Friday, 7th October 2022

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ:

ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಹಾಗೂ ಸುತ್ತಮುತ್ತಲ ಅಸ್ವಚ್ಛತೆ ಕಂಡು ಕೆಂಡಾಮಂಡಲವಾದ ಕೃಷಿ ಸಚಿವರು ಹಾಗೂ ಹಿರೇಕೆರೂರು ಶಾಸಕರೂ ಆಗಿರುವ ಬಿ.ಸಿ.ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಂದು ಹಿರೇಕೆರೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 2019 20 ನೇ ಸಾಲಿನ 5045 ಯೋಜನೆಯಡಿ ಚನ್ನಳ್ಳಿ ಗ್ರಾಮ ದಿಂದ ದೂದಿಹಳ್ಳಿ ಗ್ರಾಮದ ವರೆಗೆ ರಸ್ತೆ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಚನ್ನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಘಟಕದಲ್ಲಿ ಸರಿಯಾಗಿ ಕುಡಿಯುವ ನೀರು ಬರದಿರುವುದನ್ನು ಹಾಗೂ ಸುತ್ತಮುತ್ತ ಅಸ್ವಚ್ಛತೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜನರಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಸರ್ಕಾರ ಕಲ್ಪಿಸಿದೆ. ಕುಡಿಯುವ ನೀರಿನ ಘಟಕವಾಗಲೀ, ಇತರೆ ಏನೇಆಗಲೀ ತೊಂದರೆಕಂಡು ಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರು ಕೇಳಿಬಂದಲ್ಲಿ ಅಧಿಕಾರಿಗಳು ಅದರತ್ತ ಗಮನಹರಿಸಿ ಸರಿಪಡಿಸುವಲ್ಲಿ ಮುಂದಾಗಬೇಕು ಎಂದರು.

ಚನ್ನಹಳ್ಳಿ ಗ್ರಾಮ ಹಿರೇಕೆರೂರಿನಿಂದ 2 ಕಿ.ಮೀ.ದೂರವಿದೆ ಎಂದು ಇಓ ಶ್ರೀನಿವಾಸ ಹಾಗೂ ಪಿಡಿಓ ಸಬೂಬು ಹೇಳಿದಾಗ, ಇರುವ 2 ಕಿ.ಮೀ.ದೂರದಲ್ಲಿ ಅಧಿಕಾರಿಗಳು ಓಡಾಡುವುದಿಲ್ಲ ಎಂದರೇನು ಅರ್ಥ? ಸ್ವಚ್ಛತೆಯೂ ಇಲ್ಲ ಎಂದು ಗದರಿದರು. ಆದಷ್ಟು ಬೇಗ ಸರಿಪಡಿಸದೇ ಹೋದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಬಿ.ಸಿ.ಪಾಟೀಲ್ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ್, ಬಿಜೆಪಿಯ ಮುಖಂಡರು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಹಾಜರಿದ್ದರು.