Sunday, 17th October 2021

ದಸರಾ ಜಂಬೂಸವಾರಿಯ ಗಜಪಡೆಗಳಿಗೊಂದು ಸಲಾಂ

ತನ್ನಿಮಿತ್ತ

ಭಾರತಿ ಎ.ಕೊಪ್ಪ

bharathikoppa101@gmail.com

ಮೈಸೂರು ರಾಜಮನೆತನಕ್ಕೂ ದಸರಾ ಆನೆಗಳಿಗೂ ವಿಶೇಷವಾದ ನಂಟಿದೆ. ಪ್ರತಿ ವರ್ಷವೂ ಆನೆಗಳು ಕಾಡಿನಿಂದ ಆಗಮಿಸಿದ ನಂತರ ರಾಜಮನೆತನ ದವರು ಆನೆಗಳನ್ನು ಸ್ವಾಗತಿಸಿ, ಮಾವುತರು ಮತ್ತು ಕಾವಡಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ದಸರಾ ಮುಗಿದ ಬಳಿಕ ಅವರಿಗೆ ಔತಣ ಕೂಟ ಆಯೋಜಿಸಿ, ಉಡುಗೊರೆಗಳನ್ನು ಕೊಟ್ಟು ಬೀಳ್ಕೊಡುತ್ತಾರೆ. ಈಗ ದಸರೆಯ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸುತ್ತಿದ್ದರೂ, ರಾಜಮನೆತನದ ಸಂಪ್ರದಾಯ ಗಳು ಹಾಗೆಯೇ ಮುಂದುವರಿದಿದೆ.

ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಜನಪ್ರಿಯ ಹಾಡಿನಂತೆ, ನಮ್ಮ ನಾಡಹಬ್ಬ ದಸರಾ ಎಂದರೆ ಅದೊಂದು ಸುಂದರವಾದ ಆಚರಣೆ. ಕ್ರಿ.ಶ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ಒಡೆಯರ್ ವಂಶದ ರಾಜ ಒಡೆಯರ್ ಅವರಿಂದ ಆರಂಭವಾಗಿ, ಇಂದಿಗೂ ನಡೆಯುತ್ತಿರುವ ದಸರಾ ಉತ್ಸವ ನೋಡಲು ಕಣ್ಣುಗಳೆರಡು ಸಾಲದು.

ದಸರೆಯನ್ನು ವಿಜಯದಶಮಿಯಂದು ಸಂಪನ್ನಗೊಳಿಸುವಲ್ಲಿ ಜಂಬೂ ಸವಾರಿ ದಸರೆಯ ಪ್ರಮುಖ ಆಕರ್ಷಣೆ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುವ ಗಜಪಡೆಯ ಆನೆಗಳು ದಸರಾ ಮೆರವಣಿಗೆಯ ಪ್ರಮುಖ ರೂವಾರಿಗಳು ಎಂದರೆ ತಪ್ಪಾಗಲಾರದು. ಆನೆಗಳಿಲ್ಲದೆ ನಾಡಹಬ್ಬ ದಸರಾ ಪರಿಪೂರ್ಣಗೊಳ್ಳುವುದು ಅಸಾಧ್ಯ. ಹಾಗಾಗಿ ದಸರೆಯ ಮೆರುಗು ಹೆಚ್ಚಿಸುವ ಗಜಪಡೆ ಗಳಿಗೊಂದು ಸಲಾಂ ಹೇಳಲೇಬೇಕು.

ಈಗೆರಡು ವರ್ಷಗಳಿಂದ ಕರೋನಾ ಕರಿನೆರಳಿನಲ್ಲಿ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ ಯಾದರೂ, ಆನೆಗಳು ಸರಳ ದಸರಾಕ್ಕೂ ಕಳೆಕಟ್ಟಲು ಬೇಕೇ ಬೇಕು. ನಾವು ಸಾರ್ವಜನಿಕರು ಏನೇ ಕಾರ್ಯಕ್ರಮ ನಡೆಸುವುದಾದರೂ, ಒಂದಿನಿತು ಆಯ್ಕೆ, ಪೂರ್ವ ತಯಾರಿ, ಸೂಕ್ತ ತಾಲೀಮು ನಡೆಸುವಂತೆ, ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯ ಆನೆಗಳಿಗೂ ಆಯ್ಕೆ, ತಾಲೀಮು ಎಲ್ಲವೂ ನಿಯಮಾನುಸಾರ ನಡೆಯುತ್ತದೆ. ಸೂಕ್ತ ತಾಲೀಮಿ ನೊಂದಿಗೆ ಸಿದ್ಧಗೊಂಡು, ಅಲಂಕೃತವಾಗಿ ಜಂಬೂ ಸವಾರಿಯಲ್ಲಿ ಸಾಗುವ ಗಜಪಡೆಗಳ ಗಾಂಭೀರ್ಯ, ಸೌಂದರ್ಯ ಮಾತಿಗೆ ನಿಲುಕದ್ದು. ಪದಗಳಲ್ಲಿ ಪಡಿ ಮೂಡಿಸಲಾಗದ್ದು. ಅದರಲ್ಲೂ ಅಂಬಾರಿ ಹೊರುವ ಗಜಪಡೆಯ ನಾಯಕನಿಗೆ ವಿಶೇಷ ಜವಾಬ್ದಾರಿ ಇರುತ್ತದೆ.

ಹಾಗಾಗಿ ವಿಶೇಷ ತರಬೇತಿಯೂ ಅಂಬಾರಿ ಆನೆಗೆ ನಡೆಯುತ್ತದೆ. ರಾಜ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರ ಬಳಿ ಸೆರೆಸಿಕ್ಕ ಜಯ ಮಾರ್ತಾಂಡ ಎಂಬ ಆನೆ ಅಂಬಾರಿ ಹೊತ್ತ ಮೊದಲ ಆನೆಯಾಗಿದೆ. ನಂತರದಲ್ಲಿ ಅನೇಕ ಆನೆಗಳು ಈ ಅಂಬಾರಿ ಹೊರುವ ಸದವಕಾಶ ಪಡೆದಿದ್ದವು.
ದ್ರೋಣ, ಅರ್ಜುನ, ಬಲರಾಮ ಆನೆಗಳು ಇತ್ತೀಚಿನ ವರ್ಷಗಳಲ್ಲಿ ಅಂಬಾರಿ ಹೊತ್ತು ಚಿರಪರಿಚಿತವಾಗಿರುವುದರೊಂದಿಗೆ, ಕನ್ನಡಿಗರ ಪ್ರೀತಿಯನ್ನೂ ಸಂಪಾದಿಸಿ ದ್ದವು. ಅರ್ಜುನ ಕೋಪಿಷ್ಠ ಎನಿಸಿಕೊಂಡಿದ್ದರೂ, ಬಲರಾಮನ ನಂತರ ಅಂಬಾರಿಯ ಜವಾಬ್ದಾರಿ ನೀಡಿದಾಗ, ಸತತ ಎಂಟು ವರ್ಷ ಯಶಸ್ವಿಯಾಗಿ ಮುನ್ನಡೆ ಸಿದ್ದ.

ಸುಪ್ರೀಂ ಕೋರ್ಟ್‌ನ ತೀರ್ಪಿನನ್ವಯ, 60 ವರ್ಷ ತುಂಬಿದ ಆನೆಯ ಹೆಗಲ ಮೇಲೆ ಹೆಚ್ಚು ಭಾರ ಹೊರಿಸುವಂತಿಲ್ಲ. ಹಾಗಾಗಿ ಈ ಆನೆಗಳಿಗೂ ನಿವೃತ್ತಿ ಇದೆ! ಅರ್ಜುನನ ನಿವೃತ್ತಿ ಬಳಿಕ ಇದೀಗ ಗಜಪಡೆಯ ನಾಯಕತ್ವ ಮತ್ತು ಅಂಬಾರಿಯ ಜವಾಬ್ದಾರಿ ಅಭಿಮನ್ಯುವಿನ ಹೆಗಲೇರಿದೆ. ದಸರಾ ಮೆರವಣಿಗೆಯ 21 ವರ್ಷದ ಅನುಭವ ಹೊಂದಿದ್ದ ಅಭಿಮನ್ಯು ಸಹಜವಾಗಿಯೇ ಇದಕ್ಕೆ ಸಮರ್ಥನೂ ಹೌದು. ಅಂಬಾರಿ ಆನೆಯ ಜತೆಗೆ ಪಟ್ಟದ ಆನೆ, ಕುಮ್ಕಿ ಆನೆ, ನಿಶಾನೆ ಆನೆ, ನೌ-ತ್ ಆನೆ ಹೀಗೆ ತಮ್ಮದೇ ಜವಾಬ್ದಾರಿ ನಿರ್ವಹಣೆ ಮಾಡುವ ಆನೆಗಳಿರುವುದು ಗಜಪಡೆಯ ವಿಶೇಷತೆ. ಈ ಬಾರಿಯ ದಸರಾಕ್ಕೆ 5 ಗಂಡು ಮತ್ತು 3 ಹೆಣ್ಣಾನೆಗಳು ಸೇರಿ ಒಟ್ಟು 8 ಆನೆಗಳು ಆಯ್ಕೆಗೊಂಡು ತಾಲೀಮು ನಡೆಸುತ್ತಿವೆ. ಈ ಆನೆಗಳಿಗೆ ತಾಲೀಮು ದಸರೆಯ ಹುರುಪನ್ನು ಹೆಚ್ಚಿಸುತ್ತಿದೆ.

ದಸರಾಕ್ಕೆ ಮೊದಲೇ ಕಾಡಿನಿಂದ ಪೂಜೆಯೊಂದಿಗೆ ಪುರ ಪ್ರವೇಶಿಸಿ, ತಮ್ಮ ಮಾವುತರು ಮತ್ತು ಕಾವಡಿಗರೊಂದಿಗೆ ತರಬೇತಿ ಪಡೆಯುವ ಗಜಪಡೆಯದು ನಿಜಕ್ಕೂ ಶಿಸ್ತಿನ ಜೀವನ ಕ್ರಮ ಎಂದರೆ ಅತಿಶಯೋಕ್ತಿಯಲ್ಲ. ಅವುಗಳಿಗೆ ಅಗತ್ಯ ಪೌಷ್ಟಿಕಾಂಶದ ಆಹಾರ, ಮನೋಲ್ಲಾಸಕೆ ವಿಹಾರ ಎಲ್ಲವೂ ತಾಲೀಮಿನ ಅವಿಭಾಜ್ಯ ಅಂಗವಾಗಿರುತ್ತದೆ. ಮೆರವಣಿಗೆಯಲ್ಲಿ ಸಿಡಿಸುವ ಸಿಡಿಮದ್ದಿನ ಸದ್ದಿಗೆ ವಿಚಲಿತರಾಗದಂತೆ, ಓಡಿ ಹೋಗದಂತೆ, ಬೆದರದಂತಿರುವುದು ಇವೆಲ್ಲವನ್ನೂ ಕಲಿಸಿಕೊಡುತ್ತಾರೆಂದರೆ ಇದೊಂದು ಅದ್ಭುತ ತಾಲೀಮು ಎಂಬುದು ಸಾಬೀತಾಗುತ್ತದೆ. ಈ ಆನೆಗಳ ಆರೋಗ್ಯದ ಕಾಳಜಿಗೆ ವೈದ್ಯರೂ ಕೂಡ ನೇಮಕ ವಾಗಿರುತ್ತಾರೆ. ಇವೆಲ್ಲವೂ ಅರಣ್ಯ ಇಲಾಖೆಯ ಜವಾಬ್ದಾರಿಯುತ ಕಾರ್ಯಕ್ರಮವಾಗಿರುತ್ತದೆ. ಎಲ್ಲಾ ಆನೆಗಳ ದೈಹಿಕ ತೂಕ ಆಧರಿಸಿ, ಅವುಗಳ ವಯಸ್ಸಿಗೆ ತಕ್ಕಂತೆ ಮರಳಿನ ಮೂಟೆ ಹೊರಿಸಿ, ತಾಲೀಮು ನಡೆಸಿ, ಜಂಬೂ ಸವಾರಿಗೆ ಅಣಿಗೊಳಿಸಲಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ದಸರಾ ಆನೆಗಳಿಗೆ ಮತ್ತು ಸಂಬಂಧಿಸಿದ ಸಿಬ್ಬಂದಿಗಳಿಗೆ ವಿಮೆ ಸೌಲಭ್ಯ ಕೂಡ ಕಲ್ಪಿಸಿರುವುದು ಸ್ತುತ್ಯರ್ಹ ಸಂಗತಿ. ಉತ್ತಮ ಪರಿಸರದಿಂದ ಎಂಥವರನ್ನೂ ಬದಲಾಯಿಸಬಹುದು ಎಂಬುದಕ್ಕೆ ಈ ಬಾರಿಯ ಗಜಪಡೆಗೆ ಮೊದಲ ಹಂತದಲ್ಲಿ ಆಯ್ಕೆಯಾದ ಅಶ್ವತ್ಥಾಮ ಆನೆ ಸಾಕ್ಷಿಯಾಗಿ ನಿಲ್ಲುತ್ತಾನೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಕಾಡು ಬಿಟ್ಟು ನಾಡಿಗೆ ಬಂದು ಹಾಸನ ಜಿಲ್ಲೆಯ ಸಕಲೇಶಪುರದ ಸುತ್ತ ಮುತ್ತಲಿನ ಗ್ರಾಮದಲ್ಲಿ ದಾಂಧಲೆ ಮಾಡುತ್ತಿದ್ದ, ಬೆಳೆ ಹಾಳು ಮಾಡುತ್ತಿದ್ದ ಆನೆ ಆಪರೇಷನ್ ಗಜರಾಜನಲ್ಲಿ ಸೆರೆ ಸಿಕ್ಕಿದ್ದ. ಇಂದು ಅದೇ ಆನೆ ಮಾವುತ ಮತ್ತು ಅಭಿಮನ್ಯುವಿನಂತಹ ಪಳಗಿದ ಆನೆಗಳ ಜತೆಗೆ ಪಳಗಿದ್ದಾನೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾಗಿದ್ದಾನೆ.

ಉಗ್ರರೂಪ ಮರೆಯಾಗಿ, ಸೌಮ್ಯರೂಪ ತಾಳಿ ಗಜಪಡೆಯ ಮೊದಲ ಹಂತದ ಆಯ್ಕೆಯಲ್ಲಿ ಸ್ಥಾನ ಪಡೆದಿದ್ದಾನೆ. ನಿರಂತರವಾಗಿ ಐದಾರು ವರ್ಷ ಸತತವಾಗಿ ಜಂಬೂ ಸವಾರಿಗೆ ಬಂದರೆ, ಅಶ್ವತ್ಥಾಮ ಮುಂದೆ ಖಂಡಿತ ವಾಗಿಯೂ ನಾಡದೇವತೆಯನ್ನು ತಾನೇ ಅಂಬಾರಿಯಲ್ಲಿ ಹೊರುವ ಮಟ್ಟಕ್ಕೆ ಸಜ್ಜಾಗುತ್ತಾನೆ ಎಂಬುದು ಆತನ ಒಡನಾಡಿಗಳ ವಿಶ್ವಾಸವಾಗಿದೆ. ದಸರಾ ಆನೆಗಳೆಂದರೆ ಅವುಗಳ ಕಾವಡಿಗರಿಗೆ, ಮಾವುತರಿಗೆ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವಿಶೇಷ ಪ್ರೀತಿ ಮತ್ತು ಕಾಳಜಿ. ಇದಕ್ಕೆ ಸಾಕ್ಷಿಯೆಂಬಂತೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿ ಮೈಸೂರು ದಸರಾದ ಜಂಬೂ ಸವಾರಿ ಯಲ್ಲಿ ಅಂಬಾರಿ ಹೊತ್ತು ಸಾಗಿದ ಆನೆಗಳಾದ ದ್ರೋಣ ಮತ್ತು ರಾಜೇಂದ್ರ ಆನೆಗಳ ಮರಣದ ಬಳಿಕ ಬಳ್ಳೆಯಲ್ಲಿ ಅವುಗಳ ಸಮಾಧಿ ನಿರ್ಮಿಸಲಾಗಿದೆ.

ಜೊತೆಗೆ ಈ ಸಮಾಧಿಗೆ ವರ್ಷಕ್ಕೊಮ್ಮೆ ಪೂಜೆ ಕೂಡ ಸಲ್ಲಿಸಲಾಗುತ್ತದೆ. ಅದಲ್ಲದೆ, ಸಮಾಧಿಯತ್ತ ಹೋದಾಗಲೆಲ್ಲ ಇಲ್ಲಿನ ಮಾವುತ ಮತ್ತು ಕಾವಡಿಗಳು ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರಲ್ಲದೆ, ಶಿಬಿರದಲ್ಲಿರುವ ಆನೆಗಳಿಂದ ಆಗಾಗ್ಗೆ ಸಲಾಂ ಹೊಡೆಸುವ ಪರಿಪಾಠ ಕೂಡ ಇಟ್ಟುಕೊಂಡಿದ್ದಾರೆ. ಇದು ಆನೆಗಳ ಮೇಲಿನ ಪ್ರೀತಿಯ ನಿದರ್ಶನವೆಂಬಂತಿದೆ. ಮೈಸೂರು ರಾಜಮನೆತನಕ್ಕೂ ದಸರಾ ಆನೆಗಳಿಗೂ ವಿಶೇಷವಾದ ನಂಟಿದೆ. ಪ್ರತಿ ವರ್ಷವೂ ಆನೆಗಳು ಕಾಡಿನಿಂದ ಆಗಮಿಸಿದ ನಂತರ ರಾಜಮನೆತನದವರು ಆನೆಗಳನ್ನು ಸ್ವಾಗತಿಸಿ, ಮಾವುತರು ಮತ್ತು ಕಾವಡಿಗರು ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ದಸರಾ ಮುಗಿದ ಬಳಿಕ ಅವರಿಗೆ ಔತಣ ಕೂಟ ಆಯೋಜಿಸಿ, ಉಡುಗೊರೆಗಳನ್ನು ಕೊಟ್ಟು ಬೀಳ್ಕೊಡುತ್ತಾರೆ. ಈಗ ದಸರೆಯ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸುತ್ತಿದ್ದರೂ, ರಾಜಮನೆತನದ ಸಂಪ್ರದಾಯಗಳು ಹಾಗೆಯೇ ಮುಂದುವರಿದಿದೆ.

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಗಜಪಡೆ ನಮ್ಮ ನಾಡಿನ ಹೆಮ್ಮೆ. ಮನುಷ್ಯನನ್ನು ಕ್ಷಣಮಾತ್ರದಲ್ಲಿ ಮೆಟ್ಟಿ ನಿಲ್ಲುವ ದೈತ್ಯ ಶಕ್ತಿ ಇರುವ ಗಜಗಳು, ಪಳಗಿಕೊಳ್ಳುತ್ತಾ ಸೌಮ್ಯರೂಪ ತಾಳಿ, ತಾಲೀಮು ನಡೆಸಿ, ತಮಗೆ ಒಪ್ಪಿಸಿದ ಜವಾಬ್ದಾರಿಯನ್ನು
ಕಿಂಚಿತ್ತು ಲೋಪವಿಲ್ಲದೆ ನಿರ್ವಹಿಸುವ ರೀತಿ ನಿಜಕ್ಕೂ ನಾಡಿನ ಸಾಂಸ್ಕೃತಿಕ ವೈಭವವೇ ಆಗಿದೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಸೌಭಾಗ್ಯ
ಆನೆಗಳಾದ್ದಾದರೆ, ಆ ಗಜ ಗಾಂಭೀರ್ಯವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮೆಲ್ಲರಿಗೂ ದೊರಕಿರುವುದು ನಮ್ಮ ಪರಂಪರೆಯ ಸಂಸ್ಕೃತಿ ಹಾಗೂ ಆಚರಣೆಗಳ ಫಲ ಎಂಬುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *