Monday, 8th March 2021

ವಿವರಗಳ ಜೋಡಿಸುವ ಯಜಮಾನ ಬೇರಿಹನು

ಅಭಿವ್ಯಕ್ತಿ

ಪರಿಣಿತ ರವಿ

ನಿಂದಕರಿರಬೇಕು|| ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯಾ ಹಾಂಗೆ || ಪುರಂದರ ದಾಸರ ಈ ಕೀರ್ತನೆ ಕೇಳದವರಿಲ್ಲ. ಮೆಚ್ಚಿಕೊಳ್ಳದವರಿಲ್ಲ.

ಆದರೂ ನಮಗೆ ಪರರ ನಿಂದನೆ ಮಾಡದ ಹೊರತು ತಿಂದದ್ದು ಜೀರ್ಣವಾಗುವುದೇ ಇಲ್ಲ. ಅದು ಎದುರೆದುರು ನಿಂತು
ಮುಖಕ್ಕೆ ಮುಖಕೊಟ್ಟು ಮಾಡುವ ನಿಂದನೆಯಾದರೆ ಅಲ್ಪಸ್ವಲ್ಪವಾದರೂ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬಹುದೋ ಏನೋ? ಆದರೆ ಅಂತಹ ಎದೆಗಾರಿಕೆ ಯಾರಿಗಿದೆ ಹೇಳಿ. ನಮಗೇನಿದ್ದರೂ ಹಿಂದಿನಿಂದ ಗುಟ್ಟಾಗಿ ಪರರ ಕುರಿತು ಟೀಕಾ ಪ್ರಹಾರ ಮಾಡುವುದೇ ಪರಮಾನಂದ. ಆದರೆ ಆ ವ್ಯಕ್ತಿ ಯೇನಾದರೂ ಕಣ್ಣಮುಂದೆ ಕಾಣಿಸಿಕೊಂಡಾಗ ಅಥವಾ ಭೇಟಿ ಯಾದಾಗ ಜೇನಿಗಿಂತ ಸವಿಯಾಗಿ, ಬೆಣ್ಣೆಗಿಂತ ಮೃದು ವಾಗಿ ಮಾತನಾಡಿ ಅವರ ಹೃದಯಮಂದಿರದಲ್ಲಿ ಶಾಶ್ವತ ಜಾಗವನ್ನು ಗಿಟ್ಟಿಸಿ ಕೊಳ್ಳಲು ಶತಪ್ರಯತ್ನ ಮಾಡುವವರು ನಾವು.

ಮತ್ತೆ ಆ ವ್ಯಕ್ತಿ ಬೆನ್ನು ಹಾಕಿ ಹೋದ ಮರುಗಳಿಗೆಯೇ ತುಂಬಾ ತುಚ್ಛವಾಗಿ ಮಾತನಾಡಲೂ ನಾವು ಹೇಸದವರು. ಆಯ್ತು… ಅದೊಂದು ದಿನ ಯಾರದೋ ಮೂಲಕ ಇಂಥಿಂಥವರು ನಮ್ಮ ಬಗ್ಗೆ ಹೀಗ್ಹೀಗೆ ಹೇಳಿದರು ಅಂತ ತಿಳಿಯಿತು. ಆಗ ನಾವೇನು ಮಾಡುತ್ತೇವೆ? ಮೊದಲನೇ ರಿಯಾಕ್ಷನ್.. ‘ಹೌದಾ ! ನಾನೀಗಲೇ ಹೋಗಿ ಕೇಳುತ್ತೇನೆ’ ಅನ್ನುವುದು.

ಆಗ ನಮಗೆ ಹೇಳಿದವನು/ಳು ‘ಬೇಡ ಮಾರಾಯ/ಯ್ತಿ. ನನಗೆ ನಿನ್ನಲ್ಲಿ ಅಷ್ಟು ಆತ್ಮೀಯತೆ ಇರುವ ಕಾರಣ ಹೇಳಿದೆ ಅಷ್ಟೇ. ಇಲ್ಲ ವೆಂದಾದರೆ ಸುಮ್ಮನಿರುತ್ತಿದ್ದೆ. ಬಿಡು.. ಇನ್ನು ನಿನ್ನಲ್ಲಿ ಏನೂ ಹೇಳುವುದಿಲ್ಲ. ಇದೊಂದು ಬಾರಿ ಸುಮ್ಮನಿರು’ ಎಂದು ವಿನಂತಿಸುವಾಗ ಒತ್ತಾಯಕ್ಕೆ ಮಣಿದು ಸುಮ್ಮನಾಗುತ್ತೇವೆ. ಆದರೆ ನಮ್ಮ ಮನಸ್ಸು ಸುಮ್ಮನಿರುವುದೇ? ಅದನ್ನು ಅಲ್ಲಿಗೇ ಬಿಟ್ಟುಬಿಡುವುದೇ? ‘ಛೇ! ಆ ವ್ಯಕ್ತಿ ನನ್ನಲ್ಲಿ ಎಷ್ಟು ಚೆನ್ನಾಗಿದ್ದಾರೆ. ಯಾಕೆ ಹಾಗೆ ಹೇಳಿದರು? ಅವರು ಹಾಗೆ ಹೇಳಲು ಸಾಧ್ಯವೇ’ ಎಂದೆ ತಲೆಕೆಡಿಸಿ ಕೊಳ್ಳುತ್ತೇವೆ.

ಇದರಿಂದ ಆದ ಲಾಭ ವಾದರೂ ಏನು ಗೊತ್ತೇ? ಮನಸ್ಸು ಕದಡಿದ ಕೊಳದಂತಾಯ್ತು. ನೆಮ್ಮದಿ ಹಾಳಾಯ್ತು. ಅಷ್ಟೇ.
ನಾವು ಕೆಲವರನ್ನು ತುಂಬಾ ಎತ್ತರದಲ್ಲಿಟ್ಟು ಗೌರವದಿಂದ ಕಾಣುತ್ತೇವೆ. ನಮ್ಮೆದುರಿಗೇ ಅವರು ಯಾರನ್ನಾದರೂ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ, ಬೆನ್ನ ಹಿಂದೆ ಅದೇ ಶೂಲದಿಂದ ತಿವಿಯುವುದನ್ನು ಕಣ್ಣಾರೆ ಕಂಡರೆ ಆ ವ್ಯಕ್ತಿಯ ಮೇಲಿನ ಗೌರವ ಉಳಿಯುತ್ತದೆಯೇ? ಆಗ ನಾವೇನು ಅಂದುಕೊಳ್ಳುತ್ತೇವೆ? ಇವರು ನನ್ನ ಬಗ್ಗೆಯೂ ಹಿಂದಿನಿಂದ ಇದೇ ರೀತಿ ಮಾತನಾಡ ಬಹುದು ಅನ್ನುವ ಸಂಶಯ ಬಾರದಿರದೇ? ಹೋಗಲಿ… ಪದೇ ಪದೆ ಇಂತಹುದೇ ಅನುಭವ ಹಲವರಿಂದ.

ಆದರೆ ಸಮಾಜದ ಮೇಲಿನ ನಂಬಿಕೆ ಏನಾಗಬೇಕು? ಎಲ್ಲರೂ ಇದೇ ರೀತಿ ಹತ್ತಾರು ಮುಖ ನಾಲಿಗೆಗಳನ್ನು ಹೊತ್ತು ವಿಜೃಂಭಿಸು ವವರೇ ಆದರೆ ಪ್ರಾಮಾಣಿಕತೆಯ ಅರ್ಥವೇನು ಎಂಬ ಸಂಶಯ ಕಾಡದೇ? ಮನುಷ್ಯ ಮನುಷ್ಯನೊಳಗಿನ ಸಂಬಂಧಗಳ ಬಗ್ಗೆ,
ನಮ್ಮವರೆಂಬ ಆತ್ಮೀಯ ನಂಟುಗಳ ಬಗ್ಗೆ, ಕೌಟುಂಬಿಕ ಬಂಧಗಳ ಬಗ್ಗೆ ವಿಶ್ವಾಸ ವಿರಲು ಸಾಧ್ಯವೇ? ಕಾಪಟ್ಯದ, ಮೋಸದ ಈ ಮುಖವಾಡ ಗಳು ಹೇಸಿಗೆ ಅನಿಸದೇ? ಇದನ್ನು ಗಂಭೀರವಾಗಿ ಪರಿಗಣಿಸಿ ವಿಪರೀತವಾಗಿ ತಲೆಕೆಡಿಸಿಕೊಂಡರೆ ಮತ್ತೆ ಅದು ನಮ್ಮ ಮೇಲೆಯೇ ಪರಿಣಾಮ ಬೀರದಿರುತ್ತದೆಯೇ? ಮಾನಸಿಕ ಶಾಂತಿ ಉಳಿಯುತ್ತದೆಯೇ? ಇನ್ನೂ ಕೆಲವೊಮ್ಮೆ ಏನಾಗುತ್ತದೆ ಅಂದರೆ ನಮಗೆ ತುಂಬಾ ಪ್ರೀತಿಪಾತ್ರರಾದವರು ಭೇಟಿಯಾದಾಗ ಲೋ ಅಥವಾ ಮದುವೆ ಮೊದಲಾದ ಸಮಾರಂಭ ಗಳಲ್ಲಿ ಕಂಡಾಗಲೋ
ಅಪರಿಚಿತರಂತೆ ವರ್ತಿಸುತ್ತಾರೆ.

ನಾವೇನೋ ಅವರ ಗಂಟು ತಿಂದಿದ್ದೇವೋ ಎಂಬಂತೆ ಅವರು ಮುಖ ಗಂಟು ಹಾಕಿಕೊಂಡು ಮಾತನಾಡದೆ ಇರುತ್ತಾರೆ. ಆಗ ನಮಗೆ ನಿಂತ ನೆಲವೇ ಕುಸಿದಂತೆ ಭಾಸವಾಗುತ್ತದೆ. ಇವರು ಯಾಕೆ ಹೀಗಾಡುತ್ತಿದ್ದಾರೆ ಎಂದು ತಲೆ ಕೆಡಿಸಿಕೊಳ್ಳಲು ಆರಂಭಿಸು
ತ್ತೇವೆ. ಓಹ್! ಯಾರೋ ಏನೋ ಹೇಳಿ ಕಿವಿ ಕೊರೆದಿರಬೇಕು. ಅದಕ್ಕೇ ಇರಬೇಕು ಎಂಬ ಯೋಚನೆಯಲ್ಲಿ ಮುಳುಗುತ್ತೇವೆ.
ಆಗ ಸಂಬಂಧವೇ ಇಲ್ಲದ ಒಂದಷ್ಟು ಮಂದಿಯ ಮುಖಗಳು ಮನದ ಪರದೆಯ ಮೇಲೆ ಹಾದು ಹೋಗುತ್ತವೆ. ತುಂಬಾ ದಿನಗಳ ವರೆಗೆ ಇದೇ ಚಿಂತೆ ಗೆದ್ದಲಿನಂತೆ ತಲೆಯನ್ನು ಕೊರೆಯುತ್ತದೆ. ಮನಸ್ಸನ್ನು ಕೆಡಿಸುತ್ತದೆ. ಆ ವ್ಯಕ್ತಿ ಯಾಕೆ ಹಾಗೆ ಮಾಡಿದನೋ, ಏನು ಕಾರಣವೋ ದೇವರೇ ಬಲ್ಲ.

ಆದರೆ ನಾವು ‘ಇದೇ ಕಾರಣ’ ಅನ್ನುವ ತೀರ್ಮಾನಕ್ಕೆ ಬಂದು ಕದನವೀರರಂತೆ ಸಜ್ಜಾಗಿ ನಿಲ್ಲುತ್ತೇವೆ. ಯಾರದೋ ಮಾತು ಕೇಳಿ ತನ್ನನ್ನು ತಾನು ಬದಲಾಯಿಸಿಕೊಳ್ಳುವ ವೀಕ್ ಮೈಂಡೆಡ್ ವ್ಯಕ್ತಿಯ ಸ್ನೇಹಕ್ಕೆ ಅಷ್ಟು ತಲೆ ಕೆಡಿಸಿಕೊಳ್ಳಬೇಕೆ? ನಾನೇನೂ ತಪ್ಪು ಮಾಡಿಲ್ಲ ಅನ್ನುವ ಖಾತರಿ ನಮಗಿದ್ದರೆ ಅಷ್ಟೆ ಚಿಂತೆ ಮಾಡುವ ಅಗತ್ಯ ವಿದೆಯೇ? ನಿಧಾನಕ್ಕೆ ಅವರ ತಪ್ಪು ತಿಳಿವಳಿಕೆ ಮನವರಿಕೆ ಯಾಗುವ ತನಕ ಕಾಯುವುದೇ ಸರಿಯಲ್ಲವೇ? ಆದರೆ ನಾನೇನೂ ತಪ್ಪು ಮಾಡಿಲ್ಲ ಅನ್ನುವ ನಮ್ಮ ಮೇಲಿನ ನಮಗಿರುವ ವಿಶ್ವಾಸ ದುರ್ಯೋಧನನ ಧರ್ಮಪ್ರಜ್ಞೆಯಂತೆ ಆಗಬಾರದು.

ಅವನು ಮಾತು ಮಾತಿಗೂ ನಾನು ಮಾಡಿದ್ದೇ ಸರಿ, ನನ್ನ ಕಡೆಗೇ ಧರ್ಮ ಇದೆ ಎಂದು ಹೇಳುತ್ತಿದ್ದಂತೆ ನಮ್ಮ ಸ್ವನಂಬಿಕೆ
ಅಲ್ಲವಲ್ಲ ಎಂದು ಆತ್ಮವಿಮರ್ಶೆ ಮಾಡಬೇಕಾಗುತ್ತದೆ. ಇನ್ನು ಕೆಲವರು ಇರುತ್ತಾರೆ. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ ಅನ್ನುವವರು. ಇವರು ರಾಮನಿಗೂ ಜೈಕಾರ ಹಾಕುತ್ತಾರೆ. ರಾವಣನಿಗೂ ಜೈಕಾರ ಹಾಕುತ್ತಾರೆ.

ಧೈರ್ಯದಿಂದ ಇದು ಸರಿ ಇದು ತಪ್ಪು ಎಂದು ಹೇಳುವ ದಿಟ್ಟತನ ಇವರಲ್ಲಿ ಇರಲಾರದು. ಮತ್ತೆ ಕೆಲವರು ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆ ಅನ್ನುವವರು. ತಮಗೆ ಯಾವುದು ಲಾಭದಾಯಕವೋ ಅದರ ಮೇಲೆ ಇವರ ನಿಷ್ಠೆ ಅವಲಂಬಿಸಿದೆ. ನಮ್ಮಲ್ಲಿ ಈ ರೀತಿಯ ಸ್ವಭಾವದವರಿಗೆ ‘ಗಾಳಿ ಬಂದ ಕಡೆ ಕೊಡೆ ಹಿಡಿಯು ವವನು’ ಎಂದು ಹೇಳುವ ರೂಢಿಯಿದೆ. ಈಗ ಹೇಳಿ… ಹೀಗೆ ಕ್ಷಣ ಕ್ಷಣಕ್ಕೂ ಬದಲಾಗುವ ಜನರ ಅಭಿಪ್ರಾಯಗಳಿಗೆ, ಟೀಕೆ ಗಳಿಗೆ ವಿಪರೀತವಾಗಿ ತಲೆಕೆಡಿಸಿಕೊಂಡು ನಮ್ಮ ಶಾಂತಚಿತ್ತವನ್ನು ನಾವೇ ಕದಡುವುದು ಸರಿಯೇ? ಜಿ.ಎಸ್. ಶಿವರುದ್ರಪ್ಪನವರು ಹೇಳಿದಂತೆ ‘ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಿಗೆಗೆ’ ಅಲ್ಲವೇ? ಜೀವನದಲ್ಲಿ ಕೆಲವು ಕಟ್ಟಿಕೊಂಡ ಬಂಧಗಳಾದರೆ ಹಲವಾರು ಹುಟ್ಟಿಕೊಂಡ ಸಂಬಂಧಗಳು.

ಕಟ್ಟಿಕೊಂಡ ನಂಟುಗಳಿಗೆ ಯಾವುದೇ ಮುಲಾಜಿಲ್ಲ. ಇವುಗಳನ್ನು ಬಲವಂತದಿಂದ ಇಟ್ಟುಕೊಳ್ಳಬೇಕಾದ ಅನಿವಾರ್ಯತೆಯೂ ಇರುವುದಿಲ್ಲ. ಆದರೆ ಹುಟ್ಟಿಕೊಂಡ ಬಂಧಗಳು ಹಾಗಲ್ಲ. ಅವು ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಲ್ಪಟ್ಟವುಗಳು. ಇದರಿಂದ ತಪ್ಪಿಸಿಕೊಂಡು ಕಳಚಿಕೊಳ್ಳುವುದು ಬಹಳ ತ್ರಾಸ ದಾಯಕ. ಪರಿಚಯಸ್ಥರು, ಗೆಳೆಯರು, ನೆರೆಹೊರೆಯವರು ಇತ್ಯಾದಿ ಕಟ್ಟಿಕೊಂಡ ಸಂಬಂಧಗಳಾದರೆ, ಹೆತ್ತವರು, ಒಡಹುಟ್ಟಿದವರು, ಮಕ್ಕಳು ಇವೆ ಹುಟ್ಟಿಕೊಂಡ ಸಂಬಂಧಗಳು.

ಈ ಹುಟ್ಟಿಕೊಂಡ ಬಾಂಧವ್ಯಗಳಲ್ಲಿ ಏನಾದರೂ ನಿಂದನೆ, ಅಪವಾದ, ಟೀಕೆಗಳು ಎದುರಾದರೆ ಸಹಿಸಿಕೊಳ್ಳಲು ಅಸಾಧ್ಯ.
ಹಾಗೆಂದು ನಮ್ಮ ಬೆರಳೇ ನಮ್ಮ ಕಣ್ಣನ್ನು ಚುಚ್ಚಿದರೆ ರೋಷಗೊಂಡು ಬೆರಳನ್ನು ತುಂಡು ಮಾಡಿ ಬಿಸಾಡಲಾದೀತೇ? ಬದಲಾಗಿ ಕಣ್ಣಿಗೆ ಚಿಕಿತ್ಸೆ ಮಾಡುವುದೇ ಜಾಣ್ಮೆ ಅಲ್ಲವೇ? ಹಾಗಾಗಿ ಯಾರ ನಿಂದನೆಯ ಮಾತುಗಳಿಗೂ ತಲೆಕೆಡಿಸಿಕೊಳ್ಳದೆ ನಮ್ಮಂತೆ ನಾವಿದ್ದರಾಯಿತು. ಇದು ಅಳವಡಿಸಲು ಹೇಳಿದಷ್ಟು ಸುಲಭವಲ್ಲದಿದ್ದರೂ ಅಸಾಧ್ಯವಲ್ಲ.

ನಾವು ಅಮೆರಿಕದ ಅಧ್ಯಕ್ಷರ ಆಡಳಿತದ ಬಗ್ಗೆ ಮಾತನಾಡಬವು. ನಮ್ಮ ದೇಶದ ಪ್ರಧಾನಿಗಳು ಮಾಡುವುದೆಲ್ಲವೂ ತಪ್ಪೆಂದು ಗಂಟಲು ಹರಿದುಕೊಳ್ಳಬವು. ರಾಮಾಯಣ, ಮಹಾಭಾರತವನ್ನು ಟೀಕಿಸಬವು. ಸೂರ್ಯನ ಕೆಳಗಿರುವ ಯಾವುದೇ ವಿಷಯಗಳ ಕುರಿತು ಚರ್ಚಿಸಬವು. ಪರರ ಸಮಸ್ಯೆಗಳಿಗೆ ಸದಾ ಪರಿಹಾರ ಸೂಚಿಸಬವು. ಆದರೆ… ನಮ್ಮ ಬಗ್ಗೆ ಯಾರಾದರೂ ಟೀಕಿಸಿದರೆ, ಆರೋಪಿಸಿದರೆ ಮಾತ್ರ ಸಹಿಸಲಾರೆವು.

ಜೀವನವೇ ಮುಗಿದುಹೋಯ್ತು ಅನ್ನುವಷ್ಟು ಖಿನ್ನರಾಗಿ ಬಿಡುತ್ತೇವೆ. ಎಷ್ಟೋ ಜನ ಇಂತಹ ಟೀಕೆಗಳಿಂದ ಮನನೊಂದು ಜೀವನವನ್ನೇ ಅಂತ್ಯಗೊಳಿಸಿದವರಿದ್ಧಾರೆ. ಎಂಥೆಂಥ ಸಾಧಕರನ್ನೂ, ಸುಶಿಕ್ಷಿತರನ್ನೂ ಈ ಟೀಕೆಗಳು, ಸುಳ್ಳು ಆರೋಪಗಳು, ನಿಂದನೆಗಳು ಜರ್ಜರಿತಗೊಳಿಸಿ ಬಿಡುತ್ತವೆ. ಆರು ವರ್ಷಗಳ ಹಿಂದೆ ಸಹೋದ್ಯೋಗಿ ಯೊಬ್ಬರು ಅವರ ಮೇಲೆ ಕಳ್ಳತನದ ಆರೋಪ ಬಂತೆಂದು ಮಡದಿ ಮಕ್ಕಳ ಬಗ್ಗೆಯೂ ಚಿಂತಿಸದೆ ನೇಣಿಗೆ ಶರಣಾದ ಘಟನೆ ಇನ್ನೂ ನನ್ನನ್ನು ಕಾಡುತ್ತಿದೆ.

ಇತ್ತೀಚೆಗಷ್ಟೇ ನಾಲ್ಕು ತಿಂಗಳ ಹಿಂದೆ ಕೇರಳದ ಕೊಲ್ಲಂ ಜಿಯ ಕರಪ್ಪಕಡ ಎಂಬಲ್ಲಿ ಕಳೆದ ಸಪ್ಟೆಂಬರ್ ೨೩ರಂದು ಇಂತಹುದೇ ಒಂದು ದುರಂತ ಸಂಭವಿಸಿದ್ದು ನಿಮಗೆಲ್ಲರಿಗೂ ತಿಳಿದಿರಬಹುದು. ಈ ಘಟನೆಯ ಕುರಿತು ಮಾರ್ಮಿಕವಾದ ಲೇಖನವೊಂದನ್ನು
ಶಿಕ್ಷಣ ತಜ್ಞರೂ, ನಿವೃತ್ತ ಪ್ರಾಧ್ಯಾಪಕರೂ, ಲೇಖಕರೂ ಆದ ಡಾ.ಚಂದ್ರಶೇಖರ ದಾಮ್ಲೆಯವರು ‘ಮಿಥ್ಯಾಪಮಾನಕ್ಕೆ
ಆತ್ಮಹತ್ಯೆ ಪರಿಹಾರವಲ್ಲ’ ಎಂದು ಬರೆದದ್ದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಇದು ಸಹೃದಯತೆ ಹಾಗೂ ವೃತ್ತಿನಿಷ್ಠೆಗೆ ಅನ್ವರ್ಥವಾಗಿದ್ದ ೩೫ ವರ್ಷದ ಅನೂಪ್ ಕೃಷ್ಣ ಎಂಬ ಸುರಸುಂದರ ವೈದ್ಯರ ಬದುಕಿನ ಕರುಣಾಜನಕ ಅಂತ್ಯ, ಸುಶಿಕ್ಷಿತ ಸಮಾಜವನ್ನು ಕಂಪಿಸಿದ ಕರುಳು ಹಿಂಡುವ ಘಟನೆ. ನಡೆದದ್ದಿಷ್ಟೇ. ಹೃದಯರೋಗಿ ಯಾದ ಏಳು ವರ್ಷದ ಬಾಲಕಿಗೆ ಮೊಣಕಾಲಿನ ಅನಾರೋಗ್ಯದ ಸಮಸ್ಯೆ ಕಾಡಿದಾಗ ತನ್ನ ಸ್ವಂತ ಆಸ್ಪತ್ರೆಯಲ್ಲಿ, ಕನಿಷ್ಠ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾದರು ಡಾ.ಅನೂಪ್ ಕೃಷ್ಣ. ಆದರೆ ದುರದೃಷ್ಟವಶಾತ್ ಶಸ್ತ್ರಚಿಕಿತ್ಸೆಯ ವೇಳೆಯಲ್ಲಿಯೇ ಬಾಲಕಿಗೆ ಹೃದಯಾಘಾತವಾಯಿತು.

ಬಾಲಕಿಯ ಪೋಷಕರು, ಮಾಧ್ಯಮದವರು, ಸಮಾಜದ ಜನರು ಎಲ್ಲರೂ ವೈದ್ಯರ ತಪ್ಪಿನಿಂದಾಗಿ ಬಾಲಕಿ ತೀರಿಕೊಂಡಳೆಂದು ಅಪಪ್ರಚಾರ, ಸುಳ್ಳು ಆರೋಪ ಮಾಡಿದರು. ಸಹಿಸಲಾಗದೆ ಮನನೊಂದು ಡಾಕ್ಟರ್ ಸ್ನಾನದ ಕೋಣೆಯಲ್ಲಿ ನಾಡಿ ಮುರಿದು ಕೊಂಡು ಬದುಕಿಗೆ ಅಂತ್ಯ ಹಾಡಿದರು. ಇಷ್ಟೊಂದು ಉನ್ನತ ಶಿಕ್ಷಣ ಪಡೆದವರೂ, ಸಾಧನೆ ಮಾಡಿದವರೂ ಆದ ಇಂತಹ ವೈದ್ಯರೇ ಸುಳ್ಳು ಆರೋಪವನ್ನು ಎದುರಿಸಲಾಗದಷ್ಟು ಮಾನಸಿಕವಾಗಿ ಕುಗ್ಗಿ ಬಿಡುತ್ತಾರೆಂದರೆ ವಿದ್ಯಾಭ್ಯಾಸಕ್ಕೆ, ಸಾಧನೆಗೆ ಅರ್ಥ
ವೇನು ಅನ್ನುವ ಖಾಲಿತನ ಎದ್ದು ಕಾಣುವುದಿಲ್ಲವೇ? ಹಾಗಾಗಿ ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಪುಸ್ತಕದ ಜ್ಞಾನದ ಜತೆಗೆ ಜೀವನ ದಲ್ಲಿ ಇಂತಹ ಆರೋಪಗಳನ್ನು ಮೆಟ್ಟಿನಿಲ್ಲುವ ಎದೆಗಾರಿಕೆಯನ್ನು ಕಲಿಸುವುದು ಅನಿವಾರ್ಯ ವಲ್ಲವೇ? ಇಂತಹ ಟೀಕೆಗಳು, ನಿಂದೆಗಳು, ಆರೋಪಗಳು ಅಲ್ಪಾಯುಷಿಗಳೆಂದೂ, ಸಮಯವೇ ಎಲ್ಲವನ್ನೂ ಮರೆಸುತ್ತದೆ ಎಂದೂ, ಇದಕ್ಕೆ ತಾಳ್ಮೆಯೊಂದೇ ಅಸವೆಂದೂ ನಮ್ಮ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮನೆಗಳಲ್ಲಿ, ಶಾಲೆಗಳಲ್ಲಿ ನಡೆದರೆ ಈ ಸಮಸ್ಯೆ ಇಷ್ಟು ಗಂಭೀರವಾಗ ಲಾರದು. ಮಾನವರ ಈ ರೀತಿಯ ಹತ್ತಾರು ಮುಖಗಳ ಕುರಿತು ಡಿ.ವಿ.ಜಿ ಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಸ್ವಾರಸ್ಯವಾಗಿ ಹೇಳಿದ್ದಾರೆ.

ಕನಲ್ದ ಹುಲಿ ಕೆರಳ್ದ ಹರಿ ಮುಳ್ ಕರಡಿ ಛಲನಾಗ|
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ|
ಸೆಣಸುಮುಸುಡಿಯ ಘೋರದುಷ್ಟ ಚೇಷ್ಟೆಗಳೆಲ್ಲ|
ವಣಗಿಹುವು ನರಮನದಿ – ಮಂಕುತಿಮ್ಮ||

ಹುಲಿಯಂತೆ ರೋಷಗೊಳ್ಳುವವರು, ಸಿಂಹದಂತೆ ಕೆರಳು ವವರು, ಕರಡಿಯಂತೆ ಮೈಮೇಲೆ ಮುಳ್ಳಿರುವವರು, ನಾಗದಂತೆ ಛಲದವರು, ಕಪಿಯಂತೆ ಚೇಷ್ಟೆಯಾಡುವವರು, ಸೀಳು ನಾಯಿಯಂತೆ ಬೇಟೆಯಾಡುವವರು ಮೊದಲಾದ ಎಲ್ಲಾ
ವೆರೈಟಿಯ ಮನುಷ್ಯರನ್ನು ಕಾಣುತ್ತೇವೆ. ಹೀಗೆ ಮೃಗಗಳಂತೆ ಸೋಗುಹಾಕಿರುವ ಘೋರವಾದ ದುಷ್ಟತೆಯಿಂದ ಕೂಡಿದ
ಸ್ವಭಾವಗಳೆ ಮಾನವನ ಮನಸ್ಸಿನಲ್ಲಿ ಅಡಕವಾಗಿದೆ ಅನ್ನುತ್ತಾರೆ ಡಿವಿಜಿಯವರು.

ಪಾಪ! ಪ್ರಾಣಿಗಳಿಗಾದರೋ ಅವುಗಳನ್ನು ಕಾಪಾಡಿಕೊಳ್ಳಲಿಕ್ಕಿರುವ ಸಹಜ ಗುಣಗಳಿವು. ಅದು ಕೇವಲ ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಹಾಗೂ ತನ್ನ ಸಂತತಿಯನ್ನು ಉಳಿಸಿಕೊಳ್ಳಲು ಮಾತ್ರ ಈ ಗುಣಸ್ವಭಾವಗಳನ್ನು ಬಳಸಿಕೊಳ್ಳುತ್ತವೆ.

ಆದರೆ ಮನುಷ್ಯ? ತನ್ನ ಸ್ವಾರ್ಥ ಸಾಧನೆಗಾಗಿ, ಸ್ವ ಲಾಭಕ್ಕಾಗಿ, ದುರಾಸೆಗಾಗಿ, ದರ್ಪದ ಪ್ರದರ್ಶನಕ್ಕಾಗಿ ಇನ್ನೊಬ್ಬರ ನೆಮ್ಮದಿ
ಹಾಳು ಮಾಡುವ ಸಲುವಾಗಿ ಮೃಗಗಳಂತೆ ದುಷ್ಟತನದಿಂದ ಮೆರೆಯುತ್ತಾನೆ. ಇನ್ನೊಬ್ಬರಿಗೆ ಕೆಡುಕನ್ನು ಮಾಡಲು ಯಾವ ಹೀನ
ಕೃತ್ಯಕ್ಕೂ ಹೇಸುವುದಿಲ್ಲ ನರಮಾನವ. ಡಿವಿಜಿಯವರ ಈ ಕಗ್ಗ ಎಷ್ಟು ಆಪ್ತವಾಗಿ ಸಾಂತ್ವನ ನೀಡುತ್ತದೆ ನೋಡಿ.

ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ|
ಭವಿಷಿಯವ ಚಿಂತಿಸದೆ ಬದುಕ ನೂಕುತಿರು|
ವಿವರಗಳ ಜೋಡಿಸುವ ಯಜಮಾನ ಬೇರಿಹನು|
ಸವೆಸು ನೀಂ ಜನುಮವನು – ಮಂಕುತಿಮ್ಮ||

ಏನೇ ಬಂದರೂ ಚಿಂತಿಸದೆ ಬದುಕು ಸಾಗಿಸುತ್ತಿರಬೇಕು. ಎಲ್ಲವನ್ನೂ ನಿರ್ಧರಿಸುವ ಒಡೆಯನೊಬ್ಬ ಬೇರೆ ಇರುವನು.
ಯಾವುದರ ಬಗ್ಗೆಯೂ ಅತಿಯಾಗಿ ಯೋಚಿಸದೆ ಆರಾಮವಾಗಿದ್ದರೆ ಮಾತ್ರ ಜೀವನ ಸುಖಕರವಾಗಬಲ್ಲದು. ಹೌದಲ್ಲವೇ?
ವಿವರಗಳ ಜೋಡಿಸುವ ಯಜಮಾನ ಬೇರಿರುವಾಗ ನಮಗೇಕೆ ಈ ಮಂದಿಯ ಮಾತಿನ ಬಗ್ಗೆ ಚಿಂತೆ.

Leave a Reply

Your email address will not be published. Required fields are marked *