Thursday, 11th August 2022

ಡಾ.ರಾಜ್‌ಕುಮಾರ್‌ ಅವರ 16ನೇ ವರ್ಷದ ಪುಣ್ಯತಿಥಿ: ಗಣ್ಯರಿಂದ ಸ್ಮರಣೆ

ಬೆಂಗಳೂರು: ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರ 16ನೇ ವರ್ಷದ ಪುಣ್ಯತಿಥಿಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ರಾಜ್‌ಕುಮಾರ್ ಅವರನ್ನು ಸ್ಮರಿಸಿದರು.

‘ಕನ್ನಡಿಗರ ಹೆಮ್ಮೆ, ಕಲಾಸರಸ್ವತಿಯ ವರಪುತ್ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ಅಣ್ಣಾವ್ರು ಕನ್ನಡಿಗರ ಹೃದಯಮಂದಿರದಲ್ಲಿ ಚಿರಸ್ಥಾಯಿಯಾಗಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.

‘ಅಭಿನಯದಲ್ಲಿ ನಟಸಾರ್ವಭೌಮ, ವ್ಯಕ್ತಿತ್ವದಲ್ಲಿ ಬಂಗಾರದ ಮನುಷ್ಯ. ಹೀಗೆಂದರೆ ಕನ್ನಡಿಗರಿಗೆ ನೆನಪಾಗುವುದು ವರನಟ ಡಾ.ರಾಜ್ ಕುಮಾರ್. ಡಾ.ರಾಜ್ ಅವರು ನಮ್ಮನ್ನಗಲಿ ಇಂದಿಗೆ 16 ವರ್ಷ. ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮ ನಾಡು-ನುಡಿಗೆ ಅವರ ಸೇವೆ ಅಪಾರ. ಅಭಿಮಾನಿ ದೇವರುಗಳ ಪಾಲಿನ ಪ್ರೀತಿಯ ಅಣ್ಣಾವ್ರು ಕನ್ನಡದ ಜನಮಾನಸದಲ್ಲಿ ಎಂದಿಗೂ ಅಜರಾಮರ’ ಎಂದು ಸಚಿವ ಸುಧಾಕರ್ ಕೂ ಮಾಡಿದ್ದಾರೆ.

‘ನಾಡಿನ ಕಲಾರಂಗದ ಸರ್ವಶ್ರೇಷ್ಠ ವ್ಯಕ್ತಿತ್ವ, ನಟಸಾರ್ವಭೌಮ, ಬಂಗಾರದ ಮನುಷ್ಯ ಶ್ರೀ ಡಾ.ರಾಜ್‍ಕುಮಾರ್ ಅವರ ಪುಣ್ಯತಿಥಿಯಂದು ಆದರಪೂರ್ವಕ ನಮನಗಳು. ಮನಮುಟ್ಟುವ ನಟನೆ, ಕಂಠಸಿರಿಯ ಮೂಲಕ ಅವರು ಸದಾ ನಮ್ಮೊಂದಿಗೆ ನೆಲೆಸಿದ್ದಾರೆ. ಅಣ್ಣಾವ್ರು ಎಂದಿಗೂ ಅಮರ’ ಗೃಹಸಚಿವ ಆರಗ ಜ್ಞಾನೇಂದ್ರ ಸ್ಮರಿಸಿದ್ದಾರೆ.

‘ಸದಭಿರುಚಿಯ ನಟನೆ ಮತ್ತು ಸಿರಿಕಂಠದ ಮೂಲಕ ಕನ್ನಡ ನಾಡಿನ ಜನಮಾನಸದಲ್ಲಿ ಅಜರಾಮರರಾಗಿರುವ ವರನಟ ಡಾ.ರಾಜ್‌ಕುಮಾರ್‌ ಅವರ ಪುಣ್ಯ ತಿಥಿಯಂದು ಗೌರವ ನಮನಗಳು. ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರ ಕನ್ನಡ ಪ್ರೇಮ ಹಾಗೂ ಸಾಮಾಜಿಕ ಕಳಕಳಿ ಸದಾ ಪ್ರೇರಣೆ’ ಎಂದು ಸಚಿವ ಅಶ್ವಥ್ ನಾರಾಯಣ್ ಅವರು ಕೂ ಮಾಡಿದ್ದಾರೆ.

‘ಕರುನಾಡಿನ ನಟಸಾರ್ವಭೌಮ, ಅತ್ಯುತ್ತಮ ಹಿನ್ನೆಲೆ ಗಾಯಕರು, ಯೋಗಪಟು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮೇರು ಕಲಾವಿದ, ಪದ್ಮಭೂಷಣ ಡಾ।। ರಾಜ್‌ಕುಮಾರ್‌ ಅವರ ಪುಣ್ಯತಿಥಿಯಂದು ಅನಂತ ನಮನಗಳನ್ನು ಅರ್ಪಿಸುತ್ತೇನೆ’ ಸಚಿವ ಎಸ್ ಟಿ ಸೋಮಶೇಖರ್ ಕೂ ಮಾಡಿದ್ದಾರೆ.