Tuesday, 18th January 2022

ಅಷ್ಟಕ್ಕೂ ಅವಸರದಲ್ಲಿ ಅನ್‌ಲಾಕ್‌ ಮಾಡಿದ್ದೇಕೆ ?

Unlock

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಆಡಳಿತ ನಡೆಸುವವರು ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿಯಲ್ಲಿ ತಮಗೆ ಬೇಕಾದ ಶಿಫಾರಸುಗಳನ್ನು ಮಾತ್ರ ಪಡೆದು, ಬಾಕಿ ಶಿಫಾರಸುಗಳನ್ನು ಹಾಗೆಯೇ ಪಕ್ಕಕ್ಕೆ ಇಟ್ಟರು. ತಜ್ಞರ ವರದಿಗಳನ್ನು ತಮಗೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನ ಮಾಡಿಕೊಂಡರು.

ಕೆಲ ತಿಂಗಳಿನಿಂದ ತಣಗಾಗಿದ್ದ ಕರೋನಾ ಆತಂಕ ಇದೀಗ ಸಣ್ಣಗೆ ಪುನಃ ಆರಂಭವಾಗಿದೆ. ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡಿರುವ ಒಮೈಕ್ರಾನ್ ಭೀತಿಯ ಜತೆಗೆ, ನಿತ್ಯ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೂರನೇ ಅಲೆಯ ಎನ್ನುವ ಆತಂಕವನ್ನು ಸೃಷ್ಟಿಸಿದೆ. ಇತ್ತ ಸಚಿವರು ಆರಂಭದಲ್ಲಿ ‘ಏನು ಸಮಸ್ಯೆಯಿಲ್ಲ’ ಎಂದು ಹೇಳಿಕೊಂಡು ಓಡಾಡಿದರೂ, ಒಮೈಕ್ರಾನ್ ಪತ್ತೆಯಾಗುತ್ತಿದ್ದಂತೆ, ‘ಸೋಂಕು ಹೆಚ್ಚಾದರೆ ಕಠಿಣ ಕ್ರಮ ಅನಿವಾರ್ಯ’ ಎಂದು ಮಾತು
ಬದಲಿಸುತ್ತಿದ್ದಾರೆ.

ರೂಪಾಂತರಿ ತಳಿಯಾಗಲಿ, ಮೂರನೇ ಅಲೆಯ ಎಚ್ಚರಿಕೆಯಾಗಲಿ ಹೊಸದಲ್ಲ. ವಿಶ್ವಕ್ಕೆ ಕರೋನಾ ಕಾಲಿಟ್ಟಾಗಿನಿಂದ, ‘ಓಪನ್-ಕ್ಲೋಸ್’ ಆಟ ನಡೆಯುತ್ತಲೇ ಇದೆ. ಸೋಂಕು ಕೊಂಚ ಏರಿಕೆಯಾಗುತ್ತಿದ್ದಂತೆ ಎಲ್ಲವನ್ನು ಮುಚ್ಚುವ ಸರಕಾರ, ಇಳಿಕೆಯಾಗುತ್ತಿದ್ದಂತೆ ಎಲ್ಲವನ್ನು ತೆರೆಯಲು ಮುಂದಾಗುತ್ತದೆ. ಆದರೆ ಮುಚ್ಚು-ತೆಗಿ ನಿರ್ಧಾರದ ನಡುವೆ ಆಗಬೇಕಾದ ಅವಾಂತರವಂತು ಆಗಿರುತ್ತದೆ ಎನ್ನುವುದಕ್ಕೆ ಎರಡನೇ ಅಲೆಯ ಸಾಕ್ಷಿ.

ಕರೋನಾ ನಿಯಂತ್ರಿಸುವುದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಹಲವು ಕ್ರಮಗಳನ್ನು ವಹಿಸಿರುವುದರಲ್ಲಿ ಎರಡನೇ ಮಾತಿಲ್ಲ. ಸೋಂಕಿನ ತೀವ್ರತೆಯನ್ನು ತಗ್ಗಿಸಲು ಹಾಗೂ ಕರೋನಾ ವಿರುದ್ಧ ಶಾಶ್ವತ ಪರಿಹಾರವಾಗಿರುವ ಲಸಿಕಾ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆದರೆ ಸೋಂಕು ಕಾಣಿಸಿಕೊಂಡು ಹೆಚ್ಚಾಗುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸದೇ ಇರುವುದು, ಭಾರಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ. ರಾಜ್ಯ ಸರಕಾರವೇ ರಚಿಸಿದ್ದ ತಜ್ಞರ ಸಮಿತಿ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದರೂ, ‘ಎರಡನೇ ಅಲೆ ಎದುರಿಸಲು ಸರಕಾರ ಸರ್ವ ಸನ್ನದ್ಧ’ ಎನ್ನುವ ಕಾಮನ್ ಹೇಳಿಕೆ ನೀಡಿಕೊಂಡು ದಿನದೂಡಿದರು.

ಕೊನೆಗೆ ಮನೆಗೊಂದು ಸೋಂಕು ಕಾಣಿಸಿಕೊಂಡ ಬಳಿಕ ಲಾಕ್‌ಡೌನ್ ಎನ್ನುವ ಅಸ್ತ್ರವನ್ನು ಪ್ರಯೋಗಿಸಿತು. ಆದರೆ ಆ ವೇಳೆಗಾಗಲೇ, ಕರೋನಾ ಸೋಂಕು ಪ್ರತಿಯೊಂದು ಮನೆಗೂ ಹೊಕ್ಕಿ, ಹಲವರನ್ನು ಬಲಿ ಪಡೆದಿತ್ತು. ಎರಡನೇ ಅಲೆ ತಣ್ಣಗಾಗಿದ್ದರಿಂದ, ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿರುವಾಗಲೇ ಪುನಃ ಮೂರನೇ ಅಲೆ, ಒಮೈಕ್ರಾನ್ ರೂಪಾಂತರಿಯ ಆತಂಕ ಶುರುವಾಗಿದೆ. ಈಗಾಗಲೇ ಮೂರನೇ ಅಲೆ ನಿಯಂತ್ರಣಕ್ಕೆ ಲಸಿಕಾ ಅಭಿಯಾನದ ಮೂಲಕ ಶೇ.50 ಕ್ಕೂ ಜನರಿಗೆ ಎರಡೂ ಡೋಸ್ ಲಸಿಕೆಯನ್ನು ನೀಡಿ ಆಗಿದೆ. ಆದರೂ, ಒಮೈಕ್ರಾನ್ ಆತಂಕ ಮಾತ್ರ ನಿವಾರಣೆ ಯಾಗಿಲ್ಲ.

ಹಾಗೇ ನೋಡಿದರೆ, ಸರಕಾರಕ್ಕೆ ಕರೋನಾ ಆತಂಕವಿಲ್ಲ ಎಂದು ಹೇಳಿದ್ದು ಯಾರು ಎನ್ನುವ ಪ್ರಶ್ನೆ ಈಗಲೂ ಅನೇಕರಲ್ಲಿದೆ. ರಾಜ್ಯದಲ್ಲಿ ಕರೋನಾ ಸೋಂಕು ಕಡಿಮೆಯಾಗಿದ್ದು ಎಷ್ಟು ನಿಜವೋ, ವಷಾಂತ್ಯದ ವೇಳೆಗೆ ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಪದೇಪದೆ ಎಚ್ಚರಿಸುತ್ತಾ ಬಂದಿದ್ದು ಅಷ್ಟೇ ಸತ್ಯ. ಆದರೆ ಸರಕಾರ ತಜ್ಞರ ಎಚ್ಚರಿಕೆಯನ್ನು ಕಿವಿ ಹಾಕಿಕೊಳ್ಳುವ ಬದಲು, ‘ಕರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದೇವೆ’ ಎನ್ನುವ ಹೇಳಿಕೆ ನೀಡುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸಿತು. ರಾಜ್ಯ ಸರಕಾರವೇ ರಚಿಸಿರುವ ತಾಂತ್ರಿಕ ಸಮಿತಿಯ ಪ್ರತಿಯೊಬ್ಬರು ತಜ್ಞರು, ‘ವರ್ಷಾಂತ್ಯಕ್ಕೆ ಮೂರನೇ ಅಲೆಯ ಸಾಧ್ಯತೆ ಯಿದೆ.

18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡದೇ ಇರುವುದರಿಂದ ಎಚ್ಚರದಿಂದ ಇರಿ. ಇಲ್ಲದಿದ್ದರೆ ಮತ್ತೊಂದು ಅನಾಹುತಕ್ಕೆ ದಾರಿಯಾಗುತ್ತದೆ’ ಎಂದು ಎಚ್ಚರಿಸು ತ್ತಲೇ ಬಂದರು. ಆದರೆ ಸರಕಾರದಲ್ಲಿರುವವರಿಗೆ, ಈ ಆರೋಗ್ಯ ಬಗ್ಗೆಯ ಎಚ್ಚರಿಕೆಯ ಮಾತಿಗಿಂತ, ಆರ್ಥಿಕ ಸ್ಥಿತಿಯನ್ನು ಸುಧಾರಿಸ ಬೇಕು ಎನ್ನುವ ಗುರಿಯಿತ್ತು. ಒಂದು ಹಂತದಲ್ಲಿ ಆರ್ಥಿಕ ಸ್ಥಿತಿ ಸರಿಪಡಿಸುವುದು, ವಾಣಿಜ್ಯ, ಕೈಗಾರಿಕೆಗಳಿಗೆ ಅವಕಾಶ ನೀಡುವುದು ಅಗತ್ಯವೇ ಆಗಿತ್ತು. ಆದರೆ ಕೆಲವು ನಿರ್ಬಂಧ ಸಡಿಲಿಕೆ ಅನಗತ್ಯ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಮೊದಲಿಗೆ ಶೈಕ್ಷಣಿಕ ವರ್ಷದ ಆರೇಳು ತಿಂಗಳು ಮನೆಯಲ್ಲಿ ಮಕ್ಕಳು ಕಳೆದಿದ್ದರು. ಆದರೆ ಮೂರರಿಂದ ನಾಲ್ಕು ತಿಂಗಳ ಮಟ್ಟಿಗೆ ಆಫ್ ಲೈನ್ ಶಾಲೆಗಳನ್ನು ತೆರೆಯುವ ಅಗತ್ಯವೇನಿತ್ತು? ಪೋಷಕರಿಗೆ ಹಾಗೂ ಮಕ್ಕಳಿಗೆ ಶಾಲೆಗೆ ಹೋದರೆ ಸಾಕು ಎನ್ನುವಷ್ಟು ಮಾನಸಿಕ ಒತ್ತಡವಿತ್ತು ಎನ್ನುವುದು ಒಪ್ಪುವ ವಾದ. ಆದರೆ ಒಂದರಿಂದ 9ನೇ ತರಗತಿಯ ಮಕ್ಕಳಿಗೆ ಆಫ್ ಲೈನ್ ಶಾಲೆಯ ಅಗತ್ಯವೇನಿತ್ತು? ಹೇಗಿದ್ದರೂ ಪಾಸು ಮಾಡಲೇಬೇಕಿತ್ತು.

ಹೀಗಿರುವಾಗ, ಲಸಿಕೆ ಪಡೆಯದ ಮಕ್ಕಳನ್ನು ಶಾಲೆಯಲ್ಲಿ ಗುಂಪು ಹಾಕಿಕೊಳ್ಳುವ ಅಗತ್ಯವೇನಿತ್ತು? ಖಾಸಗಿ ಶಾಲಾ ಆಡಳಿತ ಮಂಡಳಿಯ ಒತ್ತಡ, ಡೊನೇಷನ್ ಮಾಫಿಯಾವಲ್ಲದೇ ಇನ್ಯಾವ ಒತ್ತಡ ಸರಕಾರದ ಮೇಲಿತ್ತು? ಹೋಗಲಿ ಶಾಲೆಗಳನ್ನು ತೆರೆದರು, ಅದು ಅಲ್ಲಿಗೇ ನಿಲ್ಲಿಸಲಿಲ್ಲ. ಈಜುಕೊಳದಲ್ಲಿ ಶೇ.100ರಷ್ಟು ಅನುಮತಿ, ಪಬ್, ರೆಸಾಟ್ ಗಳಲ್ಲಿ ಶೇ.೧೦೦ರಷ್ಟು ಅನುಮತಿ ನೀಡುವ ಅಗತ್ಯವೇನಿತ್ತು? ಈ ಎಲ್ಲ ಸ್ಥಳದಲ್ಲಿ ಕರೋನಾ ಮಾರ್ಗಸೂಚಿ ಪಾಲನೇ ನಿಜಕ್ಕೂ ಸಾಧ್ಯ ಎನ್ನುವ ಸಲಹೆಯನ್ನು ಸರಕಾರಕ್ಕೆ ನೀಡಿದ್ದಾದರೂ ಯಾರು ಎನ್ನುವುದು ಗೊತ್ತಿಲ್ಲ.

ಹೇಗಿದ್ದರೂ ಒಂದುವರೆ ವರ್ಷ ಮನೆಯಲ್ಲಿಯೇ ಕಳೆದಿದ್ದ ಮಕ್ಕಳನ್ನು ವಾಪಸು ಶಾಲೆಗೆ ಕರೆಸಿಕೊಳ್ಳುವ ಮೊದಲು ಕನಿಷ್ಠ ಒಂದು ಡೋಸ್ ಲಸಿಕೆಯಾಗುವ ತನಕ ಕಾಯಬಹುದಾಗಿತ್ತು ಅಲ್ಲವೇ? ಇನ್ನು ಸರಕಾರ ತಗೆದುಕೊಂಡು ಮತ್ತೊಂದು ಎಡವಟ್ಟಿನ ನಿರ್ಧಾರ ಎಂದರೆ ರಾತ್ರಿ ಕರ್ಫ್ಯೂವನ್ನು ಸಂಪೂರ್ಣ ತೆರವು ಮಾಡಿದ್ದು. (ನೈಟ್ ಕರ್ಫ್ಯೂ ನೆಪ ಮಾತ್ರಕ್ಕೆ ಎನ್ನುವ ಹಾಗಿತ್ತು ಎನ್ನುವುದು ಬೇರೆ ಮಾತು.) ಕೇವಲ ರಾತ್ರಿ ಕರ್ಫ್ಯೂ ಮಾಡುವುದರಿಂದ, ಸೋಂಕು ತಡೆಯಲು ಸಾಧ್ಯವಿಲ್ಲ
ಎನ್ನುವ ವಾದವನ್ನು ಒಪ್ಪಬೇಕು. ಆದರೆ ರಾತ್ರಿ ಮೋಜು ಮಸ್ತಿಗೆ ಕೊಂಚ ಪ್ರಮಾಣದ ನಿಯಂತ್ರಣವಾದರೂ ಈ ನೈಟ್ ಕರ್ಫ್ಯೂಯಿಂದ ಇರುತ್ತಿತ್ತು. ಇದರಿಂದ ವಾಣಿಜ್ಯ, ಆರ್ಥಿಕ ಕೈಗಾರಿಕೆಗಳಿಗೂ ದೊಡ್ಡ ಪ್ರಮಾಣದ ಹೊಡೆತ ಬೀಳುವುದಿಲ್ಲ. ಆದ್ದರಿಂದ ನಾಮ್‌ಕೆವಸ್ತೆಗಾದರೂ ಮುಂದುವರಿಸಬಹುದಾಗಿತ್ತು.

ಈ ಎಲ್ಲವೂ ಹೋಗಲಿ, ಕರೋನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಸಾಲು ಸಾಲು ಚುನಾವಣೆಗಳನ್ನು ನಡೆಸುವ ಅಗತ್ಯವಾದರೂ ಏನಿತ್ತು? ಎರಡು ಕ್ಷೇತ್ರದ
ವಿಧಾನಸಭೆ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಅದಾದ ಬಳಿಕ ಈಗ ನಡೆಯುತ್ತಿರುವ 25 ಸ್ಥಾನಗಳ ಪರಿಷತ್ ಚುನಾವಣೆ, ಇದಾದ ಬಳಿಕ ಪುನಃ ಸ್ಥಳೀಯ ಸಂಸ್ಥೆಗಳ ಚುನಾವಣೆ. ಇವುಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ, ವಕೀಲರ ಸಂಘದ ಚುನಾವಣೆ, ಬ್ರಾಹ್ಮಣ, ಒಕ್ಕಲಿಗ ಸಮು ದಾಯಗಳ ಚುನಾವಣೆ. ಎರಡನೇ ಅಲೆ ಕರ್ನಾಟಕದಲ್ಲಿ ಜೋರಾಗಿದ್ದು, ಇದೇ ಚುನಾವಣೆಗಳಿಂದ ಎನ್ನುವುದನ್ನು ಈಗಾಗಲೇ ಎಲ್ಲರೂ ಒಪ್ಪಿದ್ದಾರೆ. ಆದರೂ ಮೂರನೇ ಅಲೆಯ ಎಚ್ಚರಿಕೆ ಇದ್ದರೂ ಈ ರೀತಿ ಸಾಲು ಸಾಲು ಚುನಾವಣೆಗಳನ್ನು ನಡೆಸುವ ಅಗತ್ಯವಾದರೂ ಏನಿತ್ತು? ಬಿಬಿಎಂಪಿ ಚುನಾವಣೆ ಮುಂದಕ್ಕೆ ಹಾಕಿ ಒಂದುವರೆ ವರ್ಷ ಕಳೆದಿದೆ.

ಇದರಿಂದ ಬೆಂಗಳೂರಿಗೆ ಏನಾದರೂ ಸಮಸ್ಯೆಯಾಗಿದೆಯೇ? ಇದೇ ರೀತಿ ಖಾಲಿ ಇರುವ ಸ್ಥಾನಗಳನ್ನು ಹಾಗೇ ಬಿಟ್ಟು, ಆಡಳಿತ ನಡೆಸಲು ಸಾಧ್ಯವೇ ಇರಲಿ ಲ್ಲವೇ? ಈಗ ಸಾಲು ಸಾಲು ಚುನಾವಣೆಗಳನ್ನು ಘೋಷಿಸಿದ್ದಾರೆ. ರಾಜಕೀಯ ಕಾರ್ಯಕ್ರಮ, ರ‍್ಯಾಲಿ, ಸಮಾವೇಶಗಳಲ್ಲಿ ಸಾಮಾಜಿಕ ಅಂತರ, ಕರೋನಾ ಮಾರ್ಗಸೂಚಿ ಪಾಲಿಸಲು ಸಾಧ್ಯ ಎನ್ನುವುದನ್ನು ಹೇಳಿದ್ದು ಯಾರು ಎನ್ನುವುದಕ್ಕೆ ಉತ್ತರವಿಲ್ಲ. ಹಾಗೆಂದ ಮಾತ್ರಕ್ಕೆ ಸರಕಾರಕ್ಕೆ ಈ ಎಲ್ಲ ಎಚ್ಚರಿಕೆಯನ್ನು
ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿಲ್ಲವೆಂದಲ್ಲ. ಆನ್ ದಿ ರೆಕಾರ್ಡ್, ಆಫ್ ದಿ ರೆಕಾರ್ಡ್ ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ.

ಆದರೆ ಆಡಳಿತ ನಡೆಸುವವರು, ತಾಂತ್ರಿಕ ಸಲಹಾ ಸಮಿತಿಯ ವರದಿಯಲ್ಲಿ, ತಮಗೆ ಬೇಕಾದ ಶಿ-ರಸುಗಳನ್ನು ಮಾತ್ರ ಪಡೆದು, ಬಾಕಿ ಶಿಫಾರಸುಗಳನ್ನು
ಹಾಗೆಯೇ ಪಕ್ಕಕ್ಕೆ ಇಟ್ಟರು. ತಜ್ಞರ ವರದಿಗಳನ್ನು ತಮಗೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನ ಮಾಡಿಕೊಂಡು, ಇದೀಗ ಪುನಃ ‘ಸೋಂಕು ಹೆಚ್ಚಾದರೆ ಕಠಿಣ ಕ್ರಮ’ ಎನ್ನುವ ಮಾತುಗಳನ್ನು ಸಚಿವರುಗಳು ಹೇಳುತ್ತಿರುವುದು ಹಾಸ್ಯಸ್ಪದ. ರಾತ್ರಿ ಕಂಡ ಬಾವಿಗೆ ಹಗಲು ಬೀಳಬಾರದು ಎನ್ನುವ ಗಾದೆ ಗೊತ್ತಿದ್ದರೂ, ಸರಕಾರ ಹಾಗೂ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕರೋನಾ ತೀವ್ರತೆಯನ್ನು ವ್ಯಾಖ್ಯಾನಿಸಿ ಕೊನೆಗೆ ಕೈ ಮೀರಿದಾಗ, ಜನರು ಜಾಗೃತರಾಗಿರ ಬೇಕಿತ್ತು ಎನ್ನುವ ‘ಕಾಮನ್’ ಹೇಳಿಕೆ ನೀಡುವ ಬದಲು, ಮೂರನೇ ಅಲೆಯಿಂದ ಜನರನ್ನು ರಕ್ಷಿಸಲು ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಮಾಡಲೇ ಬೇಕು. ಕೈ ಮೀರಿದ ಮೇಲೆ ಕಠಿಣ ಕ್ರಮ ಎನ್ನುವ ಅಸವನ್ನು ಬಿಟ್ಟು, ವಿಫಲರಾಗುವುದಕ್ಕಿಂತ, ಕೈ ಮೀರುವ ಮೊದಲೇ ಮುಂಜಾಗೃತ ಕ್ರಮವಹಿಸುವತ್ತ ಸರಕಾರ ಯೋಚಿಸುವ ಅಗತ್ಯವಿದೆ.