Friday, 30th September 2022

ತಂಬಾಕು ಮಾರಾಟ: 65 ಪ್ರಕರಣ ದಾಖಲು

ಚಿತ್ರದುರ್ಗ:

ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ನಿಷೇಧ ಜಾರಿಗೊಳಿಸಿದ್ದು, ಈ ಆದೇಶ ಪಾಲನೆ ಕುರಿತಂತೆ ನಿಗಾ ವಹಿಸಲು ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲಿನ ದಾಳಿ ಹೆಚ್ಚಿಸಲಾಗುವುದು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹಾಗಾರ ಬಿ.ಎಂ ಪ್ರಭುದೇವ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧದ ಆದೇಶ ಉಲ್ಲಂಘನೆಗೆ ಸಂಬಂಧಿಸಿದಂತೆ ನಗರದ ಗೋಪಾಲಪುರ ರಸ್ತೆ, ಜೋಗಿಮಟ್ಟಿ ರಸ್ತೆಯ ವಿವಿಧ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡವು ದಾಳಿ ನಡೆಸಿ, 65 ಪ್ರಕರಣಗಳನ್ನು ದಾಖಲಿಸಿ 6,850 ದಂಡ ವಿಧಿಸಿದೆ.

ಕೋವಿಡ್ ಸೋಂಕು ಹರಡದಂತೆ ಎಚ್ಚರವಹಿಸಲು ಈಗಾಗಲೇ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದ್ದು, ಉಲ್ಲಂಘನೆ ವಿರುದ್ಧ ಗರಿಷ್ಠ 1 ಸಾವಿರ ರೂ. ದಂಡ ವಿಧಿಸಲು ಆದೇಶಿಸಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ತಂಬಾಕು ಹಾಗೂ ಪಾನ್‍ಮಸಾಲ, ಜರ್ದಾ, ಖೈನಿ ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ.
ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹಾಗಾರ ಬಿ.ಎಂ ಪ್ರಭುದೇವ್, ಕೆಎಸ್‍ಎಚ್‍ಎಸ್‍ಅರ್‍ಸಿ ಜಿಲ್ಲಾ ಸಂಯೋಜಕ ಕರಕಪ್ಪ, ಪೊಲೀಸ್ ಇಲಾಖೆಯ ಸಿಹೆಚ್‍ಸಿ ಗೋಪಾಲಸ್ವಾಮಿ ಇದ್ದರು.