Sunday, 25th September 2022

ದ್ವಿಚಕ್ರ ವಾಹನದಿಂದ ಬಿದ್ದು ಆಶಾ ಕಾರ್ಯಕರ್ತೆ‌ ಸಾವು: 50 ಲಕ್ಷ ರು. ಪರಿಹಾರಕ್ಕೆ ಪ್ರಕ್ರಿಯೆ ಜಾರಿ

ಕಲಬುರಗಿ:

ಕೊರೋನಾ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಜೇವರ್ಗಿ ತಾಲೂಕಿನ ಮಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಾಗಣಗೇರಾ ಗ್ರಾಮದ 42 ವರ್ಷದ ಆಶಾ ಕಾರ್ಯಕರ್ತೆ ಶಾರದಾ ಗಂಡ ನಿಂಗಪ್ಪ ಅವರು ಅಯಾ ತಪ್ಪಿ ದ್ವಿಚಕ್ರ ವಾಹನದಿಂದ ಬಿದ್ದು ಸಾವನಪ್ಪಿದ್ದು, ಇವರಿಗೆ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ರೂ. ವಿಮಾ ಪರಿಹಾರ ನೀಡಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದ್ದಾರೆ.

ಶಾರದ ಗಂಡ ನಿಂಗಪ್ಪ ಅವರು ಮೇ-15 ರಂದು ಎಂದಿನಂತೆ ಮಾಗಣಗೇರಾದಿಂದ ಕೆಲಸದ ನಿಮಿತ್ಯ ಜೇವರ್ಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ತೆರಳುವ ಸಂದರ್ಭದಲ್ಲಿ ಬೆಳಿಗ್ಗೆ 8.30 ಗಂಟೆಗೆ ಕೆಲ್ಲೂರ ಗ್ರಾಮದ ಹತ್ತಿರ ಅಯಾ ತಪ್ಪಿ ವಾಹನದಿಂದ ಕೆಳಗೆ ಬಿದ್ದು, ತಲೆಗೆ ತೀವ್ರ ಗಾಯವಾಗಿರುತ್ತದೆ. ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಸಾವನಪ್ಪಿರುತ್ತಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ವಿಮಾ ಯೋಜನೆಯಡಿ ಸಿಗಬಹುದಾದ 50 ಲಕ್ಷ ರೂ. ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ‌ ಮನವಿ ಸಲ್ಲಿಸಲಾಗುವುದು ಎಂದು ಡಾ.ಎಂ.ಎ.ಜಬ್ಬಾರ ತಿಳಿಸಿದ್ದಾರೆ.