Sunday, 14th August 2022

ಬಿಸಿಯಾಯ್ತು ಬದುಕಿನ ಸಂಜೆ ಗಾಳಿ

ಪ್ರೀತಿಯ ಭಾವಗಳೆಲ್ಲಾ ಮೆಲ್ಲಗೆ ಕರಗಿ ಮುತ್ತಾದವು. ಇನ್ನೇನು ಬೊಗಸೆಯಲ್ಲಿ ಹಿಡಿಯಬೇಕೆನ್ನುವಷ್ಟರಲ್ಲಿ ಬೀಸಿದ ಗಾಳಿಗೆ ಎಲ್ಲಾ ಮುತ್ತುಗಳೂ ಕರಗಿ ಹೋದವು.

ಲಕ್ಷ್ಮೀಕಾಂತ್ ಎಲ್ ವಿ

ನೆನಪುಗಳೇ ಹೀಗೆ. ಬೇಡವೆಂದರೂ ನೆಪಮಾಡಿಕೊಂಡು ಒಮ್ಮಿಂದೊಮ್ಮೆಲೆ ಬಂದೆರಗುತ್ತವೆ. ಒಲವ ನೆನಪಿನ ಸವಿಯನ್ನು ಮತ್ತೆ iತ್ತೆ ಮನಸಿನೊಳಗೆ ಹೊತ್ತು ತಂದು ನಿನ್ನ ನೆನಪನ್ನು ಕಾಡಿಸುತ್ತವೆ. ಗೆಳತಿ, ಕಣ್ಣೊಳಗೆ ಜಿನುಗಿದ ಹನಿಯೊಂದು ಕೆನ್ನೆ ಮೇಲೆ ನಿಲ್ಲಲಾಗದೆ ಜಾರುತ್ತಿದೆ. ಸಣ್ಣ ಮುನಿಸೊಂದು
ಭದ್ರವಾಗಿ ಕಟ್ಟಿದ್ದ ಕನಸಿನ ಕೋಟೆಯನ್ನು ಛಿದ್ರ ಮಾಡಿ ನೆನಪಿನ ಗುರುತನ್ನು ಬಿಟ್ಟು ಹೋಗಿದೆ. ಅದ್ಯಾವ ಗಳಿಗೆಯೋ ತಿಳಿಯದು, ಬಯಲಲ್ಲಿ ನಿಂತಿದ್ದ ಮುರಿದ ತೇರು ನಿನ್ನ ಎದೆಯ ಅರಮನೆಯಲ್ಲಿ ಸೇರಿಕೊಂಡಿತ್ತು.

ನಮ್ಮಿಬ್ಬರ ಪ್ರೀತಿಗೆ ಹೊಸತೊಂದು ಭಾಷ್ಯ ಬರೆದಾಗಿತ್ತು. ಅಲ್ಲಿಯವರೆಗೂ ಎದೆಯ ಅಂಗಳದಲ್ಲಿ ಬೆಳೆದು ಮೊಗ್ಗಾಗಿದ್ದ ಒಲವಿನ ಹೂವೊಂದು ಅರಳಿ ಪ್ರೀತಿಯ ಮುಡಿಯೇರಿತ್ತು. ನಿನ್ನ ಆ ಕಾಳಜಿ, ವಾತ್ಸಲ್ಯ, ಸ್ವಾರ್ಥ, ಮಮತೆ, ವಿಶ್ವಾಸ ಎಲ್ಲವೂ ಪ್ರೀತಿಯ ನಂಬಿಕೆ ಗುರುತನ್ನು ಮೂಡಿಸಿ ಕಹಿಯಾದ ಬಾಳಲ್ಲಿ ಸಿಹಿಯ ಹೊನ ಲನ್ನೇ ಹರಿಸಿತ್ತು. ನನ್ನೆಲ್ಲ ಬದುಕಿನ ಸೂರ್ತಿ, ಯಶಸ್ಸು, ಜೀವನದ ಅನುಭಾವಕ್ಕೆ ನನ್ನ ಬದುಕಿನಲ್ಲಿ ನಿನ್ನ ಪ್ರೀತಿಯ ಸವಿಯಾದ ಕವಿತೆಯೊಂದನ್ನು ಬರೆಸಿತ್ತು. ಈ ಪ್ರೀತಿ ಹೃದಯಾಂತರಾಳದಲ್ಲಿ ಬಂದದ್ದು ಅರಿವಾಗುವ ಹೊತ್ತಿಗೆ ನನ್ನ ಬದುಕಿನ ಕೊನೆಯ ಸಾಲಿನಲ್ಲಿ ನಿನ್ನ ಹೆಸರು ಮಾತ್ರ ಉಳಿಸಿ ಹೋಗಿರುವೆ.

ಬರೆದು ಮುಗಿಸಿದ ಬದುಕಿನ ಕಾವ್ಯದಲ್ಲಿ ನಿನ್ನದೇ ನೆನಪು; ಮತ್ತೆ ಬರೆಯುವಂತೆ ಮಾಡುವ ಆ ನೆನಪು ಮುಗಿ ಯದ ಕಥನ. ನಡೆದಷ್ಟೂ ಸವೆಯದ ಹಾದಿಯಲ್ಲಿ ನಿನ್ನೊಂದಿಗೆ ಕಳೆದ ನೆನಪಿನ ಚಿತ್ತಾರ ತೆರೆದುಕೊಳ್ಳುತ್ತಾ ಸಾಗುತ್ತದೆ. ನೀನು ನನ್ನಿಂದ ದೂರ ಹೋದ ಮೇಲೆ ನನ್ನ ಬದುಕಿನ ಸಂಜೆಯಲ್ಲಿ  ಇದೀಗ ತಂಗಾಳಿ ಬೀಸುವು ದನ್ನೇ ಮರೆತಿದೆ. ಬೆಳದಿಂಗಳಂತೆ ತಂಪಾಗಿದ್ದ ನಿನ್ನ ಸವಿಯಾದ ಆ ಒಲವು ನಿನ್ನಗಲಿಕೆಯಿಂದಾಗಿ ಇದೀಗ ಬಿಸಿಯಾಗ ತೊಡಗಿದೆ. ನೆನಪುಗಳ ಸುಳಿಯಲ್ಲಿ ಸಿಲುಕಿದ ಸೂತ್ರವೇ ನೀನಾಗಿದ್ದ ಗಾಳಿಪಟದಂತಹ ನನ್ನ ಬದುಕು ದಿಕ್ಕಿಲ್ಲದೆ ಅಲೆಯುತ್ತಿದೆ. ಅಲೆಯುತ್ತಾ ನಾ ಬಂದ ದಾರಿಯನ್ನೇ ಮರೆತು ಮರುಭೂಮಿಯಲ್ಲಿ ಅಲೆಮಾರಿಯಂತೆ ದಾರಿ ಕಾಣದೆ ನಿಂತಿರುವೆ.

ನಮ್ಮಿಬ್ಬರ ಪ್ರೀತಿಗೆ ಯಾವುದೇ ಬಾಡಿಗೆ ಇರುವ ಸೂರು ಬೇಕಿರಲಿಲ್ಲ. ಎದೆಯ ಗೂಡೊಳಗೆ ನನಗೆ ನೀನು ನಿನಗೆ ನಾನು ಎಂದು ಪ್ರೇಮದ ತೇರಲ್ಲಿ ಇಬ್ಬರೂ ಸಾಗುತ್ತಿದ್ದ ಆ ದಿನಗಳು ಇದೀಗ ಎದೆಯ ಗೂಡನ್ನು ಅಗಲಿ ಪ್ರೇಮದ ತೇರು ಪ್ರೀತಿಯನ್ನೇ ಮರೆತುಬಿಟ್ಟಿದೆ. ನನ್ನೆಲ್ಲ ಹಗಲುಗಳು ಕತ್ತಲಾಗಿ ಬಿಟ್ಟಿವೆ. ನಿನ್ನದೇ ನೆನಪು ಬದುಕೆಲ್ಲ ತುಂಬಿ ಹಗಲು ಜಾಗರಣೆ ಮಾಡಿಸುತ್ತಿವೆ. ನಿನ್ನ ಸಾಂಗತ್ಯವಿಲ್ಲದೆ ರಾತ್ರಿ ಕನಸುಗಳೆಲ್ಲ ಕರಗಿ, ಸೊರಗಿ ಹಗಲನ್ನೇ ಮರೆತುಬಿಟ್ಟಿವೆ. ಸಂಜೆಯಾದರೆ ಸಾಕು ನನ್ನ ಎದೆಯ ಅಂಗಳದಲ್ಲಿ ಮುಂಗುರುಳ ಜೋಕಾಲಿಯೊಂದು ಅಂಗಳದಲ್ಲಿ ಜೀಕುತ್ತಲೇ ಇರುತ್ತದೆ. ಆದರೆ ಅದರಲ್ಲಿ ಮಾತ್ರ ನೀನಿಲ್ಲ.

ನನ್ನ ಪ್ರೀತಿಯನ್ನು ತೊರೆದು ನನ್ನ ಜೀವನದ ಜೋಕಾಲಿಯೇ ಮುರಿದುಬಿದ್ದಿದೆ. ನನ್ನ ಬದುಕಿನ ಭಾವಗೀತೆಯಲ್ಲಿ ಕವಿದಿದ್ದ ಕಾರ್ಮೋಡ ಕರಗಿ  ಯಾರಿದ ಭುವಿಯೊಡಲಿಗೆ ಒಲವು ಬೀಳುವ ಹೊತ್ತಲ್ಲಿ ನವಿರಾದ ಭಾವವೊಂದು ಮುನಿಸಿ ದೂರವಾಗಿತ್ತು. ಇನ್ನೇನು ಪ್ರೀತಿಯ ಹನಿಗಳು ಮುತ್ತುಗಳಾಗಿ ಭುವಿಯೊಂದಿಗಿನ ಸಮಾಗಮಕೆ ಸಿದ್ಧತೆ ನಡೆಸಿರುವಾಗಲೇ ವರುಣನೂ ಕೂಡ ಮೌನಕ್ಕೆ ಶರಣಾಗಿ ಮುನಿದಿದ್ದ. ಅಂತೆಯೇ ನಿಲ್ಲಿಸಿದ ಮಳೆಯಂತೆ ನನಗೆ ಒಂದು ಮಾತೂ ಹೇಳದಂತೆ ಹೊರಟು ಹೋಗಿದ್ದೆ!

ಕಿರುಬೆರಳು ಹಿಡಿದು ಹೊರಟಿದ್ದ ನನ್ನ ನೆರಳೂ ಕೂಡ ಮತ್ಯಾರೋ ಜೊತೆಯಾಗಿದ್ದಾರೆ ಎಂದು ಮುನಿಸಿಬಿಟ್ಟಿದೆ. ನಿನ್ನೊಂದಿಗೆ ತೀರದಲ್ಲಿ ಇಟ್ಟ ಹೆಜ್ಜೆಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಅಳಿಸುತ್ತಿವೆ. ಮಾತಿನ ಜೊತೆ ಸರಸದ ಸಾಂಗತ್ಯ ಬಯಸಿ ಮೌನಕ್ಕೂ ಪ್ರೀತಿಯಾಗುವುದೇ ಮರೆತು ಹೋಗಿದೆ.
ಕಾಡುವ ಕನಸೆಲ್ಲವೂ ಮತ್ಯಾರದ್ದೋ ಕನಸಿಗೆ ಜೊತೆಯಾಗಬಾರದೆಂದು ದಿನವೂ ಬಳಿಗೆ ಬಂದು ಮೆಲ್ಲಗೆ ಅಳುತ್ತಿದೆ. ಆದರೆ ಅದಕ್ಕೇನು ಗೊತ್ತು? ಗುಲಾಬಿ
ಹಿಡಿದು ಪ್ರೀತಿಯನ್ನು ನೀಡಬೇಕಿದ್ದ ಕೈ ಮರೆಯಗಾಗಿದೆಯೆಂದು!

ಪ್ರೇಮಿಗಳ ದಿನಚರಿ ಮುಗಿದಿದೆಯೆಂದು! ನಮ್ಮಿಬ್ಬರ ಭೇಟಿಯ ನದಿ ದಂಡೆಯು ಇದೀಗ ಶಾಂತವಾಗಿದೆ. ಬರೆದಿದ್ದ ಆ ಪ್ರೀತಿಯ ಸವಿಭಾವದ ಕವಿತೆಯು ನನ್ನೆದೆ ಗೂಡಲ್ಲಿ ಹಾಡಾಗುವ ಹೊತ್ತಲ್ಲಿ ಕೊನೆಯ ಸಾಲು ಬಿಟ್ಟು ಹೋಗಿರುವೆ. ಅಲ್ಲಿ ಉಳಿದದ್ದು ಬರೀ ನಿನ್ನ ಹೆಸರು ಮಾತ್ರ. ಆ ಹೆಸರಿಗಾಗಿಯೇ ನಾ ಕಾಯುತ್ತಿರುವೆ.