Sunday, 14th August 2022

ಇರುವ ಮೂವರ ಪೈಕಿ ಸಚಿವರಾರು?

– ಕೊಪ್ಪಳ ಜಿಲ್ಲೆಯಲ್ಲಿ 3 ಬಿಜೆಪಿ ಶಾಸಕರು
– ಇಬ್ಬರಿಗೆ ಹಿರಿತನ, ಓರ್ವ ಹೊಸಬ
– ಸಾಮಥ್ರ್ಯ, ದೌರ್ಬಲ್ಯಗಳ ಪರಿಗಣನೆ

ಕೊಪ್ಪಳ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೆ ಕೊಪ್ಪಳ ಜಿಲ್ಲಾ ಬಿಜೆಪಿಯಲ್ಲಿ ಜಿಲ್ಲೆಗೆ ಸಚಿವಗಿರಿ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಇದೆ. ಇರುವ ಮೂವರು ಶಾಸಕರ ಪೈಕಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ ಎಂಬ ಚರ್ಚೆ ಶುರುವಾಗಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಆದ್ಯತೆ ಸಿಗದೇ ಹೊರಗಿನವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅಷ್ಟೆ ಅಲ್ಲ 2019ರಲ್ಲಿ ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪ ಸರ್ಕಾರದಲ್ಲೂ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಬಿ.ಸಿ. ಪಾಟೀಲ್ ಉಸ್ತುವಾರಿ ಸಚಿವರಾಗಿದ್ದರು. ಆದÉ ಇದೀಗ ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ನೂತನ ಸಿಎಂ ಅಧಿಕಾರ ನಡೆಸುತ್ತಿದ್ದು, ಬಿಜೆಪಿ ಹೈಕಮಾಂಡ್ ಜಿಲ್ಲೆಯ ಮೂವರು ಶಾಸಕರ ಪೈಕಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಲಿದೆಯೆ ಎಂಬ ನಿರೀಕ್ಷೆ ಇದೆ. ನೂತನ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಸಿಗುವ ನಿರೀಕ್ಷೆ ಇದ್ದು, ಇರುವ ಮೂವರಲ್ಲಿ ಸಚಿವ ಸ್ಥಾನ ಯಾರಿಗೆ ಒಲಿಯಲಿದೆ ಎಂದು ಗುಟ್ಟಾಗಿ ಉಳಿದಿದೆ.

ಜಿಲ್ಲೆಯ ಕನಕಗಿರಿ, ಯಲಬುರ್ಗಾ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಒಮ್ಮೆ ಎಂಎಲ್‍ಸಿ ಆಗಿದ್ದರು. ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಅತಿಹೆಚ್ಚು ಸದಸ್ಯತ್ವ ಮಾಡಿಸಿದ್ದರು. ಯಡಿಯೂರಪ್ಪ ಅವಧಿಯಲ್ಲೇ ಸಚಿವರಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇವರಿಗೆ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವವೂ ಇದೆ. ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿರುವ ಇವರು ಸಚಿವರಾಗುವ ನಿರೀಕ್ಷೆ ಹೆಚ್ಚಾಗಿದೆ. ಕಾರಣ ದೆಹಲಿ ಮಟ್ಟದ ಬಿಜೆಪಿ ನಾಯಕರು ಹಾಗೂ ಸಂಘದವರ ಜೊತೆ ಉತ್ತಮ ಒಡನಾಟ ಇರುವುದು. ಆದರೆ ಉತ್ತರ ಕರ್ನಾಟಕ ಭಾಗದ ಹಲವು ಕ್ಷೇತ್ರಗಳಲ್ಲಿ ರಡ್ಡಿ ಲಿಂಗಾಯತ ಶಾಸಕರು ಇದ್ದಾರೆ. ಒಂದುವೇಳೆ ಬೇರೆಯವರಿಗೆ ಅವಕಾಶ ನೀಡಿದರೆ ಜಾತಿವಾರು ಲೆಕ್ಕಾಚಾರದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನ. ಅಲ್ಲದೆ ತಾಲೂಕು ಮಟ್ಟದ ಅನೇಕ ಅಧಿಕಾರಿಗಳನ್ನು ಸಕಾರಣವಿಲ್ಲದೆ ವರ್ಗಾವಣೆ ಮಾಡಿಸುವುದು, ತನ್ನ ಗೆಲುವಿಗಾಗಿ ದುಡಿದ ಕಾರ್ಯಕರ್ತರ ವಿರುದ್ಧ ಟೀಕೆ ಸಹಿಸಿಕೊಳ್ಳದೇ ಕೇಸ್ ಹಾಕಿಸುವ ಖಯಾಲಿ ಇವರಿಗಿದೆ. ಈ ಅಂಶಗಳು ಪಕ್ಷದ ವರಿಷ್ಠರಿಗೆ ತಿಳಿಯದೇ ಏನಿಲ್ಲ.

ಗಂಗಾವತಿ ಶಾಸಕರಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಪರಣ್ಣ ಮುನವಳ್ಳಿ ಸಹ ಸಚಿವಾಕಾಂಕ್ಷಿ. ಯಡಿಯೂರಪ್ಪ ಬೆಂಬಲಿಗರಾದ ಇವರಿಗೆ ಬಿಎಸ್‍ವೈ ಕೃಪಕಟಾಕ್ಷ ಬೇಕಿದೆ. ಆದರೆ ಯಡಿಯೂರಪ್ಪ ಮಾತು ಸಚಿವ ಸ್ಥಾನ ಹಂಚಿಕೆಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆಯುವುದು ಕಷ್ಟ. ಪರಣ್ಣ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಅಧಿಕಾರಿಗಳ ವರ್ಗಾವರ್ಗಿ ದಂಧೆ ಜೋರಾಗಿಯೇ ಮಾಡಿದ್ದಾರೆ ಎನ್ನುವ ಮಾತೂ ಇವೆ. ಅಂಗನವಾಡಿ ಮಕ್ಕಳಿಗಾಗಿ ಮೊಟ್ಟೆ ವಿತರಣೆ ಟೆಂಡರ್ ವಿಷಯದಲ್ಲಿ ಡೀಲ್ ಮಾಡಿಕೊಂಡ ಬಗ್ಗೆ ಖಾಸಗಿ ವಾಹಿನಿ ಕುಟುಕು ಕಾರ್ಯಚರಣೆಯಲ್ಲಿ ಬಹಿರಂಗವಾಗಿದ್ದು, ಅದು ಇವರಿಗೆ ಮುಳುವಾಗುವ ಸಂಭವ ಇದೆ. ಪಕ್ಷ ಸಂಘಟನೆ ವಿಷಯದಲ್ಲಿ ಹೇಳಿಕೊಳ್ಳುವಂತ ಕೆಲಸ ಮಾಡದೇ ಕೇವಲ ಅಧಿಕಾರ ಅನುಭವಿಸುತ್ತಿರುವುದು ಮುಳುವಾಗಬಹುದು.

ಮೊದಲ ಬಾರಿಗೆ ಅನುಕಂಪದ ಮೇಲೆ ಮತದಾರನ ಮನ ಗೆದ್ದ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರ ಸತತ ಎರಡು ಬಾರಿ ಗೆದ್ದು ಸಚಿವರಾಗಿದ್ದ ಕಾಂಗ್ರೆಸ್‍ನ ಶಿವರಾಜ ತಂಗಡಗಿ ಸೋಲಿಸಿದ್ದಾರೆ. ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಶ್ರಮಿಸಿದ್ದು, ತೋಟಗಾರಿಕಾ ಪಾರ್ಕ್ ಮಂಜೂರು ಮಾಡಿಸಿದ್ದು ಬಿಟ್ಟರೆ ಹೇಳಿಕೊಳ್ಳುವಂತ ಕೆಲಸ ಮಾಡದೇ ಇರುವುದು. ದಲಿತ ಎಡಗೈ ಸಮುದಾಯಕ್ಕೆ ಸೇರಿದ ಇವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಇದೇ ಸಮುದಾಯದ ಗೋವಿಂದ ಕಾರಜೋಳ ಅವರಿಗೆ ಹೈಕಮಾಂಡ್ ಮಣೆ ಹಾಕಿದರೆ ದಡೆಸೂಗೂರಗೆ ಸಚಿವಗಿರಿ ಕನಸು.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಕ್ಷದ ವರಿಷ್ಠರ ತಲೆಯಲ್ಲಿ ಜಿಲ್ಲೆ ಮಟ್ಟಿಗೆ ಸೂಕ್ತ ವ್ಯಕ್ತಿ ಯಾರು ಎನ್ನುವುದು ಪ್ರಶ್ನೆಯಾಗಿದೆ. ಈ ಬಾರಿಯಾದರೂ ಕೊಪ್ಪಳದವರೆ ಸಚಿವರಾಗಲಿ ಎನ್ನುವ ಆಶಯ ಜಿಲ್ಲೆಯ ಬಿಜೆಪಿಗರಲ್ಲದೆ ಜನತೆಯದು.

ಹಾಲಪ್ಪ ಆಚಾರ್(ಯಲಬುರ್ಗಾ ಶಾಸಕ)
ಸಾಮರ್ಥ್ಯ: 
ಕ್ಷೇತ್ರದಲ್ಲಿ ಉತ್ತಮ ಪಕ್ಷ ಸಂಘಟನೆ ಮಾಡಿದ್ದು
ಎಂಎಲ್‍ಸಿ ಆಗಿ ರಾಜಕೀಯ ಅನುಭವ
ಅತಿಹೆಚ್ಚು ಬಿಜೆಪಿ ಸದಸ್ಯತ್ವ ಮಾಡಿರುವುದು
ಪಕ್ಷದ ದೃಷ್ಟಿಯಲ್ಲಿ ಕ್ಲೀನ್ ಇಮೇಜ್
ಸಂಘದ ಪ್ರಮುಖರನ್ನು ಮ್ಯಾನೇಜ್ ಮಾಡಿರುವುದು
ಸಹಕಾರ ಕ್ಷೇತ್ರದಲ್ಲಿ ಹಲವು ಉತ್ತಮ ಕೆಲಸ ಮಾಡಿರುವುದು

ದೌರ್ಬಲ್ಯ:
ಆರೋಪ, ಟೀಕೆಗಳನ್ನು ಸಹಿಸಿಕೊಳ್ಳದೆ ದ್ವೇಷಿಸುವ ಸ್ವಭಾವ
ತನ್ನ ಗೆಲುವಿಗೆ ದುಡಿದ ಪಕ್ಷದ ಕಾರ್ಯಕರ್ತರ ವಿರುದ್ಧ ದ್ವೇಷ
ಅಧಿಕಾರದಲ್ಲಿ ಅಳಿಯನ ಅತಿಯಾದ ಹಸ್ತಕ್ಷೇಪ
ತಾಲೂಕು ಅಧಿಕಾರಿಗಳ ಅತಿಯಾದ ವರ್ಗಾವಣೆ, ಕಿರುಕುಳದ ಆರೋಪ
ನೀರಾವರಿ ಹೆಸರಿನಲ್ಲಿ ಶಾಸಕರಾದರೂ ನಿರೀಕ್ಷಿತ ಕೆಲಸ ಆಗಿಲ್ಲ
ಕುಷ್ಟಗಿ, ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆ ರಾಜಿ

ಪರಣ್ಣ ಮುನವಳ್ಳಿ(ಗಂಗಾವತಿ ಶಾಸಕ)
ಸಾಮರ್ಥ್ಯ: 
ಎರಡನೇ ಬಾರಿ ಶಾಸಕರಾಗಿರುವುದು
ಕೆಎಲ್‍ಇ ಸಂಸ್ಥೆಯ ಪ್ರಭಾಕರ ಕೋರೆ ಸಂಬಂಧಿ
ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿಗ

ದೌರ್ಬಲ್ಯ:
ಹಲವು ಭ್ರಷ್ಟಾಚಾರ, ಕಮಿಷನ್ ಪಡೆದ ಆರೋಪ
ಮೊಟ್ಟೆ ಖರೀದಿ ಹಗರಣದಲ್ಲಿ ಪ್ರಮುಖ ಹೆಸರು
ನಿರೀಕ್ಷಿತ ಅಭಿವೃದ್ಧಿ ಕೆಲಸ ಮಾಡದಿರುವುದು
ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗದೇ ಇರುವುದು
ಎಲ್ಲ ವಿಷಯದಲ್ಲೂ ಪುತ್ರನ ಹಸ್ತಕ್ಷೇಪದ ಆರೋಪ

ಬಸವರಾಜ ದಡೆಸೂಗೂರ(ಕನಕಗಿರಿ ಶಾಸಕ)
ಸಾಮರ್ಥ್ಯ: 
ಸತತ ಎರಡು ಬಾರಿ ಗೆದ್ದಿದ್ದ ಕಾಂಗ್ರೆಸ್‍ನ ತಂಗಡಗಿ ಸೋಲಿಸಿದ್ದು
ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ
ದಲಿತ ಎಡಗೈ ಸಮುದಾಯದ ಶಾಸಕ
ಮಾಜಿ ಸಿಎಂ ಯಡಿಯೂರಪ್ಪ ಬಲಗೈ ಬಂಟ

ದೌರ್ಬಲ್ಯ:
ವಿವಿಧ ಯೋಜನೆಗಳು, ಕೆಲಸದಲ್ಲಿ ಪರ್ಸೆಂಟೇಜ್ ಪಡೆದ ಆರೋಪ
ಸಾಕ್ಸ್, ಷೂ ಖರೀದಿಯಲ್ಲಿ ಕಮಿಷನ್ ಪಡೆದ ಆರೋಪ
ವಿದ್ಯಾಭ್ಯಾಸ, ರಾಜಕೀಯದ ಅನುಭವದ ಕೊರತೆ
ಜೆಡಿಎಸ್ ಸೇರಲು ಆ ಪಕ್ಷದ ಕದ ತಟ್ಟಿದ್ದು
ಪಕ್ಷ ನಿಷ್ಠೆ ಬದಲು ವ್ಯಕ್ತಿನಿಷ್ಠೆ ಇರುವುದು