ರಾಮನಗರ
ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರ ಹೆಸರಿನಲ್ಲಿ ಸರ್ಕಾರದ ಸೌಲಭ್ಯಗಳ ದುರುಪಯೋಗ ಪಡೆದುಕೊಳ್ಳುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್ ಸೋಂಕು ಹರಡದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ಡೌನ್ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರು ಮತ್ತು ವಲಸೆ ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಲಾಗುತ್ತಿದೆ. ಪಡಿತರ ಚೀಟಿ ಹೊಂದಿಲ್ಲದಿದ್ದರೂ ಇಂತಹವರಿಗೆ ಸರ್ಕಾರದ ವತಿಯಿಂದ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದೆ.
ಸರ್ಕಾರ ಸದುದ್ದೇಶದಿಂದ ಕೈಗೊಂಡಿರುವ ಈ ಕ್ರಮಕ್ಕೆ ರಾಮನಗರ ಜಿಲ್ಲೆಯಲ್ಲಿರುವ ಅನುಕೂಲಸ್ಥ ಜನರು ತಪ್ಪು ಮಾಹಿತಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿರುವುದಾಗಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.
ಪಡಿತರ ಚೀಟಿ, ಮನೆ ಹೊಂದಿದ್ದರೂ ವಲಸೆ ಕಾರ್ಮಿಕರ ಹೆಸರಿನಲ್ಲಿ ಸುಳ್ಳು ಕರೆಗಳನ್ನು ಮಾಡಿ ಅಧಿಕಾರಿಗಳ ದಿಕ್ಕು ತಪ್ಪಿಸುವುದರ ಜೊತೆಗೆ ಅನಗತ್ಯ ಗೊಂದಲಗಳನ್ನು ಸೃಷ್ಠಿಸುತ್ತಿದ್ದಾರೆ. ಕರೆಗಳನ್ನು ಆಧರಿಸಿ ಅಧಿಕಾರಿಗಳು ಸ್ಥಳ ಭೇಟಿಗೆ ತೆರಳಿದಾಗ ಅವುಗಳು ಹುಸಿ ಕರೆಗಳೆನ್ನುವುದು ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಪ್ಪು ಮಾಹಿತಿ ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಯತ್ನಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.