Wednesday, 30th September 2020

ನಮ್ಮ ಚಿಂತನೆಗಳು ಧರ್ಮದ ಆಧಾರವನ್ನು ಒಳಗೊಂಡಿರಬೇಕು: ಆರ್. ಗಿರೀಶ್

ಹಾಸನ:

ನಮ್ಮ ಚಿಂತನೆಗಳು ಧರ್ಮದ ಆಧಾರವನ್ನು ಒಳಗೊಂಡಿರಬೇಕು ಜೊತೆಗೆ ಯಾವುದೇ ಕೆಲಸ ಮಾಡಿದರೂ ನ್ಯಾಯಯುತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸರಳವಾಗಿ ಮತ್ತು ಸಾಂಕೇತಿಕವಾಗಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಆಚರಿಸಲಾದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಅಧರ್ಮ ತಾತ್ಕಾಲಿಕವಾಗಿ ಗೆಲುವಿನಂತೆ ಕಂಡರೂ ಅಂತಿಮವಾಗಿ ಗೆಲ್ಲುವುದು ಧರ್ಮವೇ ಎಂದು ಶ್ರೀಕೃಷ್ಣ ತೋರಿಸಿದನು ಎಂದರು.
ರಾಮಾಯಣ ಮಹಾಭಾರತಗಳಂತಹ ಮಹಾಕಾವ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಲ್ಲಿಯ ಚಿಂತನೆಗಳಿಗೆ ಹೊರ ದೇಶಗಳು ಆಕರ್ಷಿತರಾಗಿ ಅವುಗಳನ್ನು ಅಳವಡಿಸಿಕೊಳ್ಳುತ್ತಿವೆ. ನಮ್ಮ ದೇಶದಲ್ಲಿ ನಮ್ಮದೇ ಆದ ಚಿಂತನೆಗಳು ಸರ್ವಕಾಲಿಕವಾಗಿದ್ದು, ಅವುಗಳನ್ನು ನಾವು ಅಳವಡಿಸಿಕೊಂಡು ಶ್ರೀಕೃಷ್ಣನಂತೆ ಧರ್ಮದ ಪರವಾಗಿ ನಿಲ್ಲಬೇಕು ಎಂದರು.

ಮಹಾಭಾರತ ಕಾವ್ಯವು ಜೀವನದ ಬೆಲೆಯನ್ನು ತಿಳಿಸುವಂತಹದು. ಅದರಲ್ಲಿ ಒಂದೊಂದು ಪಾತ್ರಗಳು ಸಮಾಜದ ಅಂಗವನ್ನು ಪ್ರತಿನಿಧಿಸುತ್ತವೆ. ಕುರುಕ್ಷೇತ್ರ ಸಂದರ್ಭದಲ್ಲಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಮಾಡಿದ ಉಪದೇಶಗಳು ಭಾಗವತವಾಗಿ, ಗೀತೆಗಳಾಗಿ ಎಲ್ಲರ ಗಮನ ಸೆಳೆದಿದ್ದು, ಇದರಿಂದ ಧರ್ಮದ ಪರವಾಗಿ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ಯಾದವ ಸಮಾಜದ ಪ್ರಮುಖರಾದ ರಾಘವೇಂದ್ರ ಡಿ.ಕೆ. ಅವರು ಮಾತನಾಡಿ ಶ್ರೀಕೃಷ್ಣ ಜಗತ್ತಿನಲ್ಲಿ ಒಂದು ಜೀವಿ ಹೇಗೆ ಬದುಕಬೇಕು ಎಂದು ಮಾನವ ಧರ್ಮ ಕುರಿತು ಹೇಳಿದ್ದು, ನ್ಯಾಯ ಧರ್ಮ, ಸತ್ಯ, ಅಸತ್ಯಗಳನ್ನು ಅರಿತು ಜಗತ್ತಿನ ಶಾಂತಿ ಸ್ಥಾಪನೆಗೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದ್ದು ಅದರಂತೆ ನಾವು ನಡೆಯಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುದರ್ಶನ್ ಅವರು ಮಾತನಾಡಿ ಸಮಾಜದಲ್ಲಿ ಕೆಟ್ಟದ್ದನ್ನು ಅಂತ್ಯ ಮಾಡಲು ಕೃಷ್ಣನಂತಹವರು ಹಾಗೂ ತಮ್ಮ ಸ್ವಾರ್ಥಕ್ಕಾಗಿ ಎಲ್ಲರನ್ನು ನಾಶ ಮಾಡುವ ಕಂಸರಂತಹವರು ಇದ್ದಾರೆ ಹಾಗಾಗಿ ನಮಗೆ ಬೇಕಾದ ಉತ್ತಮ ಮಾರ್ಗಗಳನ್ನು ಆಯ್ಕೆ ಮಾಡಿಕೊಂದು ನಡೆದಲ್ಲಿ ಉತ್ತಮ ಸಮಾಜ ರೂಪಿಸಬಹುದಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
**********

Leave a Reply

Your email address will not be published. Required fields are marked *