Tuesday, 17th May 2022

ಮಾನವನ ಮೀಸೆ ಮಣ್ಣಾಗಿಸಿದ ಕರೋನಾ!

ಡಾ. ಶ್ರೀಕಾಂತ ಭಟ್, ಹ್ಯಾಾಂಬರ್ಗ್, ಜರ್ಮನಿ

ಮಾನವ ಕಟ್ಟಿದ ಬೃಹದಾಕಾರದ ಹಡಗುಗಳು ಹಾಗೆಯೇ ನಿಂತಿವೆ, ಕ್ಷಣ-ಕ್ಷಣವೂ ಹಾರುತಿದ್ದ ವಿಮಾನಗಳು ಕೂತು ಕಣ್ಣೀರ ಸುರಿಸಿವೆ, ಸರ-ಸರ ಓಡುತಿದ್ದ ರೈಲುಗಳು ಸಪ್ಪಗಾಗಿವೆ, ಮನೆಯ ಮುಂದಿನ ಕಾರುಗಳ ಮುಸುಡಿಗೆ ಕರಿ ಹಿಡಿದಿದೆ. ಒಟ್ಟಿನಲ್ಲಿ ಈ ಹುಲು ಮಾನವನ ದರ್ಪದ ಮೀಸೆಯನ್ನು ಕಣ್ಣಿಗೂ ಕಾಣದ ಕರೋನಾ ಎಂಬ ಜೀವಿ ಮಣ್ಣಾಗಿಸಿದೆ. ಚಂದ್ರನ ಮೇಲೆ ನಡೆದು ಬಂದ ಮಾನವನಿಗೆ ತನ್ನದೇ ಊರಿನಲ್ಲಿ ಅಡ್ಡಾಡಲು ಆಗುತ್ತಿಲ್ಲ. ನಭೋ ಮಂಡಲದಾಚೆ ಕೆಣಕುವ ಮಾನವನ ಕಣ್ಣಿಗೆ ತನ್ನದೇ ಮನೆಯ ಕೊಟ್ಟಿಗೆಯ ಕ್ರಿಮಿ ಕಾಣಿಸಲಿಲ್ಲ. ಭೂತಳ ಬಗೆಯುವ ಬಕಾಸುರನಿಗೆ ಭೂಮಿತಾಯಿಯ ಕರುಳಿನ ಕೂಗು ಕೇಳಿಸಲಿಲ್ಲ. ಅದಕ್ಕೆ ಕಳುಹಿಸಿರಬೇಕು ಕರೋನಾ ಎಂಬ ಕರುಣೆಯಿಲ್ಲದ ವೈರಾಣುವನ್ನು!

ಕರೋನಾ ಕ್ರಿಮಿ ಇಂದು ಜಗತ್ತನ್ನು ಅಕ್ಷರಶಃ ತುತ್ತ ತುದಿಗಾಲಿನಲ್ಲಿ ನಿಲ್ಲಿಸಿದೆ. ತನ್ನ ಬಿಟ್ಟರಿಲ್ಲ ಎಂದು ಮೆರೆವ ಮಾನವನ ತಲೆಗೆ ಮೊಟಕಿ ಕೂರಿಸಿದೆ. ಅವನಿಯ ಅವೆಷ್ಟೋ ಜೀವರಾಶಿಗಳ ಹೊಸಕಿ ಹಾಕಿದ ಮನುಜ ಪ್ರಾಣಿ, ತನ್ನ ಪ್ರಾಣ ಉಳಿಸಿಕೊಳ್ಳಲು ಇಂದು ಪರದಾಡುತ್ತಿದ್ದಾನೆ. ಚಳಿಗಾಲದಲ್ಲಿ ಉದುರುವ ಅರಳೀ ಮರದ ತರಗೆಲೆಗಳಂತೆ, ಜನರ ತಲೆಗಳು ಧರೆಗೆ ಉರುಳುತ್ತಿವೆ. ಕತ್ತಿಗೆ ಕೈ ಹಾಕಿ ದೂಡಿದರೂ ಜಗ್ಗದ ಜನ, ಗಟ್ಟಿ ಕೆಮ್ಮಿಗೆ ಜಾಗ ಖಾಲಿ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯ ಜಗ-ಜಟ್ಟಿಗಳು, ಜಪದ ಸರ ಹಿಡಿದು ಪಾತಾಳ ಲೋಕವ ಹುಡುಕುತ್ತಿದ್ದಾರೆ. ಹಲೋ, ಹೌ ಆರ್ ಯು ಎಂದಾಗಲೆಲ್ಲ ಸಿಗುವ, ಕೊಡುವ ಮುತ್ತಿನ ಜಾಗದಲ್ಲಿ ನಮಸ್ತೆ ಬಂದಿದೆ. ಪಕ್ಕದ ಮನೆ ಸೀತಕ್ಕ ಸೀನಿದರೆ, ತುದೀಮನೆ ತಿಮ್ಮಣ್ಣನಿಗೆ ತಮಟೆ ವಾದ್ಯದ ಕನಸು. ಜಗತ್ತಿನ ಜನರ ಜೀವ ಜಾಗರಣೆಯ ನಡುವೆ ದಿಗಿಲು ಘಂಟೆಯು ಮೊಳಗುತ್ತಿದೆ.

ಒಟ್ಟಿನಲ್ಲಿ ಜಗತ್ತು ಭಯದ ಮುಖ ಗವಸು ಹೊತ್ತು ಹೈರಾಣಾಗಿದೆ. ದಿನವಿಡೀ ಮೃತ ಮತ್ತು ಸೋಂಕಿತರ ಸಂಖ್ಯೆೆಯ ಲೆಕ್ಕಾಚಾರದ ನಡುವಿನಲ್ಲಿ ಜನರ ಬುದ್ಧಿಗೆ ಮಂಕು ಕವಿದಿದೆ. ವಾಸ್ತವಾಂಶ ಸರಿಯಾಗಿ ಗಮನಿಸಿದರೆ ಕರೋನಾ ಒಂದು ದುರ್ಬಲ ವೈರಸ್ ಎಂದು, ಮಳ್ಳೂರಿನ ಮಂಕಪ್ಪನೂ ಹೇಳಬಹದು. ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟ ಪಡಿಸಿರುವಂತೆ ಗಾಳಿಯಲ್ಲಿ ತಾನಾಗಿ ಹರಡಲಾರದು. ಮಕ್ಕಳಿಗೆ, ಯುವಜನರಿಗೆ ಅದು ಅಷ್ಟಾಗಿ ಪ್ರಾಣಾಂತಿಕವಲ್ಲ. ಆರೋಗ್ಯವಂತ ಹಿರಿಯರನ್ನೂ ಅದು ಬಲಿ ತೆಗೆದುಕೊಳ್ಳುವ ಪ್ರಸಂಗ ಕಡಿಮೆಯೇ. ಶ್ವಾಸಕೋಶದ ಅಂಗಗಳಿಗಷ್ಟೇ ಸೀಮಿತವಾದ ಪ್ರಭಾವಹೊಂದಿರುವ ಇದು, ಮಂಗನ ಜ್ವರ, ಮಿದುಳು ಜ್ವರ, ಎಬೊಲಾ, ಪೋಲಿಯೊ ಕಾಯಿಲೆಗಳಷ್ಟು ತೊಂದರೆ ಕೊಡುವುದಿಲ್ಲ. ನಾಗೇಶ ಹೆಗಡೆಯವರು ಇತ್ತೀಚಿನ ಅಂಕಣ ಬರಹದಲ್ಲಿ ಹೇಳಿದಂತೆ ಆದರೂ ಇಂಥ ವೈರಾಣುಗಳ ವ್ಯಂಗ್ಯ ಏನು ಗೊತ್ತೆ? ಅತ್ಯಂತ ಉಗ್ರ ವೈರಾಣುವಿಗಿಂತ ತುಸು ಪೆದ್ದ ವೈರಾಣುವೇ ಹೆಚ್ಚು ಅಪಾಯಕಾರಿ ಆಗಬಹುದು. ಏಕೆಂದರೆ ಉಗ್ರ ವೈರಾಣುವು ತಾನು ಹೊಕ್ಕ ದೇಹವನ್ನು ಕೊಂದು ತಾನೂ ನಶಿಸುತ್ತದೆ. ಆದರೆ ಪೆದ್ದ ವೈರಾಣು ತುಂಬ ದಿನ ದೇಹದಲ್ಲಿದ್ದು ಜಾಸ್ತಿ ಜನರಿಗೆ ಕಾಯಿಲೆಯನ್ನು ಹಬ್ಬಿಸುತ್ತದೆ. ಕರೋನಾವನ್ನು ಪೆದ್ದ ಎಂದು ನಿರ್ಲಕ್ಷಿಸುವ ಹಾಗಿಲ್ಲ. ಹಾಗೆಂದು ಅದರೊಂದಿಗೆ ಜಿದ್ದಿಗೆ ಬಿದ್ದು ನಾವೂ ಪೆದ್ದರಾಗಬೇಕಿಲ್ಲ. ಇದು ಅಕ್ಷರಶಃ ನಿಜ. 15 ದಿನ ಹಾಗೆ ಸುಮ್ಮನೆ ನಮ್ಮ ದೇಹದಲ್ಲಿದ್ದು, ಸಾಧ್ಯವಾದಾಗಲೆಲ್ಲ ಅಕ್ಕ ಪಕ್ಕ ಇದ್ದವರ ಸಖ್ಯವನ್ನೋ ಬೆಳೆಸಿ (ಸೀನಿದಾಗ, ಚುಂಬಿಸಿದಾಗ) ತಾನು ಬೆಳೆಯುತ್ತ ಹೋಗುತ್ತದೆ. ಕರೋನಾದ ಈ ಪೆದ್ದು ಗುಣ ಇಳೆಯ ಜಾಣರ ನಿದ್ದೆಗೆಡಿಸಿ, ಎದ್ದು ಕೂರಿಸಿದೆ.

ಅಷ್ಟಾಗಿಯೂ ಈ ಕರೋನಾ ಹುಟ್ಟಿ ಬಂದದ್ದು ಎಲ್ಲಿಂದ? ಈ ವಿಷಯ ಬಹುಮಂದಿಯ ಚರ್ಚೆಯ ವಿಷಯ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಚೀನಾ ವೈರಸ್ ಎಂದು ಜರಿದರೆ, ಚೀನಿಯರು ಇದು ನಿಮ್ಮದೇ ಮಿಲಿಟರಿ ಪ್ರಾಯೋಜಿತ ಎಂಬ ಮೊಂಡು ವಾದವನ್ನು ಮುಂದಿಟ್ಟಿದ್ದಾರೆ. ರಾಜಕೀಯದ ಬೊಗಳೆಯಲ್ಲಿ ವಿಜ್ಞಾನಿಗಳ ರಗಳೆ ಆಗಲೇ ಆರಂಭವಾಗಿದೆ. ಪರೀಕ್ಷಾ ಮಾಪನ, ಸಾಧನ ಅಭಿವೃದ್ಧಿಯಲ್ಲಿ, ವೈರ ಕಣದ ಕಾಣದ ರೂಪವನ್ನು ಕಾಣಲು, ವರ್ಣತಂತುಗಳ ವಿಶ್ವರೂಪ ಒರೆಹಚ್ಚಲು ಸಿದ್ಧರಾಗುತ್ತಾ ಇದ್ದಾರೆ. ಇದಾಗಲೇ ಎಲೆಕ್ಟ್ರಾನ್ ಸೂಕ್ಷದರ್ಶಕದಲ್ಲಿ ಸೆರೆ ಸಿಕ್ಕ ವೈರಸ್ ಮೊಳಕೆ ಬಂದ ಆಲೂಗಡ್ಡೆಯ ರೂಪವನ್ನು ಹೊರಹಾಕಿವೆ. ಸಮರೋಪಾದಿಯಲ್ಲಿ ಸಂಶೋಧನೆಗಳು ನಡೆದಿವೆ. ಆದರೆ ಗಮ್ಮತ್ತಿನ ವಿಷಯವೆಂದರೆ, ಕೆಲವು ರೋಚಕತೆಯ ಬೆನ್ನು ಹಿಡಿವ ಅಜ್ಞಾನ ಕಥೆಗಾರರು, ಈ ವೈರಸ್ ಚೀನಾದ ಸೃಷ್ಟಿ! ವುಹಾನ್‌ನ ಲ್ಯಾಬ್‌ನಲ್ಲಿ ತಯಾರು ಮಾಡಲಾಗಿದೆ ಎಂದು ಥ್ರಿಲ್ಲರ್ ಕಥೆ ಹರಿ ಬಿಟ್ಟಿದ್ದಾರೆ. ಅದಕ್ಕೆ ಪುಷ್ಠಿ ಎಂಬಂತೆ, ಜನವರಿ 20ರಂದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಸಾಯನಿಕ ಶಾಸ್ತ್ರದ ವಿಜ್ಞಾನಿ ಪ್ರೊ. ಜೇಮ್ಸ್ ಲೀವರ್‌ನನ್ನು ಬಂಧಿಸಲಾಯಿತು. ಈತ ಚೀನಾದ ಆಮಿಷಕ್ಕೆ ಒಳಗಾಗಿದ್ದ ಮತ್ತು ಚೀನಾದ ವುಹಾನ್‌ನಲ್ಲಿ ವಿಶೇಷ ಪ್ರಯೋಗಾಲಯ ಅಭಿವೃದ್ಧಿಗೆ ಗುಪ್ತ ನಿಧಿ ಪಡೆದಿದ್ದ ಎಂದು ಎಫ್‌ಬಿಐ ಆರೋಪ ಪಟ್ಟಿ ಸಲ್ಲಿಸಿದೆ. ಇದಕ್ಕೂ ಅಮೆರಿಕ – ಚೀನಾ ವಾಣಿಜ್ಯ ಒಪ್ಪಂದಕ್ಕೂ ಸಂಭಂದ ಕಲ್ಪಿಸಿ, ಕಾಕತಾಳೀಯ ಕಥೆ ಹೆಣೆದಿದ್ದಾರೆ. ಆದರೆ ಈತನಿಗೂ ಈ ವೈರಸ್ಸಿಗೂ ಯಾವುದೇ ಸಂಬಂಧವಿಲ್ಲ. ಕಲ್ಪನೆಯ ಕಥೆ ಹುಟ್ಟುವಷ್ಟು ಸುಲಭದಲ್ಲಿ ಜೀವಕೋಶಗಳ ಸೃಷ್ಟಿಯೋ ಅಭಿವೃದ್ಧಿಯೋ ಸಾಧ್ಯವಿದ್ದರೆ ಇಂದು ಜಗತ್ತು ಹೀಗಿರುತ್ತಿರಲಿಲ್ಲ. ಇಲ್ಲಿ ನೋಡಿ ಹೇಗಿದೆ ನರಪೇತಲ ಮಾನವನ ದರ್ಪ. ತಾನೇ ಎಲ್ಲವನ್ನೂ ಹುಟ್ಟು ಹಾಕಬಲ್ಲೆ, ಈ ವೈರಸ್ ಕೂಡ ತನ್ನದೇ ಸೃಷ್ಟಿ ಎಂಬ ದುರಹಂಕಾರ ಭಾವನೆಯೇ ಈ ಬರಹಗಳ ಮೂಲ ಎಂದು ನನಗೆ ಅನ್ನಿಸುತ್ತದೆ. ಮುಖ ಕೆಳಗಾಗಿ ಬಿದ್ದರೂ ಮೀಸೆ ಮಣ್ಣಾಗದ ಭಾವನೆ ಅಥವಾ ಅವಿಜ್ಞಾನ ಬುರುಡೆ-ಪುರಾಣದ ಪರವಾವಧಿ!

ವಿಜ್ಞಾನಿಗಳೂ ಕಪೋಲ ಕಲ್ಪಿತ ಕಥಾಮಂಜರಿಯನ್ನು ತಳ್ಳಿ ಹಾಕಿದ್ದಾರೆ. ಇದು ಪ್ರಾಣಿ ಮೂಲದ ವೈರಾಣು, ಇದರ ಜೀನ್‌ಸ್‌‌ಗೂ ಬಾವಲಿಯ ಜೀನ್‌ಸ್‌‌ಗೂ ಬಹಳ ಹೋಲಿಕೆ ಇದೆ ಎಂದು ಖಾತ್ರಿ ಪಡಿಸಿದ್ದಾರೆ. ಚೀನಾದ ವುಹಾನ್ ನಗರದ ಮಾಂಸದ ಮಾರುಕಟ್ಟೆಯೇ ಇದರ ಮೂಲ ಎಂದು ತಾತ್ವಿಕ ಒಪ್ಪಿಗೆ ಇದೆ. ಆದರೆ ಬಾವಲಿಯಿಂದ ನೇರ ಮಾನವ ಸಂಪರ್ಕಕ್ಕೆ ಬಂದಿದ್ದರ ಬಗ್ಗೆ ಎಲ್ಲರ ಸಮ್ಮತಿ ಇಲ್ಲ. ಅದರ ಬಗ್ಗೆೆಯೂ ಕೂಲಂಕಷ ಪರಾಮರ್ಶೆ ನಡೆದಿದೆ. ಇಂತಹ ಸಂದರ್ಭಗಳಲ್ಲಿ ಅವಾಸ್ತವಿಕ ವೈಭವೀಕರಿಸಿದ ಕಥೆಗಳು, ವೈರಾಣುವಿನ ವಿರುದ್ಧ ಹೋರಾಡಲು ಮಾನವನ ಮನಃ ಸ್ಥೈರ್ಯ ಕುಗ್ಗಿಸಿ ದಿಕ್ಕು ಬದಲಿಸಿ ಬಿಡಬಹುದು ಎಂದು ಖಡಕ್ ಆಗಿ ಹೇಳಿದ್ದಾರೆ. ಅದೃಷ್ಟವಶಾತ್ ವಿಜ್ಞಾನಿಗಳ, ಸುಲಭ ಸುಂದರ ತಾರ್ಕಿಕ ಯೋಚನೆ ಮಾನವರ ಅಹಂನ್ನು ಅಲ್ಲಿಗೆ ತಡೆದು ನಿಲ್ಲಿಸಿದೆ. ಮನುಜ ಇಷ್ಟು ಸರಳ ಯೋಚನೆ ಮಾಡಲಾರ. ಒಂದು ಪಕ್ಷ ಯಾವುದೋ ಅರೆ ಬರೆ ಜೀವ ಕೋಶದಿಂದ ಯಾವುದೋ ರೋಗಾಣುವಿನ ಸಂಬಂಧ ಏರ್ಪಡಿಸಿ ಬೇರೆ ಏನೇ ಸೃಷ್ಟಿಸಿದರೂ ಅದು ನೋಡಲೂ ವಿಕಾರವಾಗಿರುತ್ತದೆ. ಅದು ಇನ್ನೂ ತೀವ್ರವಾಗಿ ವರ್ತಿಸುವ ಸಾಧ್ಯತೆಯೇ ಹೆಚ್ಚು. ಯಾವುದೋ ದೇಹದ ಮೇಲೆ ಅಪ್ಪಳಿಸಿದರೂ ಮನುಷ್ಯ ಅಲ್ಲಿಯೇ ಅಥವಾ ಸ್ವಲ್ಪಹೊತ್ತಿನಲ್ಲಿ ಅಸುನೀಗುವುದು ಸಾಮಾನ್ಯವಾಗುತಿತ್ತು. ಹಾಗೆಯೇ ಮೇಲೆ ಹೇಳಿದಂತೆ ಆ ಎಲ್ಲಾ ವೈರಾಣುಗಳ ಹರಡುವಿಕೆಯೂ ಸೀಮಿತವಾಗಿರುತ್ತಿತ್ತು. ದೇಹ ಹೊಕ್ಕು 10-15 ದಿನ ಏನೂ ಆಗದೆ ಇರುವ ವೈರಾಣು ಸೃಷ್ಟಿಸುವ ಯೋಚನೆ ಮನುಜನ ಕಲ್ಪನೆಗೂ ಬಾರದ್ದು! ಎಂದು ಸ್ಪಷ್ಟ ಪಡಿಸಿದ್ದಾರೆ.

ಯೋಚಿಸಿನೋಡಿ, ಹೌದಲ್ಲವೇ? ಮನುಜ ಹುಟ್ಟಿ ಹಾಕಿದ್ದೆಲ್ಲ ಪಟ-ಪಟನೇ ಸಿಡಿವ ಸಿಡಿ ಮದ್ದುಗಳು, ಬಟನ್ ಒತ್ತಿದಾಕ್ಷಣ ಢಂ ಎನ್ನುವ ಆಟಂ ಬಾಂಬುಗಳೇ ಅಲ್ಲವೇ! ಈಗಿರುವ ಪ್ರಶ್ನೆ ಒಂದೇ. ಎಂದೂ ಪ್ರಕೃತಿಯ ಕೂಗನ್ನು ಕೇಳದವ ಇಂದು ಕೇಳಿಯಾನೆ? ಆದರೆ ಈ ನರ ಇನ್ನೂ ಸಾಂದರ್ಭಿಕವಾಗಿ ಉದ್ಭವಿಸಿದ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿಯೂ ಇಲ್ಲ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಲೂ ಇಲ್ಲ. ಈತ ಮಾಡಿದ್ದೇನು ಅಥವಾ ಮಾಡುತ್ತಿರುವ ಮಹತ್ಕಾರ್ಯವೇನು? ಒಬ್ಬರಿಗೆ ಒಬ್ಬರು ಸಹಕರಿಸಿ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ಮನೆಯ ಬಾಗಿಲು ಬಂದ್ ಮಾಡುತ್ತಿರುವುದು, ಊರಿನ, ರಾಜ್ಯದ, ದೇಶದ ಗಡಿಯನ್ನು ಮುಚ್ಚಿ, ತನ್ನ ಊಹೆಗೂ ನಿಲುಕದಷ್ಟು ಸಣ್ಣಗಿರುವ ಜೀವಿಯನ್ನು ಸೋಲಿಸುತ್ತೇನೆ ಎಂದು ಬೀಗುತ್ತಿರುವುದು; ಮರ್ಯಾದೆಯನ್ನು ಉಳಿಸಿಕೊಂಡಂತೆ ತೋರುತ್ತಿರುವುದು! ಇದು ಹೇಗಿದೆ ಎಂದರೆ, ದಾರಿಯಲ್ಲಿ ಗೂಳಿ ಅಟ್ಟಿಸಿಕೊಂಡು ಬಂದಾಗ, ಮನೆಗೆ ಬಂದು ಬಾಗಿಲು ಮುಚ್ಚಿ, ನಾನು ಗೂಳಿಯ ಹಿಮ್ಮೆಟ್ಟಿಸಿದೆ ಎಂದಂತೆ! ಸದ್ಯಕ್ಕೆ ಲಾಕ್ ಡೌನ್ ಸರಿಯಾದ ಮತ್ತು ಸಮಂಜಸ ಕ್ರಮ ಎನಿಸಿದರೂ, ಮಾನವನ ಡೋಂ ಸಾಂಕ ತನದ ಪೊರೆ ಬೋರಲು ಮಲಗಿದೆ. ತನಗೆ ತಾನೇ, ಗೋಡೆಗೆ ಮಣ್ಣೇ ಎಂಬ ನಾಣ್ಣುಡಿಯಂತೆ, ದೇಶ-ದೇಶಗಳ ನಡುವೆ, ಊರು ಊರುಗಳ ನಡುವೆ, ಒಂದೇ ಮನೆಯ ಜನರ ನಡುವೆ ವೈರಸ್ ಗೋಡೆ ಎದ್ದು ನಿಂತು; ನಾನೊಂದು ತೀರಾ.. ನೀನೊಂದು ತೀರಾ.. ಎನ್ನುತ್ತಿದ್ದಾರೆ. ಈ ವೈರಸ್‌ನಿಂದ ಶೇ.98ರಷ್ಟು ಜನರಿಗೆ ಪ್ರಾಣಾಪಾಯ ಇಲ್ಲವೇ ಇಲ್ಲ ಎಂದು ಧೈರ್ಯ ತುಂಬಬೇಕಾದ ವಿಶ್ವ ನಾಯಕರು, ತಮ್ಮ-ತಮ್ಮ ದೇಶದ ಕದವ ಬಿಗಿದು, ಭದ ಬೀಜವ ಬಿತ್ತಿ, ತಮ್ಮ ಗದ್ದುಗೆ ಗಟ್ಟಿ ಮಾಡುವ ತವಕದಲ್ಲಿದ್ದಾರೆ. ವಿಜ್ಞಾನಿಗಳ ಪರಿಶ್ರಮದಿಂದ ಒಂದು ದಿನ ವೈರಾಣುವಿಗೆ ಲಸಿಕೆಯೂ ಲಭ್ಯವಾಗಬಹುದು, ಆದರೆ ಮಾನವನ ಈ ದುರಾಸೆಯ ಅವಕಾಶವಾದಿ ಧೋರಣೆಗಳಿಗೆ ಮದ್ದು ಇಲ್ಲ ಅಲ್ಲವೇ.

ನಾವು ವೈರಸ್‌ನ್ನು ಸೋಲಿಸಿದೆವು ಅನ್ನುವ ಭಾವನೆಗಿಂತ, ಒಂದು ಹೆಜ್ಜೆ ಹಿಂದೆ ನಿಂತು, ಈ ಅರೆ ಜೀವಿರೂಪದ ವೈರಾಣು ವಸುಂಧರೆಯ ಸಂದೇಶ ತಂದಿರಬಹುದಾ? ಎಂದು ಯೋಚಿಸಬೇಕು. ಈ ನರ ಜಾತಿಯ ಪ್ರಾಣಿ, ಆಗ ಮಾನವ ಎಂದು ಎನಿಸಿಕೊಂಡಿದ್ದಕ್ಕೆ ಸಾರ್ಥಕ ಎನಿಸುತ್ತದೆ ಎಂಬುದು ನನ್ನ ಭಾವನೆ. ಮನುಕುಲದ ಅಮಾನವೀಯ ಮೌಲ್ಯಗಳಿಗೆ ಮಾತೆ ಪ್ರಕೃತಿ, ಈ ವೈರಸ್ ರೂಪದಲ್ಲಿ ಕನ್ನಡಿ ಹಿಡಿದಿದೆ ಅನ್ನಿಸುವದಿಲ್ಲವೇ? ಯೋಚಿಸಿನೋಡಿ. ಇದು ಮನುಕುಲ ತನ್ನ ಮುಸುಡಿ ನೋಡಿಕೊಳ್ಳುವ ಕಾಲ.

ಕರೋನಾ ಎಂಬ ಮಹಾಮಾರಿ ಇಷ್ಟೆೆಲ್ಲ ರಾದ್ಧಾಾಂತದ ನಡುವೆಯೂ ಅರಸೊತ್ತಿಗೆಯಲ್ಲಿ ಮೆರೆದವರೂ, ಕೊಳಗೇರಿ ಕರ್ಮಚಾರಿಗಳು ಎಲ್ಲರೂ ಮನುಜರೇ ಎಂದು ಸಾಬೀತು ಮಾಡಿ ತೋರಿಸಿದೆ. ವುಹಾನ್ ಮಾಂಸ ಮಾರುಕಟ್ಟೆೆಯ ಕಟುಕನಿಂದ ಹಿಡಿದು, ಬ್ರಿಟನ್ ಪ್ರಧಾನಿಯವರೆಗೆ ಎಲ್ಲರೂ ಸಾಮಾನರು ಎಂದು ಖಾತ್ರಿ ಆಗಿದೆ! ಮಸೀದಿ, ಮಂದಿರ, ಚರ್ಚ್ಗಳು ಕದವ ಮುಚ್ಚಿ ಕರೋನಾ ಮಾರಕ ಜಪವ ಭಜಿಸಿವೆ. ರಾಶಿ-ರಾಶಿ ಬಿಸಿ-ಬಿಸಿ ಹೊಗೆ ಉಗುಳುತ್ತಿದ್ದ ವಿಮಾನಗಳು ಥಟ್ಟನೆ ತಣ್ಣಗಾಗಿವೆ. ಒಂದು ಕ್ಷಣ ಯೋಚಿಸಿ ನೋಡಿ, ಮೂರು ತಿಂಗಳಿನ ಹಿಂದೆ ಯಾರಾದರೂ ಬಹುತೇಕ ವಿಶ್ವದ ವಿಮಾನಗಳು ಹಾರಾಟ ನಿಲ್ಲಿಸುತ್ತವೆ ಅಂದರೆ ನಂಬುತ್ತಿದ್ದರಾ? ಖಂಡಿತ ಇಲ್ಲಾ. ಜಗತ್ತಿನ ಪರಿಸರ ವಾದಿಗಳೆಲ್ಲಾ ಬಹಳ ಸಲ ಪ್ರಕೃತಿಯ ವಿಕೋಪಗಳ ಬಗ್ಗೆ ಘೀಳಿಟ್ಟಿದ್ದು ಇದೆ, ಆದರೆ ಯಾರಾದರೂ ಅವರ ಮಾತನ್ನು ಕೇಳಿದ್ದೀರಾ? ಹೀಗೊಂದು ಸಂಕಷ್ಟ ದಿನವನ್ನು ಊಹಿಸಿದ್ದಿರಾ? ನಾನೆಂತೂ ಊಹಿಸಿರಲಿಲ್ಲ. ಅರ್ಥಶಾಸ್ತ್ರ, ಮಾರುಕಟ್ಟೆ, ಜಿಡಿಪಿ ಲೆಕ್ಕಹಾಕುವವರು, ವೈದ್ಯಶಾಸ್ತ್ರ, ಅರೋಗ್ಯಶಾಸ್ತ್ರ, ಜನಸಂಖ್ಯಾ ಪೋಷಣಾ ಮತ್ತು ಅಭಿವೃದ್ಧಿ ಶಾಸ್ತ್ರಗಳ ಅಧ್ಯಯನಕ್ಕೆ ಆರಂಭಿಸಿದ್ದಾರೆ ಅಂದರೆ ಅದು ಅತಿಶಯೋಕ್ತಿಇಲ್ಲ.

ಭೂಮಿ ಅಲ್ಪ ಸ್ವಲ್ಪ ಭಾರವನ್ನು ಕಳೆದುಕೊಳ್ಳುತ್ತಿದ್ದಾಳೆ. ಅಥವಾ ಇನ್ನೊೊಂದು ರೀತಿಯಲ್ಲಿ ಹೇಳಬೇಕೆಂದರೆ ಮಾನವನ ಬದುಕಿನ ಪಥದ ತಿದ್ದುಪಡಿಯ ಬಯಸಿದ್ದಾಳೆ. ನಾಗೇಶ ಹೆಗಡೆ ಯವರು ಹೇಳುವಂತೆ ಅಲ್ಲಿ ಇಲ್ಲಿ ಫುಸ್ಸೆೆಂದು ಹೊಗೆ ಬಿಡುತ್ತ ಧಾವಿಸಿದ್ದ ಮನುಷ್ಯನಿಗೆ ದಿಗ್ಬಂಧನ ಹಾಕಿ, ಆತನ ಹೊಗೆಯ (ತ್ಯಾಜ್ಯ ಅನಿಲಗಳ) ದಟ್ಟಣೆ ಕಮ್ಮಿ ಮಾಡಿ, ಆಕಾಶವನ್ನು ತಿಳಿಗೊಳಿಸಿದ್ದಾಳೆ. ಮಾನವ ಬದುಕಲು ಭೂತಾಯಿಯ ಮಡಿಲೇ ಬೇಕು ಮತ್ತು ಅತೀ ಅವಶ್ಯ; ಧಾರಿಣಿಗೆ ದಾನವ ಸ್ವರೂಪಿ ಮಾನವನ ಅವಶ್ಯಕತೆ ಕಿಂಚಿತ್ತೂ ಇಲ್ಲವೇ ಇಲ್ಲ ಎಂಬುದು ನನ್ನ ಅಂಬೋಣ. ನಮಗೆ ಪ್ರಕೃತಿ ಅರಳೀ ಮರವೇ ಆದರೆ, ಪ್ರಕೃತಿಗೆ ನಾವೆಲ್ಲರೂ ಒಂದು ರೀತಿಯ ತರೆಗೆಲೆಗಳೇ. ನಾವು ಪ್ರಕೃತಿಯ ಜತೆ ಹೊಂದಿಕೊಂಡು ಇದ್ದಷ್ಟು ದಿನ ಬದುಕು. ಹತ್ತು ಎಲೆ ಬಿದ್ದಮೇಲೆ ಮರದ ಉಳಿದ ಎಳೆಗಳು ತನ್ನ ಹಸಿರ ಕಳೆದುಕೊಂಡು ಮರುಗಿ ಒಣಗುತ್ತವೆ. ಇಂದು ನಾವು ಹೆದರಿ ಬೆಚ್ಚಿ ನಿಂತಿರುವುದು ಇದೇ ಕಾರಣಕ್ಕೆೆ ಇರಬಹುದಾ? ಪ್ರಕೃತಿಯ ಕೂಪಕ್ಕೆ ಕಳವಳಿಸಿ ಇಂದು ಮನುಜ ಮನೆ ಬಂಧಿಯಾಗಿದ್ದಾನೆ. ಕ್ಷಮಯಾ ಧರಿತ್ರಿಯೂ ಮುನಿದಾಳು, ಪ್ರೀತಿಯಿಂದ ಎರಡು ಏಟು ಕೊಟ್ಟಾಳು ಎಂದು, ಎಂದಾದರೂ ಹುಲು ಮಾನವ ಯೋಚಿಸಿಯಾನೆ? ಕಾಲವೇ ಉತ್ತರಿಸಬೇಕು.

ಇಂದು ತಾಯಿ ಮುನಿದಿಹಳು
ತಾನೇ ತಣ್ಣಗಾಗುವಳು
ತಡೆದು ತಿಳಿಹೇಳಿಹಳು
ಹಾಗೇ ಸರಿಹೋಗುವಳು

ಎಂದೂ ಕರೆಗೆ ಓಗೊಡದವ
ತನ್ನ ತಾನು ಮರೆತವ
ಅಹಂ ಎಂದು ಮೆರೆವವ
ಕೇಳುವವನೆ? ಹುಲು ಮಾನವ॥