Wednesday, 1st December 2021

ಕರೋನಾ ಮತ್ತು ಗ್ರಾಹಕ ಮನಸ್ಥಿತಿ

ಶಿಶಿರ್ ಹೆಗಡೆ ನ್ಯೂಜರ್ಸಿ

ಈ ಕರೋನಾ ಸಮಯದಲ್ಲಿ ಒಂದೊಂದು ದೇಶದ ನಗರಗಳಲ್ಲಿ ಪ್ರತ್ಯೇಕ ಕಾರಣದಿಂದ ಬೇರೆ ಬೇರೆ ವಸ್ತುಗಳು ಖಾಲಿಯಾದವು. ಕೆಲವು ವಸ್ತುಗಳು ಅಲ್ಲಿನ ಜನರ ಅಗತ್ಯತೆಗೆ ಅನುಗುಣವಾಗಿ ಮತ್ತು ಇನ್ನು ಕೆಲವು ವಸ್ತುಗಳು ಸುಳ್ಳು ಸುದ್ದಿಯಿಂದಾಗಿ ಹೀಗೆ ಒಂದೊಂದರ ಹಿಂದೆ ಒಂದೊಂದು ಕಥೆ. ಫೇಸ್ ಮಾಸ್‌ಕ್‌‌ಗಳು, ಹ್ಯಾಾಂಡ್ ಸ್ಯಾನಿಟೈಜರ್‌ಗಳು, ಧವಸ ಧಾನ್ಯ, ಬ್ರೆಡ್ ಬನ್, ಹಾಲು ಇವೆಲ್ಲ ವಸ್ತುಗಳನ್ನು ಖರೀದಿಸಿ ಶೇಖರಿಸುವುದು ಅರ್ಥವಾಗುತ್ತದೆ – ವುಹಾನ್‌ನ ರೀತಿ ಲಾಕ್ ಡೌನ್ ಸ್ಥಿತಿ ನಿರ್ಮಾಣವಾದರೆ ಎಂದು ತಯಾರಿ ನಡೆಸಿಕೊಳ್ಳುವುದರಲ್ಲಿ ಅರ್ಥವಿದೆ. ಆದರೆ ಕೆಲವು ಘಟನೆಗಳು ಮಾತ್ರ ಕನ್ಸೂಮರ್ ಮೆಂಟಾಲಿಟಿಯ ತಿಳಿವಳಿಕೆಯನ್ನೇ ಬುಡಮೇಲು ಮಾಡಿಬಿಟ್ಟವು.

ಮಾರ್ಚ್ ತಿಂಗಳ ಮೊದಲ ವಾರವಿರಬೇಕು. ಅಮೆರಿಕನ್ ಷೇರು ಮಾರುಕಟ್ಟೆೆ ಕುಸಿಯುತ್ತಿದ್ದ ಸುದ್ದಿಯನ್ನು ಕೇಳಿದ ನ್ಯೂಯಾರ್ಕ್, ನ್ಯೂಜರ್ಸಿಯಲ್ಲಿ ಜನರೆಲ್ಲಾ ಅಂಗಡಿಗಳಿಗೆ ನುಗ್ಗಿ ಇದ್ದಬದ್ದದ್ದನ್ನೆಲ್ಲ ಖರೀದಿಲು ಶುರುಮಾಡಿರುವುದು ಅಲ್ಲಲ್ಲಿ ವರದಿಯಾಗಿದೆ ಎಂದು ಸುದ್ದಿ ಬಿತ್ತರವಾಯಿತು. ‘ಜನ ಮರುಳೋ ಜಾತ್ರೆ ಮರುಳೋ’ – ಹೀಗೆ ಒಂದು ಸುದ್ದಿ ಹೊರಬರುತ್ತಿದ್ದಂತೆ, ‘ನಾವು ಹಾಗೆ ಖರೀದಿಸಿದಿದ್ದರೆ ಮೂರ್ಖರಾಗಬಹುದು – ಯಾವುದಕ್ಕೂ ನಾವೂ ಬೇಕಾದದ್ದನ್ನೆಲ್ಲ ಖರೀದಿಸಿಟ್ಟು ಕೊಂಡುಬಿಡೋಣ’ ಎಂದು ಈ ಅಂಗಡಿಗೆ ನುಗ್ಗುವವರ ಸಂಖ್ಯೆ ಸಂಜೆಯಾಗುವುದರೊಳಗೆ ಹತ್ತಾರು ಪಟ್ಟು ಹೆಚ್ಚಾಗಿತ್ತು. ಈ ಒಂದು ಆತಂಕದ ಸೆನ್‌ಸ್‌ ಅನ್ನು ವಾಹಿನಿಗಳು ಹೊರಹಾಕಿದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಬಹುತೇಕ ಅಂಗಡಿಗಳಲ್ಲಿ ನೀರಿನ ಬಾಟಲಿಗಳು, ಟಾಯ್ಲೆಟ್ ಪೇಪರ್‌ಗಳು ಮತ್ತುಹ್ಯಾಾಂಡ್ ಸ್ಯಾನಿಟೈಜರ್ ಖಾಲಿಯಾಗಿದ್ದವು. ಜನರೇನು ಟಾಯ್ಲೆಟ್ ಪೇಪರ್‌ನಿಂದ ಕರೋನಾ ಕೊಲ್ಲುತ್ತಾರೆಯೇ ಎಂದು ನಾವು ತಮಾಷೆ ಮಾಡಿಕೊಂಡಿದ್ದೆವು. ಆ ದಿನ ಟಾಯ್ಲೆಟ್ ಪೇಪರ್ ಖರೀದಿಸಲು ಜನರು ಅಂಗಡಿಯಿಂದ ಅಂಗಡಿಗೆ ಅಕ್ಷರಶಃ ಓಡುತ್ತಿದ್ದರು. ಅಲ್ಲೆಲ್ಲೋ ಒಂದು ಅಂಗಡಿಯಲ್ಲಿ ಟಾಯ್ಲೆಟ್ ಪೇಪರ್ ಸಿಗುತ್ತಿದೆಯಂತೆ ಎಂದು ಗಾಳಿಸುದ್ದಿ ಸಿಕ್ಕರೆ ಆ ಅಂಗಡಿಗೆ ಲಗ್ಗೆಯಿಡುತ್ತಿದ್ದರು. ತಿನ್ನುವ ಆಹಾರ ಸಾಮಗ್ರಿಗಳು ಎಲ್ಲಿಯೂ ಖಾಲಿಯಾಗಿರಲಿಲ್ಲ ಆದರೆ ಟಾಯ್ಲೆಟ್ ಪೇಪರ್ ಮಾತ್ರ ಕೆಲವು ಅಂಗಡಿಗಳು ರೇಷನ್ ಅಂಗಡಿಯಂತೆ ಒಬ್ಬರಿಗೆ ಇಂತಿಷ್ಟು ಎಂದು ನಿರ್ಬಂಧಿಸಬೇಕಾಯಿತು. ಹಿಂದೆ ‘ಸ್ಯಾಾಂಡಿ’ ಚಂಡಮಾರುತದ ಸಮಯದಲ್ಲಿ ಅಗತ್ಯ ವಸ್ತುಗಳೇ ಸಿಗದೇ ನ್ಯೂಯಾರ್ಕ್, ನ್ಯೂಜರ್ಸಿಯ ಜನರು ವಾರಗಟ್ಟಲೆ ಪರದಾಡಿದ್ದರು. ಈ ಕಾರಣಕ್ಕೋ ಏನೋ, ಒಂದು ಮುಂದೆ ಬರುವ ದುರಂತದ ಗಾಳಿಗೆ ಆ ದಿನ ಎಲ್ಲರೂ ಅಂಗಡಿಗಳಿಗೆ ನುಗ್ಗಿದ್ದರು. ಆದರೆ ಜನರೆಲ್ಲಾ ಈ ಟಾಯ್ಲೆಟ್ ಪೇಪರ್‌ಗೆ ಮಾತ್ರ ಈ ಪರಿಯಲ್ಲಿ ಮಹತ್ವ ಕೊಟ್ಟದ್ದು- ಖರೀದಿಸಿದ್ದು ಏಕೆ ಎಂಬುದಕ್ಕೆ ಒಂದು ಸಮಂಜಸ ಕಾರಣ ಇನ್ನೂ ಸಿಕ್ಕಿಲ್ಲ. ಅಮೆರಿಕನ್ನರಿಗೆ ಅಂಥದ್ದೊಂದು ಸಂದರ್ಭ ಬಂದರೆ ನೀರಿನಲ್ಲಿ ತೊಳೆದುಕೊಳ್ಳುವ ಸಾಧ್ಯತೆಯ ಬಗ್ಗೆ ಅಂದಾಜೇ ಇಲ್ಲವೆನಿಸಿತ್ತು!

ಬಹಳಷ್ಟು ದೇಶಗಳಲ್ಲಿ ಬಿಯರ್, ವಿಸ್ಕಿ ಮೊದಲಾದ ಮದ್ಯಪಾನಗಳು ಕರೋನಾ ಲಾಕ್ ಡೌನ್ ತಮ್ಮ ದೇಶದಲ್ಲೂ ಆಗುತ್ತದೆಯಂತೆ ಎಂಬ ಗಾಳಿ ಸುದ್ದಿಯ ಸಂದರ್ಭದಲ್ಲೇ ಖಾಲಿಯಾಗಿದ್ದವು. ನೀರು – ಆಹಾರಕ್ಕಿಿಂತ ಮೊದಲು ಕೆನಡಾ, ಆಸ್ಟ್ರೇಲಿಯಾ, ಐರ್ಲ್ಯಾಾಂಡ್ ಮೊದಲಾದ ದೇಶಗಳಲ್ಲಿ ‘ಎಣ್ಣೆ’ ಖಾಲಿಯಾಯಿತು. ಮೆಕ್ಸಿಕೋದ ಕರೋನಾ ಎಂಬ ಬಿಯರ್ ಉತ್ತರ ಅಮೆರಿಕದಲ್ಲಿ ಬಹುಜನಪ್ರಿಯ. ಈ ಬಿಯರ್ ಅನ್ನು ಆರಾಧಿಸುವವರೇ ಮೆಕ್ಸಿಕೋದಲ್ಲಿದ್ದಾರೆ. ಅವರಿಗೆ ಕರೋನಾ ಬಿಯರ್ ಎಂದರೆ ಪ್ರಾಣ. ಬಿಯರ್ ನಮ್ಮ ಧರ್ಮ ಮತ್ತು ಕರೋನಾ ಬೀಯರ್ ದೇವರು ಎನ್ನುವ ಹತ್ತಾರು ಹಾಡುಗಳು ಮೆಕ್ಸಿಕೋದಲ್ಲಿ ಜನಪ್ರಿಯ – ಅಷ್ಟು ಅಚ್ಚುಮೆಚ್ಚಿನ ಬೀಯರ್ ಕರೋನಾ. ಈ ಕರೋನಾ ಸಾಂಕ್ರಾಮಿಕದ ಸಮಯದಲ್ಲಿ ಕರೋನಾ ಬೀಯರ್‌ನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ಮೆಕ್ಸೋಕೋದಲ್ಲಿ ಮೊದಲು ಸುಳ್ಳು ಸುದ್ದಿ ಹರಡಿತು. ಈ ಸಮಯದಲ್ಲಿ ಅಲ್ಲಿನವರೆಲ್ಲ ಅಂಗಡಿಗಳಿಗೆ ಲಗ್ಗೆಯಿಟ್ಟು ಎಲ್ಲ ಕರೋನಾ ಬೀಯರ್ ಅನ್ನು ಖಾಲಿಮಾಡಿಬಿಟ್ಟರು. ಇದಾದ ಮಾರನೆಯ ದಿನವೇ ಎಲ್ಲ ಬೀಯರ್ ಉತ್ಪಾಾನೆಯನ್ನು ಮೆಕ್ಸಿಕೋದಲ್ಲಿ ನಿಲ್ಲಿಸಲಾಗುತ್ತದೆ ಎಂಬ ಸುದ್ದಿ ತೇಲಿ ಬಂತು. ಇಡೀ ದೇಶದ ಎಲ್ಲ ಅಂಗಡಿಗಳಲ್ಲಿನ ಬೀಯರ್‌ಗಳು ಖಾಲಿಯಾದವು. ಸೋಷಿಯಲ್ ಮೀಡಿಯಾದಲ್ಲಿ ಈ ನಿಮಿತ್ತ ಒಂದು ಚಳುವಳಿಯೇ ನಡೆಯಿತು. ಜನರೆಲ್ಲಾ ಸಿಟ್ಟಿಗೆದ್ದಿದ್ದರು. ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. *ConLaCervezaNo – ಸರಕಾರ ಬೀಯರ್ ನ ಸುದ್ದಿಗೆ ಬರಬಾರದು’ ಎನ್ನುವುದೇ ಟ್ರೆೆಂಡ್ ಆಯಿತು. ಕೊನೆಗೆ ಅಲ್ಲಿನ ಸರಕಾರ ವಾಹಿನಿಗಳ ಮುಂದೆ ಬಂದು ಈ ರೀತಿಯ ಯಾವುದೇ ನಿರ್ದೇಶನ ಸರಕಾರದಿಂದ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಬೇಕಾಯಿತು.ಇದಾದ ನಂತರ ಕೆಲವೇ ದಿನಗಳಲ್ಲಿ ಕರೋನಾ ಬೀಯರ್‌ನ ತಯಾರಿಕೆ ತಾತ್ಕಾಲಿಕವಾಗಿ ನಿಜವಾಗಿ ನಿಲ್ಲಿಸಲಾಗಿತ್ತು.

ಅಫಘಾನಿಸ್ತಾನದಲ್ಲಿ ಅದ್ಯಾರೋ ಬ್ಲಾಕ್ ಟೀ – ಚಹಾದಿಂದ ಕರೋನಾ ವೈರಸ್ ಸಾಯುತ್ತದೆ – ರೋಗ ಗುಣಮುಖವಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದು ಕೂಡ ಒಂದೇ ದಿನದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಡಿತು. ಅಲ್ಲಿನ ಒಂದು ರಾಷ್ಟ್ರೀಯ ವಾಹಿನಿಯಲ್ಲಿ ಬಂದ ಒಬ್ಬ ಡಾಕ್ಟರ್ ಕೂಡ ಹೀಗೊಂದು ಸಾಧ್ಯತೆಯಿದೆ ಎಂದು ಹೇಳಿದ. ಒಂದು ಪತ್ರಿಕೆ ಕೂಡ ಇದು ಹೌದಂತೆ ಎಂದು ಪ್ರಕಟಿಸಿಬಿಟ್ಟಿತು. ಹೀಗಾಗಿದ್ದೇ ತಡ, ಚಹಾಪುಡಿ ಖರೀದಿಸಲು ನೂಕು ನುಗ್ಗಲು. ಇಡೀ ದೇಶದಲ್ಲಿನ ಬಹುತೇಕ ಅಂಗಡಿಗಳಲ್ಲಿನ ಚಹಾಪುಡಿ ಖಾಲಿಯಾದವು. ಕೆಲವು ಚಹಾ ಪುಡಿ ಕಂಪನಿಗಳು ದರವನ್ನು ಹೆಚ್ಚಿಗೆ ಮಾಡಿ ದುಡ್ಡುಮಾಡಿಕೊಂಡವು. ಇಂದಿಗೂ ಅಫಘಾನಿಸ್ತಾನದಲ್ಲಿ ಕರೋನಾ ಚಾಹಾ ಕುಡಿದರೆ ಹೋಗುತ್ತದೆ ಎಂದು ಬಹಳಷ್ಟು ಮಂದಿ ನಂಬಿದ್ದಾರಂತೆ.

ಟ್ಯುನೇಷಿಯಾದಲ್ಲಿ ಇದೆ ರೀತಿ ಬೆಳ್ಳುಳ್ಳಿ ಕರೋನಾಕ್ಕೆ ಪರಿಹಾರ ಎನ್ನುವ ಸುದ್ದಿ ಹಬ್ಬಿತ್ತು. ಕ್ರಮೇಣ ಎಲ್ಲರೂ ಬೆಳ್ಳುಳ್ಳಿ ಖರೀದಿಗೆ ಅಂಗಡಿಗಳಿಗೆ ಲಗ್ಗೆೆಯಿಟ್ಟರು. ಹಸಿ ಬೆಳ್ಳುಳ್ಳಿ ತಿಂದರೆ ಕರೋನಾ ಬರುವುದಿಲ್ಲವಂತೆ ಎಂದು ಬೆಳ್ಳುಳ್ಳಿ ತಿಂದಿದ್ದೇ ತಿಂದಿದ್ದು. ಇದರಿಂದ ಕೊರೋನಾ ಸತ್ತಿತೋ ಇಲ್ಲವೇ, ಜನರು ಬಾಯಿ ವಾಸನೆಯಿಂದಾಗಿ ಸೋಷಿಯಲ್ ಡಿಸ್ಟೆೆನ್‌ಸ್‌ ಹೆಚ್ಚಾಗಿರಬಹುದು ಅಷ್ಟೇ.
ಇನ್ನು ಶ್ರೀಲಂಕಾದಲ್ಲಿ ಇನ್ನೊೊಂದು ಕಥೆ. ಅಲ್ಲಿ ಸಕ್ಕರೆ ಸಿಗುತ್ತಿಲ್ಲ. ಎಲ್ಲ ಅಂಗಡಿಗಳಲ್ಲೂ ಸಕ್ಕರೆ – ಬೆಲ್ಲ ಖಾಲಿ. ಇದಕ್ಕೆ ಕಾರಣ ಅಲ್ಲಿನ ಸರಕಾರ ಕರೋನಾ ಲಾಕ್ ಡೌನ್‌ನ ಜತೆ ಜತೆ ಅಲ್ಲಿನ ಮದ್ಯ ಮಾರಾಟವನ್ನು ನಿರ್ಬಂಧಿಸಿದ್ದು. ಈ ಮದ್ಯ ಮಾರಾಟ ನಿಷೇಧದಿಂದಾಗಿ ಶ್ರೀಲಂಕಾದಲ್ಲಿ ಎಲ್ಲಿಲ್ಲದ ಕಳ್ಳಭಟ್ಟಿ ದಂಧೆ ಶುರುವಾಗಿದೆ. ಶ್ರೀಲಂಕಾದ ‘ಕಸಿಪ್ಪು’ ಎನ್ನುವ ಮದ್ಯ ಮನೆಯಲ್ಲಿಯೇ ಜನರು ತಯಾರಿಸಿಕೊಳ್ಳುತ್ತಿದ್ದು ಅದಕ್ಕೆ ಬೇಕಾಗುವ ಅಗತ್ಯ ವಸ್ತುಗಳೆಂದರೆ ಸಕ್ಕರೆ/ ಬೆಲ್ಲ ಮತ್ತು ಈಸ್‌ಟ್‌. ಹೀಗಾಗಿ ಸಕ್ಕರೆಯನ್ನು ಜನರೆಲ್ಲಾ ಮುಗಿಬಿದ್ದು ಖರೀದಿಸಿದ್ದು ರಾಷ್ಟ್ರೀಯ ಗೋಧಾಮಿನಲ್ಲಿ ಕೂಡ ಸಕ್ಕರೆ ದಾಸ್ತಾನು ಖಾಲಿಯಾದ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಗಳಲ್ಲಿ ಕೆಲವು ಮಂದಿಯ ಮೂರ್ಖತನ ಅಥವಾ ಸುಳ್ಳು ಸುದ್ದಿಹರಡಿ ನಿರ್ಮಾಣವಾಗಿದ್ದಾದರೆ ಇನ್ನು ಕೆಲವು ಆಯಾ ದೇಶಗಳ ಜನರ ಅಗತ್ಯತೆಯನ್ನು ಮರುವ್ಯಾಖ್ಯಾನಿಸಿವೆ.