Thursday, 30th November 2023

ಕ್ರೀಡಾಕ್ಷೇತ್ರಕ್ಕೆ ಒತ್ತಾಸೆಯಿರಲಿ

ಒಂದು ಕಾಲಕ್ಕೆ ‘ಹಾವಾಡಿಗರ ದೇಶ’ ಎಂದೇ ಗೇಲಿಗೊಳಗಾಗಿದ್ದ ಮತ್ತು ಆ ಹಣೆಪಟ್ಟಿಯಿಂದಲೇ ಬಹುತೇಕ ಗುರುತಿಸಲ್ಪಡುತ್ತಿದ್ದ ಭಾರತವಿಂದು ಇಂಥ ವಿವಿಧ ಅಪಸವ್ಯಗಳ ಪೊರೆಕಳಚಿ ಜಗತ್ತಿನೆದುರು ಮೈಕೊಡವಿಕೊಂಡು ಎದ್ದುನಿಂತಿದೆ.

ಆರ್ಥಿಕತೆ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಸಾಧಿಸಿರುವ ಪಾರಮ್ಯವೇ ಇದಕ್ಕೆ ಸಾಕ್ಷಿ. ಈ ಪಟ್ಟಿಗೆ ಕ್ರೀಡಾಕ್ಷೇತ್ರವನ್ನೂ ಸೇರಿಸುವ ದಿನ ಗಳು ದೂರವಿಲ್ಲ ಎಂಬುದಕ್ಕೆ ಪ್ರಸ್ತುತ ಚೀನಾದಲ್ಲಿನ ನಡೆಯುತ್ತಿರುವ ‘ಏಷ್ಯನ್ ಗೇಮ್ಸ್’ ಕ್ರೀಡಾಕೂಟದಲ್ಲಿ ಭಾರತದ ಪ್ರತಿಭೆಗಳಿಂದ ಆಗಿರುವ- ಆಗುತ್ತಿರುವ ಪದಕಗಳ ಬೇಟೆಯೇ ಸಾಕ್ಷಿ. ಹಾಕಿ ಮತ್ತು ಕ್ರಿಕೆಟ್ ಬಿಟ್ಟರೆ ಮಿಕ್ಕ ಕ್ರೀಡೆಗಳಲ್ಲಿ ಹೇಳಿಕೊಳ್ಳುವಂಥ ಛಾಪು ಒತ್ತದಿದ್ದ ಭಾರತವೀಗ ಇವನ್ನು ಹೊರತುಪಡಿಸಿದ ಆಟೋಟಗಳಲ್ಲೂ ನಿಚ್ಚಳ ಹೆಜ್ಜೆಗುರುತು ಮೂಡಿಸು ತ್ತಿರುವುದಕ್ಕೆ ಒಂದೊಂದೇ ಸಾಕ್ಷಿಗಳು ಸಿಗುತ್ತಿವೆ.

ಚೆಸ್ ವಿಶ್ವಕಪ್ ಪಂದ್ಯಾ ವಳಿಯಲ್ಲಿ ಇತ್ತೀಚೆಗಷ್ಟೇ ಯುವಪ್ರತಿಭೆ ಪ್ರಜ್ಞಾನಂದ ಮಿಂಚಿದ್ದು ಇದಕ್ಕೊಂದು ಪುಟ್ಟ ಸಾಕ್ಷಿ. ಕೋಟಿಗಟ್ಟಲೆ ಜನಸಂಖ್ಯೆಯಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ವಿಷಯದಲ್ಲಿ ಭಾರತದ ‘ಶೂನ್ಯ ಸಂಪಾದನೆ’ಯ ಸ್ಥಿತಿಯೇ ಒಂದು ಕಾಲಕ್ಕೆ ಎದ್ದು ಕಾಣುತ್ತಿತ್ತು. ಆದರೀಗ ಕ್ರೀಡೆಯಲ್ಲೂ ಭಾರತದ ಕಿರೀಟಕ್ಕೆ ಗರಿಗಳ ಸೇರ್ಪಡೆಯಾಗುತ್ತಿದೆ. ಹಾಗಂತ ನಾವು ಇಷ್ಟಕ್ಕೇ ಸಮಾಧಾನ ಪಟ್ಟು ಕೊಳ್ಳುವಂತಿಲ್ಲ. ಭಾರತದ ಬಹುತೇಕ ರಾಜ್ಯಗಳಲ್ಲಿ, ಕರ್ನಾಟಕವನ್ನೇ ನಿರ್ದಿಷ್ಟವಾಗಿ ಪರಿಗಣಿಸಿದರೂ ಗಣನೀಯ ಸಂಖ್ಯೆಯ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕ್ರೀಡೋಪಕರಣ ಗಳ ಕೊರತೆ ಮುಖಕ್ಕೆ ರಾಚುವಂತಿರುವುದು ಅಪ್ರಿಯಸತ್ಯ.

ಕ್ರೀಡಾ ಹೊಲದಲ್ಲಿ ಮೊಳಕೆಯೊಡೆದು ಸಸಿಯಾಗಿ, ಬೆಳೆದು ಹೆಮ್ಮರವಾಗಿ ದೇಶಕ್ಕೆ ಕೀರ್ತಿ ತರಬೇಕು ಎಂದು ಹಂಬಲಿಸುವ ‘ಕ್ರೀಡಾ ಚಿಗುರು’ಗಳಿಗೆ ಆರಂಭ ದಲ್ಲೇ ಪ್ರೋತ್ಸಾಹದ ನೀರೆರೆಯದಿದ್ದರೆ ಅವು ಬೆಳೆಯುವುದಾದರೂ ಎಂತು, ಹೂ-ಹಣ್ಣು ಬಿಡುವುದಾದರೂ ಎಂತು? ಎಲ್ಲಕ್ಕಿಂತ ಮುಖ್ಯವಾಗಿ ‘ಶಿಕ್ಷಣ ಕ್ಷೇತ್ರ ವೊಂದು ಅನುತ್ಪಾದಕ ವಲಯ’ ಎಂಬ ಪೂರ್ವಗ್ರಹಪೀಡಿತ ಭಾವನೆಯಿಂದ ನಮ್ಮ ಆಳುಗರು ಹೊರ ಬರಬೇಕು. ಕ್ರೀಡಾಕ್ಷೇತ್ರದ ವಿವಿಧ ಮಗ್ಗಲುಗಳಿಗೆ ವಿನಿಯೋಗ ವಾಗುವ ಹಣವನ್ನು ‘ವೆಚ್ಚ’ ಎಂದುಕೊಳ್ಳದೆ ‘ಬಂಡವಾಳ’ ಎಂದು ಪರಿಭಾವಿ ಸಬೇಕು. ಆಗ ಮಾತ್ರವೇ ಈ ಕ್ಷೇತ್ರದಲ್ಲೂ ಮತ್ತಷ್ಟು ಸಾಧನೆಗಳನ್ನು ನವಭಾರತ ಕಾಣಬಲ್ಲದು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಸಲ್ಲ.

Leave a Reply

Your email address will not be published. Required fields are marked *

error: Content is protected !!