ಶಿರಸಿ :
ಕೊರೊನಾ ಮಹಾಮಾರಿಯಿಂದ ಶಿರಸಿ ಮೊದಲ ಸಾವು ಕಂಡಿದ್ದು, ಸೋಮವಾರ ಮುಂಜಾನೆ ದೃಢವಾಗಿದ್ದ ತಾಲೂಕಿನ ಬಾಳಗಾರಿನ ವ್ಯಕ್ತಿ ಕೊವಿಡ್ ನಿಂದ ಕಾರವಾರದಲ್ಲಿ ಮೃತಪಟ್ಟಿದ್ದಾರೆ.
೪೨ ವರ್ಷದ ಬೆಂಗಳೂರಿನಿಂದ ವಾಪಾಸ್ಸಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಇಂದು ಬೆಳಿಗ್ಗೆ ಕೊವಿಡ್ ದೃಢಪಟ್ಟಿತ್ತು. ನಂತರ ಬೆಳಿಗ್ಗೆ ೭.೩೦ ಕ್ಕೆ ಕಾರವಾರಕ್ಕೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧ್ಯಾಹ್ನ ೩.೩೦ ರ ವೇಳೆಗೆ ಮೃತಪಟ್ಟಿದ್ದು, ಶಿರಸಿಯಲ್ಲಿ ಮೊದಲ ಸಾವು ದಾಖಲಾಗಿದೆ.
ತಾಲೂಕಿನ ಅಜ್ಜೀಬಳ ಸಮೀಪದ ಬಾಳಗಾರಿನ ವ್ಯಕ್ತಿ ಶನಿವಾರ ಮುಂಜಾನೆ ೧.೩೦ ಕ್ಕೆ ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗಿದೆ. ನಂತರ ಸ್ಕಾನಿಂಗ್ ಒಳಪಡಿಸಿದಾಗ ನ್ಯೂಮೋನಿಯಾ ಆಗಿರುವುದು ಕಂಡು ಬಂದಿದ್ದು, ತಕ್ಷಣ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ನಂತರ ವರದಿ ಪಾಸಿಟಿವ್ ಬಂದಿದ್ದು, ತಕ್ಷಣವೇ ಕಾರವಾರದ ಕ್ರಿಮ್ಸ ಗೆ ರವಾನಿಸಲಾಗಿದೆ.
ಇದರಿಂದ ಸತತ ನಾಲ್ಕನೇ ದಿನ ಶಿರಸಿಯಲ್ಲಿ ಕೊರೊನಾ ಕಾಣಿಸಿಕೊಂಡಂತಾಗಿದ್ದು, ನಾಲ್ಕು ದಿನದಲ್ಲಿ ೧೪ ಜನರಿಗೆ ಸೋಂಕು ತಗುಲಿದೆ. ಗ್ರಾಮೀಣ ಭಾಗಕ್ಕೂ ಕೊರೊನಾ ಬಂದ ಕಾರಣ ಸಮುದಾಯಕ್ಕೆ ಹರಡಿತೇ ಎಂಬ ಭಯ ಎಲ್ಲರಲ್ಲಿ ಮೂಡಿದ್ದು, ಸಾರ್ವಜನಿಕರೇ ಸ್ವಯಂ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.
೬೪ ನೆಗೆಟಿವ್ :
ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಮುಖ್ಯ ಸಿಬ್ಬಂದಿಗಳು ಸೇರಿದಂತೆ ೬೪ ಜನರ ವರದಿ ನೆಗೆಟಿವ್ ಬಂದಿದ್ದು, ಜನರು ನೆಮ್ಮದಿಯಿಂದ ಉಸಿರು ಬಿಡುವಂತಾಗಿದೆ. ಸರ್ಕಾರಿ ಆಸ್ಪತ್ರೆಯ ಸಹಾಯಕಿಯೊಬ್ಬರಿಗೆ ಕೊರೊನಾ ದೃಢಪಟ್ಟ ಕಾರಣ ೧೫೦ ಸಿಬ್ಬಂದಿಗಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಮೊದಲ ಹಂತದ ವರದಿ ನೆಗೆಟಿವ್ ಬಂದಿದ್ದು, ಉಳಿದವರ ವರದಿ ಮಂಗಳವಾರ ಬರಬಹದು ಎಂದು ನಿರೀಕ್ಷಿಸಲಾಗಿದೆ.