Tuesday, 29th September 2020

ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ

ಬೀದರ

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕ್ ಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲ ಖಾಸಗಿ ಕ್ಲಿನಿಕ್‍ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಎಚ್.ಆರ್.ಮಹಾದೇವ್ ಅವರು ಡಿಎಚ್‍ಓ ಅವರಿಗೆ ಸೂಚಿಸಿದರು.

ಮಾ.29ರಂದು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಅವರು ವಿಡಿಯೋ ಸಂವಾದ ನಡೆಸಿದರು.

ಕೋರೊನಾ ವೈರಾಣು ತೀವ್ರ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ವಹಿಸುವ ನಿಟ್ಟಿನಲ್ಲಿ ಜನತೆಗೆ ಈಗ ಸಕಾಲಕ್ಕೆ ಚಿಕಿತ್ಸೆ ಕೊಡಬೇಕಿದೆ. ಹೀಗೆ ತಿಳಿಸಿದಾಗ್ಯೂ ಖಾಸಗಿ ಆಸ್ಪತ್ರೆಗಳು ಮುಚ್ಚಿದಲ್ಲಿ ಅಂತಹ ಖಾಸಗಿ ಕ್ಲಿನಿಕ್‍ಗಳ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿದೇಶ, ಹೊರರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನದಲ್ಲಿರುವವರತ್ತ ಸರಿಯಾದ ರೀತಿಯಲ್ಲಿ ಗಮನ ಕೊಡಬೇಕು ಎಂದು ಎಲ್ಲ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಸಾಮಾನ್ಯ ರೋಗಿಗಳು ಬಂದರೂ ಕೂಡ ಅಂತರ ಕಾಯ್ದುಕೊಂಡು ಅವರಿಗೆ ತಪಾಸಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ವೈದ್ಯಾಧಿಕಾರಿಗಳಿಗೆ ಸಲಹೆ ಮಾಡಿದರು.

ಆಯಾ ತಾಲೂಕು ಪ್ರದೇಶಗಳಲ್ಲಿ ಕಂಡು ಬರುವ ಬಿಕ್ಷುಕರು, ನಿರ್ಗತಿಕರು, ಅನಾಥರು, ಮಾನಸಿಕ ಅಸ್ವಸ್ಥರಿಗೆ ಊಟದ ವ್ಯವಸ್ಥೆಯನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಮಾಡಬೇಕು. ಗ್ರಾಮಮಟ್ಟದಲ್ಲಿ ಕೂಡ ಈ ಕಾರ್ಯ ನಡೆಯಬೇಕು. ಗ್ರಾಮಗಳಲ್ಲಿ ಇರುವ ಕಡುಬಡವರು, ನಿರ್ಗತಿಕರನ್ನು ಗುರುತಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಇರುವ ಕಿರಾಣಿ, ತರಕಾರಿ ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ನೀಡುತ್ತಿರುವುದಾಗಿ ದೂರುಗಳು ಕೇಳಿ ಬಂದಿದ್ದು, ಅಂತಹ ಅಂಗಡಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚಿ ಕಾನೂನುಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಸೀಲ್ದಾರ ಅವರಿಗೆ ಸೂಚಿಸಿದರು.

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ರಸ್ತೆ ಮೇಲೆ ಮುಳ್ಳು ಮತ್ತು ಇನ್ನೀತರ ವಸ್ತುಗಳನ್ನು ಹಾಕಿ ರಸ್ತೆ ಬಂದ್ ಮಾಡಿರುವುದು ಜೊತೆಗೆ ಗ್ರಾಮಸ್ಥರು ಗುಂಪಾಗಿ ಸೇರುವುದು ಕಂಡು ಬರುತ್ತಿದೆ. ಅಧಿಕಾರಿಗಳ ವಾಹನಗಳನ್ನು ಗ್ರಾಮದೊಳಗಡೆ ಬಿಡುತ್ತಿಲ್ಲ. ಇದರಿಂದ ಕರ್ತವ್ಯನಿರತ ಅಧಿಕಾರಿಗಳಿಗೆ ತೊಂದರೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದನ್ನು ನಿರ್ಬಂಧಿಸಬೇಕು ಎಂದು ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕಾರ್ಯನಿರತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡುಬೇಕು ಎಂದು ಜಿಲ್ಲಾಧಿಕಾರಿಗಳು ತಹಸೀಲ್ದಾರ ಅವರಿಗೆ ಸೂಚಿಸಿದರು. ಇದಕ್ಕಾಗಿ ಚೆಕ್‍ಪೋಸ್ಟ ಹತ್ತಿರ ಇರುವ ವಸತಿ ನಿಲಯಗಳು ಮತ್ತು ಅಂಗನವಾಡಿಗಳನ್ನು ಗುರುತಿಸಿ ಸಿಇಓ ಅವರಿಗೆ ಮಾಹಿತಿ ನೀಡಿ, ಊಟದ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದರು.

ಈ ವೇಳೆ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕರಾದ ಡಾ.ಶಿವಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ನಗರಸಭೆ ಪೌರಾಯುಕ್ತರಾದ ಬಸಪ್ಪ, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ, ಇಂದುಮತಿ ಪಾಟೀಲ, ಜಿಲ್ಲಾ ಕಣ್ಗಾವಲು ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಕೃಷ್ಣಾರೆಡ್ಡಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *