Wednesday, 30th September 2020

ಕೃಷಿಕರ ಕೋಟಾಗೆ ಪ್ರವೇಶಾತಿ ದಾಖಲೆಗಳ ಪರಿಶೀಲನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ  ಕರೋನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕೃಷಿ, ತೋಟಗಾರಿಕೆ ಮತ್ತು ಪಶು ಸಂಗೋಪನಾ ವಿಶ್ವ ವಿದ್ಯಾನಿಲಯಗಳು ಪ್ರಸಕ್ತ 2020-21ನೇ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅಭ್ಯರ್ಥಿಗಳು ಕೃಷಿಕರ ಕೋಟಾದಡಿಯಲ್ಲಿ ಸಲ್ಲಿಸುವ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸುವ ಬದಲಿಗೆ ಈ ಬಾರಿ ಆನ್ ಲೈನ್ ಮೂಲಕ ಪರಿಶೀಲಿಸುವುದಾಗಿ ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆಗೆ ಆಯ್ಕೆ ಬಯಸಿರುವರೋ, ಅದೇ ಕೇಂದ್ರದಲ್ಲಿ ಸಂಬಂಧಪಟ್ಟ ವಿಶ್ವ ವಿದ್ಯಾನಿಲಯಗಳಿಂದ ನಿಯೋಜಿಸಿರುವ ಸಮಿತಿಗಳೇ ಅರ್ಜಿಗಳ ಪರಿಶೀಲನೆ ಮಾಡುತ್ತವೆ ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
ಆನ್ ಲೈನ್ ಅರ್ಜಿ ಪರಿಶೀಲನೆಗೆ ಸಲ್ಲಿಸಬೇಕಿರುವ ದಾಖಲಾತಿಗಳು : ಸಿ.ಇ.ಟಿ.ಪರೀಕ್ಷಾ ಪ್ರವೇಶ ಪತ್ರ, ವ್ಯವಸಾಯಗಾರರ ಪ್ರಮಾಣಪತ್ರ(ಅವಿಭಾಜ್ಯ ಕುಟುಂಬವಾಗಿದ್ದಲ್ಲಿ  ಕಂದಾಯ ಇಲಾಖೆಯಿಂದ ನೀಡಲಾಗುವ ವಂಶ ವೃಕ್ಷ ಪ್ರಮಾಣಪತ್ರ), ಕೃಷಿ ಆದಾಯ ಪ್ರಮಾಣಪತ್ರ, ಕೃಷಿಯ ಜತೆಗೆ ಸರಕಾರದ ಅಥವಾ ತತ್ಸಮಾನ ಸೇವೆಯಲ್ಲಿದ್ದಲ್ಲಿ ವೇತನ ಪ್ರಮಾಣ ಪತ್ರ, ಸ್ವಂತ ವ್ಯವಹಾರವಿದ್ದಲ್ಲಿ ಅವರ ಖಾಸಗಿ ವೃತ್ತಿಯ ಆದಾಯದ ಪ್ರಮಾಣಪತ್ರ, ಅಫಿಡವಿಟ್(8ಇ, 8ಈ, 8ಉ, ಒಟ್ಟು ಆದಾಯಕ್ಕೆ ಸಂಬಂಧಿಸಿದಂತೆ ಮಾತ್ರ), ಈ ಎಲ್ಲಾ ದಾಖಲೆಗಳನ್ನು. ನಿಗದಿತ  ವಿಶ್ವವಿದ್ಯಾನಿಲಯಗಳ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣಗಳ ಕೊಂಡಿಗಳಲ್ಲಿ ಲಾಗ್ ಇನ್ ಮಾಡಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ದಾಖಲಾತಿಗಳ ಆನ್ ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ಅರ್ಜಿ ಶುಲ್ಕ ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ 200ರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ ರು.100 ಆಗಿದ್ದು, ಶುಲ್ಕವನ್ನು ಜಾಲತಾಣದಲ್ಲಿ ನೀಡಿರುವ ಆನ್ ಲೈನ್ ಮೂಲಕ ಕಟ್ಟಬೇಕಾಗಿದೆ. ಅಭ್ಯರ್ಥಿಗಳು ಶುಲ್ಕ ಪಾವತಿಸಿದ ನಂತರವೇ ಶುಲ್ಕದ ರಸೀದಿ ಹಾಗೂ ದಾಖಲಾತಿಗಳನ್ನು ಒದಗಿಸಿದ ಮಾಹಿತಿಯನ್ನು ಡೌನ್ ಮಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ  ಸಮಿತಿಗೆ ದಾಖಲಾತಿ ಪರಿಶೀಲನೆ
ಸಾಧ್ಯವಾಗುವುದಿಲ್ಲ.
ಪರಿಶೀಲನೆ ಪ್ರಕ್ರಿಯೆಯ ವೇಳಾಪಟ್ಟಿ : ಅಭ್ಯರ್ಥಿಗಳು ಆ.11 ರ ಮಧ್ಯಾಹ್ನ 2 ಗಂಟೆಯ ನಂತರದಿಂದ ಆರಂಭಗೊಂಡು ದಿನಾಂಕ ಆ.18ರ  ಮಧ್ಯರಾತ್ರಿ 12 ಗಂಟೆಯವರೆಗೆ ದಾಖಲಾತಿಗಳನ್ನು ಆನ್ ಲೈನ್ ಮೂಲಕ ಅಪ್ ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆಯಾ ವಿಶ್ವವಿದ್ಯಾನಿಲಯಗಳು ನಿಯೋಜಿಸಿರುವ ಸಮಿತಿಯ ಸದಸ್ಯರು ಆ.19. ರಿಂದ ಆ.22 ರವರೆಗೆ ಆನ್ ಲೈನ್ ಮೂಲಕ ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಾರೆ.
ಅಲ್ಲದೆ ಕೃಷಿ ಕೋಟಾದಡಿಯಲ್ಲಿ ಪರಿಗಣಿಸಲಾಗುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲಾ 15 ಕೇಂದ್ರಗಳು ಕುಲಸಚಿವರು, ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು ಇವರಿಗೆ ಆ.24 ರ ಒಳಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ  ಕುಲಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *