Tuesday, 17th May 2022

ಸಂಕ ಮುರಿದಲ್ಲೇ ಸ್ನಾನ ಮಾಡುವುದು ಜಾಣತನ !

ನೂರೆಂಟು ವಿಶ್ವ

As you go to your edges, your edges expand
– Robin Sharma

ಮೊದಲೆಲ್ಲಾ ಒಂದು ದಿನ ಪತ್ರಿಕೆ ಬರದಿದ್ದರೆ ಜನ ಚಡಪಡಿಸುತ್ತಿದ್ದರು. ಉಳಿದವರೆಲ್ಲರಿಗೂ ವರ್ಷಕ್ಕೆ ನೂರಕ್ಕೂ ಹೆಚ್ಚು ದಿನ ರಜಾ ಇದ್ದರೆ, ಪತ್ರಿಕೆಗಳಿಗೆ ಮಾತ್ರ ವರ್ಷದಲ್ಲಿ ಕೇವಲ ನಾಲ್ಕು ದಿನ (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಮತ್ತು ಆಯುಧ ಪೂಜೆ) ರಜಾ. ಈ ಪೈಕಿ ಒಂದು ದಿನ ಪತ್ರಿಕೆ ಬರದಿದ್ದರೆ ಏನೋ ಕಳೆದುಕೊಂಡ ಭಾವ. ಪತ್ರಿಕೆ ರಜಾ ಇದ್ದ ದಿನ ನೂರಾರು ಓದುಗರು ಫೋನ್ ಮಾಡಿ, ‘ಪತ್ರಿಕೆಗಳಿಗೆ ರಜಾ ಕೊಡಲೇಬಾರದು. ಪತ್ರಿಕೆ ಓದದಿದ್ದರೆ ಸಮಾಧಾನವೇ ಇರುವುದಿಲ್ಲ. ಈ ಭಾವ ಇಡೀ ದಿನ ನೆಲೆಸಿರುತ್ತದೆ. ಮನೆಯಲ್ಲಿ ಶೋಕಾಚರಣೆಯ ವಾತಾವರಣ ಇದ್ದಂತಿರುತ್ತದೆ’ ಎಂದು ಹೇಳುತ್ತಿದ್ದರು. ‘ವಾಲ್ ಸ್ಟ್ರೀಟ್ ಜರ್ನಲ್’ ಸೇರಿದಂತೆ ಅನೇಕ ಪ್ರಮುಖ ಪತ್ರಿಕಾ ಕಚೇರಿಗಳಿಗೆ ಶನಿವಾರ ರಜಾ. ಹೀಗಾಗಿ ಭಾನುವಾರದ ಸಂಚಿಕೆ ಪ್ರಕಟವಾಗುವುದಿಲ್ಲ. ಅಂದರೆ ಈ ಪತ್ರಿಕೆಗಳಿಗೆ ವರ್ಷದಲ್ಲಿ ಐವತ್ತೆರಡು ದಿನ ರಜಾ. ಅಂಥ ಸ್ಥಿತಿ ನಮ್ಮಲ್ಲಿ ಇಲ್ಲ.

ಒಂದು ವೇಳೆ ಅಂಥ ಸ್ಥಿತಿ ನಮ್ಮಲ್ಲಿ ಬಂದರೂ ಜನ ಒಗ್ಗಿಕೊಂಡು ಬಿಡುತ್ತಾರೆ. ಅದನ್ನು ಕರೋನಾವೈರಸ್ ಸಾಬೀತು ಮಾಡಿದೆ. ಒಂದು ದಿನ ಪತ್ರಿಕೆ ಓದದಿದ್ದರೆ ಚಡಪಡಿಸುತ್ತಿದ್ದವರು, ಏನನ್ನೋ ಕಳೆದುಕೊಂಡೆವು ಎಂದು ಪರಿತಪಿಸುವವರು ಒಂದು, ಒಂದೂವರೆ ತಿಂಗಳುಗಳಿಂದ ಪತ್ರಿಕೆಯನ್ನೇ ನೋಡಿಲ್ಲ. ಆಶ್ಚರ್ಯಕರ ಸಂಗತಿಯೇನೆಂದರೆ, ಅವರಲ್ಲಿ ತಾವು ಏನನ್ನೋ ಕಳೆದುಕೊಂಡಿದ್ದೇವೆ ಎಂದು ಅನಿಸುತ್ತಿಲ್ಲ. ಯಾವುದೇ ಕ್ರಿಯೆಯನ್ನು ಸತತವಾಗಿ ಇಪ್ಪತ್ತೊಂದು ದಿನಗಳವರೆಗೆ ಮಾಡಿದರೆ, ಅದು ಅಭ್ಯಾಸವಾಗುವುದಂತೆ. ಅದೇ ಚಾಳಿ ಆಗುವುದಂತೆ. ಮೂವತ್ತು-ನಲವತ್ತು ವರ್ಷಗಳಿಂದ ಪ್ರತಿದಿನ ಕನಿಷ್ಠ ಒಂದು ಗಂಟೆ ಪತ್ರಿಕೆ ಓದುತ್ತಿದ್ದವರು, ಪತ್ರಿಕೆ ಓದದಿದ್ದರೆ ಸಿಟ್ ಸಿಟಾ ಎನ್ನುತ್ತಿದ್ದವರು ಈಗ ಪತ್ರಿಕೆ ಓದದಿದ್ದರೂ ದಿನವನ್ನು ಕಳೆಯಬಲ್ಲೆವು ಅಂದುಕೊಳ್ಳುತ್ತಿದ್ದಾರೆ. ಕರೋನಾವೈರಸ್ ಅವರಲ್ಲಿ ಅಂಥ ಒಂದು ಪರಿವರ್ತನೆಯನ್ನು ತಂದಿದೆ. ಅಂದರೆ ಜನ ಹೊಸ ಅಭ್ಯಾಸಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.

ಇದಕ್ಕೆ ಇಂಗ್ಲೀಷಿನಲ್ಲಿ adaptability ಅಂತಾರೆ. ಈ ಪದವನ್ನು ಇಂಗ್ಲಿಷ್ ಪದಕೋಶದಲ್ಲಿ ಹೀಗೆ ವಿವರಿಸಿದ್ದಾರೆ – Adaptability is a skill refers to the ability of a person to change his actions, course or approach to doing things in order to suit a new situation. ಅಂದರೆ ಹೊಸ ಪರಿಸರ, ವಾತಾವರಣಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಅಥವಾ ಎಂಥ ಸಂದರ್ಭಕ್ಕಾದರೂ ಹೊಂದಿಕೊಳ್ಳುವ ಚಾಕಚಕ್ಯತೆ . ಮನುಷ್ಯನ ಬಹಳ ದೊಡ್ಡ ಗುಣವಿದು. ಯಾರು ಬದಲಾಗುವ ಕಾಲಕ್ಕೆ, ಸನ್ನಿವೇಶ್ಜಕ್ಕೆ ಒಗ್ಗಿಕೊಳ್ಳುತ್ತಾರೋ ಅವರು ಎಂಥ ಪರಿಸ್ಥಿತಿಯನ್ನಾದರೂ ಎದುರಿಸುತ್ತಾರೆ. ಯಾರಲ್ಲಿ ಹೊಂದಾಣಿಕೆ ಇರುವುದಿಲ್ಲವೋ ಅವರು ಯಾರೊಡನೆಯೂ ಬೆರೆಯುವುದಿಲ್ಲ ಮತ್ತು ಯಾವ ಸನ್ನಿವೇಶಕ್ಕೂ ಒಗ್ಗಿಕೊಳ್ಳದೇ ಒದ್ದಾಡುತ್ತಾರೆ.

ಕರೋನಾವೈರಸ್ ನಮಗೆ ಕಲಿಸಿದ ಬಹಳ ದೊಡ್ಡ ಪಾಠವೆಂದರೆ ಈ adaptibility ಅರ್ಥಾತ್ ಹೊಂದಾಣಿಕೆ ಯಾನೆ ಒಗ್ಗಿಕೊಳ್ಳುವಿಕೆ. ಕಳೆದ ಎರಡು ತಿಂಗಳಿನಿಂದ ಜನ ತಮ್ಮ ತಮ್ಮ ಮನೆಗಳಿಂದ ಹೊರಗೆ ಹೋಗಲಿಲ್ಲ. ಪ್ರವಾಸಕ್ಕೆ ಹೋದ ಕೆಲವು ಜನ ಎಲ್ಲೆಲ್ಲೋ ಉಳಿದುಕೊಂಡರು. ಮುಂಬೈಗೆ ತಮ್ಮ ಪತ್ನಿ ಜತೆ ಹೋದ ನನ್ನ ಸ್ನೇಹಿತರೊಬ್ಬರು ಸುಮಾರು ಒಂದೂವರೆ ತಿಂಗಳು ತಮ್ಮ ಪರಿಚಯದವರೊಬ್ಬರ ಮನೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂತು. ಆರನೇ ಮಹಡಿಯಲ್ಲಿ ಒಂದು ಕೋಣೆಯ ಫ್ಲಾಟ್. ಆ ಪುಟ್ಟ ಗುಬ್ಬಿಗೂಡಿನಂಥ ಮನೆಯಲ್ಲಿ ಆಗಲೇ ಆರು ಜನ ವಾಸವಿದ್ದರು. ಹಠಾತ್ ಲಾಕ್ ಡೌನ್ ನಿಂದಾಗಿ ಇವರಿಬ್ಬರು ಹೆಚ್ಚು’ವರಿ’ಯಾಗಿ ಸೇರಿಕೊಂಡರು. ಒಂದೇ ಮನೆಯಲ್ಲಿ ಒಟ್ಟೂ ಎಂಟು ಜನ ಆ ರಣರಣ ಸೆಖೆಯಲ್ಲಿ, ಎಸಿ ಇಲ್ಲದೇ ಕಳೆಯಬೇಕಾಗಿ ಬಂದಿತು . ಇಪ್ಪತ್ತು ದಿನಗಳ ಬಳಿಕ ಅವರು ಆ ಪರಿಸರಕ್ಕೆ ಹೊಂದಿಕೊಳ್ಳಲಾರಂಭಿಸಿದರು. ಯಾವುದು ಅಸಹನೀಯ ಎಂದು ಅಂದುಕೊಂಡಿದ್ದರೋ ಅವು ನಿಧಾನವಾಗಿ ಸಹ್ಯವಾಗಲಾರಂಭಿಸಿದ್ದವು. ಆನಂತರ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲಾರಂಭಿಸಿದರು. ಆ ಇಕ್ಕಟ್ಟು, ಒತ್ತಟ್ಟಿನ ಬದುಕು, ಒಂದೇ ಕೋಣೆಯಲ್ಲಿ ಎಲ್ಲಾ ಮಾತಾಡುತ್ತಾ ಮಲಗುವುದು, ಪರಸ್ಪರ ಹಾಸ್ಯ ಮಾಡಿಕೊಳ್ಳುವುದು, ಅನ್ಯರ ಗೊರಕೆ, ಅದನ್ನೇ ಮರುದಿನ ಛೇಡಿಸುವುದು, ಟಾಯ್ಲೆಟ್ಟಿಗೆ ಪಾಳಿ ಹಚ್ಚುವುದು, ಅಲ್ಲಿ ತರೇಹವಾರಿ ಅನುಭವ… ಹೀಗೆ ಆ ಬದುಕು ಕ್ರಮೇಣ ಅವರಿಗೆ ಆಪ್ತವಾಗಲಾರಂಭಿಸಿದವು.

ಎಂಟೂ ಜನ ಸೇರಿ ಟಿವಿ ನೋಡುವುದು, ಅಡುಗೆ ಮಾಡುವುದು, ಒಟ್ಟಿಗೆ ಊಟ ಮಾಡುವುದು, ಎಲ್ಲಾ ಸೇರಿ ಹರಟೆ ಹೊಡೆಯುವುದು, ಒಬ್ಬರ ನಡೆವಳಿಕೆಗಳೇ ನಗುವಿಗೆ ಕಾರಣವಾಗುವುದು, ಈ ಎಲ್ಲಾ ಸಂಯುಕ್ತ ಭಾವಗಳೇ ಒಂದು ಹೊಸ ಬಂಧಕ್ಕೆ ಕಾರಣವಾಗುವುದು, ಕೊನೆಕೊನೆಗೆ ಅದರಲ್ಲಿಯೇ ಖುಷಿ ಕಾಣುವುದು ಮತ್ತು ಲಾಕ್ ಡೌನ್ ಮುಗಿಯುವ ಹೊತ್ತಿಗೆ ಅವರನ್ನು ಬಿಟ್ಟು ಬರಲು ಆಗದ ಒಂದು ಅವ್ಯಕ್ತ ಸೆಳೆತ ಅವರೆಲ್ಲರಲ್ಲಿ ಮನೆ ಮಾಡುವಂತಾಗಿದ್ದು, ಹೊಂದಾಣಿಕೆಯ ಜೀವನಕ್ಕೆ ಬರೆದ ಹೊಸ ಭಾಷ್ಯ. ಮುಂಬೈ ಲೋಕಲ್ ಟ್ರೈನ್ ಸ್ಟೇಷನ್ ಗೆ ಬಂದು ನಿಲ್ಲುತ್ತಿದ್ದಂತೆ, ಅದರೊಳಗೆ ಹೋಗುವುದು ಹೇಗೆ ಎಂಬ ತಲೆನೋವು ಆರಂಭವಾಗುತ್ತದೆ. ಕಾರಣ ಬೋಗಿಯೊಳಗೆ ಕಾಲೂರಲೂ ಜಾಗವಿರುವುದಿಲ್ಲ. ನಮ್ಮ ಮೊಣಕೈ ಆಡಿಸುವಷ್ಟು ಜಾಗ ಸಿಕ್ಕರೆ, ಎಷ್ಟು ದೂರದ ಪಯಣವನ್ನಾದರೂ ಸಲೀಸಾಗಿ ಮಾಡಬಹುದು. ಆರಂಭದಲ್ಲಿ ಯಾವುದು ಅಸಾಧ್ಯವೆಂದು ಅಂದುಕೊಳ್ಳುತ್ತೇವೋ ಅದು ನಿಧಾನವಾಗಿ ಸಾಧ್ಯವಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ, ಕ್ರಮೇಣ ಅದೇ ಆಪ್ತವಾಗುತ್ತಾ ಹೋಗುತ್ತದೆ. ಕೊನೆಗೆ ಅದೇ ನಮ್ಮಲ್ಲಿ ಸ್ಥಾಯಿಭಾವವಾಗಿ ನೆಲೆ ನಿಲ್ಲುತ್ತದೆ.

ನೀವು ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಮತ್ತು ಬ್ರಿಟನ್ ಸಂಸತ್ತಿನ ಮೇಲ್ಮನೆ ಸದಸ್ಯ ಲಾರ್ಡ್ ಜೆಫ್ರಿ ಆರ್ಚರ್ ಹೆಸರನ್ನು ಕೇಳಿರುತ್ತೀರಿ. ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ , ಅವರು ಆತ್ಮಹತ್ಯೆಗೆ ಯೋಚಿಸಿದ್ದರು. ತಾವು ಜೈಲಿಗೆ ಹೋದರೆ, ಜಗತ್ತು ತನ್ನನ್ನು ಹೇಗೆ ನೋಡಬಹುದು, ತನ್ನ ಓದುಗರು ತನ್ನನ್ನು ತಿರಸ್ಕರಿಸಬಹುದು, ತಾನು ತಲೆ ಎತ್ತಿ ಬದುಕುವುದು ಹೇಗೆ ಈ ಯೋಚನೆ ಅವರನ್ನು ಕಿತ್ತು ತಿನ್ನಲಾರಂಭಿಸಿತು. ಆದರೆ ಅನ್ಯ ಮಾರ್ಗವಿರಲಿಲ್ಲ. ಗಟ್ಟಿ ಮನಸ್ಸು ಮಾಡಿ ಜೈಲು ಶಿಕ್ಷೆ ಅನುಭವಿಸಲು ನಿರ್ಧರಿಸಿದರು. ಆರಂಭದ ಎರಡು ವಾರಗಳ ಜೈಲು ವಾಸ ಅವರಲ್ಲಿ ತೀವ್ರ ಹತಾಶೆ, ಜುಗುಪ್ಸೆ, ಖಿನ್ನತೆಯನ್ನು ಮೂಡಿಸಿದವು. ನಾಲ್ಕು ವರ್ಷಗಳ ಕಾಲ ಅಲ್ಲಿ ಬದುಕು ಸವೆಸುವುದು ಸಾಧ್ಯವೇ ಇಲ್ಲ ಎಂದು ಅಂದುಕೊಂಡರು. ಆದರೆ ಆ ಪರಿಸರಕ್ಕೆ ಒಗ್ಗಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎಂದು ಅವರಿಗೆ ಅನಿಸಲಾರಂಭಿಸಿತು. ನಿಧಾನವಾಗಿ ಅವರು ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾರಂಭಿಸಿದರು. ಅಲ್ಲಿನ ಖೈದಿಗಳ ಜತೆ ಬೆರೆಯಲಾರಂಭಿಸಿದರು. ಅವರ ಕಥೆಗಳಿಗೆ ಕಿವಿಯಾಗಲಾರಂಭಿಸಿದರು.

ಬರಬರುತ್ತಾ ತಮ್ಮ ಕೋಣೆ, ಅಲ್ಲಿನ ಪರಿಸರ, ತಮ್ಮ ಜತೆಗಿನ ಸಹ ಖೈದಿಗಳು, ಜನ ಅವರಿಗೆ ಸಹ್ಯವಾಗಲಾರಂಭಿಸಿದರು. ಒಬ್ಬ ಲೇಖಕ ಅಥವಾ ಕಾದಂಬರಿಕಾರನಿಗೆ ಜೈಲಿನ ಅನುಭವಗಳನ್ನು ಖುದ್ದಾಗಿ ಅನುಭವಿಸುವುದು ಎಷ್ಟು ಮುಖ್ಯ ಎಂಬುದು ಅವರಿಗೆ ಅನಿಸಲಾರಂಭಿಸಿದವು. ಜೈಲಿನ ದಿನಚರಿ ಬರೆಯಲಾರಂಭಿಸಿದರು. ಜೈಲಿನ ಪರಿಸರ ಅವರನ್ನು ಬಲವಾಗಿ ಕಾಡಲಾರಂಭಿಸಿತು. ಜೈಲಿನಲ್ಲಿರುವವರ ಅಸಹಾಯಕತೆ, ಅವರನ್ನು ಅಲ್ಲಿಗೆ ಬರುವಂತೆ ಮಾಡಿದ ಪ್ರಸಂಗ, ಬದುಕಿನ ಅನಿವಾರ್ಯತೆ, ಅವರನ್ನು ಗಾಢವಾಗಿ ಕಲಕಿತು. ತಮ್ಮ ಪ್ರತಿದಿನದ ಕಾರ್ಯ ಚಟುವಟಿಕೆ, ಅನಿಸಿಕೆ, ಮನಸ್ಸಿನಲ್ಲಿ ಹಾದು ಹೋದ ಯೋಚನೆ, ಭಾವನೆಗಳನ್ನೆಲ್ಲಾ ದಾಖಲಿಸಲಾರಂಭಿಸಿದರು. ಒಂದು ವೇಳೆ ತಾವು ಜೈಲು ಶಿಕ್ಷೆ ಅನುಭವಿಸದೇ ಹೋಗಿದ್ದರೆ, ಒಬ್ಬ ಕಾದಂಬರಿಕಾರನಾಗಿ ಕೆಲವೊಂದು ಅದ್ಭುತ ಅನುಭವಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರಿಗೆ ಅನಿಸಲಾರಂಭಿಸಿತು. ತಮ್ಮ ಬದುಕು ಈ ದೃಷ್ಟಿಯಿಂದ ಅಪೂರ್ಣ ಎಂದು ಅವರಿಗೆ ಮನವರಿಕೆಯಾಯಿತು. ಜೈಲು ವಾಸ ಅನುಭವಿಸಬೇಕಾಗಿ ಬಂದುದಕೆ ಅವರಲ್ಲಿ ಯಾವ ವಿಷಾದ ಅಥವಾ ಪಶ್ಚಾತ್ತಾಪ ಇರಲಿಲ್ಲ. ಒಂದು ರೀತಿಯಲ್ಲಿ ಅದೊಂದು ಭಿನ್ನ ಅನುಭವಕ್ಕೆ ಕಾರಣವಾದ ಅವಕಾಶ ಎಂದು ಅಂದುಕೊಂಡರು.

ಜೈಲುವಾಸ ಅವರಲ್ಲಿ ಅಗಾಧ ಪರಿವರ್ತನೆಗೆ ಕಾರಣವಾಗಿತ್ತು. ಅವರೊಳಗೆ ಹೊಸ ಜೆಫ್ರಿ ಆರ್ಚರ್ ಹುಟ್ಟಿಕೊಂಡಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ, ಅವರು ಅಪರಿಮಿತ ಜೀವನಾನುಭವ ಹೊತ್ತು ಬಂದಿದ್ದರು. ಮೂರು ಪುಸ್ತಕಗಳನ್ನು (A Prison Diary Series – Hell, Purgatory, Heaven) ಬರೆದರು. ಈ ಮೂರೂ ಕೃತಿಗಳು ಬಿಸಿಬಿಸಿ ದೋಸೆಗಳಂತೆ ಖರ್ಚಾದವು. ಜಗತ್ತಿನಾದ್ಯಂತ ಈ ಕೃತಿಗಳ ಹತ್ತಾರು ಲಕ್ಷ ಪ್ರತಿಗಳು ಮಾರಾಟವಾದವು. ‘ಜೆಫ್ರಿಯನ್ನು ಮತ್ತೊಮ್ಮೆ ಜೈಲಿಗೆ ಕಳಿಸಿ, ಇನ್ನೂ ಒಳ್ಳೆಯ ಕಾದಂಬರಿ ಅವರಿಂದ ಹೊರಬರಬಹುದು’ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟರು. ಆತ್ಮಹತ್ಯೆಗೆ ಯೋಚಿಸಿದ್ದ ಜೆಫ್ರಿ ಮುಂದೆ ಹೊಸ ಬದುಕು ತೆರೆದುಕೊಂಡಿತ್ತು. ಯಾವುದು ಅಸಾಧ್ಯ ಎಂದು ಭಾವಿಸಿದ್ದರೋ ಅದನ್ನು ಅವರು ಪ್ರೀತಿಸಲಾರಂಭಿಸಿದರು. ಹೊಸ ಬದುಕಿಗೆ ಒಗ್ಗಿಕೊಂಡಿದ್ದರ ಪರಿಣಾಮ ಅವರಲ್ಲಿ ಹೊಸ ಅವಕಾಶ, ಸಾಧ್ಯತೆಗಳು ಹುಟ್ಟಿಕೊಂಡವು. ಎಲ್ಲಿ ಎಲ್ಲ ದಾರಿಗಳು ಬಂದ್ ಆದವು ಎಂದು ಅಂದುಕೊಂಡಿದ್ದರೋ, ಅಲ್ಲಿಯೇ ಅನೇಕ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಾ ಹೋದವು.

ಹಾಗೆ ನೋಡಿದರೆ, ಎಲ್ಲಾ ದಾರಿಗಳು ಬಂದ್ ಆದವು ಎಂಬ ಪರಿಸ್ಥಿತಿಯೇ ಬರುವುದಿಲ್ಲ. ಹೊಸ ಮಾರ್ಗಗಳು ತೆರೆದುಕೊಂಡಿದ್ದನ್ನು ನಾವು ಗಮನಿಸಿರುವುದಿಲ್ಲ ಅಷ್ಟೇ. ಒಗ್ಗಿಕೊಳ್ಳುವುದರಲ್ಲಿ ಮನುಷ್ಯ ಪ್ರಾಣಿಗಳಿಗಿಂತ ಮೇಲು. ಮೊಟ್ಟೆ ಇಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ, ಪಕ್ಷಿಗಳು ಐದಾರು ಸಾವಿರ ಮೈಲಿ ದೂರ ಹಾರಿ, ತಮಗೆ ಪರಿಚಯವೇ ಇಲ್ಲದ, ಯಾವುದೋ ಅಜ್ಞಾತ ಸ್ಥಳವನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು, ಅಲ್ಲಿ ತಮ್ಮ ಬದುಕಿನ ಕುಡಿಗಳಿಗೆ ಜನ್ಮ ನೀಡುತ್ತವೆ. ಹೊಂದಿಕೊಳ್ಳುವ ಮನೋಭಾವವಿದ್ದರೆ ಮನುಷ್ಯ ಎಲ್ಲಿ ಬೇಕಾದರೂ ಜೀವಿಸಬಲ್ಲ, ಎಂಥ ಸನ್ನಿವೇಶ, ಪರಿಸ್ಥಿತಿಗಾದರೂ ಮೈಯೊಡ್ಡಬಲ್ಲ.

ಕರೋನಾವೈರಸ್ ಮತ್ತು ಲಾಕ್ ಡೌನ್ ಬದುಕು ನಮಗೆ ಕಲಿಸಿರುವುದು ಅದನ್ನೇ. ಕಳೆದ ಎರಡು ತಿಂಗಳಿನಿಂದ ಬೇರೆ ಜಗತ್ತಿನ ಜತೆ ಮುಖಾಮುಖಿಯಾಗದೇ ಎಲ್ಲರೂ ಜೀವಿಸುತ್ತಿದ್ದಾರೆ. ಯಾವುದು ಅಸಾಧ್ಯ ಎಂದುಕೊಂಡಿದ್ದೆವೋ ಅವೆಲ್ಲವೂ ಸಾಧ್ಯವಾಗುತ್ತಿವೆ. ಎದುರಿಗೆ ಸಿಕ್ಕ ಆಪ್ತರನ್ನು ದೂರವಿಡುತ್ತಿದ್ದೇವೆ. ಕೊರಳ ಬಾಂಧವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಹೆತ್ತವರ ಜತೆಗೂ ಅಂತರ ಕಾಪಾಡಿಕೊಳ್ಳುತ್ತಿದ್ದೇವೆ. ದೇಹದ private parts ಗಳನ್ನು ಮುಚ್ಚಿಕೊಳ್ಳುವ ರೀತಿಯಲ್ಲಿ ಈಗ ಮುಖವನ್ನು ಮುಚ್ಚಿಕೊಳ್ಳುತ್ತಿದ್ದೇವೆ. ಯಾರಾದರೂ ಹತ್ತಿರ ಬಂದರೆ, ಏನೋ ಅಲವರಿಕೆ. ದೂರ ಸರಿಯುವಂತೆ ಮನಸ್ಸು ಹೇಳುತ್ತದೆ. ಹೊಸ ಬಟ್ಟೆ ಧರಿಸದೇ , ಔಟಿಂಗ್ ಹೋಗದೇ, ಹೋಟೆಲ್ ತಿಂಡಿ ಚಪ್ಪರಿಸದೇ, ಸಿನಿಮಾಕ್ಕೆ ಹೋಗದೇ .. ಹೀಗೆ ನಮ್ಮದಲ್ಲದ ಜೀವನವನ್ನು ಬದುಕುತ್ತಾ, ಅಸಹ್ಯಪಟ್ಟುಕೊಳ್ಳುತ್ತಾ, ಅದಕ್ಕೆ ಒಗ್ಗಿಕೊಳ್ಳುತ್ತಾ, ಸಾವಧಾನವಾಗಿ ಅದನ್ನೇ ಇಷ್ಟಪಡುತ್ತಾ ದಿನ ದೂಡುವುದರಲ್ಲಿ ಸಮಾಧಾನ ಕಾಣುತ್ತಿದ್ದೇವೆ.

ಲಾಕ್ ಡೌನ್ ಗೆ ಒಗ್ಗಿಕೊಳ್ಳಲು ಕಟ್ಟಿಗೆ ಡಿಪೋ ಇಟ್ಟವನ ಮನಸ್ಥಿತಿಯಿರಬೇಕು. ಒಂದು ವೇಳೆ ಡಿಪೋದಲ್ಲಿರುವ ಕಟ್ಟಿಗೆಗಳೆಲ್ಲ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದರೆ ಹೆದರುವುದಿಲ್ಲ, ನಾನು ಕನಿಷ್ಠ ಇದ್ದಿಲಿನ ಹೊಸ ವ್ಯಾಪಾರ ಮಾಡುತ್ತೇನೆ ಎಂಬ ಛಲ, ಹೊಸ ಹುಡುಕಾಟ ಭಾವವಿರಬೇಕು. ಕಟ್ಟಿಗೆ ಡಿಪೋ ಬೆಂಕಿಗೆ ಭಸ್ಮವಾದರೆ, ಅಲ್ಲಿಗೆ ತನ್ನ ಬದುಕು ಆಹುತಿಯಾದಂತೆ ಎಂದು ಯೋಚಿಸಬಾರದು. ಬೂದಿಯಿಂದ ಇಟ್ಟಿಗೆ ಮಾಡಿ ಮಾರಾಟ ಮಾಡುತ್ತೇನೆ ಎಂಬ ಹೊರಳುಭಾವ ಇರಲೇಬೇಕು. ಇಲ್ಲದಿದ್ದರೆ ಲಾಕ್ ಡೌನ್ ನಮ್ಮನ್ನು ನೆಲಕಚ್ಚುವಂತೆ ಮಾಡಿಬಿಡುತ್ತದೆ.

ನನಗೆ ಇಲ್ಲಿ ಮತ್ತೊಂದು ಕರೋನಾ ನೆನಪಾಗುತ್ತಿದೆ. ನೀವು ಸ್ಮಿತ್ ಕರೋನ ಎಂಬ ಸಂಸ್ಥೆಯ ಹೆಸರನ್ನು ಕೇಳಿರಬಹುದು. ಇದು ಜಗತ್ತಿನ ಅತಿ ಪ್ರಮುಖ ಟೈಪ್ ರೈಟರ್ ಕಂಪೆನಿಗಳಲ್ಲೊಂದು. ಅಮೆರಿಕದ ಈ ಕಂಪನಿ, 1960ರಿಂದ ಇಪ್ಪತ್ತು ವರ್ಷಗಳ ಕಾಲ ಜಗತ್ತಿಗೆಲ್ಲ ಟೈಪ್ ರೈಟರ್ ಮಾರಾಟ ಮಾಡಿ ಅಗ್ರಗಣ್ಯ ಸ್ಥಾನವನ್ನು ಕಾಪಾಡಿಕೊಂಡಿತ್ತು. ಆದರೆ 1980 ರಲ್ಲಿ ಪರ್ಸನಲ್ ಕಂಪ್ಯೂಟರ್ (ಪಿಸಿ) ಬರುತ್ತಿದ್ದಂತೆ, ಟೈಪ ರೈಟರ್ ವ್ಯಾಪಾರಕ್ಕೆ ಹೊಡೆತ ಬೀಳಲಾರಂಭಿಸಿತು. ಸ್ಮಿತ್ ಕರೋನಾ ಸಂಸ್ಥೆಯ ಅಸ್ತಿತ್ವದ ಬಗ್ಗೆ ಮಾರುಕಟ್ಟೆ ಪರಿಣತರು ಚರಮಗೀತೆ ಬರೆದರು. ದಿನದಿಂದ ದಿನಕ್ಕೆ ಪರ್ಸನಲ್ ಕಂಪ್ಯೂಟರ್ ಆಕರ್ಷಣೆ, ಜನಪ್ರಿಯತೆ, ಉಪಯೋಗ ಹೆಚ್ಚುತ್ತಿದ್ದಂತೆ, ಅಷ್ಟೇ ವೇಗವಾಗಿ ಟೈಪ ರೈಟರ್ ಬೇಡಿಕೆ ಕುಸಿಯಲಾರಂಭಿಸಿತು. ಟೈಪ್ ರೈಟರ್ ಗಳು ಮ್ಯೂಸಿಯಂ ಸೇರುವ ದಿನಗಳು ದೂರವಿಲ್ಲ ಎಂದು ಸ್ಪಷ್ಟವಾದಾಗ, ಕಂಪನಿಯ ಆಡಳಿತ ವರ್ಗ ಒಂದು ನಿರ್ಧಾರಕ್ಕೆ ಬಂದಿತು.

ಅದೇನೆಂದರೆ ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳುವುದು ಹೇಗೆ ಎಂದು ಯೋಚಿಸುವುದು. ಅದರ ಪರಿಣಾಮವೇ ಸ್ಮಿತ್ ಕರೋನಾ ಕಂಪನಿ PWP 1400 ಮಾದರಿಯ ವರ್ಡ್ ಪ್ರೊಸೆಸ್ಸಿಂಗ್ ತಯಾರಿಕೆಗೆ ಮುಂದಾಗಿದ್ದು. ಇದರ ಜತೆಗೆ ಕಂಪ್ಯೂಟರ್ ಗೆ ಹೊಂದಿಕೊಂಡಿದ್ದ ಪ್ರಿಂಟರ್ ಗೆ ಬೇಕಾಗುವ ರಿಬ್ಬನ್, ಕಾರ್ಟ್ರಿಡ್ಜ್ ರಿಬ್ಬನ್ ಮತ್ತು ಲೇಬಲ್ ತಯಾರಿಕೆಯನ್ನು ಆರಂಭಿಸಿದ್ದು. ಇದರ ಜತೆಗೆ ಗ್ರಾಮರ್ ಚೆಕರ್, ಬಿಲ್ಟ್ – ಇನ್ ಡಿಕ್ಷನರಿ, ಲ್ಯಾಪ್ ಟಾಪ್ ವರ್ಡ್ ಪ್ರೊಸೆಸರ್ ಅಭಿವೃದ್ಧಿಪಡಿಸಿ ಪರ್ಸನಲ್ ಕಂಪ್ಯೂಟರ್ ಗೆ ಸಂವೇದಿಯಾಯಿತು. ಪರ್ಸನಲ್ ಕಂಪ್ಯೂಟರ್ ತನ್ನ ಅಸ್ತಿತ್ವಕ್ಕೆ ಮಾರಕವಾಗಬಹುದು ಎಂದು ಮನದಟ್ಟಾಗುತ್ತಿದ್ದಂತೆ, ಸ್ಮಿತ್ ಕರೋನಾ ಕಂಪನಿ ಟೈಪ್ ರೈಟರ್ ತಯಾರಿಕೆಯನ್ನೇ ಸ್ಥಗಿತಗೊಳಿಸಿ ಹೊಸ ಮಾರುಕಟ್ಟೆ ಪ್ರವೇಶಕ್ಕೆ ಅಣಿಯಾಯಿತು. ಇಂದು ಆ ಕಂಪನಿ ದೊಡ್ಡ ಪ್ರಮಾಣದಲ್ಲಿ ಬಾರ್ ಕೋಡ್ , ಶಿಪ್ಪಿಂಗ್ ಲೇಬಲ್, ಥರ್ಮಲ್ ರಿಬ್ಬನ್, ಥರ್ಮಲ್ ಟ್ರಾನ್ಸಫರ್ ಪ್ರಿಂಟರ್ ಗಳನ್ನು ತಯಾರಿಸುತ್ತಿದ್ದು, ಆ ಕ್ಷೇತ್ರದಲ್ಲಿ ಮಾರುಕಟ್ಟೆ ಅಗ್ರೇಸರ ಪಟ್ಟವನ್ನು ಕಾಪಾಡಿಕೊಂಡಿದೆ.

ಕರೋನಾವೈರಸ್ ಮತ್ತು ಲಾಕ್ ಡೌನ್ ನಿಂದಾಗಿ ಪತ್ರಿಕೆಗಳ ಬೇಡಿಕೆ ಕಮ್ಮಿಯಾಗಬಹುದು, ಹೋಟೆಲ್ಲಿಗೆ ಜನ ಬರಲು ಹಿಂದೇಟು ಹಾಕಬಹುದು, ಜನ ಗ್ರಾಹಕ ವಸ್ತುಗಳ ಖರೀದಿಗೆ ಮುಂದಾಗದೇ ಹೋಗಬಹುದು ಎಂದು ಕೈಕಟ್ಟಿ ಕುಳಿತುಕೊಳ್ಳಲು ಆಗುವುದಿಲ್ಲ. ನಮ್ಮ ಗೋಳನ್ನು ದಿನಾದಿನ ಹೇಳಿಕೊಳ್ಳುತ್ತಿದ್ದರೆ ಯಾರೂ ಕೇಳುವುದಿಲ್ಲ. ಬದುಕುವ ಹೊಸ ಮಾರ್ಗವನ್ನು ಕಂಡುಕೊಳ್ಳಲೇಬೇಕು. ಅಲ್ಲದೇ ಈ ಸಂದರ್ಭವನ್ನು ಸದಾವಕಾಶವಾಗಿ ಹೇಗೆ ಪರಿವರ್ತಿಸಿಕೊಳ್ಳಬೇಕು ಎಂದು ಯೋಚಿಸಬೇಕು. ಕಳೆದುಕೊಂಡ ಜಾಗದಲ್ಲಿಯೇ ಪತ್ತೆ ಮಾಡಬೇಕು. ಸಂಕ ಮುರಿದ ಜಾಗದಲ್ಲಿಯೇ ಸ್ನಾನ ಮಾಡಬಹುದಾ ಎಂದು ಅಕಲು ಹಾಕಬೇಕು. ಪ್ರಾಣಿಗಳೂ ಇದನ್ನೇ ಮಾಡೋದು. ಅರಣ್ಯ ನಾಶವಾಗುತ್ತಿದ್ದಂತೆ ಚಿರತೆಗಳು ಪಾಳು ಕಟ್ಟಡಗಳಲ್ಲಿ ವಾಸಿಸುವುದನ್ನು ರೂಢಿ ಮಾಡಿಕೊಂಡಂತೆ, ಮೊಬೈಲ್ ಟವರುಗಳಲ್ಲಿ ಗೂಡು ಕಟ್ಟುವುದನ್ನು ಹದ್ದು,ಗಿಡುಗಗಳು ರೂಢಿ ಮಾಡಿಕೊಂಡಂತೆ ನಾವೂ ಸಹ ಬದಲಾದ ಕಾಲಮಾನಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕು.

ಟಾರು ರಸ್ತೆಯಲ್ಲಿನ ಸಣ್ಣ ಹೊಂಡದಲ್ಲಿ ಮೊಳಕೆಯೊಡೆಯುವ ಗಿಡದಂತೆ, ಹಂಚಿನ ಮನೆಯ ಪಡಕಿನಲ್ಲಿ ನೀರು-ಗೊಬ್ಬರವಿಲ್ಲದಿದ್ದರೂ ಬೆಳೆಯುವ ಸಸಿಯಂತೆ , ಧರೆಯ ಅಂಚಿನಲ್ಲಿ ಬೆಳೆಯುವ ಮರದಂತೆ, ಸಿಕ್ಕ ಅವಕಾಶವನ್ನೇ ಬಳಸಿಕೊಂಡು ಬೆಳೆಯುವುದು, ಮುನ್ನುಗ್ಗುವುದು, ಬದಲಾವಣೆಯ ಎಲ್ಲಾ ಓರೆ -ಕೋರೆಗಳನ್ನು ಹೊಟ್ಟೆಯೊಳಗೆ ಹಾಕಿಕೊಂಡು, ಏನೂ ಆಗಿಲ್ಲವೆಂಬಂತೆ ಹೊಸತನಕ್ಕೆ ಹೊಂದಿಕೊಳ್ಳುವುದು ಬದುಕಿನ ಗುಟ್ಟು ಮತ್ತು ಬದುಕಿನ ಅದ್ಭುತ ಅವಕಾಶ. seize the opportunity ಅಂತಾರಲ್ಲ, ಈ ಸಂದರ್ಭದ ಅವಕಾಶವನ್ನು ಬಳಸಿಕೊಳ್ಳುವುದೇ ಆತ್ಮನಿರ್ಭರತೆಯ ಅವಕಾಶವೂ ಹೌದು.

ಕರೋನಾವೈರಸ್ ಮತ್ತು ಲಾಕ್ ಡೌನ್ ಗೆ ಶಪಿಸುತ್ತಾ ಕಾಲಕ್ಷೇಪ ಮಾಡುವ ಸಮಯ ಇದಲ್ಲ. ಮಿಂಚುಹುಳದ ಅಂಡಿನಲ್ಲಿ ಮೂಡುವ ಬೆಳಕಿನಲ್ಲೂ ನಮ್ಮ ದಾರಿ ಕಂಡುಕೊಳ್ಳಬೇಕಿದೆ. ಯಾರೋ ಬರುವುದಿಲ್ಲ, ನಮ್ಮ ಕೈಯನ್ನು ಹಿಡಿದು ನಾವೇ ಮುಂದೆ ಸಾಗಬೇಕಿದೆ.

28.05.2020
…………………