Tuesday, 29th September 2020

ಇತಿಹಾಸ ನೆನಪಿಡುವುದು ಸಾಧಕರನ್ನ, ಸಮಯ ಸಾಧಕರನ್ನಲ್ಲ

ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು
ಮನ್ನಣೆಯ ದಾಹವೀ ಎಲ್ಲಕ್ಕೂ ತೀಕ್ಷ್ಣತಮ|
ತಿನ್ನುವದದಾತ್ಮವನೇ ಮಂಕುತಿಮ್ಮ||

ಎನ್ನುವ ಡಿವಿಜಿ ಅವರ ಕಗ್ಗದ ಈ ಸಾಲುಗಳು ಎಂದಿಗೂ ಸರ್ವಮಾನ್ಯ. ತಾವು ಮಿಂಚಬೇಕು, ತಾವು ಚೆಂದ ಕಾಣಬೇಕು, ತಮ್ಮನ್ನೇ ಎಲ್ಲರೂ ಹೊಗಳಬೇಕು, ತನ್ನದೊಂದೇ ಎಲ್ಲರೂ ನೋಡಬೇಕು, ತನ್ನನ್ನೇ ಎಲ್ಲರೂ ಗೌರವಿಸಬೇಕು ಇತ್ಯಾದಿ ಇತ್ಯಾದಿ. ಅದರಲ್ಲೂ ವಾಟ್ಸಪ್, ಫೇಸ್‍ಬುಕ್ಕುಗಳು ಬಂದ ಮೇಲಂತೂ ಈ ಹುಚ್ಚು, ಈ ರೋಗ ಅತಿರೇಕÀ ತಲುಪಿಬಿಟ್ಟಿದೆ. ಸಮಾಜ ಮುಖಿ ಕೆಲಸ ಮಾಡುವ ಗ್ರೂಪ್‍ಗಳಲ್ಲಿಯೂ ವೈಯಕ್ತಿಕವಾದುದನ್ನು ಹಾಕಬೇಡಿ ಎಂದು ವಿನಂತಿಸುತ್ತಿದ್ದರೂ. ತಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಅಳಿಯನ ವಿದೇಶಯಾತ್ರೆ, ಮಗಳ ಗರ್ಭಧರಿಸಿದ ಹೊಟ್ಟೆ, ಸೀಮಂತದ ಫೆÇೀಟೋಗಳನ್ನು ಹಾಕುತ್ತಲೇ ಇರುತ್ತಾರೆ, ಛೀ, ಥೂ ಎಂದು ಉಗುಳಿಸಿಕೊಳ್ಳುತ್ತಲೇ ಇರುತ್ತಾರೆ. ಆದರೂ, ಬಿಡುವದಿಲ್ಲ, ಬಿಟ್ಟರೆ ಅವರಿಗೆ ನಡೆಯುವದೇ ಇಲ್ಲ.

ಆತ್ಮರತಿ, ಸ್ವಯಂ ಪ್ರಶಂಸೆ ಇವೆಲ್ಲ ಮಹಾಪಾಪಗಳೆಂದೇ ಪುರಾಣಗಳು ಸಾರುತ್ತವೆ. ನನ್ನ ಹೆಸರು ಇಂಥದು ಎಂದು `ನನ್ನ’ ಎಂಬ ಈ ಎರಡಕ್ಷರ ಬಾಯಿಗೆ ಬಂದರೂ ಮೂರು ದಿನ ಉಪವಾಸ ಮಾಡಬೇಕೆಂಬ ನಿಯಮವಿದೆ. `ಈ ದೇಹವನ್ನು ಗುರುತಿಸುವ ಹೆಸರಿದು’ ಎಂದು ಎನ್ನಬೇಕಂತೆ! ನಮ್ಮನ್ನು ನಾವೇ ಹೊಗಳಿಕೊಂಡರೇ ಪಾಪ ಕೂಪಕ್ಕೆ ಬೀಳುವಂತಿರಬೇಕಾದರೆ, ಇನ್ನು ನನ್ನನ್ನು ಹೊಗಳಿ ಎಂದು ಇನ್ನೊಬ್ಬರನ್ನು ಕೇಳಿದರೆ, ಬಲವಂತ ಮಾಡಿದರೆ ಘೋರ ನರಕವೇ ಪ್ರಾಪ್ತಿ! ಈಗ ನಮ್ಮ ಕಣ್ಮುಂದೆ ಇರುವ ಬಾಯಿಯಿರದ ಮೂಕ ಪ್ರಾಣಿಗಳೆಲ್ಲ ಹೋದ ಜನ್ಮದಲ್ಲಿ ನನ್ನನ್ನು ಹಾಡಿ ಹೊಗಳಿ ಎಂದು ಇನ್ನೊಬ್ಬರನ್ನು ಪೀಡಿಸಿದವುಗಳೇ ಎನ್ನುತ್ತವೆ ಪುರಾಣ-ಶಾಸ್ತ್ರಗಳು. ನಮಗೆ ಬಾಯಿ ಇರುವದು ಕೇವಲ ಪ್ರಕೃತಿಯನ್ನು ವರ್ಣಿಸಲು, ಭಗವಂತನ ಗುಣಗಾನ ಮಾಡಲು, ನೊಂದವರಿಗೆ ಸಾಂತ್ವನ ಹೇಳಲು, ಶಾಸ್ತ್ರ ವಿಚಾರಗಳನ್ನು ಇನ್ನೊಬ್ಬರಿಗೆ ತಿಳಿಸಲು ಮಾತ್ರ.
1981-82ರ ದಶಕದಲ್ಲಿ `ಸಾಹಿತ್ಯ ಪ್ರೇಮಿಗಳ ಬಳಗ’ ಎಂಬ ಸಂಸ್ಥೆ ಕಟ್ಟಿಕೊಂಡು ಗೆಳೆಯರೆಲ್ಲ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಕಾಲ. ಮಕ್ಕಳ ಬೌದ್ಧಿಕ ಬೆಳವಣಿಗೆಯೇ ಸಂಸ್ಥೆಯ ಮುಖ್ಯ ಉz್ದÉೀಶವಾಗಿದ್ದರೂ ಕೆಲವು ವ್ಯಕ್ತಿಗಳು ಸನ್ಮಾನ ಮಾಡಿಸಿಕೊಂಡು ದೊಡ್ಡವರಾಗಬೇಕೆಂದು ಬಯಸುತ್ತಿರುತ್ತಾರಲ್ಲ ಅಂಥ ವ್ಯಕ್ತಿಗಳಿಗೆ ಸನ್ಮಾನವನ್ನೂ ಮಾಡುತ್ತಿದ್ದೆವು. ಹೀಗಿರಲು ಒಬ್ಬ ವ್ಯಕ್ತಿ ತನ್ನ ಬಗ್ಗೆ ಒಂದು ಪುಸ್ತಕ ಬರೆದುಕೊಡಿ ಎಂದು ಗಂಟು ಬಿದ್ದಿದ್ದ. ತುಂಬ ಅಹಂನ ವ್ಯಕ್ತಿ, ಬಾಯಿ ತೆಗೆದರೆ ಸುಳ್ಳು, ಸ್ವಪ್ರತಿಷ್ಠೆ ಮಾತುಗಳು, ಎಲ್ಲರೂ ತನ್ನನ್ನು ಗುರುತಿಸಬೇಕು, ಗೌರವಿಸಬೇಕು, ತನ್ನನ್ನೇ ವೇದಿಕೆಗೆ ಕರೆಯಬೇಕು ಎಂಬ ಇಚ್ಛೆಯುಳ್ಳವನು. ಆದರೆ ತಾನು ಯಾರನ್ನೂ ಗುರುತಿಸುತ್ತಿರಿಲಿಲ್ಲ, ಗೌರವಿಸುತ್ತಿರಲಿಲ್ಲ.

ಸದಾ ವೇದಾಂತಿಯಂತೆ ಮಾತನಾಡುವದು. ರಾತ್ರಿ ಬಸ್‍ಸ್ಟ್ಯಾಂಡಿನಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಳಿಯೇ ಸ್ವೆಟರ್, ಶಾಲು, ಸೂಟ್‍ಕೇಸ್‍ಗಳೊಂದಿಗೆ ನಿಂತು, ಬಸ್ಸು ಬಿಡುವವರೆಗೂ ಕೆಳಗೇ ಇದ್ದು `ಆ ಮಿನಿಸ್ಟರ್ ಬಳಿ ಹೋಗುತ್ತಿz್ದÉೀನೆ, ಈ ನಟನ ಬಳಿ ಹೋಗುತ್ತಿz್ದÉೀವೆ, ಇಂಥಾ ಲೇಖಕ ಕರೆದಿದ್ದಾನೆ, ಮುಂದಿನ ಒಂದು ಸಿನಿಮಾಗೆ ನಂದೇ ಸ್ಕ್ರಿಪ್ಟ್’ ಎಂದೆಲ್ಲ ಸುತ್ತಲಿನವರು ಬಾಯಿ ತೆರೆದು ಕೇಳುವಂತೆ ಮಾತನಾಡಿ, ಬಸ್ ಬಿಟ್ಟ ತಕ್ಷಣ ತನ್ನ ಸೈಕಲ್ಲೇರಿ ಮನೆ ಸೇರಿಕೊಂಡು ಮಲಗಿಬಿಡುತ್ತಿದ್ದ. ಎರಡು ದಿನ ತನ್ನ ಗದ್ದೆಗಳಿರುವ ಹಳ್ಳಿಗೆ ಹೋಗಿ, ಅಲ್ಲೂ ದುಡಿಯವ ರೈತರ ಮೇಲೆ ಜೋರು ಮಾಡಿ, ತನ್ನ ಯಶೋಗಾಥೆ ಹೇಳಿ `ನನ್ನಂಥ ಧಣಿ ಕೈಯ್ಯಾಗ ಕೆಲಸ ಮಾಡೋದು ನಿಮ್ಮ ಪುಣ್ಯ ಐತಲೇ’ ಎಂದು ಅವರಿಗೆ ಆಶೀರ್ವದಿಸಿ ಬರುತ್ತಿದ್ದ. ಅಲ್ಲೇ ರೈತರು ದುಡಿಯುತ್ತಿದ್ದಾಗ ಗಿಡದ ನೆರಳಿನಲ್ಲಿ ತಾನೂ ಕೂತು, ಅವರ ಮನೆಯಿಂದಲೇ ತರಿಸಿಕೊಂಡಿದ್ದ ಮಜ್ಜಿಗೆ ಕುಡಿಯುತ್ತಾ, `ರೈತನ ಗೋಳು’ ಎಂಬ ಕವನ ಬರೆದು, ಲೇ ನಿಮ್ಮ ಬಗ್ಗೆ ಕವನ ಬರೆದೀನಿ, ಇದು ಪುಸ್ತಕ ಆಗ್ತದೆ, ಅದಕ್ಕೆ ಪ್ರಶಸ್ತಿ ಸಿಗ್ತದೆ , ಆ ಪ್ರಶಸ್ತಿ ಹಣತಂದು ನಿಮಗೇ ಕೊಡ್ತೀನಿ’ ಎಂದು ಅವರಲ್ಲಿ ಆಸೆ ತುಂಬುತ್ತಿದ್ದ.

ಅದೇ ಟಿವಿ ಬಂದ ಹೊಸದರಲ್ಲಿ ದೂರದರ್ಶನ ಚಾನೆಲ್ ಒಂದೇ ಇತ್ತು, ಒಂದೇ ಚಾನೆಲ್ ಬರುತ್ತಿದ್ದ ಸುಂದರ, ಸುಖದ ದಿನಗಳವು. `ಮುಂಗೇರಿಲಾಲ್ ಕಿ ಹಸೀನ್ ಸಪ್ನೆ’ ಎಂಬ ಹಾಸ್ಯ ಧಾರಾವಾಹಿ ಅದರಕ್ಕು ಬರುತ್ತಿತ್ತು. ಆತ ಯಾವದಾದರೂ ಒಂದು ವಸ್ತು ಹಿಡಿದರೆ, ಮುಟ್ಟಿದರೆ ಅದರ ಬಗ್ಗೆಯೇ ಕನಸು ಕಾಣುತ್ತಿದ್ದ. ಹೇರ್‍ಪಿನ್ ಹಿಡಿದು ಆಪರೇಶನ್ ಮಾಡಿದಂತೆ, ಸೈಕಲ್ಲೇರಿ ಚಂದ್ರಲೋಕಕ್ಕೆ ಹೋದಂತೆ, ಪೆÇಲೀಸ್ ಆಗಿ ಕಳ್ಳರನ್ನೆಲ್ಲ ಸದೆ ಬಡಿದಂತೆ ಕನಸು ಕಾಣುತ್ತಿರುತ್ತಾನೆ, ನಮ್ಮ ಕವಿಯ ಪ್ರತಿಯೊಂದು ಕಾರ್ಯಕ್ಕೂ, ಮಾತಿಗೂ ಊರ ಜನ ಆತನಿಗೆ `ಮುಂಗೇರಿಲಾಲ್ ಕಿ ಹಸೀನ್ ಸಪ್ನೆ’ ಎಂದೇ ಹೆಸರಿಟ್ಟಿದ್ದರು. ಕರೆಯದೇ ವೇದಿಕೆ ಏರಿ ಮಧ್ಯದ ಚೇರ್‍ನಲ್ಲಿ ಕೂತು ಬಿಡುತ್ತಿದ್ದ, ತಾನೇ ಮೂರು-ನಾಲ್ಕು ಮಂದಿಗೆ ಹೇಳಿಟ್ಟು, ಹಣ ಕೊಟ್ಟು ಹಾರ ಹಾಕಿಸಿಕೊಳ್ಳುತ್ತಿದ್ದ, ತನ್ನ ಕಡೆಯವರನ್ನೆ ಹಣ ಕೊಟ್ಟು ಸಭೆಯಲ್ಲಿ ಕೂರಿಸಿ ತನ್ನ ಭಾಷಣಕ್ಕೆ, ಕವನಕ್ಕೆ, ಒನ್ಸ್ ಮೋರ್ ಕೂಗಲು ಹೇಳಿರುತ್ತಿದ್ದ, ಕೊನೆಯಲ್ಲಿ ಹಾಡು, ಹಾಡು ಎಂದು ಕೂಗಿಸಿಕೊಂಡು ಕೆಟ್ಟ ಧ್ವನಿಯಲ್ಲಿ ಹಾಡುತ್ತಿದ್ದ. ಬಟ್ಟೆ ಹರಿದುಕೊಳ್ಳದೇ ಕಲ್ಲು ಎಸೆಯಿಸಿಕೊಳ್ಳದೇ, ಅಡ್ಮಿಟ್ ಆಗದೇ ಅರೆ ಹುಚ್ಚ ಎಂಬ ಬಿರುದನ್ನು-ಇದಕ್ಕೆ ಮಾತ್ರ ಹಣ ಕೊಡದೇ-ಪಡೆದಿದ್ದ.

ತನ್ನ ಈ ಹುಚ್ಚು ತೆವಲುಗಳ ಜೀವನ, ಹುಚ್ಚು ಕವನಗಳ ಸಂಗ್ರಹ ಸೇರಿಸಿ ನನಗೊಂದು ಪುಸ್ತಕ ಪ್ರಿಂಟ ಮಾಡಬೇಕು ಅದು ನನ್ನ ಬದುಕು-ಬರಹ ಎಂಬ ಶೀರ್ಷಿಕೆ ಹೊತ್ತು ಪ್ರಿಂಟ್ ಆಗಬೇಕೆಂದು ಹಠ ತೊಟ್ಟು ಖಾಲಿ ಚೆಕ್ಕನ್ನು ನನ್ನ ಮುಂದಿಟ್ಟು ಹೋಗಿದ್ದ, ಬಿಸಿತುಪ್ಪದಂತಹ ಮನುಷ್ಯ. ಲೇಖನಗಳ ಸಂಗ್ರಹಕ್ಕೆ ಎಲ್ಲರಿಗೂ ಕರೆಯೋಲೆ ಕಳಿಸಿದೆ, ಇಂಥ ಕೆಲಸ ನೀವ್ಯಾಕೆ ಒಪ್ಪಿಕೊಂಡಿರಿ ಎಂದು ಎಲ್ಲರೂ ನನ್ನನ್ನೇ ಬೈಯ್ದರೂ, ಅವನ ಹಣೆ ಬರಹ ಗೊತ್ತಿದ್ದವರು ಅವನ ಬಗ್ಗೆ ನಾಲ್ಕು ಸಾಲು ಬರೆದು ಕಳಿಸಿದ್ದರು. ಆದರೆ ಕೆಲವು ಲೇಖಕರು ಮಾತ್ರ ಒಂದೇ ಸಾಲಿನ ಲೇಖನ ಬರೆದಿದ್ದರು `ಶ್ರೀಯುತರ ಬದುಕು-ಬರಹ ಬರುತ್ತಿರುವುದು ಸಂತೋಷ. ಇವರದೂ ಒಂದು ಬದುಕಾ?-ಜೈಹಿಂದ್’ ಎಂದು ಬರೆದು ಸಹಿ ಮಾಡಿದ್ದರು. ಮತ್ತೊಬ್ಬ ಲೇಖಕರು `ಶ್ರೀಯುತರ ಬದುಕು-ಬರಹ ಪುಸ್ತಕ ಪ್ರಕಟವಾಗುತ್ತಿರುವದು, ಮುದ್ರಣ ಕಾಗದ, ಮುದ್ರಣ ವೆಚ್ಚ ಕಡಿಮೆ ಆಗುತ್ತಿರುವದರ ಸಂಕೇತ’ ಎಂದು ಬರೆದು ಕಳಿಸಿದ್ದರು. ಇನ್ನು ಕೆಲವರು `ತಾಯಿ ಸರಸ್ವತಿಯ ದುರ್ದಿನಗಳೆಂದರೆ ಈ ಪುಸ್ತಕ ಮುದ್ರಣವಾಗುತ್ತಿರುವ ದಿನಗಳೆಂದೇ ಹೇಳಬೇಕು’ ಎಂದು ಬರೆದಿಟ್ಟರು.

ಇನ್ನು ಕೆಲವರು `ಶ್ರೀಯುತರಿಗೆ ಅಕ್ಷರಗಳನ್ನು ಕಲಿಸಿದ ಶಿಕ್ಷಕರನ್ನು ಹುಡುಕಿ ದಂಡಿಸಬೇಕಾದ ದುರ್ಭಿಕ್ಷ ಕಾಲವಿದು’ ಎಂದು ಬರೆದಿದ್ದರು. ಇನ್ನು ಕೆಲವರು `ಇವರ ಬಗ್ಗೆ ಬರೆಯಬೇಕಾಗಿರುವ ನನ್ನ ಈ ಕೈಗಳಿಗೆ ಲಕ್ವ ಹೊಡೆದಿದ್ದರೂ ನನಗಿಷ್ಟು ದುಃಖವಾಗುತ್ತಿರಲಿಲ್ಲ’ ಎಂದು ಬರೆದಿದ್ದರು. ಮತ್ತೆ ಕೆಲವರು `ನನ್ನ ಹಣೆ ಬರಹ ಕೆಟ್ಟಿದೆ ಎಂಬುದರ ಚಿಹ್ನೆಯೇ ಶ್ರೀಯುತರ ಬದುಕು ಬರಹ ಪುಸ್ತಕ ಹೊರಬರುತ್ತಿರುವದರ ಸೂಚನೆ’ ಎಂದು ಬರೆದಿದ್ದರು. ಅವರು ಬರೆದ ವ್ಯಂಗ್ಯ ಸಾಲುಗಳೂ ಅರ್ಥವಾಗದ ಕವಿ, ಬಂದ ಎಲ್ಲವನ್ನು ಪ್ರಕಟಿಸಿ ಎಂದು ಹೇಳುತ್ತಿದ್ದ. ಆತನಿಗೆ ಹೆಚ್ಚು ಪುಟಗಳ ಬೃಹತ್ ಗ್ರಂಥವಾಗಬೇಕೆಂಬ ಕನಸು ಅಷ್ಟೆ, ಎಲ್ಲರೂ ತನ್ನ ಬಗ್ಗೆ ಬರೆದಿದ್ದಾರೆ ಎಂದು ಸಂಭ್ರಮಿಸುವ ಮೂರ್ಖತನ. ಏನು ಬರೆದಿದ್ದಾರೆ ಎಂಬುದೂ ತಿಳಿಯದ ಶತ ಮೂರ್ಖತನ, ಪುಸ್ತಕ ಮುಗಿಯುತ್ತ ಬಂದಂತೆ ಪುಸ್ತಕ ಬಿಡುಗಡೆಯ ದಿನ ತುಲಾಭಾರ ಇಟ್ಕಂತಾರೇನೋ ಕೇಳಿ ನೋಡಿರಿ ಎಂದು ನನಗೇ ಮತ್ತೊಂದು ಘನ ಘೋರ ಜವಾಬ್ದಾರಿ ಹೊರಿಸಿದ, ಇದನ್ನೂ ಜನರ ಮುಂದಿಟ್ಟೆ. `ಅವನನ್ನು ಕತ್ತರಿಸಿ ತುಂಡು ತುಂಡು ಮಾಡಿ ತಕ್ಕಡಿಯಲ್ಲಿಟ್ಟು ತುಲಾಭಾರ ಮಾಡೋಣವೆಂದರೆ ನಾವು ರೆಡಿ, ಆ ಮೇಲೆ ಆ ತುಂಡುಗಳನ್ನು ಆತನ ಅಭಿಮಾನಿಗಳಾದ ನಾಯಿ, ನರಿಗಳಿಗೆ ಹಾಕೋಣ’ ಎಂದು ಅಭಿಪ್ರಾಯಗಳನ್ನು ಹೇಳಿದರು.

ಹೀಗೆ ಕಿಂಚಿತ್ತೂ ಮರ್ಯಾದೆಯಿಲ್ಲದೇ ಮನ್ನಣೆ ಬಯಸುತ್ತಿದ್ದ ಈ ಮೂರ್ಖನ ಬಹು ದೊಡ್ಡ ಕೊರತೆ ಎಂದರೆ ಯಾರನ್ನೂ, ಯಾವುದನೂ, ಏನನ್ನೂ ಓದದೇ ಇರುವದು. ನಾನು ಬರೆಯಲು ಹುಟ್ಟಿದವನು, ಇನ್ನೊಬ್ಬರು ಬರೆದುದನ್ನು ಓದಲು ಹುಟ್ಟಿದವನಲ್ಲ ಎಂದೇ ಸಭೆಗಳಲ್ಲಿ ಚೀರುತ್ತಿದ್ದ. ಒಂದು ಸಾರಿ ಭಗವದ್ಗೀತಾ ಸಪ್ತಾಹವನ್ನು ರಾಮಕೃಷ್ಣ ಮಿಷನ್‍ನವರು ಏರ್ಪಡಿಸಿದ್ದರು. ಆಯ್ದ ಪಂಡಿತರುಗಳನ್ನು ಅವರೇ ಕರೆತಂದಿದ್ದು ಒಂದು ವಾರ ಪ್ರತಿನಿತ್ಯ ಕರ್ಣಗಳಿಗೆ ರಸಕವಳದ ಕಾರ್ಯಕ್ರಮ. ಈ ಊರ ಮೂರ್ಖ ಅಲ್ಲಿಗೆ ಬಂದ. `ಯಾರು ಏರ್ಪಡಿಸಿದ್ದು? ನನ್ನ ಹೆಸರೇಕಿಲ್ಲ? ನಾನು ಈ ಊರ ಚಿಂತಕ, ಬುದ್ಧಿಜೀವಿ, ನಾನೂ ಒಬ್ಬ ಅಪ್ರತಿಮ ಲೇಖಕ, ಯಾರೋ ಎಂದೋ ಬರೆದ ಭಗವದ್ಗೀತೆಯ ಬಗ್ಗೆ ಒಂದು ವಾರ ಕಾಲ ಮಾತನಾಡುತ್ತಾರೆ, ನನ್ನ ಕೃತಿಗಳ ವಿಮರ್ಶೆಯೂ ಹೀಗೆ ನಡೆಯಲಿ ಯಾರವನು ಕೃಷ್ಣ? ಅವನು ಬರೆದದ್ದು ಒಂದೇ ಭಗವದ್ಗೀತೆ, ನಾನು ಪಂದ್ಯ ಕಟ್ಟಿದರೆ ಅವನ ಸಮ ಸಮ ಅಲ್ಲ, ಅವನನ್ನು ಮೀರಿಸಿ ನೂರು ಇಂಥ ಭಗವದ್ಗೀತೆಗಳನ್ನು ಬರೆಯುತ್ತೇನೆ’ ಎಂದು ಕೂಗಾಡಿದ. `ಊರ ದೇವರು, ಊರ ಗಡಿ, ಊರ ಜಾತ್ರೆ, ಊರ ಸ್ಮಾರಕ, ಊರ ಕೇಂದ್ರ ಸ್ಥಳ,’-ಎಂದಿರುವಂತೆ ಈತನನ್ನೂ ಜನ `ಬೊಗಳುವ ಊರ ನಾಯಿ’ ಎಂದು ಗುರುತಿಸಿದ್ದರಿಂದ, ಇದರ ಬೊಗಳುವಿಕೆ ನಿಲ್ಲಿಸಲು ಒಂದೆಳೆಯ ಹಾರ ಹಾಕಿ ಈತನನ್ನು ಸಾಗಹಾಕಿದರು.

ನೀವು ಗಮನಿಸಿ ನೋಡಿ, ಊರಿಗೆ ಒಬ್ಬರಲ್ಲ, ಒಬ್ಬರು ಇಂತಹ ವ್ಯಕ್ತಿಗಳು ಇರುತ್ತಾರೆ. ಇದು ಏನೋ ಒಂದು ದೌರ್ಬಲ್ಯ, ಮನೋರೋಗ ಅಥವಾ ಮನ್ನಣೆಯ ರೋಗ ಎಂದರೂ ಸರಿಯೇ, ಅವರ ಆತ್ಮವನ್ನೆ ಅದು ತಿನ್ನುತ್ತಿರುತ್ತದೆ. ಸಾಧಿಸಿದವನಿಗೆ ಸಾವಿಲ್ಲ, ಸಮಯಸಾಧಕರಿಗೆ ಬದುಕಿಲ್ಲ. ನನಗೂ ಅಲ್ಲಲ್ಲಿ ಇಂಥವರು ಸಿಗುತ್ತಿರುತ್ತಾರೆ. ವಿಶೇಷವೆಂದರೆ `ಫೇಸ್ ಟು ಫೇಸ್’ ಎದುರಿಸಲಾಗದವರೇ ಫೇಸ್‍ಬುಕ್ಕುಗಳಲ್ಲಿ ಯುದ್ಧಕ್ಕೆ ಸನ್ನದ್ಧರಾಗಿರುತ್ತಾರೆ. ಪ್ರತಿಯೊಂದನ್ನೂ, ಪ್ರತಿಯೊಬ್ಬರನ್ನೂ ನಿಂದಿಸುವ ಒಂದು ಸಂಘವನ್ನೆ ನಾವು ಫೇಸ್ ಬುಕ್ಕುಗಳ ಕಮೆಂಟಿಗರಲ್ಲಿ ಕಾಣಬಹುದು. `ಬಂಜೆ ಬಲ್ಲಳೇ ಹೆರಿಗೆಯ ನೋವ?’ ಎನಿಸುವುದೇ ಇಂಥ ಟೀಕಾಕಾರನ್ನು ಕಂಡಾಗ. ಎಲ್ಲರಿಗೂ ಇವರು ಕಮೆಂಟ್ ಮಾಡುತ್ತಾರೆ. ಮೋದಿಯವರಿಗೇನು ಕಡಿಮೆ ನಿಂದಿಸಿದರೆ? ಆದರೆ, ಕಾಲ, ಇತಿಹಾಸ ಮಾತ್ರ ಆಯ್ದು ಕೊಳ್ಳುವದು, ಗುರುತಿಸುವದು ಸಾಧಕರನ್ನೇ ವಿನಃ ಸಮಯ ಸಾಧಕರನ್ನಲ್ಲ, ಮನ್ನಣೆಯ ದಾಹ ಇರುವವರನ್ನೂ ಅಲ್ಲ. ಕಾಲಕ್ಕೂ ಇತಿಹಾಸದಲ್ಲಿ ಮನ್ನಣೆ ಪಡೆಯಬೇಕೆಂಬ ಆಸೆ ಇರುತ್ತದೆಯೇನೋ? ಅದಕ್ಕೆ ಕಾಲ, ಇತಿಹಾಸಗಳು ಯಾವಾಗಲೂ ನಿಜ ಸಾಧಕರ ಬೆನ್ನು ಹತ್ತುತ್ತವೆಯಾಗಲಿ, ಕತ್ತಲಲ್ಲಿ ಕಲ್ಲೊಗೆಯುವ ಕಟು ಟೀಕಾಕಾರನ್ನಲ್ಲ. ಕತ್ತಲಲ್ಲಿ ತಾವು ಒಗೆದ ಕಲ್ಲು ಎಲ್ಲಿ ಹೋಯಿತು ಎಂದು ಹೇಗೆ ಗೊತ್ತಾಗುವದಿಲ್ಲವೋ ಹಾಗೆ ಇವರು ಕಾಲ ಗರ್ಭದಲ್ಲಿ ಕಣ್ಮರೆಯಾಗುವವರೇ. ನಿಜ ಪ್ರತಿಭೆ ಎಂಬುದು ಕತ್ತಲ ಗರ್ಭ ಸೀಳಿ ಹೊರಬರುವ ಒಂದು ಸಣ್ಣ ಕಿರಣ.

ಇದಕ್ಕೊಂದು ನೀವು ಕೇಳಿರುವ ಜೋಕನ್ನೇ ಹೇಳುತ್ತೇನೆ:
ಓಡುವ ಕಾರಿನ ಹಿಂದೆ ಬೊಗಳುತ್ತಾ ಅಟ್ಟಿಸಿಕೊಂಡು ಬರುವ ನಾಯಿಯ ಮುಂದೆ ಕಾರು ನಿಲ್ಲಿಸಿ, ಅದನ್ನು ಡ್ರೈವ್ ಮಾಡಲು ಒಮ್ಮೆ ಕರೆಯಿರಿ ನೋಡೋಣ? ಅದು ಡ್ರೈವ್ ಮಾಡಲು ಬೊಗಳುತ್ತಿಲ್ಲ, ಡ್ರೈವ್ ಮಾಡುವವರನ್ನು ಕಂಡು ಬೊಗಳುತ್ತಿರುತ್ತದೆ ಅಷ್ಟೆ’!

Leave a Reply

Your email address will not be published. Required fields are marked *