Tuesday, 21st March 2023

ಮೇಲ್ಮನೆ ಭಾರಕ್ಕೆ ಕುಸಿದ ಎಂಎಲ್‌ಗಳು

ವಿಸ್ತರಣೆ ವೇಳೆ ಮಾನದಂಡ ಮೌನ ಪರಿಷತ್ ಬಂಪರ್

ಕುರುಬ ಸಮಾಜಕ್ಕೂ ಹೆಚ್ಚಾಗುವ ಪ್ರಾತಿನಿಧ್ಯ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯ ಸರಕಾರ ನಿರ್ಧರಿಸಿರುವಂತೆ ಸಚಿವ ಸಂಪುಟ ವಿಸ್ತರಣೆ ವೇಳೆ ಈ ಬಾರಿ ವಿಧಾನ ಪರಿಷತ್ ಸದಸ್ಯರು ಹೆಚ್ಚು ಮಂದಿ
ಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟೇ ಅಲ್ಲ. ಸಂಪುಟದಲ್ಲಿ ಕುರುಬ ಸಮದಾಯದ ಸಚಿವರ ಸಂಖ್ಯೆಯೂ ಅಧಿಕ ವಾಗುವ ಸಂಭವವಿದೆ.

ಇದರಿಂದ ಸಂಪುಟದಲ್ಲಿ ಮೇಲ್ಮನೆ ಭಾರವಾಗಲಿದ್ದು, ಕೆಳಮನೆ ಪ್ರಾತಿನಿಧ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮುಂದೆ ‘ನುಡಿದಂತೆ ನಡೆ’ ಎಂಬ ಸೂತ್ರ ಮಾತ್ರ ಕಾಣುತ್ತಿರುವುದರಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರಾತಿನಿಧ್ಯಗಳ ವಿಚಾರ ಗೌಣ. ಹಾಗೆಯೇ ಸಂಪುಟದಲ್ಲಿ ಜಾತಿ, ಜನಾಂಗಗಳ ಪ್ರಾತಿನಿಧ್ಯಗಳಲ್ಲಿ ಏರುಪೇರಾದರೂ
ಲೆಕ್ಕಕ್ಕಿಲ್ಲದಂತಾಗಿದೆ.

ಹಾಗೊಂದು ವೇಳೆ ಬಿಜೆಪಿ ವರಿಷ್ಠರು ವಿಧಾನ ಸಭೆ, ವಿಧಾನಪರಿಷತ್ ಹಾಗೂ ಜನಾಂಗವಾರು ಅಳತೆಗೊಳುಗಳನ್ನು ಹಿಡಿದು ಕಸರತ್ತು ಮುಂದುವರಿಸಿದರೆ ಸಂಪುಟ ವಿಸ್ತರಣೆ ಬದಲು ಪುನಾರಚನೆ ಸಾಹಸಕ್ಕೆ ಇಳಿಯಬೇಕಾಗುತ್ತದೆ. ಆದರೆ ಪುನಾರಚನೆಗೆ
ಬಿಜೆಪಿ ವರಿಷ್ಠರು ಸಿದ್ಧರಿಲ್ಲ ಎನ್ನಲಾಗಿದೆ.

ಮೇಲ್ಮನೆ ಮಿಂಚಿದ್ದು ಇದೇ ಮೊದಲು!: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಪ್ರಕಟಿಸಿರುವಂತೆ ಸಂಪುಟ ವಿಸ್ತರಣೆಗೆ ತೀರ್ಮಾನಿಸಲಾಗಿದ್ದು, 7 ಮಂದಿ ಶಾಸಕರು ಸಂಪುಟ ಸೇರಲಿದ್ದಾರೆ. ಬಿಜೆಪಿಯ ಸದ್ಯದ ಲೆಕ್ಕಾಚಾರದಂತೆ ಈ ಬಾರಿ 7 ಮಂದಿಗೆ ಅವಕಾಶ ಸಿಗಲಿದ್ದು, ಈಗಾಗಲೇ ಮಂತ್ರಿ ಸ್ಥಾನದ ಭರವಸೆಯಲ್ಲಿರುವ ಆರ್.ಶಂಕರ್, ಮುನಿರತ್ನ, ಎಂಟಿಬಿ ನಾಗರಾಜ್, ಸಿ.ಪಿ.ಯೋಗೇಶ್ವರ್ ಹಾಗೂ ಉಮೇಶ್ ಕತ್ತಿ, ಸುಳ್ಯ ಶಾಸಕ ಎಸ್. ಅಂಗಾರ ಅಥವಾ ಚಿತ್ರದುರ್ಗದ ತಿಪ್ಪಾರೆಡ್ಡಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗದೆ ಸಂಪುಟ ವಿಸ್ತರಣೆಯಾದರೆ ಸಂಪುಟದಲ್ಲಿ ಪರಿಷತ್ ಸದಸ್ಯರೇ ಹೆಚ್ಚಾದಂತಾಗುತ್ತದೆ.

ಈಗಾಗಲೇ ಲಕ್ಷ್ಮಣ ಸವದಿ ಮತ್ತು ಶ್ರೀನಿವಾಸ ಪೂಜಾರಿ ಅವರು ಸಂಪುಟದಲ್ಲಿದ್ದು, ಈ ಮೂಲಕ ಸಂಪುಟದಲ್ಲಿ ಪರಿಷತ್ತಿಗೆ
ನೀಡಬೇಕಿದ್ದ ಕೋಟಾ ಮುಗಿದಿದೆ. ಈಗ ಪರಿಷತ್ ಸದಸ್ಯರಾದ ಆರ್.ಶಂಕರ್, ಎಂಟಿಬಿ ನಾಗರಾಜ್ ಹಾಗೂ ಯೋಗೇಶ್ವರ್ ಸಂಪುಟ ಸೇರುವ ಸಾಧ್ಯತೆ ಇದೆ. ಹಾಗೆಯೇ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನೂ ಮಂತ್ರಿ ಮಾಡಬೇಕೆನ್ನುವ ಬಗ್ಗೆ ಆರ್‌ಎಸ್‌ಎಸ್ ಚಿಂತಿಸುತ್ತಿದ್ದು, ಇದು ನಡೆದಿದ್ದೇ ಆದರೆ ಸರಕಾರದಲ್ಲಿ 6 ಮಂದಿ ಪರಿಷತ್ ಸದಸ್ಯರೇ ಮಂತ್ರಿಯಾದಂತಾಗುತ್ತದೆ. ಹಾಗೆಯೇ ಈಗಾಗಲೇ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜು ಸಂಪುಟದಲ್ಲಿ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರನ್ನು ಮಂತ್ರಿ ಮಾಡಿದರೆ ಸಂಪುಟದಲ್ಲಿ ಪ್ರಾತಿನಿಧ್ಯ ಹೆಚ್ಚಿದಂತಾಗುತ್ತದೆ ಎನ್ನುವ ಚರ್ಚೆಗಳೂ ಇವೆ.

ಅನಿವಾರ್ಯಕ್ಕೆ ಸಿಕ್ಕ ಹೈಕಮಾಂಡ್
ಬಿಜೆಪಿ ಮೂಲಗಳ ಪ್ರಕಾರ ಸದ್ಯ ಸಂಪುಟ ವಿಸ್ತರಣೆ ಮಹೂರ್ತ ಮಾತ್ರ ನಿಗದಿಯಾಗಿದ್ದು, ಯಾರೆಲ್ಲಾ ಸಂಪುಟ ಸೇರುತ್ತಾರೆ ಎನ್ನುವ ಬಗ್ಗೆ ಪಕ್ಷದ ಹೈಕಮಾಂಡ್ ನಿಂದ ಇನ್ನೂ ಸ್ಪಷ್ಟ ಸಂದೇಶ ಬಂದಿಲ್ಲ. ಯಡಿಯೂರಪ್ಪ ಅವರು ವರಿಷ್ಠರ ಭೇಟಿ ವೇಳೆ ಸಂಪುಟಕ್ಕೆ ಸೇರಿಸಬೇಕಾದ 14ಕ್ಕೂ ಹೆಚ್ಚಿನ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ್ದು, ಇವರಲ್ಲಿ ಸದ್ಯ ಪಕ್ಷ ವಾಗ್ದಾನ ನೀಡಿದವರಿಗೆ ಸಂಪುಟ ಸೇರಲು ಅವಕಾಶ ಕೇಳಿದ್ದರು ಎನ್ನಲಾಗಿದೆ. ಅಂದರೆ ಪ್ರಮುಖವಾಗಿ ಎಂಟಿಬಿ ನಾಗರಾಜ್, ಮುನಿರತ್ನ ಹಾಗೂ ಶಂಕರ್
ಅವರನ್ನು ಮೊದಲು ಮಂತ್ರಿ ಮಾಡಬೇಕಿದೆ ಎಂಬ ಬೇಡಿಕೆ ಮುಂದಿಟ್ಟಿದ್ದರು ಎಂದು ತಿಳಿದುಬಂದಿದೆ. ಬಿಜೆಪಿಯ ರಾಜ್ಯ ಉಸ್ತು ವಾರಿ ಅರುಣ್ ಸಿಂಗ್ ಅವರು ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದು, ಹೈಕಮಾಂಡ್ ನೀಡುವ ಸಂದೇಶಗಳನ್ನು ಹೊತ್ತು ತರಲಿದ್ದಾರೆ.

error: Content is protected !!