Saturday, 10th April 2021

ಬಂದಿದೆ ಯುಗಾದಿಯ ಹೊಸವರ್ಷ

ಭಾರತದ ಬಹುಪಾಲು ಎಲ್ಲಾ ರಾಜ್ಯಗಳಲ್ಲಿ ಯುಗಾದಿಯನ್ನು ಆಚರಿಸುತ್ತಾರೆ. ಉತ್ತರದ ರಾಜ್ಯಗಳಲ್ಲಿ ಆಚರಿಸುವ ರೀತಿ ತುಸು ವಿಭಿನ್ನ, ಹೆಸರು ಸಹ ಬೇರೆ. ನಮ್ಮ ರಾಜ್ಯದಲ್ಲಂತೂ ವರ್ಷದ ಅತಿ ದೊಡ್ಡ ಹಬ್ಬಗಳಲ್ಲಿ ಯುಗಾದಿಯೂ ಒಂದು.

ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ವರುಷದ ಹೊಸತು ಹೊಸತು
ತರುತಿದೆ

ವರಕವಿ ಬೇಂದ್ರೆಯವರು ಬರೆದ ಈ ಕವಿತೆಯ ಸಾಲುಗಳು ಎಂದೆಂದಿಗೂ ಪ್ರಸ್ತುತ. ವರ್ಷ ವೊಂದನ್ನು ಯುಗವೆಂತಲೂ, ಅದರ ಮೊದಲ ದಿನವನ್ನು ಆದಿಯೆಂತಲೂ ಕರೆಯ ಲಾಗುತ್ತದೆ. ಕವಿ ನುಡಿಯಂತೆ, ಯುಗಾದಿ ಎಂದರೆ ಎಲ್ಲವೂ ಹೊಸತು.

ಸೃಷ್ಟಿಕರ್ತ ಬ್ರಹ್ಮ, ಬ್ರಹ್ಮಾಂಡದ ಸೃಷ್ಟಿಯನ್ನು ಚೈತ್ರ ಶುದ್ಧ ಪ್ರತಿಪದೆಯಾದ ಯುಗಾದಿ ಯಂದೇ ಆರಂಭಿಸಿದನಂತೆ. ನಮ್ಮ ದೇಶದ ಕಾಲಗಣನೆಯ ಪ್ರಕಾರ, ಹೊಸ ವರ್ಷದ ಆರಂಭವೂ ಇಂದಿನಿಂದಲೇ. ಯುಗಾದಿಯ ದಿನ ಯಾವ ವಾರವಾಗಿರುವದೋ ಆ ವಾರಾಽಪತಿಯೇ ಆ ವರ್ಷದ ಅಧಿಪತಿಯಾಗಿರುತ್ತಾನೆ. ಯುಗಾದಿಯ ಈ ಶುಭದಿನದಂದು ಶ್ರೀರಾಮಚಂದ್ರ ರಾವಣನನ್ನು ಜಯಿಸಿ, ತನ್ನ ರಾಜ್ಯವಾದ ಅಯೋಧ್ಯೆಗೆ ಮರಳಿ ಬಂದು, ರಾಜ್ಯಭಾರ ಮಾಡಿರುವದಾಗಿ ಪೌರಾಣಿಕ ಹಿನ್ನೆಲೆಯಿದೆ.

ಜಗತ್ತಿನ ಕಲ್ಯಾಣಕ್ಕಾಗಿ ವಿಷ್ಣು, ಯುಗಾದಿಯ ದಿನವೇ ಮತ್ಸ್ಯಾವತಾರ ತಳೆದ ನಂತೆ. ಶಾಲಿವಾಹನ, ವಿಕ್ರಮಾದಿತ್ಯನ ಮೇಲೆ ವಿಕ್ರಮವನ್ನು ಜಯಿಸಿದ್ದೂ ಯುಗಾದಿಯ ದಿನವಾಗಿದ್ದರಿಂದ ಈ ದಿನವನ್ನು ಶಾಲಿವಾಹನ ಶಕೆ ಎಂದು ಗುರುತಿಸಲಾಗುತ್ತದೆ.
ದುರ್ಗಾಪೂಜೆಗೆ ಪ್ರಶಸ್ತವಾದ ವಸಂತ ನವರಾತ್ರಿ ಉತ್ಸವ ಸಹ ಈ ದಿನದಿಂದಲೇ ಆರಂಭವಾಗುತ್ತದೆ. ಮೂರೂವರೆ ಮಹತ್ವದ ಮುಹೂರ್ತಗಳಲ್ಲಿ ವರ್ಷದ ಮೊದಲ ಶುಭಮುಹೂರ್ತದ ಹಾಗೂ ವಸಂತನ ಶುಭಾಗಮನದ ದಿನವಿದು.

ಯುಗಾದಿಯು ವಸಂತ ಮಾಸದಲ್ಲಿ ಆಗಮಿಸುವದರಿಂದ ಮರ-ಗಿಡಗಳಿಗೆ ನವಚೈತನ್ಯ ಮೂಡುತ್ತದೆ. ಹೊಸ ಸೃಷ್ಟಿಗೆ, ಹೊಸ ದೃಷ್ಟಿಗೆ ಶ್ರೀಕಾರ ಬರೆಯುವ ಯುಗಾದಿಯಂದು ಹಣ್ಣೆಲೆಗಳೆ ಉದುರಿ ಹೋಗಿ, ಹೊಸ ಚಿಗುರು ಮೂಡುತ್ತದೆ. ಭಾರತದಲ್ಲಿ
ಯುಗಾದಿಯ ಹಬ್ಬವನ್ನು ಎರಡು ವಿಧದಲ್ಲಿ ಆಚರಿಸಲಾಗುತ್ತದೆ. ಚಂದ್ರನ ಚಲನೆಯನ್ನಾಧರಿಸಿ ಅಮಾವಾಸ್ಯೆ -ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನವೆಂದು ಕರೆಯಲಾಗುತ್ತದೆ.

ಸೂರ್ಯನ ಚಲನೆಯನ್ನಾಧರಿಸಿ ಆಚರಿಸುವ ಹಬ್ಬವನ್ನು ಸೌರಮಾನ ಯುಗಾದಿಯೆಂದು ಕರೆಯುತ್ತಾರೆ. ಸೂರ್ಯನು ಮೇಷ ರಾಶಿ ಪ್ರವೇಶಿಸುವ ದಿನದಂದು (ಸಾಮಾನ್ಯವಾಗಿ ಎಪ್ರಿಲ್ ೧೪) ಸೌರಮಾನ ಯುಗಾದಿಯ ಆಚರಣೆ ಬಳಕೆಯಲ್ಲಿದೆ.

ಕರ್ನಾಟಕದಲ್ಲಿ ಯುಗಾದಿ
ಯುಗಾದಿ ಹಬ್ಬ ಆಗಮಿಸುವ ವಾರಕ್ಕೆ ಮುಂಚೆಯೇ, ಮನೆ, ಗುಡಿ, ಗೋಪುರಗಳಿಗೆ ಸುಣ್ಣ ಬಣ್ಣದ ಲೇಪನ ಹೊದ್ದು ಅಲಂಕೃತ ವಾಗಿ ಬಿಡುತ್ತವೆ. ಸುಗ್ಗಿಯ ಹಿಗ್ಗು ಮುಗಿದು ಯುಗಾದಿಯ ಸಂಭ್ರಮಕ್ಕೆ ಜನರು ಸಜ್ಜಾಗುತ್ತಾರೆ.

ಅಡುಗೆಯ ಕೋಣೆಯಲ್ಲಿ ಮಾತ್ರವಲ್ಲ, ಹೊಸ ಬಟ್ಟೆ ಹೊಲಿಸುವ, ಪೂಜೆಗೆ ಬೇಕಾಗುವ ಪರಿಕರಗಳನ್ನು ಜೋಡಿಸಿಕೊಳ್ಳುವ ಸಡಗರ-ಸಂಭ್ರಮಗಳು ಭರದಿಂದ ಸಾಗುತ್ತವೆ. ಹಬ್ಬದ ದಿನ ಹೆಂಗಳೆಯರು ನಸುಕಿನಲ್ಲಿಯೇ ಮನೆಯನ್ನು ರಂಗೋಲಿ, ತಳಿರು-ತೋರಣಗಳಿಂದ ಅಲಂಕರಿಸುತ್ತಾರೆ. ತೈಲಾಭ್ಯಂಜನದ ನಂತರ, ಇಷ್ಟ ದೇವತೆ ಮತ್ತು ಹೊಸ ಸಂವತ್ಸರದ ಪಂಚಾಂಗ ಪೂಜೆ ಮಾಡಿ, ಬೇವಿನ ಚಿಗುರು, ಹೂಗಳು, ಒಣಹಣ್ಣುಗಳು ಮತ್ತು ಬೆಲ್ಲಗಳನ್ನು ಮಿಶ್ರಣ ಮಾಡಿ ದೇವರಿಗೆ ನೈವೇದ್ಯ ರೂಪದಲ್ಲಿ ಸಲ್ಲಿಸಿ ತಿನ್ನುವದು ರೂಢಿ. ಮಕ್ಕಳನ್ನು ಬೇಗನೆ ಎಬ್ಬಿಸಿ ಎಣ್ಣೆ ಸ್ನಾನಕ್ಕೆ ಅಣಿಗೊಳಿಸುವದು ಸಹ ಗೃಹಿಣಿಯರಿಗೆ ಸವಾಲಿನ ಕೆಲಸವೇ.

ಪೂಜೆಯ ನಂತರ ಹೆಂಗಳೆಯರು ಒಬ್ಬಟ್ಟಿನ ತಯಾರಿ ಯಲ್ಲಿ ತೊಡಗುತ್ತಾರೆ. ಹೂರಣದ ಹೋಳಿಗೆ, ಮಾವಿನಕಾಯಿ ಕೋಸಂಬರಿ, ವಿವಿಧ ವ್ಯಂಜನಗಳ ಭೋಜನ ನಾಲಿಗೆಗೆ ಹಿತ ಮಾತ್ರವಲ್ಲ, ಮನಸ್ಸಿಗೂ ಚೇತೋಹಾರಿ. ಪುರುಷರು ಮಾವಿನ ಮತ್ತು ಬೇವಿನ ಎಲೆಗಳ ತೋರಣಗಳನ್ನು ಕಟ್ಟಿ ಬಾಗಿಲುಗಳನ್ನು ಸಿಂಗರಿಸುತ್ತಾರೆ. ಬೇವು- ಬೆಲ್ಲಗಳು ದೀರ್ಘಾಯುಷ್ಯವನ್ನು ನೀಡುವದರೊಂದಿಗೆ ಸಂಪತ್ತನ್ನು ವೃದ್ಧಿಸುವುದಾಗಿ ನಂಬಿಕೆಯಿದೆ. ದೇಹವನ್ನು ತಂಪಾಗಿರಿಸುವ ಬೇವು, ಉಷ್ಣತೆಯನ್ನು ಸಮತೋಲನದಲ್ಲಿರಿಸುವ ಬೆಲ್ಲಗಳೆರಡೂ ಆರೋಗ್ಯಕ್ಕೆ ಹಿತಕಾರಿ.

ವಸಂತ ಋತುವಿನಲ್ಲಿ ದಾಳಿಯಿರಿಸುವ ಕಾಯಿಲೆಗಳಿಗೆ ಬೇವು- ಬೆಲ್ಲಗಳು ಪರಿಹಾರ ಒದಗಿಸುತ್ತವೆ. ಗುಡಿಗಳಲ್ಲಿ ಪೂಜೆ-
ಅರ್ಚನೆಗಳ ಜೊತೆಗೆ ಪಂಚಾಂಗ ಶ್ರವಣವನ್ನು ಹಮ್ಮಿಕೊಳ್ಳಲಾ ಗುತ್ತದೆ. ಮದುವೆ, ಉಪನಯನ, ಗೃಹಪ್ರವೇಶ ಮುಂತಾದ ಸಮಾರಂಭಗಳಿಗೆ ಶುಭ ಮುಹೂರ್ತಗಳನ್ನು ಸೂಚಿಸುವುದರೊಂದಿಗೆ, ವಿವಿಧ ತೀರ್ಥಕ್ಷೇತ್ರಗಳಲ್ಲಿ ವರ್ಷವಿಡೀ ನಡೆಯುವ ಜಾತ್ರಾ ಮಹೋತ್ಸವ, ಹಬ್ಬಗಳು, ಮಳೆ, ಗ್ರಹಣ ಕಾಲ, ರಾಶಿಫಲಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಓಕುಳಿ
ಕರ್ನಾಟಕದ ಕೆಲವು ಗ್ರಾಮಗಳಲ್ಲಿ ಯುಗಾದಿಯಂದು ಬಾಗಿಲು ಪೂಜೆ, ಸಮಾಧಿ ಪೂಜೆ, ಪಿತೃಗಳಿಗೆ ನಮನ ಸಲ್ಲಿಸಲು ಹೋಳಿಗೆ ಹಾಗೂ ಹೊಸ ಬಟ್ಟೆಗಳನ್ನು ಇರಿಸುವ ಸಂಪ್ರದಾಯವಿದೆ. ಮಂಡ್ಯ ಜಿಯ ಕೆಲವು ಹಳ್ಳಿಗಳಲ್ಲಿ ಓಕುಳಿಯ ಹೊಂಡಗಳಲ್ಲಿ ಬಣ್ಣಬಣ್ಣದ ಓಕುಳಿಯನ್ನು ತುಂಬಿರಿಸಿ ಎರಚುತ್ತಾರೆ. ಕರಾವಳಿಯ ವಿಶೇಷತೆಯೆಂದರೆ, ಸೌರಮಾನ ಯುಗಾದಿಯಂದು ಕುಪ್ಪಸದ ಖಣವನ್ನು ಇರಿಸಿ ಪೂಜೆ ಸಲ್ಲಿಸುವದು.

ಬಾಳೆಯ ಎಲೆಯ ಮೇಲೆ, ಕನ್ನಡಿ, ಅಕ್ಕಿ, ತೆಂಗಿನಕಾಯಿ, ಹಣ್ಣುಗಳು ಹಾಗೂ ಮಂಗಳ ದ್ರವ್ಯಗಳನ್ನು ರಾತ್ರಿಯ ಸಮಯ ದೇವರ ಮನೆಯಲ್ಲಿರಿಸಿ, ಯುಗಾದಿಯ ಹಬ್ಬದಂದು ಕನ್ನಡಿಯ ಮೂಲಕ ದೇವರ ದರ್ಶನ ಪಡೆಯುವ ಸಂಪ್ರದಾಯವಿದೆ.
ವಾತಾವರಣಗಳಲ್ಲಿ ಕಂಡು ಬರುವ ಬದಲಾವಣೆಗಳು ನಮ್ಮ ಶರೀರದ ಮೇಲೂ ಪರಿಣಾಮ ಬೀರುತ್ತವೆ. ಇಂತಹ ಬದಲಾವಣೆ ಗಳೊಡನೆ ಹೊಂದಿಕೊಂಡು ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಮಾನವ ತನ್ನ ದಿನಚರಿ, ಆಹಾರ-ವಿಹಾರಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಇಂತಹ ಪರಿವರ್ತನೆಗಳಿಗೆ ಧಾರ್ಮಿಕ ರೂಪ ನೀಡಿ, ಆರೋಗ್ಯಕರ ಬದುಕಿನ ಶೈಲಿಯನ್ನು ನಮ್ಮ ಹಿರಿಯರು ನಿರೂಪಿಸಿದ್ದಾರೆ. ಬದುಕು ಬೇವು-ಬೆಲ್ಲಗಳ ಸಮ್ಮಿಶ್ರಣ. ಬೇವಿನ ಕಹಿಯೂ ಒಂದು ಆರೋಗ್ಯಕರವಾದ ರುಚಿಯೆಂದು ಅರಿತು, ನಮ್ಮ ಹಿರಿಯರು ಬೇವು- ಬೆಲ್ಲಗಳನ್ನು ಸಮನಾಗಿ ಸೇವಿಸುವ ಪರಿಪಾಠಕ್ಕೆ ಅಡಿಪಾಯ ಹಾಕಿದ್ದಾರೆ.

ಬದುಕಿನ ನೋವು-ನಲಿವುಗಳಿಗೂ ಇದೇ ತತ್ವ ಅನ್ವಯಿಸುತ್ತದೆ. ಭೂತಕಾಲದ ನೋವು-ಸಂಕಟಗಳು ಬರಲಿರುವ ಸಿಹಿ ಅನುಭವಗಳಿಗೆ ದೀವಿಗೆಯಾಗಬೆಕು. ನೋವುಗಳ ಅನುಭವದಿಂದ ಕಲಿತಿರುವ, ಕಲಿಯಬೇಕಾಗಿರುವ ಪಾಠಗಳಿಂದಲೇ ಬದುಕು ಹಸನಾಗಬಲ್ಲದೆಂಬುದು ನಿರ್ವಿವಾದ. ಅದಕ್ಕೆಂದೇ ಬೇವು-ಬೆಲ್ಲಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ.
ದೈನಂದಿನ ಜೀವನದ ಜಾಡ್ಯವನ್ನು ದೂರವಾಗಿಸುವಂತಹ, ಸಕಲ ಜೀವ ಜಾತಕೆ ಜೀವಕಳೆ ತರುವ ಯುಗಾದಿ ಪರ್ವದ
ಮೂಲ ತತ್ವಗಳನ್ನು ಅರಿತು ಆಡಂಬರವಾಗಿಸದೆ, ಕುಟುಂಬಗಳನ್ನು ಹಾಗೂ ಸಮಾಜವನ್ನು ಬೆಸೆಯುವ ಹಬ್ಬವಾಗಿ ಆಚರಿಸಿ ದರೆ ಯುಗಾದಿ ಸಕಲ ಜೀವ ಜಾತಕೆ ಜೀವಕಳೆ ತರಬಲ್ಲದು, ಹೊಸತನ ತುಂಬಬಲ್ಲದು.

ಮಹಾರಾಷ್ಟ್ರದಲ್ಲಿ ಯುಗಾದಿ
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಯುಗಾದಿಯ ದಿನದಂದು ಗುಡಿಪಾಡ್ಯವೆಂದು (ಗುಡಿಪಾವ್ಡ) ಆಚರಿಸುತ್ತಾರೆ. ಕೋಲಿಗೆ ತಂಬಿಗೆಯೊಂದನ್ನು ಬೋರಲು ಹಾಕಿ, ವಸ್ತವೊಂದನ್ನು ಕಟ್ಟಿ, ಹೂವಿನ ಹಾರಗಳನ್ನು ಏರಿಸಿ ಗುಡಿಯನ್ನಾಗಿಸಿ ಮನೆಯ ಮೂಲೆಯೊಂದರಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಾರೆ.

ಅಲ್ಲೆಲ್ಲಾ ಸಾರ್ವಜನಿಕವಾಗಿ, ಉತ್ಸವದ ರೀತಿಯಲ್ಲಿ ಯುಗಾದಿಯ ಆಚರಣೆ ಇದೆ. ಉತ್ತರ ಭಾರತದಲ್ಲಿ ಯುಗಾದಿಯಂದು
ಪವಿತ್ರ ನದಿಗಳಲ್ಲಿ ಮಾಡುವ ತೀರ್ಥಸ್ನಾನ ಹೆಚ್ಚಿನ ಮಹತ್ವ ಪಡೆದಿದೆ. ಸಿಕ್ ಸಂಪ್ರದಾಯದ ಅನುಯಾಯಿಗಳು ಮತ್ತು ಪಂಜಾಬ್ ರಾಜ್ಯದ ಜನರು ಯುಗಾದಿಯ ಪರ್ವವನ್ನು ಬೈಸಾಕಿ ಹಬ್ಬವಾಗಿ ಆಚರಿಸುತ್ತಾರೆ. ಅಸ್ಸಾಮ್ ರಾಜ್ಯದಲ್ಲಿ ಈ ದಿನ ಆಚರಿಸಲಾಗುವ ಬಿಹೂ ಪರ್ವದಂದು ವರ್ಣರಂಜಿತ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸುತ್ತಾರೆ.

ಕಾಶ್ಮೀರದಲ್ಲಿ ನವರೇಹ್ ಹಬ್ಬ ಆಚರಣೆಯಲ್ಲಿದೆ. ನೇಪಾಲ, ಕಾಂಬೋಡಿಯಾ, ಶ್ರೀಲಂಕಾ ಮುಂತಾದ ದೇಶಗಳಲ್ಲೂ ಯುಗಾದಿ ಪರ್ವವನ್ನು ಆಚರಿಸಲಾಗುತ್ತದೆ. ದೂರದ ಇರಾನ್ ಮೊದಲಾದ ದೇಶಗಳಲ್ಲಿ ಆಚರಿಸುವ ಹೊಸ ವರ್ಷಾಚರಣೆಯ ‘ನವ್
ರೋಜ್’ ಹಬ್ಬವೂ ನಮ್ಮ ಯುಗಾದಿಯ ಇನ್ನೊಂದು ರೂಪ.

Leave a Reply

Your email address will not be published. Required fields are marked *