Wednesday, 5th August 2020

ಯೋಗೇಶ್ವರ್ ಆರೋಪಕ್ಕೆ ಸಾಕ್ಷಿ ಇದೆಯಾ?: ದೇವೇಗೌಡರ ಪ್ರಶ್ನೆ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು: 
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾಡಿರುವ ಆರೋಪಕ್ಕೆ ಏನಾದರು ಸಾಕ್ಷಿಯಾಧಾರ ಇದೆಯಾ ? ಕುಮಾರಸ್ವಾಮಿ ಕದ್ದು ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರು ಹೇಳಿದಂತೆ ಒಂದು ಕಾಲದಲ್ಲಿ ಕುಮಾರಸ್ವಾಮಿ ಅಧಿಕಾರ ಮಾಡಿದ್ದಾರೆ. ಸುಮ್ಮನೆ ಈ ರೀತಿ ಲಘುವಾಗಿ ಮಾತಾಡಬಾರದು ಎಂದು ಯೋಗೇಶ್ವರ್ ಆರೋಪಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಸರಕಾರವನ್ನು ಅಸ್ಥಿರ ಮಾಡಲ್ಲ ಎಂದು ಹೇಳಿದ್ದಾರೆ. ಅವರಲ್ಲೇ ವ್ಯತ್ಯಾಸಗಳು ಬಂದರೆ ಆಗ ಚುನಾವಣೆ ಬರುತ್ತದೆ. ಅಷ್ಟೇ ಹೊರತು ಬಿಜೆಪಿ ಪರವಾಗಿ ಕುಮಾರಸ್ವಾಮಿ ಇದ್ದಾರೆ ಎನ್ನುವುದು ಸುಳ್ಳು. ನಾವು ಸರಕಾರ ಅಸ್ಥಿರಗೊಳಿಸಲ್ಲ ಎಂದು ಹೇಳಿದ್ದೇವೆ, ನಾವ್ಯಾಕೆ ಬಿಜೆಪಿ ಸರಕಾರ ಅಸ್ಥಿರಗೊಳಿಸಬೇಕು. ಅದರ ಅವಶ್ಯಕತೆ ನನಗೆ ಇಲ್ಲ. ವಿಧಾನಸಭಾ ಚುನಾವಣೆಗೊಸ್ಕರ  ನಾನು ಸಭೆ ಕರೆದಿಲ್ಲ. 33 ಜನ ಶಾಸಕರು ನಮ್ಮ ಪಕ್ಷದಲ್ಲಿ ಇದ್ದಾರೆ.  ಪಕ್ಷವನ್ನ ಬೆಳೆಸುವುದಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ ಎಂದರು
ರಾಜ್ಯ ಸರಕಾರದ ಜನ ವಿರೋಧಿ ಕಾಯಿದೆ ತಿದ್ದುಪಡಿಗಳ ಬಗ್ಗೆ ಪ್ರತಿಭಟಿಸಲು ಪೂರ್ವ ಭಾವಿ ಸಭೆ ಕರೆದಿದ್ದೇವೆ. ಆಗಸ್ಟ್ 4 ರಂದು ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಸೋತ ಅಭ್ಯರ್ಥಿ ಗಳು,  ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೂ ತಾಲೂಕು ಅಧ್ಯಕ್ಷರ ಸಭೆಯನ್ನು ಮತ್ತೊಂದು ಬಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಅಧಿವೇಶನ ಕರೆಯಲು ರಾಜ್ಯ ಸರಕಾರ ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇವೆ. ರಾಜ್ಯಾದ್ಯಂತ ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ. ರಾಜ್ಯ ಸರಕಾರ ರೈತವಿರೋಧಿ ಕಾಯಿದೆ ತಿದ್ದುಪಡಿ ಗಳ ವಿರೋಧ ಪ್ರತಿಭಟನೆಗೆ ನಿರ್ಧಾರ ಮಾಡುತ್ತೇವೆ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.
 ಜೆಡಿಎಸ್ ಕಾರ್ಯಕರ್ತರನ್ನ ಡಿಕೆ ಸಹೋದರರು ಕಾಂಗ್ರೆಸ್ ಸೆಳೆಯುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ನಾನು ಊಹಾಪೋಹದ ಮಾತುಗಳಿಗೆ ಉತ್ತರ ನೀಡಲ್ಲ. ನನಗೆ ಸಾಕಷ್ಟು ರಾಜಕೀಯ ಅನುಭವ ಇದೆ. ನನಗೆ ಏನು ನಡೆಯುತ್ತಿದೆ ಎಲ್ಲವೂ ಗೊತ್ತಿದೆ. ಅವರ ಪಕ್ಷದ ತತ್ವ ಸಿದ್ಧಾಂತ‌ ಒಪ್ಪಿ ಬರುವುದಾದರೆ ಬನ್ನಿ ಎಂದಿದ್ದಾರೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
……….
ಟಿಪ್ಪು ಪರ ದೇವೇಗೌಡ ಬ್ಯಾಟಿಂಗ್
 ರಾಜ್ಯ ಸರಕಾರ ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡ ಅವರು, ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಟಿಪ್ಪು ಪಾಠವನ್ನು ನಾವೇ ಓದಿದ್ದೇವೆ. ಟಿಪ್ಪು ಹೆಸರಲ್ಲಿ ಗುಲ್ಬರ್ಗಾ, ಬಿಜಾಪುರ, ಶ್ರೀರಂಗಪಟ್ಟಣ, ರಾಮನಗರ, ಧಾರವಾಡದಲ್ಲಿ ಟಿಪ್ಪು ಹೆಸರಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಆಗ ಯಾರೂ ವಿರೋಧ ಮಾಡಲಿಲ್ಲ. ಈಗ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡುವುದು ಬೇಕಿರಲಿಲ್ಲ. ಈ ಬಗ್ಗೆ ಸರಕಾರ ಮತ್ತೆ ಪರಿಶೀಲನೆ ಮಾಡಬೇಕು. ಎಲ್ಲರಿಗೂ ಸಮಾಧಾನ ಆಗುವಂತಹ ನಿರ್ಧಾರ ಮಾಡಬೇಕು ಎಂದರು.
……..
ಪಿಎಸ್ಐ ಕಿರಣ್ ಆತ್ಮಹತ್ಯೆ  ಪ್ರಕರಣ ತನಿಖೆ ಮಾಡಿ
 ದೇವೇಗೌಡರು ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್ಐ ಕಿರಣ್ ಆತ್ಮಹತ್ಯೆ  ಕುರಿತು ಮಾತನಾಡಿದ ಅವರು, ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಮೇಲಾಧಿಕಾರಿಗಳು ಹಿಂಸೆ ಕೊಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬಗ್ಗೆ ಗೃಹ ಸಚಿವರು ಸೂಕ್ತ ತನಿಖೆ ಮಾಡಬೇಕು ಎಂದು ದೇವಗೌಡರು  ಒತ್ತಾಯಿಸಿದರು.

Leave a Reply

Your email address will not be published. Required fields are marked *