Sunday, 14th August 2022

ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ

ಚಿತ್ರದುರ್ಗ: ನಗರದ ಪ್ರಧಾನ ಮಂತ್ರಿ ಕೌಶಲ್ಯಕೇಂದ್ರ ಹಾಗೂ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಗುರುಪೀಠ ಸಂಯೋಜನೆಯಲ್ಲಿ ವಿವಿಧ ಕೌಶಲ್ಯ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಕೋವಿಡ್ ಲಸಿಕಾ ಅಭಿಯಾನ ಜರುಗಿತು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶರಣರು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ಕೊರೋನದಿಂದ ಪ್ರಾಣಹಾನಿಯಾಗದಂತೆ ರಕ್ಷಣೆ ಪಡೆಯಲು ಲಸಿಕೆ ಸುರಕ್ಷೆಯಾಗಿದೆ. ಯಾವುದೇ ವದಂತಿಗಳಿಗೆ ಕಿವಿಕೊಡದೆ ಲಸಿಕೆಯನ್ನು ತಾವುಗಳು ಪಡೆದು ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಲಸಿಕೆ ಕೊಡಿಸಿ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಶೇಕಡಾ 70% ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಚಿತ್ರದುರ್ಗ ನಗರದಲ್ಲಿ ಶೇಕಡಾ 90% ರಷ್ಟು ಲಸಿಕೆ ನೀಡಲಾಗಿದೆ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡುತ್ತಾ ಕೊರೋನ ರೋಗ ಇನ್ನೂ ಸಂಪೂರ್ಣವಾಗಿ ಹೋಗಿರುವುದಿಲ್ಲ ನಾವಿನ್ನು ಸಾಂಕ್ರಾಮಿಕ ರೋಗ ದ ಮದ್ಯೆ ವಾಸಿಸುತ್ತಿದ್ದೇವೆ, ಲಸಿಕೆ ಪಡೆದಿದ್ದರೂ ಸಹ ಎಚ್ಚರಿಕೆಯ ಅಗತ್ಯವಿದೆ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ವೈಯ್ಯಕ್ತಿಕ ಸ್ವಚ್ಛತೆಗೆ ಗಮನಹರಿಸುವುದು ಮುಖ್ಯ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮಾರುತಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್, ಸಿರೀಶ್, ಪರವಿನ್ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಉಪಸ್ಥಿತರಿದ್ದರು.