Friday, 19th August 2022

ಅಕಾಲಿಕ ಮಳೆ ಅನಿರೀಕ್ಷಿತ ನೆರೆಯಿಂದ ರಕ್ಷಣೆ ಹೇಗೆ ?

ಶಶಾಂಕಣ

shashidhara.halady@gmail.com

ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಸುರಿಯುತ್ತಿರುವ ಮಳೆ ಸಾಕಷ್ಟು ಹಾನಿಯನ್ನು ಮಾಡಿದೆ, ನೆರೆಯಲ್ಲಿ ಜನರನ್ನು ಸೆಳೆದು ಕೊಂಡಿದೆ, ಗುಡ್ಡ ಕುಸಿತಗಳನ್ನು ಸೃಷ್ಟಿಸಿದೆ, ಅದರಲ್ಲಿ ಹಲವು ಜನರು ಸಿಕ್ಕಿಕೊಂಡಿದ್ದಾರೆ, ಪ್ರಾಣ  ಕಳೆದುಕೊಂಡಿದ್ದಾರೆ. ಇನ್ನಷ್ಟು ಗುಡ್ಡ ಕುಸಿತ ಆಗಬಹುದು ಎಂದು ಅದಾಗಲೇ ಎಚ್ಚರಿಕೆಯೂ ಬಂದಿದೆ.

ಅದೇಕೋ ಈಗ ಒಂದೆರಡು ವರ್ಷಗಳಿಂದ ವಿಪರೀತ ಮಳೆ ಎಂಬ ಮಾತು ಮೇಲ್ನೋಟಕ್ಕೆ ನಿಜ. ಏಕೆಂದರೆ, ಈ ಶತಮಾನದ ಮೊದಲ ಕೆಲವು ವರ್ಷ ಗಳಲ್ಲಿ ಸರಿಯಾಗಿ ಮಳೆಯಾಗದೇ, ಬರಗಾಲದ ಸನ್ನಿವೇಶ ಮೂಡಿತ್ತು. ನಿರಂತರವಾಗಿ ಕಾಡನ್ನು ಕಡಿದದ್ದರಿಂದಾಗಿ, ನಮ್ಮ ದೇಶದಲ್ಲಿ ಮಳೆಯ ಪ್ರಮಾಣವೇ ಕಡಿಮೆಯಾಗಿರಬಹುದು ಎಂದು ಜನಸಾಮಾನ್ಯರು ಊಹಿಸ ತೊಡಗಿದ್ದರು.

ಕಾಡು ಕಡಿಮೆಯಾದಷ್ಟೂ, ಮಳೆ ಕಡಿಮೆಯಾಗುದೆ ಎಂಬುದು ಪ್ರಾಥಮಿಕ ಪಾಠ. ಇನ್ನೇನು ಮಾಡುವುದು, ನಮ್ಮ ನಾಡು ಕ್ರಮೇಣ ಬರಗಾಲವಾಗುತ್ತಾ ಹೋಗುತ್ತಿದೆ, ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಜನರು ನಿಟ್ಟುಸಿರು ಬಿಡು ತ್ತಿದ್ದರು. ಆದರೆ, ಈಗ ಕೆಲವು ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಳಗೊಂಡದ್ದು ಮಾತ್ರವಲ್ಲ, ಹುಚ್ಚಾಪಟ್ಟೆ ಮಳೆಯಾಗುವ ವಿದ್ಯಮಾನಗಳು ಸಾರ್ವತ್ರಿಕ ಎನಿಸಿದೆ. ಮೇಘಸೋಟ ಎಂಬ ಅಪರೂಪಕ್ಕೆ ಬಳಕೆಯಾಗುತ್ತಿದ್ದ ಶಬ್ದವು ಈಗ ಪದೇ ಪದೇ ಬಳಕೆಯಾಗುತ್ತಿದೆ. ಮೇ ತಿಂಗಳಲ್ಲೂ ಮಳೆ, ಜೂನ್ ನಲ್ಲೂ ಮಳೆ, ಆಷಾಡದಲ್ಲಂತೂ ನೆರೆ.

ಚಳಿಗಾಲ ಮತ್ತು ಬೇಸಗೆಯ, ಸಾಂಪ್ರದಾಯಿಕವಾಗಿ ಮಳೆ ತೀರಾ ಕಡಿಮೆ ಇರುವಂತಹ ಒಣ ಹವೆಯ ತಿಂಗಳುಗಳಲ್ಲೂ, ಕೆಲವು ದಿನ ಮಳೆಯಾಗುತ್ತಿರುವುದು ಈಚಿನ ವರ್ಷಗಳ ವಿದ್ಯಮಾನ. ಕೆಲವು ದಶಕಗಳ ಹಿಂದೆ ನಮ್ಮ ರಾಜ್ಯದ ಕೆಲವು ಅಣೆಕಟ್ಟುಗಳಿಗೆ ನೀರೇ ಬರುತ್ತಿರಲಿಲ್ಲ, ಅವು ಭರ್ತಿಯಾಗುತ್ತಿದ್ದುದ್ದು ಹಲವು ವರ್ಷಗಳಿಗೊಮ್ಮೆ. ಆದರೆ, ಈಗ ಒಂದೆರಡು ವರ್ಷಗಳಿಂದ, ಎಲ್ಲಾ ಅಣೆಕಟ್ಟೆಗಳಲ್ಲೂ ನೀರು ತುಂಬುತ್ತಿದೆ.

ಮಳೆ ಆಗಿಲ್ಲ, ಆದ್ದರಿಂದ ಡ್ಯಾಂ ತುಂಬಿಲ್ಲ, ಆದ್ದರಿಂದ ವಿದ್ಯುತ್ ಕೊರತೆಯಾಗಿದೆ, ಆದ್ದರಿಂದ ವಿದ್ಯುತ್ ಸರಬರಾಜನ್ನು
ಕಡಿತಗೊಳಿಸುತ್ತೇವೆ ಎಂಬುದು ಕೆಲವು ವರ್ಷಗಳ ಹಿಂದೆ ಸರಕಾರದ ಇಲಾಖೆಗಳು ಉಚ್ಚರಿಸುತಿದ್ದ ಸಿದ್ಧ ಹೇಳಿಕೆಗಳು. ಈಗ ಕೆಲವು ವರ್ಷಗಳಿಂದ ಮಳೆ ಇಲ್ಲ ದ್ದರಿಂದ ವಿದ್ಯುತ್ ಕಡಿತ ಎಂಬ ಸನ್ನಿವೇಶವೇ ಎದುರಾಗಿಲ್ಲ!

ಹಾಗಾದರೆ, ವಾತಾವರಣಕ್ಕೆ ಏನಾಗಿದೆ? ಇದೇಕೆ ಒಮ್ಮೆಗೇ ನಮ್ಮ ನಾಡಿಗೆ ವಿಪರೀತ ಮಳೆ ಸುರಿಯುತ್ತಿದೆ? ಮಾನ್ಸೂನ್ ಮಾರುತಗಳು ಪ್ರತಿವರ್ಷ ಹಾದಿ ತಪ್ಪಿ, ನಮ್ಮೂರಿಗೆ ಬರುತ್ತಿವೆಯೆ? ಮಳೆ ಬೇಕು ಮಳೆ ಬೇಕು ಎಂದು ಸದಾಕಾಲ ಮಳೆಗಾಗಿ ಹಾರೈಸುತ್ತಿದ್ದ ಹಲವು ಪ್ರದೇಶಗಳು, ಈಗ ಮಳೆ ಸಾಕು ಮಳೆ ಸಾಕು ಎಂದು ಆಗಸದತ್ತ ನೋಡಿ ಕೈಮುಗಿಯುತ್ತಿವೆ!

ಕೆಲವು ಪ್ರದೇಶಗಳಲ್ಲಿ ಮಳೆ ಹೇಗೆ ಸುರಿಯುತ್ತಿದೆ ಎಂದರೆ, ನೆಲದಲ್ಲಿದ್ದ ಫಲವತ್ತಾದ ಮೇಲ್ಮೈ ಮಣ್ಣು ಪ್ರತಿವರ್ಷ ಕೊಚ್ಚಿ ಹೋಗುತ್ತಿದೆ. ರೈತರು ಉತ್ತಮ ಇಳುವರಿಯನ್ನು ನಿರೀಕ್ಷಿಸಿ ಹಾಕಿದ್ದ ಗೊಬ್ಬರವು ಮಳೆ ನೀರನಲ್ಲಿ ತೊಳೆದು ಹೋಗಿ, ಹಳ್ಳ ಕೊಳ್ಳ ಸೇರುತ್ತಿದೆ. ಕೆಲವು ಹಳ್ಳಿಗಳಲ್ಲಿ ಮಣ್ಣಿನ ಗೋಡೆಯಿಂದಲೇ ಮನೆ ಕಟ್ಟುವ ಸಂಪ್ರದಾಯ. ಅಂತಹ ಮನೆಗಳು ಒಂದೊಂದಾಗಿ ಕುಸಿದು ಬೀಳುತ್ತಿವೆ. ಎಲ್ಲರೂ ಆಗಸವನ್ನು ನೋಡುತ್ತಾ, ‘ಮಳೆರಾಯ ಸಾಕಪ್ಪಾ ಸಾಕು ನಿನ್ನ ಪ್ರತಾಪ’ ಎಂದು ಪ್ರಾರ್ಥಿಸಬೇಕಾಗಿದೆ.

ಈಗ ಒಂದೆರಡು ವಾರಗಳಿಂದ ನಮ್ಮ ರಾಜ್ಯದ ಹಲವು ಕಡೆ ಆಗುತ್ತಿರುವ ವಿಪರೀತ ಮಳೆಯ ಅವಾಂತರಗಳನ್ನು ಟಿವಿಯಲ್ಲಿ ಕಂಡು, ಜನಸಾಮಾನ್ಯರು ಬೇಸತ್ತಿರುವುದು ನಿಜ. ಆಧುನಿಕ ತಂತ್ರಜ್ಞಾನ, ಸ್ಮಾರ್ಟ್ ಫೋನ್‌ಗಳ ಬಳಕೆ, ಅಗ್ಗದ ಡಾಟಾ, ಹಲವು ಕಡೆ ಲಭ್ಯವಿರುವ ಮೊಬೈಲ್ ಸಿಗ್ನಲ್, ವಿವಿಧ ಟಿವಿ ಚಾನೆಲ್‌ಗಳ ಲಭ್ಯವೆ ಇವೆಲ್ಲವುಗಳಿಂದಾಗಿ, ಈಚಿನ ವರ್ಷಗಳಲ್ಲಿ ಎಲ್ಲೇ ಮಳೆ, ನೆರೆಯಾದರೂ ತಕ್ಷಣ ಇಡೀ ರಾಜ್ಯದ ಜನತೆಗೆ ಮಾಹಿತಿ ತಲುಪುತ್ತದೆ.

ಮನೆಯಲ್ಲಿ ಕುಳಿತು, ವಿವಿಧ ಚಾನೆಲ್‌ಗಳಲ್ಲಿ ನೆರೆಯ ಹಾವಳಿಯನ್ನು ನೋಡುತ್ತಾ, ‘ಇದೇನಿದು ರಾಜ್ಯವೇ ಮುಳುಗಿ ಹೋಗುತ್ತಿದೆಯಾ?’ ಎಂದು ಅಮಾಯಕ ವೀಕ್ಷಕರು ಅಂದುಕೊಂಡರೂ ಅಚ್ಚರಿಯಿಲ್ಲ. ಮಳೆ ಮತ್ತು ನೆರೆಯ ವಿಚಾರವನ್ನು ಚರ್ಚಿಸುವಾಗ, ನಮ್ಮ ನಾಡಿನಲ್ಲಿ ಈಗ ಕಾಣುತ್ತಿರುವ ಪ್ರವಾಹವನ್ನು ಮೂರ‍್ನಾಲಕ್ಕು ವಿಧದಲ್ಲಿ ವಿಂಗಡಿಸಬಹುದು. ಮೊದಲನೆಯದು ಮತ್ತು ಹೆಚ್ಚು ಚರ್ಚೆಗೆ ಒಳಗಾಗುವುದು, ನಗರಗಳಿಂದ ಮತ್ತು ಪಟ್ಟಣಗಳಿಂದ ವರದಿಯಾಗುವ ಮಳೆ
ಹಾನಿ. ಸಂಜೆಹೊತ್ತಿನಲ್ಲಿ ಬೆಂಗಳೂರಿನಲ್ಲಿ ಅರ್ಧ ಗಂಟೆ ಮಳೆ ಬಂದರೂ ಸಾಕು, ಕೆಲವು ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು, ವಾಹನ ಚಾಲಕರಿಗೆ ತೊಂದರೆಯಾಗಿ, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.

ತಕ್ಷಣ ಕಾರ್ಯಪ್ರವೃತ್ತರಾಗುವ ಟಿವಿ ಚಾನೆಲ್‌ಗಳು, ರಸ್ತೆಯ ಒಂದು ಮೂಲೆಯಲ್ಲಿ ಕ್ಯಾಮೆರಾವನ್ನು ನಿಲ್ಲಿಸಿ, ಅರ್ಧ ಅಡಿ ನೀರನ್ನು ಸೀಳಿಕೊಂಡು ಚಲಿಸುವ ವಾಹನಗಳನ್ನು ಬಿತ್ತರಿಸುತ್ತಾರೆ. ಕೆಲವು ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಸಿಕ್ಕಿಕೊಳ್ಳು ವುದೂ ಉಂಟು. ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಯಾಣಿಕರ ಪರದಾಟವು ಟಿವಿಯವರಿಗೆ ಒಳ್ಳೆಯ ವಿಷುವಲ್ಸ್.

ಇನ್ನು ಬೆಂಗಳೂರಿನಂತಹ ನಗರಗಳಲ್ಲಿ, ಕೆಲವು ಪ್ರದೇಶಗಳ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿ. ಬೇಸ್‌ಮೆಂಟ್‌ನಲ್ಲಿ ಸಾಲಾಗಿ ನಿಂತಿರುವ ಕಾರುಗಳು ಅರ್ಧ ಮುಳುಗಿ ಹೋಗುವ ವಿಷುವಲ್ಸ್‌ಗಳನ್ನು ಚಾನೆಲ್‌ಗಳು ಪದೇ
ಪದೇ ಬಿತ್ತರಿಸಿ, ಹೊರ ಊರಿನವರನ್ನು ಗೊಂದಲಕ್ಕೆ ಕೆಡಹುವುದೂ ಉಂಟು. ಅಂತಹ ದೃಶ್ಯಗಳನ್ನು ಪದೇ ಪದೇ ನೋಡುವ ಹೊರ ಊರಿನವರು, ಬೆಂಗಳೂರಿನ ಎಲ್ಲಾ ಅಪಾರ್ಟ್‌ಮೆಂಟ್‌ಗಳ ವಾಹನಗಳು ಮುಳುಗಿ ಹೋದವೇನೋ ಎಂದು ತಿಳಿದರೂ ಅಚ್ಚರಿಯಿಲ್ಲ.

ತಗ್ಗು ಪ್ರದೇಶದ ಅಪಾಟ್ ಮೆಂಟ್ ಅಥವಾ ಮನೆಗಳಿಗೆ ನೀರು ನುಗ್ಗುವುದು ನಿಜಕ್ಕೂ ಬೇಸರದ ವಿಚಾರ. ಆದರೆ ಬೆಂಗಳೂ ರಿನ ಮಟ್ಟಿಗೆ, ಅದು ಸ್ವಯಂಕೃತ ಎನ್ನಲಡ್ಡಿಯಿಲ್ಲ. ಯಾವುದೇ ತಗ್ಗು ಪ್ರದೇಶದಲ್ಲಿ ವಸತಿ ನಿರ್ಮಿಸಿದರೆ, ಬಹುಬೇಗ ನೀರು ಬರಬಹುದು ಎಂದು ಮೊದಲೇ ಗೊತ್ತಿರುವ ವಿಚಾರ. ಏಕೆಂದರೆ, ಇದು ನದಿಯಲ್ಲಿ ಬರುವ ಆಕಸ್ಮಿಕ ಪ್ರವಾಹವಲ್ಲ, ಬೆಂಗಳೂರಿಗೆ ತಾಗಿಕೊಂಡಂತೆ ನದಿಗಳೂ ಇಲ್ಲ, ಆಕಸ್ಮಿಕ ಪ್ರವಾಹವು ಬರುವ ಸಾಧ್ಯತೆಯೂ ಇಲ್ಲ.

ಅಪಾರ್ಟ್‌ ಮೆಂಟ್ ಕಟ್ಟುವಾಗಲೇ, ಇಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ ಎಂಬ ಅರಿವು ಇರುವಾಗ, ಅಲ್ಲಿ ನೀರು ನಿಲ್ಲದಂತೆ ವಿನ್ಯಾಸಗೊಳಿಸುವುದು ಅಪಾರ್ಟ್‌ ಮೆಂಟ್ ಕಟ್ಟಿಸುವ ಬಿಲ್ಡರ್‌ಗಳ ಜವಾಬ್ದಾರಿ. ಅದನ್ನು ಸರಿಯಾಗಿ ನಿರ್ವಹಿಸದೇ ಇರುವು
ದರಿಂದಾಗಿ, ಅಪಾರ್ಟ್‌ಮೆಂಟ್‌ನ ತಳದಲ್ಲಿ ನಿಲ್ಲಿಸಿದ ಕಾರುಗಳು ಅರ್ಧ ನೀರಿನಲ್ಲಿ ಮುಳುಗುವಂತಾಗುತ್ತದೆ. ಕೆಲವು ಕಡೆ, ನೀರು ಹರಿದು ಹೋಗುವ ದಾರಿಯನ್ನು ಬಂದ್ ಮಾಡಿ, ಅಪಾರ್ಟ್‌ಮೆಂಟ್ ಕಾಂಪೌಂಡ್ ಮೊದಲಾದ ನಿರ್ಮಾಣಗಳನ್ನು ಮಾಡಿದ್ದರಿಂದಲೇ, ಮಳೆ ಹಾನಿ ಉಂಟಾಗಿದ್ದು ಋಜುವಾತಾಗಿದೆ.

ಆದ್ದರಿಂದಲೇ ಹೇಳಿದ್ದು, ಬೆಂಗಳೂರಿನಂತಹ ಆಧುನಿಕ ಮಹಾನಗರಗಳಲ್ಲಿ ಮಳೆ ನೀರು ಮನುಷ್ಯರಿಗೆ ಹಾನಿ ಮಾಡಿದರೆ, ಅದು ಬಹುಪಾಲು ಸ್ವಯಂಕೃತ ಎಂದು. ನೆರೆಯಲ್ಲಿ ಎರಡನೆಯ ಪ್ರಕಾರವೆಂದರೆ, ಹೆಚ್ಚು ಮಳೆಸುರಿಯುವ ಪ್ರದೇಶಗಳಾದ ಕೊಡಗು, ಉತ್ತರ ಕನ್ನಡ, ಉಡುಪಿ, ಸಕಲೇಶಪುರ ಮೊದಲಾದ ಜಿಲ್ಲೆಗಳಲ್ಲಿ ಉಂಟಾಗುವ ನೆರೆ. ಇದನ್ನು ಸಾಮಾನ್ಯವಾಗಿ ಪ್ರಾಕೃತಿಕ ವಿಕೋಪ ಎಂದು ಹೇಳಬಹುದು. ಆಕಸ್ಮಿಕವಾಗಿ ನೆರೆ ಬಂದು, ಜನರು ತೊಂದರೆಗೆ ಸಿಲುಕುವುದುಂಟು. ವಿಪರೀತ ಮಳೆ ಸುರಿದು, ಗುಡ್ಡ ಕುಸಿತಗಳಿಂದಲೂ ಸಾಕಷ್ಟು ಹಾನಿಯಾಗುವುದುಂಟು.

ಆದರೆ, ಈಚಿನ ಒಂದೆರಡು ದಶಕಗಳಲ್ಲಿ, ಇಲ್ಲೂ ಆಧುನಿಕ ಮಾನವನ ಕೆಲವು ತಪ್ಪುಗಳು, ನೆರೆಹಾನಿಯನ್ನು ದ್ವಿಗುಣ ಗೊಳಿಸುದ್ದು ಸ್ಪಷ್ಟ. ಜೆಸಿಬಿ ಬಳಸಿ, ಕಾಡುಪ್ರದೇಶವನ್ನು ಚೊಕ್ಕಟಗೊಳಿಸುವುದು, ಆ ಮೂಲಕ, ನೆಲದಲ್ಲಿರುವ ಮರಗಳ ಬೇರನ್ನೇ ನಾಶಮಾಡುವುದು, ಅವೈಜ್ಞಾನಿಕವಾಗಿ ಗುಡ್ಡದ ಬದಿಗಳನ್ನು ಕತ್ತರಿಸಿ ರಸ್ತೆ ಮಾಡುವುದು, ರೆಸಾರ್ಟ್ ಮಾಡುವುದು ಮೊದಲಾದ ಚಟುವಟಿಕೆಗಳು ಮಳೆಯಿಂದಾಗುವ ಹಾನಿಯನ್ನು ಹೆಚ್ಚಿಸಿದ್ದನ್ನು ಸ್ಪಷ್ಟವಾಗಿ ಕಂಡಿದ್ದೇವೆ.

ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಮೂರನೆಯ ಪ್ರಕಾರದ ಮಳೆಹಾನಿಯನ್ನು ಕಾಣುತ್ತಿದ್ದೇವೆ. ಈಚಿನ ನಾಲ್ಕಾರು ವರ್ಷಗಳಲ್ಲಿ ಇದು ಜಾಸ್ತಿ ಯಾಗಿದೆ. ಮೊದಲಿನಿಂದಲೂ ಉತ್ತರ ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಅತಿ ಕಡಿಮೆ ಮಳೆಯಾಗುವುದು ವಾಡಿಕೆ. ಆದ್ದರಿಂದ, ಕಡಿಮೆ ಮಳೆಯನ್ನು ತಡೆಯುವಂತಹ, ಮಣ್ಣಿನ ಗೋಡೆಯ, ಚಪ್ಪಟೆ ಛಾವಣಿಯ ಮನೆಗಳನ್ನು ಅಲ್ಲಿನ ವರು ನಿರ್ಮಿಸುತ್ತಿದ್ದರು. ಆದರೆ ಅದೇಕೋ ಈಗ ಒಂದೆರಡು ವರ್ಷಗಳಲ್ಲಿ ಅಲ್ಲೂ ವಿಪರೀತ ಮತ್ತು ಅಕಾಲಿಕ
ಮಳೆಯಾಗುತ್ತಿದೆ.

ಇದರಿಂದಾಗಿ, ಆಕಸ್ಮಿಕ ಎನಿಸುವ ಸಾಕಷ್ಟು ಹಾನಿಯನ್ನು ಅಲ್ಲಿ ಕಾಣಬಹುದು. ಇವುಗಳ ಜತೆ, ನದಿಪಾತ್ರದಲ್ಲಿರುವ ಕೆಲವು
ಊರುಗಳಲ್ಲಿ ಇನ್ನೊಂದು ರೀತಿಯ ಹಾನಿಯು ಆಗಾಗ ನಡೆಯುವುದುಂಟು. ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಾದಾಗ, ಯಾವುದೇ ಸೂಚನೆ ಇಲ್ಲದೇ, ಒಮ್ಮೆಗೇ ಅಧಿಕ ಪ್ರಮಾಣ ನೀರನ್ನು ನದಿಗೆ ಬಿಟ್ಟಾಗ, ನಮ್ಮ ರಾಜ್ಯದ ಕೆಲವು ಹಳ್ಳಿಗಳು ಒಮ್ಮೆಗೇ ನೆರೆಹಾವಳಿಯನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಹಲವು ವಾರಗಳಿಂದ ಮಳೆಯನ್ನೇ ಕಾಣದ ಹಳ್ಳಿಗಳು ಸಹ, ನದಿಯಲ್ಲಿ ಒಮ್ಮಿಂದೊಮ್ಮೆಲೇ ನುಗ್ಗಿಬಂದ ಪ್ರವಾಹದ ಪ್ರಕೋಪಕ್ಕೆ ಒಳಗಾಗುವುದುಂಟು.

ಇದು ಬಹು ಹಿಂದಿನಿಂದಲೂ ನಡೆದು ಬರುತ್ತಿರುವ ವಿದ್ಯಮಾನ. ಶಿಶುನಾಳ ಷರೀಫರು, ‘ಮಳೆ ಇಲ್ಲದಲೆ ಹೊಳೆ ಬಂದಿತಣ್ಣ, ಎರಡು ದಡವ ಸೋಕಿ’ ಎಂದು ಹಾಡಿದ್ದು ಇಂತಹ ನೆರೆಯನ್ನು ನೋಡಿ! ನಮ್ಮ ರಾಜ್ಯದ ಸಮುದ್ರ ತೀರದ ಕೆಲವು ಪ್ರದೇಶ ಗಳಲ್ಲಿ, ಸಮುದ್ರ ಕೊರೆತದಿಂದಲೂ, ಮನೆ, ತೋಟಗಳು ಆಗಾಗ ಹಾನಿಗೊಳಗಾಗುವುದುಂಟು. ಇದೂ ಸಹ ಮಳೆಗಾಲದಲ್ಲೇ ಆಗುವುದರಿಂದ, ನೆರೆಯ ಜತೆಯಲ್ಲೇ ಇಂತಹ ಸುದ್ದಿಗಳು ವರದಿಯಾಗುತ್ತವೆ.

ಆದರೆ, ಅದೃಷ್ಟವಶಾತ್, ಇಂತಹ ಕೆಲವೇ ಕೆಲವು ಪ್ರದೇಶಗಳು ನಮ್ಮ ರಾಜ್ಯದಲ್ಲಿವೆ. ರಾಜ್ಯದ ಪಶ್ಚಿಮ ಕರಾವಳಿಯ ಎಲ್ಲಾ ಊರುಗಳಲ್ಲೂ ಇಂತಹ ಸಮುದ್ರಕೊರೆತ ಇಲ್ಲದೇ ಇರುವುದರಿಂದ, ಅಷ್ಟರ ಮಟ್ಟಿಗೆ ನಮ್ಮ ಕರಾವಳಿ ಸುರಕ್ಷಿತ. ಆದರೂ, ಕರಾವಳಿಯುದ್ದಕ್ಕೂ ಹಲವು ಪ್ರದೇಶಗಳಲ್ಲಿ ಸಮುದ್ರ ಕೊರೆತವನ್ನು ತಡೆಯಲೆಂದು ತಡೆಗೋಡೆಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಆದರೆ, ಸಮುದ್ರದ ಶಕ್ತಿಯ ಎದುರು ಅದೆಂತಹ ತಡೆಗೋಡೆಯೂ ನಿಲ್ಲಲಾರದು ಎಂಬುದಕ್ಕೆ, ಪ್ರತಿವರ್ಷ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸಮುದ್ರ ಕೊರೆತ ಪದೇ ಪದೇ ನಡೆಯುತ್ತಿರುವುದೇ ಸಾಕ್ಷಿ.

ಮಳೆ, ನೆರೆಯ ಹೊಡೆತವು ವರ್ಷದಿಂದ ವರ್ಷಕ್ಕೆ ಹೆಚ್ಚಳಗೊಳ್ಳುತ್ತಿದೆಯೆ? ಇಂತಹದೊಂದು ಪ್ರಶ್ನೆಯನ್ನು ನಮ್ಮ ನಾಡಿನವರು ಮಾತ್ರವಲ್ಲ, ಇಡೀ ಜಗತ್ತಿನವರೇ ಕೇಳುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ಅಮೆರಿಕ, ಯುರೋಪ್ ಮೊದಲಾದ ಪ್ರದೇಶಗಳಲ್ಲಿ ವಿಪರೀತ ತಾಪಮಾನ ದಾಖಲಾಗುತ್ತಿದೆ, ವಿಪರೀತ ಚಳಿಯೂ ಕೆಲವು ಕಡೆ ದಾಖಲಾಗುತ್ತಿದೆ. ಅದೇ ರೀತಿ ಜಗತ್ತಿನ ಕೆಲವು ಪ್ರದೇಶಗಳಲ್ಲಿ ಅಕಾಲಿಕ ಮತ್ತು ವಿಪರೀತ ಎನಿಸುವಷ್ಟು ಮಳೆಯೂ ಆಗುತ್ತಿದೆ.

ಇದಕ್ಕೆಲ್ಲಾ ಗ್ಲೋಬಲ್ ವಾರ್ಮಿಂಗ್ ಅಥವಾ ಜಾಗತಿಕ ತಾಪಮಾನದ ವ್ಯತ್ಯಯವೇ ಕಾರಣ ಎಂದು ತಜ್ಞರು ಅದಾಗಲೇ
ಎಂದೋ ಹೇಳಿಯಾಗಿದೆ. ಕಳೆದ ಒಂದು ಶತಮಾನ ದಿಂದೀಚೆಗೆ ಮನುಷ್ಯನು ಪ್ರಾಕೃತಿಕ ಸಂಪತ್ತನ್ನು ವಿವೇಚನೆ ಇಲ್ಲದೇ ಬಳಸಿದ್ದರಿಂದಲೇ, ಗ್ಲೋಬಲ್ ವಾರ್ಮಿಂಗ್ ಸಮಸ್ಯೆ ಉದ್ಭವಿಸಿದೆ ಮತ್ತು ಅದರಿಂದಾಗಿಯೇ ಅಕಾಲಿಕ ಮಳೆ, ಕಂಡು ಕೇಳರಿ
ಯದ ತಾಪಮಾನವು ದಾಖಲಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಅದಕ್ಕೆ ಸೂಕ್ತ ಮತ್ತು ಸಾಕಷ್ಟು ನಿಖರ ದಾಖಲೆ ಗಳನ್ನೂ ಒದಗಿಸಿದ್ದಾರೆ.

ಈಗಾಗಲೇ ಮನುಷ್ಯನು ನಾಶಪಡಿಸಿದ ಪ್ರಕೃತಿಯನ್ನು ಮರಳಿ ಪಡೆಯುವುದು ಕಷ್ಟವಾದರೂ, ಮುಂದೆಯೂ ಇನ್ನಷ್ಟು ಸಮಸ್ಯೆಗಳು ಉದ್ಭವಿಸದಂತೆ ಏನು ಮಾಡಬೇಕು ಎಂದೂ ವಿಜ್ಞಾನಿಗಳು ಹೇಳಿದ್ದಾರೆ. ಅದೊಂದು ರೀತಿಯ ಪರಿಹಾರ
ಸೂತ್ರ. ಮುಖ್ಯವಾಗಿ, ಈಗ ಇರುವ ಕಾಡುಗಳನ್ನು ರಕ್ಷಿಸಿಕೊಳ್ಳಬೇಕು, ಪರಿಸರಕ್ಕೆ ಸಂಬಂಧಿಸಿದ ಹುಲ್ಲುಗಾವಲು, ಬೆಟ್ಟಗುಡ್ಡ ಗಳನ್ನು ಇದ್ದ ಹಾಗೆಯೇ ಇರಗೊಡಬೇಕು ಮತ್ತು ಸಂಪನ್ಮೂಲಗಳನ್ನು ಸಂಯಮ ದಿಂದ ಬಳಸಬೇಕು ಎಂಬುದೇ ಆ
ಸೂತ್ರದ ತಿರುಳು.

ಮನುಷ್ಯನ ಹಸ್ತಕ್ಷೇಪವಿಲ್ಲದೇ ತನ್ನಷ್ಟಕ್ಕೆ ತಾನೇ ಸಹಜವಾಗಿ ಬೆಳೆಯುವ ಕಾಡು ಹೆಚ್ಚಳಗೊಂಡಷ್ಟೂ, ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ವಿಜ್ಞಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಕಡಿಮೆ
ಮಾಡುವುದು ಸಹ ಆದ್ಯತೆಯಾಗಬೇಕು ಎಂದೂ ಹೇಳಲಾಗಿದೆ. ಆದರೆ ಇಂತಹ ಸಲಹೆಗಳನ್ನು ವಿಶ್ವದ ಪ್ರಮುಖ ದೇಶ ಎನಿಸಿದ ಅಮೆರಿಕವೇ ಪೂರ್ತಿಯಾಗಿ ಪಾಲಿಸುತ್ತಿಲ್ಲ ಮತ್ತು ಕೆಲವು ಸಲಹೆಗಳನ್ನು ಭಾಗಶಃ ತಿರಸ್ಕರಿಸಿದೆ.

ಅದೇ ದಾರಿಯನ್ನು ಈಗ ನಮ್ಮ ರಾಜ್ಯವೂ ಅನುಸರಿಸುತ್ತಿದೆ! ನಮ್ಮ ರಾಜ್ಯದ ಪರಿಸರವನ್ನು ರಕ್ಷಿಸಲು ಶಿ-ರಸು ಮಾಡುವ ಗಾಡ್ಗಿಳ್ ವರದಿ, ಕಸ್ತೂರಿ ರಂಗನ್ ವರದಿ, ಈಚೆಗೆ ಹೊರಬಿದ್ದಿರುವ, ನಮ್ಮ ರಾಜ್ಯದ 20668 ಚದರ ಕಿ.ಮೀ. ಪರಿಸರ ವನ್ನು ರಕ್ಷಿಸುವ ವರದಿ ಎಲ್ಲವನ್ನೂ ನಮ್ಮ ರಾಜಕಾರಣಿಗಳು ಪಕ್ಷಭೇದವಿಲ್ಲದೇ ವಿರೋಽಸುತ್ತಿದ್ದಾರೆ. ಆ ವರದಿಗಳನ್ನು ಅನುಸರಿಸಿದರೆ, ಅಭಿವೃದ್ಧಿಗೆ ತೊಡಕಾಗುತ್ತದೆ ಎಂಬುದೇ ಅವರ ವಾದ.

ಈಗ ಸುರಿಯುತ್ತಿರುವ ವಿಪರೀತ ಮಳೆಗೂ, ನಮ್ಮ ಕಾಡುಗಳನ್ನು, ಪರಿಸರವನ್ನು ರಕ್ಷಿಸುವ ಚಟುವಟಿಕೆಗೂ ಸಂಬಂಧವಿಲ್ಲ ವೆಂದೇ ನವು ತಿಳಿದರೆ ಮೂರ್ಖತನವಾದೀತು. ಕಾಡುಗಳನ್ನು, ಬೆಟ್ಟಗುಡ್ಡಗಳನ್ನು, ಹುಲ್ಲುಗಾವಲನ್ನು, ಕುರುಚಲು ಕಾಡನ್ನು,
ಕಾಂಡ್ಲಾ ಕಾಡನ್ನು ಅವುಗಳ ಪಾಡಿಗೆ ಇರಲು ಬಿಟ್ಟರೆ, ಮಳೆಯಿಂದಾಗುವ ಹಾನಿಯೂ ಕಡಿಮೆಯಾದೀತು, ವಾತಾವರಣವೂ ಕಲ್ಮಶರಹಿತವಾದೀತು.