Friday, 2nd December 2022

ಬೆಳೆ ಹಾನಿಗೆ ಪರಿಹಾರ ನೀಡಲು ಸರಕಾರಕ್ಕೆ ವರದಿ

ಕೋಲಾರ:

ಜಿಲ್ಲೆಯಲ್ಲಿ ಎರಡು ದಿನದ ಹಿಂದೆ ಬಿದ್ದ ಆಲಿಕಲ್ಲು ಮಳೆಯಿಂದ 500 ಹೆಕ್ಟೇರ್ ಪ್ರದೇಶದಲ್ಲಿನ ಟಮೋಟೊ, ಮಾವು, ಸೌತೆಕಾಯಿ ಬೆಳೆಗಳು ನಾಶವಾಗಿದ್ದು, ಇವುಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಅವರು ತಿಳಿಸಿದರು.

ಇಂದು ಕೋಲಾರ ಜಿಲ್ಲೆಯ ಸೀಸಂದ್ರ ಗ್ರಾಮದ ನಾರಾಯಣಸ್ವಾಮಿ ಅವರ 3.20 ಹೆಕ್ಟೇರ್ ಟಮೋಟೊ ಬೆಳೆ ವೀಕ್ಷಣೆ ಮಾಡಿ ಮಾತನಾಡಿದರು.
ಹಾನಿಗೊಳಗಾದ ಬೆಳೆಗಳ ಪುನ:ಶ್ಚೇತನ ಮಾಡಲು ಸಾಧ್ಯವೇ ಎಂಬುದನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನಿಗಳಿಂದ ಅಧ್ಯಯನ ನಡೆಸಲಾಗುವುದು. ಕೇಂದ್ರ ಸರ್ಕಾರವು ನೈಸರ್ಗಿಕ ವಿಕೋಪ ನಿಧಿಯಿಂದ ಪರಿಹಾರ ನೀಡುವುದು. ಕೋವಿಡ್-19 ವಿಶ್ವದಾದ್ಯಂತ ವ್ಯಾಪಿಸಿರುವ ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಒಂದು ಹೆಕ್ಟೇರ್ ಗೆ 13,500 ರು.ಗಳ ಪರಿಹಾರ ನೀಡಲು ಅವಕಾಶವಿದೆ. ಈ ಪರಿಹಾರ ಸಾಕಾಗುವುದಿಲ್ಲ ಹೆಚ್ಚಿನ ಪರಿಹಾರ ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಈಗಾಗಲೇ ಬೆಳೆ ಹಾನಿ ಕುರಿತು ಜಂಟಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ದುಬಾರಿ ವೆಚ್ಚದ ಬೆಳೆಗಳನ್ನು ಬೆಳೆಯುವಾಗ ರೈತರು ಬೆಳೆ ವಿಮೆಗಳನ್ನು ಮಾಡಿಸಬೇಕು. ಕ್ರಿಮಿನಾಶಕಗಳ ಬಳಕೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಡಾ|| ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಗಾಯತ್ರಿ ಸೇರಿದಂತೆ ರೈತರು ಉಪಸ್ಥಿತರಿದ್ದರು.