Tuesday, 9th August 2022

ಗದ್ದೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿಯಡಿ ಮಣ್ಣಿನ ಕೆಲಸ ಮಾಡಿಕೊಳ್ಳಲು ಅವಕಾಶ: ವಿಧಾನಸಭಾಧ್ಯಕ್ಷ ಕಾಗೇರಿ

ಶಿರಸಿ : ಪ್ರವಾಹದಿಂದ ಹಾನಿಯುಂಟಾದ ತೋಟ, ಗದ್ದೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿಯಡಿ ಮಣ್ಣಿನ ಕೆಲಸ ಹೆಚ್ಚು ಮಾಡಿಕೊಳ್ಳಲು ಅವಕಾಶ ನೀಡಲಾಗು ವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ವಿವಿಧ ಕಡೆಗಳಲ್ಲಿ ಪ್ರವಾಹ ಹಾನಿ ವೀಕ್ಷಣೆ ಮಾಡಿ, ಹೆಗಡೆಕಟ್ಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲಿ ರೂಪಿಸಿ, ಮಳೆಗಾಲದ ನಂತರ ಕೃಷಿ ಅಭಿವೃದ್ಧಿಗೆ ಸಹಕಾರ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಗದ್ದೆ ಗಳಲ್ಲಿ ತೊಳೆದುಕೊಂಡು ಹೋಗಿರುವ ಮಣ್ಣುಗಳ ಕೆಲಸ ಮಾಡಲು ಅಗತ್ಯ ಕಾನೂನು ರೂಪಿಸಲಾಗುವುದು ಎಂದರು.

ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಅಡಿಕೆ ತೋಟ, ಗದ್ದೆ, ಏಲಕ್ಕಿ ಬೆಳೆಗಳು ನಾಶವಾಗಿ ರೈತರು ಹೆಚ್ಚಿನ ಹಾನಿ ಅನುಭವಿಸಿದ್ದಾರೆ. ನಾಟಿ ಗದ್ದೆಗಳು ತೊಳೆದುಕೊಂಡು ಹೋಗಿ ಮುಂದೆ ನಾಟಿ ಮಾಡಲೂ ಸಾಧ್ಯವಾಗದ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳೂ ಬಿದ್ದಿದ್ದು, ಧರೆಗಳ ಕುಸಿತ ಕಂಡಿದ್ದು, ಎಲ್ಲ ದಕ್ಕೂ ತುರ್ತು ಅಗತ್ಯ ಕಲ್ಪಿಸಲಾಗಿದೆ. ಪುನರ್ವಸತಿ ಕಲ್ಪಿಸಲಾಗಿದ್ದು, ದೊಡ್ಡ ಪ್ರಮಾಣದ ಜೀವ ಹಾನಿ, ಜಾನುವಾರು ಜೀವ ಹಾನಿ ಆಗದಂತೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ನೋಡಿಕೊಂಡಿದ್ದಾರೆ ಎಂದರು.

ಹಾನಿಯ ಪ್ರಮಾಣ ದೊಡ್ಡದಾಗಿದ್ದು, ಸ್ವಲ್ಪ ಸಮಯ ಪಡೆದುಕೊಂಡು ಅಗತ್ಯ ಪರಿಹಾರ ನೀಡಲಾಗುತ್ತದೆ. ಸರ್ಕಾರವೂ ಸಹ ಜನರ ಬೆಂಬಲಕ್ಕೆ ನಿಲ್ಲುತ್ತದೆ. ಈ ಹಿಂದೆ ತುರ್ತು ಸಂದರ್ಭದಲ್ಲಿ ಅಗತ್ಯ ನಿರ್ದೇಶನ ನೀಡಿ ಜನರ ನೆರವಿಗೆ ಅಧಿಕಾರಿಗಳನ್ನು ಕಳಿಸಿದ್ದು, ಮುಂದಿನ ದಿನಗಳಲ್ಲಿ ಹಾನಿಯ ಮೊತ್ತ ತಿಳಿದು ಪರಿಹಾರಕ್ಕೆ ಒತ್ತು ನೀಡಲಾಗು ವುದು ಎಂದರು. ಶಿರಸಿ – ಕುಮಟಾ ರಸ್ತೆ ದೊಡ್ಡ ಪ್ರಮಾಣದಲ್ಲಿ ಹಾನಿಗೆ ಒಳಗಾಗಲು ಪರಿಸ್ಥಿತಿ ಕಾರಣವಾಗಿದ್ದು, ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡ ಕಾರಣ ಬಹುತೇಕ ಎಲ್ಲಾ ದೊಡ್ಡ ವಾಹನಗಳು ಶಿರಸಿ ಮುಖಾಂತರ ಸಂಚರಿಸುತ್ತಿದೆ. ಇದರಿಂದ ಸ್ಥಳೀಯ ರಸ್ತೆಗಳಿಗೆ ಹಾನಿಯಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಿಪಂ ಮಾಜಿ ಸದಸ್ಯ ಆರ್.ಡಿ.ಹೆಗಡೆ ಜಾನ್ಮನೆ, ತಾಪಂ ಮಾಜಿ ಸದಸ್ಯ ವಿನಾಯಕ ಹೆಗಡೆ ಹಾಗೂ ಹೆಗಡೆಕಟ್ಟಾ ಪಂಚಾಯತ ಸದಸ್ಯರು, ತಹಸೀಲ್ದಾರ ಎಮ್.ಆರ್.ಕುಲಕರ್ಣಿ ಹಾಜರಿದ್ದರು.

ಪರಿಶೀಲನೆ : ವಿಧಾನಸಭಾಧ್ಯಕ್ಷ ಕಾಗೇರಿ ಅವರು ತಾಲೂಕಿನ ಹೆಗಡೆಕಟ್ಟಾದ ಚಿಂಚಳಿಕೆ,ಎಮ್ಮೆಗುಂಡಿ, ರೇವಣಕಟ್ಟಾ ಗಂಜಿಕೇಂದ್ರಕ್ಕೆ ಭೇಟಿ ನೀಡಿ, ರೇವಣಕಟ್ಟಾದಲ್ಲಿ ಕುಸಿದ ಮನೆಗಳ ವೀಕ್ಷಣೆ ನಡೆಸಿದರು‌. ನಂತರ ತಹಶೀಲ್ದಾರ ಕಚೇರಿಯಲ್ಲಿ ಆಕಸ್ಮಿಕ ಸಾವಿಗೀಡಾದವರಿಗೆ ಚೆಕ್ ವಿತರಣೆ ನಡೆಸಿ, ಶಿರಸಿ ನಗರದ ಆದರ್ಶನಗರ , ಮಹಾಲಕ್ಮಿ ಲೇಔಟ, ಬಸೆಟ್ಟಕೆರೆ, ಗೌಳಿ ಓಣಿ ಸೇರಿದಂತೆ ವಿವಿಧೆಡೆ ಹಾನಿ ಪರಿಶೀಲಿಸಿದರು. ಬ್ಯಾಗದ್ದೆಯಲ್ಲಿನ ಕುಸಿದ ಮನೆ ವೀಕ್ಷಣೆ ನಡೆಸಿ, ಹುಸರಿ ಯಲ್ಲಿ ಪ್ರವಾಹದಿಂದ ಮೃತಪಟ್ಟವನ ಮನೆಗೆ ಭೇಟಿ ಸಾಂತ್ವಾನ ತಿಳಿಸಿದರು.

***

ವಿಧಾನಸಭಾಧ್ಯಕ್ಷನಾಗಿ ೨ ವರ್ಷ ಕಳೆದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು. ಅದನ್ನು ಮುಗಿಸಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂಪೂರ್ಣ ಹಾನಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ, ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ