Thursday, 2nd February 2023

ನಮ್ಮ ನಾಡಿನಲ್ಲೂ ಹುಟ್ಟಿ ಬಾ ಗ್ರೆಟಾ ಥನ್‍ಬರ್ಗ್ ಅಥವಾ ಪರಿಸರ ದಿನದ ಪ್ರಲಾಪವು

ಶಶಿಧರ ಹಾಲಾಡಿ
—–
ಮತ್ತೊಂದು ವಿಶ್ವ ಪರಿಸರ ದಿನ ಬಂದಿದೆ. ನಮ್ಮ ಪರಿಸರವನ್ನು ಈಗ ಇರುವಂತೆಯಾದರೂ ಉಳಿಸಿಕೊಳ್ಳದಿದ್ದರೆ, ಮನುಕುಲವೇ ಮುಂದೆ ಅಪಾಯಕ್ಕೆ ಸಿಲುಕಬಹುದು ಎಂದು ಪ್ರಾಜ್ಞರು, ವಿಜ್ಞಾನಿಗಳು, ಚಿಂತಕರು, ಪರಿಸರ ತಜ್ಞರು ಪದೇ ಪದೇ ಎಚ್ಚರಿಸಿದ್ದರಿಂದಾಗಿ, ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಎಲ್ಲರೂ ಪಣತೊಡಬೇಕೆಂದು ಕರೆ ಕೊಡುವ ದಿನ ಇದು. ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನವನ್ನು ನೆನಪಿಸಿಕೊಂಡು, ಶಾಲೆಗಳಲ್ಲೋ, ಕಚೇರಿಗಳಲ್ಲೋ, ಇನ್ನೆಲ್ಲೋ ಪುಟ್ಟ ಸಭೆಗಳನ್ನು ನಡೆಸಿ, ಮರಗಿಡಗಳಿಂದ ಮತ್ತು ಪರಿಸರದಿಂದ ನಮಗೆ ದೊರೆಯುತ್ತಿರುವ ಅಮೂಲ್ಯ ಕೊಡುಗೆಯನ್ನು ಕೊಂಡಾಡುವ ದಿನ ಇದು. ಆದರೆ ನಮಗೆ, ಅಂದರೆ ಈಗಿನ ಆಧುನಿಕ ಮಾನವನಿಗೆ ನಿಜವಾಗಿಯೂ ಪರಿಸರವನ್ನು ರಕ್ಷಿಸಬೇಕೆಂಬ ಕಳಕಳಿ ಇದೆಯೆ? ಪರಿಸರ ದಿನವು ಪ್ರತಿವರ್ಷ ಕೆಲವರು ಆವರಿಸುವ ವಾರ್ಷಿಕ ತಿಥಿಯ ಸ್ವರೂಪವನ್ನು ಪಡೆದುಕೊಂಡಿದೆಯೆ?
ನಮ್ಮ ಪರಿಸರವು ಸುಸ್ಥಿತಿಯಲ್ಲಿರಲು, ಸಮತೋಲನದಲ್ಲಿರುವ ಒಟ್ಟು ಪ್ರದೇಶದ ಶೇ.33ರಷ್ಟು ಕಾಡು ಇರಬೇಕೆಂಬ ಒಂದು ವೈಜ್ಞಾನಿಕ ಲೆಕ್ಕಾಚಾರವಿದೆ. ಆದರೆ ನಮ್ಮ ದೇಶದಲ್ಲಿ ಕೆಲವು ಪ್ರದೇಶದಲ್ಲಿ ಶೇ.10ಕ್ಕಿಂತ ಕಡಿಮೆ ಕಾಡಿದೆ. ಜತೆಗೆ, ಈ ಕಾಡುಪ್ರದೇಶದ ಉಪಗ್ರಹ ಅಂದಾಜು ಲೆಕ್ಕಾಚಾರದ ವಿಧಾನವೇ ವಿವಾದಿತ – ಕೃತಕ ಕಾಡನ್ನು ಸಹ ಸ್ವಾಭಾವಿಕ ಕಾಡು ಎಂದು ನಮ್ಮ ಉಪಗ್ರಹಗಳು ತೋರಿಸುತ್ತವೆ ಎಂಬ ಆಪಾದನೆ ಇದೆ. ನಾವು ಉಸಿರಾಡುತ್ತಾ, ಜೀವದಿಂದ ಇರಲು ಅಗತ್ಯ ಎನಿಸಿರುವ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಮರಗಿಡಗಳ ಪ್ರಮಾಣ ಕಡಿಮೆಯಾದರೆ, ಜನಜೀವನ ದುರ್ಭರವಾಗುತ್ತದೆಂಬ ಸ್ಪಷ್ಟ ತಿಳಿವಳಿಕೆ ಈಗಿನ ತಲೆಮಾರಿಗೆ ಇದೆ. ಪರಿಸರ ರಕ್ಷಣೆ ಎಂದರೆ ಕೇವಲ ಕಾಡು ಮಾತ್ರವಲ್ಲ, ಬಯಲು ನಾಡು, ಹುಲ್ಲುಗಾವಲು, ನದಿ, ಸಮುದ್ರ ತೀರ ಎಲ್ಲವನ್ನೂ ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯ ಎಂಬ ಅರಿವು ಸಹ ನಮಗಿದೆ. ಆದರೂ, ಪರಿಸರವನ್ನು ಮತ್ತು ಕಾಡುಪ್ರದೇಶವನ್ನು ಕ್ರಮೇಣ ಕಡಿಮೆ ಮಾಡುವ ‘ಮಹಾ ಅಭಿಯಾನ’ವನ್ನು ನಾವು ಈ ಶತಮಾನದಲ್ಲೂ ಮುಂದುವರಿಸಿದ್ದೇವೆ ಎಂಬ ಕಟುವಾಸ್ತವವನ್ನು ನೋಡುವಾಗ, ವಿಶ್ವ ಪರಿಸರ ದಿನದ ಆಚರಣೆಗೂ, ವಾರ್ಷಿಕ ತಿಥಿಯ ಆಚರಣೆಗೂ ವ್ಯತ್ಯಾಸ ಇದೆ ಎನಿಸುತ್ತದೆಯೆ?

ಅಬ್ಬಬ್ಬ, ಪರಿಸರವನ್ನು ಹಾಳು ಮಾಡುವುದರಲ್ಲಿ ನಾಗರಿಕ ಮಾನವನು ತೋರುತ್ತಿರುವ ತರಾತುರಿ, ಚಾಣಕ್ಷತೆ, ತಂತ್ರಗಾರಿಕೆಯನ್ನು ಕಂಡರೆ, ಆ ನಿಸರ್ಗ ದೇವತೆಯೇ ಮೂಗಿನ ಮೇಲೆ ಬೆರಳಿಟ್ಟು, ಬೆರಗಾದಾಳು! ರಸ್ತೆಗೆ, ರೈಲು ಮಾರ್ಗಕ್ಕೆ, ಜಲಾಶಯಗಳಿಗೆ, ಮೆಟ್ರೋ ಕಾಮಗಾರಿಗೆ, ಬಗರ್‍ಹುಕುಂ ಸಾಗುವಳಿಗೆ, ಮೇಕೆ ಸಾಕಲು, ಆಧುನಿಕ ಎಂದು ಹಣೆಪಟ್ಟಿ ಪಡೆದಿರುವ ದೇಶದ ಜನರು ಸೇವಿಸುವ ಆಹಾರಕ್ಕಾಗಿ ದನ ಸಾಕಲು, ವಿದ್ಯುತ್ ತಂತಿ ಹಾಕಲು, ಗಣಿಗಾರಿಕೆಗೆ – ಹೀಗೆ ನಾನಾ ಕಾರಣಗಳಿಗಾಗಿ ನಾವು ಮಾಡುತ್ತಿರುವ ಪರಿಸರ ನಾಶ ಸ್ವಲ್ಪವೆ? ಆಧುನಿಕ ರೆಸಾರ್ಟ್ ನಿರ್ಮಾಣ, ವಾಣಿಜ್ಯ ಬೆಳೆ ಬೆಳೆಯಲು, ಗಾಂಜಾ ಬೆಳೆಯಲು, ಅಗತ್ಯಕ್ಕಿಂತ ವಿಶಾಲವಾದ ರಸ್ತೆ ಮತ್ತು ಮೈದಾನ ನಿಮಾಣಕ್ಕೆ – ಈ ರೀತಿಯ ನೆಪಗಳನ್ನು ಮುಂದೆಮಾಡಿಕೊಂಡು, ಕತ್ತರಿಸುತ್ತಿರುವ ಕಾಡಿನ ಪ್ರಮಾಣ ಸ್ವಲ್ಪವೆ? ದಟ್ಟ ಮರಗಿಡಗಳಿರುವ ನಿತ್ಯ ಹರಿದ್ವರ್ಣ ಕಾಡಿನ ಜತೆಯಲ್ಲೇ, ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ಆಸರೆ ನೀಡಿರುವ ಕುರುಚಲು ಕಾಡು, ಹುಲ್ಲುಗಾವಲು ಪ್ರದೇಶಗಳನ್ನು ಬರಡುಗೊಳಿಸದ ಪ್ರಮಾಣಕ್ಕೆ ಲೆಕ್ಕವುಂಟೆ? ದೊಡ್ಡ ಮರಗಿಡಗಳಂತೆಯೇ, ಮುಳ್ಳುಗಿಡಗಳು, ಹುಲ್ಲು, ಕಾಡುಗಿಡಗಳು ಸಹ ಈ ಪರಿಸರದ ಆರೋಗ್ಯ ಕಾಪಾಡಲು ತಮ್ಮದೇ ಕೊಡುಗೆ ನೀಡುತ್ತಿವೆ. ಆನೆ, ಹುಲಿಗಳಿಂತೆಯೇ, ಸಣ್ಣ ಪುಟ್ಟ ಜೀವಿಗಳಾದ ಕೆಂಜಳಿಲು, ಪೆಂಗೋಲಿನ್, ಮಂಗಟ್ಟೆ ಹಕ್ಕಿಗಳು ಸಹ ಈ ಇಕಾಲಜಿಯ ಸರಪಳಿಯಲ್ಲಿ ಅನನ್ಯ ಸ್ಥಾನ ಪಡೆದಿರುವುದು, ಇಂದು ನಮಗೆ ಹಿಂದಿಗಿಂತಲೂ ಹೆಚ್ಚು ಪರಿಚಿತ. ಈ ಇಕಾಲಜಿಯ ಸಮತೋಲಿತ ಸರಪಳಿಯಲ್ಲಿ ಒಂದೆರಡು ಗುಣುಸುಗಳನ್ನು ನಾವು ಹಾಳುಗೆಡವಿದರೂ, ಇಡೀ ಪರಿಸರಸವೇ ಸಮತೋಲನ ತಪ್ಪಬಹುದೆಂದು ಈ ತಲೆಮಾರಿಗೆ ಸ್ಪಷ್ಟವಾಗಿ ಗೊತ್ತು. ಇದೇ ರೀತಿ ನಮ್ಮ ಪರಿಸರವನ್ನು ಹಾಳುಮಾಡುತ್ತಾ ಹೋದರೆ, ಮುಂದೊಂದು ದಿನ ನಮ್ಮ ಈ ಸುಂದರ ವಾಸಸ್ಥಳವು, ವಾಸಯೋಗ್ಯ ಎನಿಸುವುದಿಲ್ಲ ಎಂಬ ಕಟು ಸತ್ಯವನ್ನು ಪುರಾವೆ ಸಹಿತ ನಮ್ಮ ವಿಜ್ಞಾನಿಗಳು ವಿಶದಪಡಿಸಿದ್ದಾರೆ. ಅಲ್ಪಕಾಲೀನ ಲಾಭಕ್ಕಾಗಿ ಈಗಿನ ಪರಿಸರವನ್ನು ಇನ್ನಷ್ಟು ಹಾಳುಗೆಡವಿದರೆ, ಈಗಿರುವುದನ್ನು ರಕ್ಷಿಸಿಕೊಳ್ಳದಿದ್ದರೆ, ಮುಂದಿನ ತಲೆಮಾರಿಗೆ ಈ ನೆಲ ವಾಸಯೋಗ್ಯವಾಗದೇ ಹೋಗುತ್ತದೆಂಬ ಕರಾಳ ಭವಿಷ್ಯದ ವಿವರಗಳು ನಮಗೆ ತಿಳಿದಿದೆ. ಆದರೂ, ನಮ್ಮ ಪರಿಸರವನ್ನು ರಕ್ಷಿಸಿಕೊಳ್ಳುವ ಬದಲು, ಈಗ ಉಳಿದುಕೊಂಡಿರುವುದನ್ನು ಇನ್ನಷ್ಟು ಸ್ವಾಹಾ ಮಾಡುವುದರಲ್ಲಿ, ಹಾಳುಗೆಡಹುವುದರಲ್ಲಿ ನಾವೇಕೆ ಸದಾ ಮುಂದು?
ಸ್ವೀಡನ್ ದೇಶದ 17 ವರ್ಷದ ಬಾಲಕಿ ಗ್ರೆಟಾ ಥನ್‍ಬರ್ಗ್, ಈ ಜಗತ್ತಿನ ಹಿರಿಯರಲ್ಲಿ ಮಂಡಿಸಿರುವ ಹಕ್ಕೊತ್ತಾಯ ಇದೇ. ನೀವು ಹಿರಿಯರು ಈ ಭೂಮಿಯನ್ನು, ಇಲ್ಲಿನ ಪರಿಸರವನ್ನು, ಸಂಪನ್ಮೂಲಗಳನ್ನು ವಿವೇಚನಾರಹಿತವಾಗಿ ಉಪಯೋಗಿಸಿದರೆ, ನಮ್ಮ ಮತ್ತು ಮುಂದಿನ ಪೀಳಿಗೆಗೆ ಭೂಮಿಯ ಸಖ್ಯ ಕೈತಪ್ಪಿಹೋದೀತು – ಆದ್ದರಿಂದ, ದಯವಿಟ್ಟು ಈ ಕ್ಷಣದಿಂದ ನಿಮ್ಮ ಕಾರ್ಬನ್ ಫುಟ್‍ಪ್ರಿಂಟ್ ಕಡಿಮೆ ಮಾಡಿ, ಈ ಭೂಮಿಯ ಪರಿಸರವನ್ನು ಉಳಿಸಿ ಎಂದು ಆಕೆ ಹಿರಿಯರಿಗೆ ತಾಕೀತು ಮಾಡುತ್ತಿದ್ದಾಳೆ! ಎಲ್ಲರೂ ವಿಮಾನದಲ್ಲಿ ಸಂಚರಿಸಿದರೆ ಪರಿಸರ ಹೆಚ್ಚು ನಾಶವಾಗುತ್ತದೆ, ಆದ್ದರಿಂದ ಸಾಧ್ಯವಾದಾಗಲೆಲ್ಲಾ ರೈಲು ಪ್ರಯಾಣ ಮಾಡಿ, ಅಷ್ಟರ ಮಟ್ಟಿಗೆ ಪರಿಸರ ರಕ್ಷಿಸಲು ನಿಮ್ಮ ಕೊಡುಗೆ ಇರಲಿ ಎಂಬುದ ಆಕೆಯ ಕಳಕಳಿ ಮತ್ತು ಮನವಿ. ಪರಿಸರದ ದುಸ್ಥಿತಿಯನ್ನು ಹೈಲೈಟ್ ಮಾಡಲು ಆಕೆ ತರಗತಿಗಳನ್ನು ತೊರೆದು, ಸಹಪಾಠಿಗಳ ಜತೆ ಮುಷ್ಕರ ಮಾಡಿದ್ದಾಳೆ, ತನ್ನ ಮನೆಯಲ್ಲೂ ಪರಿಸರಸ್ನೇಹಿ ದಿನಚರಿ ಅಳವಡಿಸುವಂತೆ ಪೋಷಕರಿಗೆ ದುಂಬಾಲು ಬಿದ್ದಿದ್ದಾಳೆ. ಈ ಭೂಮಿಯು ಮುಂದಿನ ತಲೆಮಾರಿಗೆ ವಾಸಯೋಗ್ಯವಾಗಿರಲು ಈಗಿನ ಹಿರಿಯರು ಕಟಿಬದ್ಧರಾಗಬೇಕು, ಭೂಮಿ ಇನ್ನಷ್ಟು ಹಾಳಾದರೆ ಅದಕ್ಕೆ ಈಗಿನ ಹಿರಿಯರೇ ಹೊಣೆ ಎಂಬ ಆಶಯದ ಆಕೆಯ ಭಾಷಣಗಳು, ಜಗತ್ತಿನ ಯುವ ಪೀಳಿಗೆಯಲ್ಲಿ ಜನಪ್ರಿಯತೆ ಗಳಿಸಿದವು. ಜತೆಗೆ ಜಗತ್ತಿನ ಹಲವು ಚಿಂತಕರು, ಪ್ರಾಜ್ಞರು ಆಕೆಯ ವಿಚಾರಸರಣಿಯನ್ನು ಬೆಂಬಲಿಸಿ, ಪತ್ರಬರೆದರು. ಆದರೆ, ಅಮೆರಿಕದ ಅಧ್ಯಕ್ಷರನ್ನೂ ಒಳಗೊಂಡು, ಕೆಲವು ರಾಜಕಾರಣಿಗಳು, ಅಧಿಕಾರಸ್ಥರು ಆಕೆಯ ಪರಿಸರ ಕಾಳಜಿಯನ್ನು ಗೇಲಿ ಮಾಡಿದರು! ಕಲ್ಮಶ ಬಿಡುಗಡೆ ಮಾಡದ ಪ್ರಯಾಣವನ್ನು ಪ್ರೋತ್ಸಾಹಿಸಲು, ಸೋಲಾರ್ ಶಕ್ತಿಯಿಂದ ಚಲಿಸುವ ದೋಣಿಯಲ್ಲಿ ಅಟ್ಲಾಂಟಿಕ್ ಸಾಗರ ದಾಟಿ, ಅಮೆರಿಕಕ್ಕೆ ಸಂಚರಿಸಿದ ಆಕೆಯ ಪ್ರಮೋಷನಲ್ ಪಯಣವನ್ನು, ‘ಸಣ್ಣ ದೋಣಿ ಅಪಘಾತ’ ಎಂದು ಟೀಕಿಸಿದವರೂ ಉಂಟು! ಈಗಿನ ಜೀವನ ಶೈಲಿ ಮತ್ತು ಸಂಪನ್ಮೂಲಗಳ ದುರುಪಯೋಗದಿಂದಾಗಿ ‘ನಮ್ಮ ಮನೆಗೆ ಬೆಂಕಿ ಬಿದ್ದಿದೆ’ ಎಂದು ಹೇಳುವ ಗ್ರೆಟಾ, ಹದಗೆಡುತ್ತಿರುವ ಪರಿಸರದಿಂದಾಗಿ, ತನ್ನ ತಲೆಮಾರು ಇನ್ನಷ್ಟು ನರಳಲಿದೆ ಎಂದು ಭಾಷಣಗಳ ಮೂಲಕ ವಿಶ್ವದೆಲ್ಲಡೆ ಹೇಳುತ್ತಿದ್ದಾಳೆ!

ನಿಜ, ಈಗಿನ ಹಿರಿಯರು, ಅಧಿಕಾರ ಹಿಡಿದವರು, ರಾಜಕಾರಣಿಗಳು ನಮ್ಮ ಪರಿಸರವನ್ನು ರಕ್ಷಿಸುವಲ್ಲಿ ನಿಜವಾದ ಕಾಳಜಿ ತೋರುತ್ತಿದ್ದಾರೆಂದು ನಂಬಲು ಸಾಧ್ಯವೆ? ಖಂಡಿತಾ ಇಲ್ಲ. ಈಗಾಗಲೇ ನಮ್ಮ ನಾಡು, ಪರಿಸರ ಅಸಮತೋಲನ ತಂದ ಸಂಕಷ್ಟಗಳನ್ನು ಎದುರಿಸುತ್ತಿದೆ. ಮನುಷ್ಯ ನಿರ್ಮಿತ ಪ್ರಾಕೃತಿಕ ಏರುಪೇರುಗಳಿಗೆ ಸಾಕ್ಷಿಯಾಗುತ್ತಿದೆ. ಗ್ಲೋಬಲ್ ವಾರ್ಮಿಂಗ್, ಅಕಾಲಿಕ ಚಳಿ, ಮಳೆ ಮೊದಲಾದ ವೈಚಿತ್ರ್ಯಗಳು, ಹಿಂದೆ ಕಾಣದಷ್ಟು ಸಂಖ್ಯೆಯ ಬಿರುಗಾಳಿ, ಭೂ ಕುಸಿತ, ಗುಡ್ಡ ಜರಿತ, ಮಳೆಯ ಅಭಾವ ಮೊದಲಾದವುಗಳು ಕಳೆದ ಎರಡು ದಶಕಗಳಲ್ಲಿ ವಿಪರೀತ ಪರಿಣಾಮವನ್ನು ತೋರುತ್ತಿವೆ. ಭೂಮಿಯ ವಾತಾವರಣ ಏರುಪೇರು ಎಂದಾಗ, ಅದೇನೋ ದೂರದ ಸಹರಾ ಮರುಭೂಮಿಯ ಬಿಸಿಗಾಳಿ ಅಥವಾ ಆಸ್ಟ್ರೇಲಿಯಾದ ಕಾಳ್ಗಿಚ್ಚು ಎಂದು ತಿಳಿಯಲಾಗದು. ನಮ್ಮ ನಿಮ್ಮ ನಡುವೆಯೇ ಹಲವು ಪ್ರಾಕೃತಿಕ ಪ್ರಕೋಪಗಳು ಕಂಡುಬರುತ್ತಿವೆ. ಕೊಡಗು ಜಿಲ್ಲೆಯ ಭಾರೀ ಭೂಕುಸಿತ, ಉತ್ತರ ಕರ್ನಾಟಕದ ನೆರೆ, ಉತ್ತರ ಭಾರತದಲ್ಲಿ ಮೊನ್ನೆ ತಾನೆ ಕಂಡ ವಿಪರೀತ ಎನಿಸುವ ಬಿಸಿಗಾಳಿ – ಈ ರೀತಿಯ ಹಲವು ಪ್ರಾಕೃತಿಕ ವಿಕೋಪಗಳನ್ನು ಕಳೆದ ಒಂದು ವರುಷದಲ್ಲಿ ಕಂಡೆವು. ಪರಿಸರವನ್ನು ವಿವೇಚನೆಯಿಲ್ಲದೇ ದುರುಪಯೋಗಪಡಿಸಿಕೊಂಡ ಪರಿಣಾಮವಾಗಿ ಅವೆಲ್ಲವೂ ಘಟಿಸಿ, ಮನುಷ್ಯನ ಬಾಳನ್ನು ಸಂಕಷ್ಟಕ್ಕೆ ದೂಡಿದವು ಎಂದು ಪರಿಸರ ವಿಜ್ಞಾನಿಗಳು ಪುರಾವೆ ಸಹಿತ ಋಜುವಾತುಪಡಿಸಿದ್ದಾರೆ.

ಹಾಗಾದರೆ, ನಮ್ಮ ಪರಿಸರವನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆಯೆ? ಈಗ ಉಳಿದಿರುವ ಕಾಡನ್ನು, ಬಯಲನ್ನು, ನದಿಮೂಲಗಳನ್ನು, ಬಂಡೆಗಳನ್ನು ರಕ್ಷಿಸಲು ನಾವು ದಕ್ಷ ಎನಿಸುವ ಮುಂಜಾಗ್ರತೆಗಳನ್ನು ಕೈಗೊಂಡಿದ್ದೇವೆಯೆ? ಇಲ್ಲ, ಖಂಡಿತವಾಗಿಯೂ ಇಲ್ಲ. ಅದೆಷ್ಟೋ ಪರಿಸರ ವಿರೋಧಿ ಯೋಜನೆಗಳು ಈಗಲೂ ಒಂದರ ಹಿಂದೆ ಒಂದರಂತೆ ಜಾರಿಯಾಗುತ್ತಿವೆ. ನಮ್ಮಲ್ಲಿ ಅಳಿದುಳಿದಿರುವ ಕಾಡನ್ನು, ಜಲಮೂಲಗಳನ್ನು, ಹುಲ್ಲುಗಾವಲನ್ನು ನಾವೇ ಕೈಯಾರೆ ತರಿದು ಹಾಕಲು ನೀಲನಕಾಶೆ ತಯಾರಿಸುತ್ತಿದ್ದೇವೆ. ಕೋವಿಡ್19ನಿಂದಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಸಮಯದಲ್ಲಿ ಪರಿಸರ ದೇವಿಯು ತನ್ನ ಆರೋಗ್ಯವನ್ನು ತುಸು ಸುಧಾರಿಸಿಕೊಂಡಳು ಎಂದು ಜನಸಾಮಾನ್ಯರು ಹಲವು ಚಿತ್ರಣಗಳನ್ನು, ವಿಡಿಯೋಗಳನ್ನು ಸಂತಸದಿಂದ ಹಂಚಿಕೊಂಡರು. ನವಿಲುಗಳು ನಗರದ ಮಧ್ಯೆ ನರ್ತಿಸುವುದನ್ನು, ಹಿಮಾಲಯ ಪರ್ವತಗಳು 200 ಕಿಮೀ ದೂರದ ಊರುಗಳಿಗೆ ಗೋಚರಿಸುವುದನ್ನು ಕಂಡು, ಕರೋನಾ ಆತಂಕದ ನಡುವೆಯೂ ಸಂತಸಪಟ್ಟರು. ಕೊನೆಗೂ, ನಾವು ಅನಿವಾರ್ಯ ಪರಿಸ್ಥಿತಿಯಲ್ಲಿ, ನಮಗೆ ಗೊತ್ತಿಲ್ಲದೇ, ಪರಿಸರ ರಕ್ಷಿಸುವ ಕಿರು ಹೆಜ್ಜೆಗಳನ್ನು ಇಡುತ್ತಿದ್ದೇವೆಂದು ಮನದಲ್ಲೇ ಹಿಗ್ಗಿದೆವು. ಇದು ಜನಸಾಮಾನ್ಯರ ಕಳಕಳಿಯಾದರೆ, ಅಧಿಕಾರ ಹಿಡಿದವರು ಇದೇ ಅವಧಿಯಲ್ಲಿ ಬೇರೊಂದೇ ದಿಕ್ಕಿನಲ್ಲಿ ಸಾಗುತ್ತಿದ್ದಾರೆ! ಎಪ್ರಿಲ್ 23ರಂದು, ಲಾಕ್‍ಡೌನ್ ನಡುವೆ ವರ್ಚುವಲ್ ಸಭೆ ನಡೆಸಿ, ಸುಮಾರು 30 ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೆ ತರಲು ನಮ್ಮ ದೇಶದ ಕೆಲವು ಇಲಾಖೆಗಳು ತಯಾರಿ ನಡೆಸಿದವು. ದಟ್ಟ ಕಾಡನ್ನು ನಾಶಪಡಿಸುವ ಈ ಯೋಜನೆಗಳ ಕುರಿತು ಚರ್ಚಿಸಲು ಮುಖತಃ ಕುಳಿತು ಸಮಾಲೋಚನೆ ನಡೆಸಬೇಕಾದ್ದು ಸಮಂಜಸ. ಆದರೆ, ಲಾಕ್‍ಡೌನ್ ಮುಗಿಯುವದನ್ನು ಕಾಯದೇ, ವರ್ಚುವಲ್ ಮೀಟಿಂಗ್ ನಡೆಸಿ, ಕೆಲವು ಬೃಹತ್ ಕಾಮಗಾರಿಗೆ ಚಾಲನೆ ನೀಡಲು ಸಮಾಲೋಚನೆ ನಡೆಸಿದರು ನಮ್ಮ ಅಧಿಕಾರಸ್ಥರು! ಅರುಣಾಚಲ ಪ್ರದೇಶದ ಅತಿ ಅಪರೂಪದ ಪಾರಿಸರಿಕ ತಾಣ, ಕಾಡು ಪ್ರದೇಶ ಡಿಬಾಂಗ್ ವ್ಯಾಲಿಯ ಜಲವಿದ್ಯುತ್ ಯೋಜನೆಯೂ ಅದರಲ್ಲಿ ಸೇರಿದೆ!
ನಂಬಿತ್ತೀರೋ – ಬಿಡುತ್ತೀರೋ! ಹೆಚ್ಚು ವಿದ್ಯುತ್ ವೆಚ್ಚ ಮಾಡಿ, ಕಡಿಮೆ ವಿದ್ಯುತ್ ತಯಾರಿಸುವ ಯೋಜನೆಯೊಂದಕ್ಕೆ ಇದೇ ವೇಳೆಯಲ್ಲಿ ತುಸು ಚಾಲನೆ ದೊರೆತಿದೆ. ನಮ್ಮ ನಾಡಿನ ಅತಿ ಅಪರೂಪದ ಕಾಡನ್ನು ಹೊಂದಿರುವ, ಭಾರತದಲ್ಲಿ ಇಂದಿಗೂ ಉಳಿದುಕೊಂಡಿರುವ ಕೆಲವೇ ಶ್ರೀಮಂತ ಜೀವವೈವಿಧ್ಯ ಪ್ರದೇಶವಾಗಿರುವ, ಶರಾವತಿ ಕೊಳ್ಳದಲ್ಲಿ ಇಂತಹದೊಂದು ವಿದ್ಯುತ್ ಯೋಜನೆಗೆ ಕೆಲವು ಸಾಮಗ್ರಿಗಳು, ಇದೇ ಲಾಕ್‍ಡೌನ್ ವೇಳೆಯಲ್ಲಿ ಕಾಡನ್ನು ಪ್ರವೇಶಿಸಿದವು. ಈ ಯೋಜನೆಯ ಅಚ್ಚರಿ ಎಂದರೆ, ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು, 2300 ಮೆಗಾವ್ಯಾಟ್ ವಿದ್ಯುತ್‍ನ್ನು ವೆಚ್ಚ ಮಾಡಬೇಕಾಗುತ್ತದೆ! ಶರಾವತಿ ಕೊಳ್ಳದ ದಟ್ಟವಾದ ಕಾಡಿನ ನಡುವೆ ಆರಂಭವಾಗಲಿರುವ ಈ ವಿಚಿತ್ರ ಲೆಕ್ಕಾಚಾರದ ಯೋಜನೆಯಿಂದ, ಅಲ್ಲಿನ ಕಾಡು, ವನ್ಯಜೀವಿಗಳು, ಪರಿಸರ ನಾಶವಾಗುವುದರಲ್ಲಿ ಸಂಶಯವೇ ಇಲ್ಲ. ಈ ವಿದ್ಯುತ್ ಯೋಜನೆಯಿಂದ ನಮ್ಮ ನಾಡಿಗೆ ಲಾಭವಿದೆ ಎಂದು ತುಸು ವಿಚಿತ್ರ ಲೆಕ್ಕಾಚಾರವನ್ನು ಮುಂದಿಡುತ್ತಾರೆ, ಅದನ್ನು ಜಾರಿಗೆ ತರುತ್ತಿರುವ ಇಲಾಖೆಗಳು. ಆದರೆ, ಜನಸಾಮಾನ್ಯರಿಗೆ ಆಘಾತ ಎನಿಸುವ ಈ ಲೆಕ್ಕಾಚಾರವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೋ, ಅಚ್ಚರಿ ಎನಿಸುತ್ತದೆ – 2300 ಮೆಗಾವ್ಯಾಟ್ ವಿದ್ಯುತ್ ಖರ್ಚು ಮಾಡಿ, 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ! ನೂರಾರು ಅಡಿ ಕೆಳಗಿರುವ ನೀರನ್ನು ಬೃಹತ್ ಪ್ರಮಾಣದಲ್ಲಿ ಮೇಲಕ್ಕೆ ಪಂಪ್ ಮಾಡಿ, ಆ ನೀರನ್ನು ಕೆಳಗೆ ಕಳಿಸುವಾಗ ದೊರೆಯುವ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಈ ಯೋಜನೆಯು ಸಂಪೂರ್ಣವಾಗಿ ಪರಿಸರ ವಿರೋಧಿ, ಜನಸಾಮಾನ್ಯರ ಹಿತಾಸಕ್ತಿಯ ವಿರೋಧಿ. ಗ್ರೆಟಾ ಥನ್‍ಬರ್ಗ್ ಜಾಗತಿಕವಾಗಿ ವ್ಯಕ್ತಪಡಿಸಿದ ಕಳಕಳಿ, ಆಘಾತ, ಆತಂಕಗಳಿಗೆ ಈ ಯೋಜನೆಯು ಒಂದು ಉತ್ತಮ ಉದಾಹರಣೆ – ಹೆಚ್ಚು ವಿದ್ಯುತ್ ಖರ್ಚು ಮಾಡಿ ಕಡಿಮೆ ವಿದ್ಯುತ್ ತಯಾರಿಸುವ ಬೃಹತ್ ಯೋಜನೆ ಇದು! ಅಪಾರ ಪ್ರಮಾಣದ ಅಪರೂಪದ ಕಾಡನ್ನು ನಾಶಮಾಡುವ ಈ ಯೋಜನೆಗೆ ಸಾವಿರಾರು ಕೋಟಿ ರುಪಾಯಿಗಳ ಯೋಜನೆ ತಯಾರಾಗಿ ಕುಳಿತಿದೆ! ಇಂದಿನ ಅಲ್ಪಪ್ರಮಾಣದ ಲಾಭಕ್ಕಾಗಿ, ಭವಿಷ್ಯದ ಪೀಳಿಗೆಯನ್ನು ಖಾಯಂ ಸಂಕಷ್ಟಕ್ಕೆ ದೂಡುವ ಕೆಟ್ಟ ಉದಾಹರಣೆ ಇದು.
ನಮ್ಮ ನಾಡಿನಲ್ಲಿ ದಟ್ಟವಾದ ಕಾಡು ಉಳಿದಿರುವುದೇ ಅತಿ ಕಡಿಮೆ ಪ್ರದೇಶದಲ್ಲಿ. ಅದನ್ನು ಹೇಗಾದರೂ ಮಾಡಿ ರಕ್ಷಿಸುವ ಬದಲು, ಹೇಗಾದರೂ ಮಾಡಿ ನಾಶಪಡಿಸಿ, ಅಲ್ಲೊಂದು ಕಾಮಗಾರಿ ಜಾರಿಗೆ ತರುವುದರಲ್ಲಿ ನಮ್ಮ ಅಧಿಕಾರಸ್ಥರು ನಿಸ್ಸೀಮರು ಎನ್ನಲು ಮತ್ತೊಂದು ಉದಾಹರಣೆ – ಹುಬ್ಬಳ್ಳಿ ಮತ್ತು ಅಂಕೋಲಾ ನಡುವಿನ ಪ್ರಸ್ತಾವಿತ ರೈಲು ಮಾರ್ಗ. ಒಂದು ಲಕ್ಷಕ್ಕಿಂತಲೂ ಹೆಚ್ಚು ಮರಗಳನ್ನು ಅಧಿಕೃತವಾಗಿ ನಾಶ ಮಾಡಿ ಸಿದ್ಧವಾಗಲಿರುವ ಈ ರೈಲು ಮಾರ್ಗದ ನಿರ್ಮಾಣದಿಂದ, ಲಾಭಕ್ಕಿಂತ ಹಾನಿ ಹೆಚ್ಚು ಎಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ. ಕಳೆದ ಶತಮಾನದಲ್ಲಿ ಈ ರೈಲು ಮಾರ್ಗ ಪ್ರಸ್ತಾಪಗೊಂಡಾಗ, ಅಂಕೋಲಾ ಪಟ್ಟಣಕ್ಕೆ ರೈಲು ಸಂಪರ್ಕ ಇರಲಿಲ್ಲ. ಆ ನಂತರದ ದಶಕಗಳಲ್ಲಿ ಕಾರ್ಯರೂಪಕ್ಕೆ ಬಂದ ಕೊಂಕಣ ರೈಲು ಮಾರ್ಗವು ಅಂಕೋಲಾವನ್ನು ಮುಂಬಯಿಗೆ, ಮಂಗಳೂರಿಗೆ ಸಂಪರ್ಕಿಸುತ್ತ್ತಿದೆ. ಮೈಸೂರು ಮತ್ತು ಬೆಂಗಳೂರಿಗೆ ಪ್ರತಿದಿನ ಅಲ್ಲಿಂದ ನೇರ ರೈಲಿದೆ. ಆದರೂ, ಅಪಾರ ಪ್ರಮಾಣದ ಕಾಡನ್ನು ನಾಶಪಡಿಸಿ ನಿರ್ಮಿಸಲು ಉದ್ದೇಶಿಸಿರುವ ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದಿಂದ ದೂರಗಾಮಿ ಲಾಭವಿದೆ ಎಂದು ಸ್ಥಳೀಯರು, ಉದ್ಯಮಿಗಳು ತಿಳಿದರೆ, ಅದು ತಪ್ಪು ತಿಳಿವಳಿಕೆ ಎಂದೇ ಹೇಳಬೇಕು. ಅಂಕೋಲಾ ಹುಬ್ಬಳ್ಳಿ ನಡುವೆ ಈಗ ಉತ್ತಮ ರಸ್ತೆ ಸಂಪರ್ಕ ಇದೆ, ಅಗತ್ಯ ಎನಿಸಿದರೆ, ಅದನ್ನೇ ಇನ್ನಷ್ಟು ಉತ್ತಮಪಡಿಸಬಹುದು. ಪರಿಸರ ವಿರೋಧಿ ಹೊಸ ರೈಲು ಮಾರ್ಗವು, ಅಂಕೋಲಾ ಪಟ್ಟಣಕ್ಕೆ ಅಭಿವೃದ್ಧಿಯನ್ನು ತರುತ್ತದೆ ಎಂದು ಭಾವಿಸಿದರೆ ಅದು ಕೇವಲ ಭ್ರಮೆ. ಕಳೆದ ಕೆಲವು ದಶಕಗಳಲ್ಲಿ ಹೊಸದಾಗಿ ರೈಲು ಸಂಪರ್ಕ ಪಡೆದ ಸಕಲೇಶಪುರ, ಚಿಕ್ಕಮಗಳೂರು, ಕುಂದಾಪುರ, ಪುತ್ತೂರು ಮೊದಲಾದ ಪಟ್ಟಣಗಳು ಅದೊಂದರಿಂದಾಗಿ ಈ ಅವಧಿಯಲ್ಲಿ ವಿಶೇಷ ವಾಣಿಜ್ಯ ಪ್ರಗತಿಯನ್ನು ಸಾಧಿಸಲಿಲ್ಲ – ಹಾಗಿದ್ದಾಗ, ಅಪರೂಪದ ಪಶ್ಚಿಮ ಘಟ್ಟದ ಕಾಡುಗಳನ್ನು ರಕ್ಷಿಸುವ ದೃಷ್ಟಿಯಿಂದಲಾದರೂ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಂತಹ ಕಾಮಗಾರಿಗಳನ್ನು ಪ್ರೋತ್ಸಾಹಿಸುವುದನ್ನು ನಮ್ಮ ಅಧಿಕಾರಸ್ಥರು ಕೈಬಿಡಬೇಕು.
ಈ ಪರಿಸರ ದಿನಾಚರಣೆಯಂದು ನನ್ನ ಕಣ್ಣಿಗೆ ರಾಚುವುದು, ಮನಸ್ಸನ್ನು ಕಾಡುವುದು, ಇದೇ, ಇಂತಹದ್ದೇ ದುಃಸ್ವಪ್ನಗಳು. ಪರಿಸರ ರಕ್ಷಿಸಿ ಎಂದು ಬಾಯಿಯಲ್ಲಿ ಹೇಳಿ, ಭಾಷಣ ಬಿಗಿದು, ಅತ್ತ ಪರಿಸರ ಹಾಳುಗೆಡಹುವ ಬೃಹತ್ ಕಾಮಗಾರಿಗಳ ಚಾಲನಾ ಪತ್ರಕ್ಕೆ ಸಹಿಹಾಕುವ ಅಧಿಕಾರ ಸೂತ್ರ ಹಿಡಿದವರ ನಡೆಯನ್ನು ಯಾವ ದೃಷ್ಟಿಯಲ್ಲಿ ನೋಡಬೇಕು? 400 ಕಿ.ಮೀ. ದೂರದ ಶರಾವತಿಯಿಂದ ಬೆಂಗಳೂರಿಗೆ ನೀರು ತರುವ, ಸೂಕ್ಷ್ಮ ಜೈವಿಕ ವಲಯವನ್ನು ನಾಶಪಡಿಸುತ್ತಿರುವ ಎತ್ತಿನ ಹೊಳೆ ಯೋಜನೆಯಂತಹ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡುವ, ಕಾಡು ನಾಶವಾಗಿ ಮುಂದೆ ಮಳೆ ಬರದಿದ್ದರೂ ಪರವಾಗಿಲ್ಲ, ಈಗ ತಕ್ಷಣದ ಆರ್ಥಿಕ ಲಾಭ ದೊರೆತರೆ ಸಾಕು ಎಂದು ನಿರ್ಧರಿಸುವ ಅಧಿಕಾರಸ್ಥರ ನಡುವೆ, ವಿಶ್ವ ಪರಿಸರ ದಿನದ ಆಚರಣೆಗೆ ಅರ್ಥವಿದೆಯೆ? ಹಿರಿಯ ತಲೆಮಾರು ಮತ್ತು ಅಧಿಕಾರ ಹಿಡಿದವರು ಇಡುತ್ತಿರುವ ತಪ್ಪು ನಡೆಯಿಂದಾಗಿ, ಈಗಿನ ಪರಿಸರ ಇನ್ನಷ್ಟು ಹಾಳಾಗುತ್ತಿದೆ, ನಮ್ಮ ಮುಂದಿನ ತಲೆಮಾರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತೆ ಮಾಡುತ್ತಿದ್ದೀರಿ ಎಂದು ಎಚ್ಚರಿಸಲು, ನಮ್ಮ ನಾಡಿನಲ್ಲೂ ಒಬ್ಬ ಗ್ರೆಟಾ ಥನ್‍ಬರ್ಗ್ ಹುಟ್ಟಿಬರಬೇಕೆ? ಪ್ರತಿ ವರ್ಷ ಪರಿಸರ ದಿನವನ್ನು ಆಚರಿಸುವ ಅಧಿಕಾರಸ್ಥರೇ, ಪ್ರತಿ ವರ್ಷ ಪರಿಸರವನ್ನು ನಾಶಪಡಿಸುವ ಹೊಸ ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿರುವುದನ್ನು ಕಾಣುತ್ತಿರುವಾಗ ಅನಿಸಿದ್ದಿಷ್ಟೇ – ಈ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಉಳಿಯಗೊಡುವುದಿಲ್ಲವೆ? ಪ್ರತಿವರ್ಷ ಯಾಂತ್ರಿಕವಾಗಿ ಆಚರಣೆಗೊಳ್ಳುತ್ತಿರುವ ಹಲವು ಪರಿಸರ ದಿನಗಳನ್ನು ಕಂಡವರಿಗೆ, ಈ ಬರಹವು ಪರಿಸರ ದಿನದ ಪ್ರಲಾಪದಂತೆ ಕೇಳಿದರೆ, ನನ್ನ ತಪ್ಪಲ್ಲ.

error: Content is protected !!