Tuesday, 23rd April 2024

ಅಧ್ಯಾತ್ಮ ನೈಪುಣ್ಯ ಕಲಿಸಿದವನು ಶ್ರೀ ಕೃಷ್ಣ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ –

ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ, ಐತಿಹ್ಯ ಸಾರಿದ ಡಾ. ಶೆಲ್ವ ಪಿಳ್ಳೈ ಐಯ್ಯಂಗಾರ್

ಎಲ್ಲವನ್ನೂ ತನ್ನೆಡೆಗೆ ಸೆಳೆಯುವವನು ಕೃಷ್ಣ

ಬೆಂಗಳೂರು: ಕೃಷ್ಣಂ ವಂದೇ ಜಗದ್ಗುರು ಅಂದರೆ ಕೃಷ್ಣನೇ ಜಗತ್ತು. ಯಾರಿಗೆ ಎಲ್ಲವೂ ತಿಳಿದಿರುತ್ತದೋ ಅವರೇ ಜಗದ್ಗುರು. ಅಧ್ಯಾತ್ಮ ಜ್ಞಾನವನ್ನು, ರಾಜಕೀಯ ನೈಪುಣ್ಯತೆಯನ್ನು ತಿಳಿಸಿಕೊಟ್ಟವರು ಶ್ರೀ ಕೃಷ್ಣ. ಇಂತಹ ಕೃಷ್ಣನಿಗೆ ನೀರು, ತುಳಸೀದಳ, ನೆಲ್ಲಿಕಾಯಿ ಹಾಗೂ ಕಮಲವನ್ನು ಸಮರ್ಪಿಸಿದರೂ ಸಂತೃಪ್ತಿ ಯಾಗುತ್ತದೆ.

ಭಕ್ತಿ ಅಧ್ಯಾತ್ಮಕತೆ ಹೊಸತನದಿಂದ ಕೃಷ್ಣನನ್ನು ಕಾಣಬೇಕು ಎಂದು ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಇಲಾಖೆ ಮುಖ್ಯಸ್ಥ ಮೇಲುಕೋಟೆ ಡಾ. ಶೆಲ್ವ ಪಿಳ್ಳೈ ಐಯ್ಯಂಗಾರ್ ತಿಳಿಸಿದರು. ವಿಶ್ವವಾಣಿ ಕ್ಲಬ್ ಹೌಸ್‌ನ ನೀವು ತಿಳಿಯಬೇಕಾದ ಕೃಷ್ಣ ಸಂವಾದದಲ್ಲಿ ಮಾತನಾಡಿದ ಅವರು, ಕೃಷ್ಣ ಅಂದರೆ ಜಗದ್ಗುರು. ಯಾರಿಗೆ 64 ವಿದ್ಯೆಗಳಲ್ಲಿ ಪ್ರಾವೀಣ್ಯತೆಯಿತ್ತೋ, ಯಾರಿಗೆ ರಾಜಕೀಯ ನಿಪುಣತೆಯ ಅರಿವಿತ್ತೋ ಅಧ್ಯಾತ್ಮಿಕದಲ್ಲಿ ಪ್ರಭಾವ ಶಾಲಿಯಾಗಿದ್ದರೋ ಅವರೇ ಜಗದ್ಗುರು ಎನ್ನಲಾಗುತ್ತದೆ. ಕೃಷ್ಣನ ಎಲ್ಲಾ ಚರಿತ್ರೆಯನ್ನು ಭಗವದ್ಗೀತೆ, ಭಾಗವತ ಪುರಾಣ, ಹರಿಕಥೆ ಗಳಲ್ಲಿ ತಿಳಿಸಿಕೊಡಲಾಗಿದೆ.

ಪುರಾಣಗಳ ಮುಖಾಂತರ ಶಂಕರಾಚಾರ್ಯ, ಲಿಂಬಾರ್ಕರ್, ಚೈತನ್ಯ, ಇಸ್ಕಾನ್‌ಗಳಲ್ಲಿ ಕೃಷ್ಣನ ಅನೇಕ ಸ್ತೋತ್ರಗಳಿವೆ. ಇದರಲ್ಲಿ ಕೃಷ್ಣನ ಶೃಂಗಾರ, ಅಧ್ಯಾತ್ಮಿಕ ಸ್ತೋತ್ರಗಳನ್ನು ಕಾಣಬಹುದಾಗಿದೆ. ಭಾರತೀಯರಿಗೆ ಧರ್ಮಾರ್ಥ ಕಾಮಮೋಕ್ಷವನ್ನು ಸಮಾನವಾಗಿ ಪರಿಗಣಿಸಲು ಇವುಗಳನ್ನು ಅನುಸರಿಸಲು ಕೃಷ್ಣ ಹೇಳಿದ್ದಾನೆ. ಇದಕ್ಕೆ ಆಧಾರಭೂತವಾಗಿ ಈ ಗ್ರಂಥಗಳನ್ನು ನೋಡಬೇಕು ಎಂದು ತಿಳಿಸಿದರು.

ಸುಂದರ ಪ್ರೇಮಿ: ಅತ್ಯಂತ ಹೆಚ್ಚು ಭಕ್ತರು ಶ್ರೀಕೃಷ್ಣನನ್ನು ಪರಂಜ್ಯೋತಿ, ಸಾಕ್ಷಾತ್ ನಾರಾಯಣ ಎಂದರೆ, ಸುಂದರ ಪ್ರೇಮಿ ಅನ್ನುವುದೊಂದು ವರ್ಗ, ಇನ್ನು ರಾಜಕೀಯ ಧುರೀಣ ಎನ್ನುವುದೊಂದು ವರ್ಗ. ಪರಮ ವಿರಾಗಿ ಎನ್ನುವುದೊಂದು ವರ್ಗ, ವೇದಾಂತಿ, ಬದುಕುವ ಕಲೆ, ಮ್ಯಾನೇಜ್‌ಮೆಂಟ್ ಲೀಡರ್ ಎನ್ನು ವವರೂ ಇದ್ದಾರೆ. ಕೃಷ್ಣ ಎಂದರೆ ಕಪ್ಪು. ಎಲ್ಲವನ್ನೂ ತನ್ನೆಡೆಗೆ ಸೆಳೆಯುವವನು ಕೃಷ್ಣ ಹಾಗಾಗಿ ಮುದುಕರು, ಮಕ್ಕಳು, ಗೋಪಿಕಾ ಸ್ತ್ರೀಯರನ್ನೊಳ ಗೊಂಡಂತೆ ಎಲ್ಲರಿಗೂ ಕೃಷ್ಣ ಇಷ್ಟವಾಗುತ್ತಾನೆ. ಕೃಷ್ಣ ಪರಿಪೂರ್ಣಾವತಾರ. ಮಾನವನನ್ನಾಗಿ ನೋಡಿದರೆ ಸಮಸ್ಯೆಗಳನ್ನು ಸವಾಲುಗಳನ್ನು ಕೃಷ್ಣ ಎದುರಿಸಿದ್ದಾನೆ.

ಪರಮಾತ್ಮ ಎಂದರೆ ಸಮಸ್ಯೆಗಳನ್ನು ಜಯಸಿದವನು. ಕೃಷ್ಣನ ಜೀವನವನ್ನು ಮೊದಲಿನಿಂದ ನೋಡಿದರೆ ಅನೇಕ ಸಮಸ್ಯೆಗಳನ್ನು ಕೃಷ್ಣ ಎದುರಿಸಿದ್ದು ಕಾಣಬ ಹುದು. ಕೃಷ್ಣ ಅವತಾರ ಎತ್ತಿರುವುದೇ ಜೀವನಪಾಠ ಕಲಿಸಲು. ಅವನ ಅವತಾರವೇ ಧರ್ಮ ಸಂರಕ್ಷಣೆಗಾಗಿ. ಕೃಷ್ಣ ಹೇಳುವಂತೆ ದೊಡ್ಡ ಸ್ಥಾನ ದಲ್ಲಿರುವವರು ಉತ್ತಮ ಆಚರಣೆಗಳನ್ನು ಮಾಡಿದರೆ ಅವರನ್ನು ಅನುಸರಿಸುವವರೂ ಅಂತಹದೇ ಉತ್ತಮ ಕಾರ್ಯವನ್ನು ಮಾಡುತ್ತಾರೆ ಎಂದು ವಿವರಿಸಿದರು.

ಅಷ್ಟಮಿಯಂದು ಕೃಷ ಜನ್ಮಾಷ್ಟಮಿ
ಮಹಾಭಾರತ, ಹರಿವಂಶ ಭಾಗವತದಲ್ಲಿ ಕೃಷ್ಣನ ಜನ್ಮದಿನವನ್ನು ಚಾಂದ್ರಮಾನದ ಶ್ರಾವಣಮಾಸ ದಲ್ಲೂ, ಸೌರಮಾನದ ಪ್ರಕಾರ ಸಿಂಹಮಾಸದ ಪ್ರಧಾನ ವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ತಮಿಳುನಾಡಿನಲ್ಲಿ ಸೌರಮಾನದಲ್ಲಿಯೂ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಚಾಂದ್ರಮಾನದಲ್ಲಿಯೂ ಜಯಂತಿ ಹಾಗೂ ಅಷ್ಟಮಿ ಆಚರಿಸಲಾಗುತ್ತದೆ. ಕೃಷ್ಣನ ಜನ್ಮ ನಕ್ಷತ್ರ ರೋಹಿಣಿ ಈ ನಕ್ಷತ್ರದಂದೂ ಜಯಂತಿ ಎಂದು ಆಚರಿಸಲಾ ಗುತ್ತದೆ. ಇನ್ನು ಹುಟ್ಟಿದ ದಿನ ಕೃಷ್ಣ ಪಕ್ಷದ ಅಷ್ಟಮಿಯಂದು ಚಂದ್ರೋದಯದಸಮಯ ಹೀಗಾಗಿ ಅಷ್ಟಮಿಯಂದೂ ಕೃಷ್ಣಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಬಿ.ವಿ. ರಾಮನ್ ಹಿಂದೆಯೇ ಕೃಷ್ಣನ ಜಾತಕವನ್ನು ಸಿದ್ಧಪಡಿಸಿದ್ದರು. ಹಾಗೂ ಜಾತಕದ ಫಲಾಫಲವನ್ನು ಆಗಮಗಳ ಪ್ರಕಾರ ಜಯಂತಿ, ನಕ್ಷತ್ರದಲ್ಲೇ ಆಚರಣೆಯನ್ನೂ ತಿಳಿಸಿಕೊಟ್ಟಿದ್ದಾರೆ.

ನಮ್ಮೊಳಗೆ ಕೃಷ್ಣ ಪ್ರಸ್ತುತ

ಕೃಷ್ಣ ನಮ್ಮ ವ್ಯಕ್ತಿತ್ವದಲ್ಲಿ, ಆಚರಣೆಯಲ್ಲಿ ಹಾಸು ಹೊಕ್ಕಾಗಿದ್ದಾನೆ. ಸಾವಿರಾರು ಭಕ್ತರು ಕೃಷ್ಣನನ್ನು ಸರ್ವಾವತಾರಿ ಎಂದು ನಂಬಿದ್ದಾರೆ. ಸೆರೆಮನೆಯಲ್ಲಿ ಆದ
ನಾಟಕೀಯ ಜನ್ಮ, ನಂದಗೋಕುಲದಲ್ಲಿ ಆದ ಬಾಲ್ಯಾವಸ್ಥೆ, ಕೃಷ್ಣನ ಲೀಲೆಗಳು ಜನಪ್ರಿಯವಾಗಿವೆ. ಮೈನವಿರೇಳಿಸುವ ಕೃಷ್ಣ ಕಥೆಗಳು ನಮ್ಮಲ್ಲಿ ರೋಚಕವಾಗಿ
ಉಳಿದುಕೊಂಡಿವೆ. ಭಗವತಾಂಶ, ಮಾನವಾತಾಂಶಗಳು ಸಮ್ಮಿಳಿತವಾಗಿದೆ. ಕೃಷ್ಣ ಇಂದು, ಮುಂದೆಂದೂ ನಮ್ಮೊಳಗೆ ಪ್ರಸ್ತುತ ವಾಗಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.

ವಸುಧೈವ ಕುಟುಂಬವಾಗಬೇಕಿದೆ
ಇಸ್ಕಾನ್ ಬೆಂಗಳೂರು ಮಂದಿರದಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯ, ಯುವಜನ ಸಬಲೀಕರಣ ವಿಭಾಗದ ಮುಖ್ಯಸ್ಥ ಸಂಪತಿದಾಸ್ ಮಾತನಾಡಿ, ಅಫ್ಘಾನಿ ಸ್ತಾನ ದೇಶವನ್ನು ಸಂಪೂರ್ಣ ಭಯೋತ್ಪಾದಕರು ಸಂಪೂರ್ಣ ಹತೋಟಿ ತೆಗೆದುಕೊಂಡಿದ್ದಾರೆ, ಅಸಹಾಯಕರಾಗಿ ಬಲಿಷ್ಠ ದೇಶಗಳು ನೋಡುತ್ತಿವೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ವಸುಧೈವ ಕುಟುಂಬಕಂ ಇಡೀ ಭೂಮಿಯೇ ಕುಟುಂಬದಂತಿರಬೇಕು ಎಂದು ಶಾಸ್ತ್ರಗಳು ತಿಳಿಸಿಕೊಡುತ್ತವೆ. ಅಂತೆಯೇ
ಎಲ್ಲರೂ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಭಗವಂತನನ್ನು ಪ್ರೀತಿಸಬೇಕು
ಕೃಷ್ಣ ಜಗದ್ಗುರು ಎಲ್ಲರನ್ನು ತನ್ನೆಡೆಗೆ ಸೆಳೆಯುವವನೇ ಕೃಷ್ಣ
ಕೃಷ್ಣ ಪರಿಪೂರ್ಣಾವತಾರ
ಕೃಷ್ಣನ ಅವತಾರವೇ ಜೀವನಪಾಠ ಕಲಿಸಲು
ಪ್ರಾಣಕ್ಕಾಗಿರುವ ಭಯ ತ್ಯಜಿಸಬೇಕು
ಧರ್ಮ ಎಂದರೆ ಜೀವನಕ್ರಮ
ಜೀವನಕ್ರಮವೇ ಬೇರೆ ಮತವೇ ಬೇರೆ
ಕೃಷ್ಣ ಒಂದು ಪರಿಪೂರ್ಣ ವ್ಯಕ್ತಿತ್ವ
ಕೃಷ್ಣ ಪರಮವೇದಾಂತಿ

Leave a Reply

Your email address will not be published. Required fields are marked *

error: Content is protected !!