿದ್ದರೆ ಕೋಪ ಬರುತ್ತದೆ. ಕೋಪದಿಂದ ಕ್ರೋಧ ಹುಟ್ಟಿಸುತ್ತದೆ. ಕೋಪ ನಂತರದಲ್ಲಿ ಮೋಹ ಹೆಚ್ಚಿ, ಭ್ರಾಂತಿ ಹುಟ್ಟುತ್ತದೆ. ಕ್ರೋಧದಿಂದ ಮೋಹಕ್ಕೆ
ತಿರುಗಿದರೆ ಅಧಃಪತನ ಆರಂಭ. ಆದ್ದರಿಂದ ಕಾಮವನ್ನು ಸಂಯಮಕ್ಕೆ ತಂದುಕೊಂಡರೆ ಈ ಐದು ವಿಷಯಗಳು ತಡೆಯಬಹುದು ಎಂದು ವೀಣಾ ಬನ್ನಂಜೆ ಹೇಳಿದರು.

ಗುರುವನ್ನು ನಾವು ಹುಡುಕುವುದಲ್ಲ
ಯಾವುದೇ ಕಾರಣಕ್ಕಾಗಿ ನಾವು ಯಾವುದೇ ಗುರುವಿನ ಬಳಿ ಹೋಗಬೇಕಾದರೆ, ಅದು ನಮ್ಮ ಆಯ್ಕೆಯಾಗಬಾರದು. ಗುರುವಿಗೆ ಯಾರನ್ನು ತನ್ನ ಶಿಷ್ಯರನ್ನಾಗಿ ಮಾಡಿಕೊಳ್ಳಬೇಕು ಎನ್ನುವುದು ಗೊತ್ತು. ಅವರೇ ಆಯ್ಕೆ ಮಾಡುತ್ತಾರೆ. ಹಾಗೆ ಗುರುವಿನಿಂದ
ಆಯ್ಕೆಯಾದವರನ್ನು, ಗುರುವು ತಾಯಿ ಯಂತೆ ಬೆಳೆಸುತ್ತಾನೆ. ನಿಜಗುರು ಸದಾ ಶಿಷ್ಯರನ್ನು ಸದಾ ಮಗುವಿನ ಹಾಗೆ ತಲೆ ಮೇಲೆ ಹೊತ್ತು ಬೆಳೆಸುತ್ತಾನೆ. ಇದು ನಿಜ ಗುರಿವಿನ ಸ್ಥಿತಿ ಎಂದು ವೀಣಾ ಬನ್ನಂಜೆ ವಿವರಿಸಿದರು.

***

ಕಾಮಕ್ಕೆ ದಣಿವಿದೆ. ಪ್ರೇಮಕ್ಕೆ ದಣಿವಿಲ್ಲ.

ಅಧ್ಯಾತ್ಮ ನೇರವಾಗಿ ಆಂತರಿಕ ಅನುಸಂಧಾನ.

ಅದರಲ್ಲಿ ಎಂದಿಗೂ ಆಚರಣೆಯಿಲ್ಲ.

ಆಚರಣೆಗಳು ಬರುವುದು ಧರ್ಮದಲ್ಲಿ ಹೊರತು ಆಧ್ಯಾತ್ಮದಲ್ಲಲ್ಲ.

ದಾಂಪತ್ಯದಲ್ಲಿದ್ದು, ಮಗುವಾದ ಬಳಿಕ ದೈಹಿಕವಾಗಿ ದೂರವಾದರೂ ಬ್ರಹ್ಮಚರ್ಯೆ

ಅಧ್ಯಾತ್ಮದಲ್ಲಿ ನೇರವಾಗಿ ನನ್ನ ಆತ್ಮವನ್ನು ಹುಡುಕಿ, ಭಗವಂತನನ್ನು ಮುಖಾಮುಖಿ ಮಾಡುವುದು.

ಇತ್ತೀಚಿನ ದಿನಗಳಲ್ಲಿ ಭಗವಂತನ ಮಾರ್ಗ ತೋರಿಸುವ ಹೆಸರಲ್ಲಿ ಹೆಣ್ಣುಮಕ್ಕಳಿಗೆ ವಂಚಿಸುವವರಿದ್ದಾರೆ.

ಬ್ರಹ್ಮಚರ್ಯ ಎನ್ನುವುದು ಬೆಂಕಿಯೊಂದಿಗಿನ ಬದುಕು. ಸಣ್ಣ ಕಿಡಿಯಿಂದಲೂ ಇಡೀ ವ್ಯವಸ್ಥೆ ಭಸ್ಮವಾಗುತ್ತದೆ.