Tuesday, 17th May 2022

ಸಾಮಾಜಿಕ, ಆರ್ಥಿಕ ಹೊಣೆಗಾರಿಕೆ ಈಗಿನ ಹೆಚ್ಚುಗಾರಿಕೆ

ವಸಂತ ನಾಡಿಗೇರ

ಕರೋನಾ ಕರೋನಾ ಕರೋನಾ.. ಈಗ ನಿಂತರೂ ಕುಂತರೂ ಎಲ್ಲೆಲ್ಲೂ, ಯಾವಾಗಲೂ ಅದೇ ಸುದ್ದಿ. ತಲೆಚಿಟ್ಟು ಹಿಡಿಯುವಷ್ಟು, ತಲೆಸಿಡಿಯುವಷ್ಟು. ಹಾಗೆಂದು ಅದನ್ನು ಬಿಟ್ಟು ಮಾತನಾಡಲು ಈಗ ಬೇರೆ ಇನ್ನೆನೂ ಸುದ್ದಿಯೇ ಇಲ್ಲ. ಅಷ್ಟರಮಟ್ಟಿಗೆ ಅದು ನಮ್ಮೆಲ್ಲರನ್ನು ಆವರಿಸಿದೆ. ಇನ್ನಿಲ್ಲದಂತೆ ಕಾಡುತ್ತಿದೆ. ಎಲ್ಲರ ಬದುಕನ್ನು ಬರಡಾಗಿಸಿದೆ. ದುರ್ಭರವಾಗಿಸಿದೆ. ಹಾಗೆಂದು ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತವಾದುದಲ್ಲ. ಇಡೀ ಜಗತ್ತು ಕರೋನಾದಿಂದ ನಡುಗಿ, ನಲುಗಿ ಹೋಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹಾಗೆ ನೋಡಿದರೆ ಏನು ಕಡಿಮೆ ಇದೆ ಹೇಳಿ. ಸಾಕಷ್ಟು ಶ್ರೀಮಂತಿಕೆ ಇದೆ. ಸಕಲ ಸೌಲಭ್ಯಗಳಿವೆ. ಆದರೆ ಇಂದು ಆ ದೇಶ ಕರೋನಾ ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಟಲಿಯಲ್ಲಿ ಅದ್ಭುತವಾದ ಆರೋಗ್ಯ ವ್ಯವಸ್ಥೆ ಇದೆ. ಆದರೆ ಅಲ್ಲಿ ರೋಗ ನಿಯಂತ್ರಣದಲ್ಲಿಲ್ಲ. ಬದಲಾಗಿ ಕರೋನಾ ರೋಗದ ನಿಯಂತ್ರಣದಲ್ಲಿ ಜನರಿದ್ದಾರೆ. ಯಾರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಜನರು ಸಾಯುವುದನ್ನು ನೋಡುತ್ತ ಕುಳಿತುಕೊಳ್ಳಬೇಕಾದ ದುಸ್ಥಿತಿ. ಈ ರೋಗಕ್ಕೆ ಸದ್ಯಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕಿರುವ ಏಕೈಕ ಪರಿಹಾರ. ಇದನ್ನು ಎಲ್ಲರೂ ಹೇಳುತ್ತಿದ್ದಾರೆ. ಬಹುಷಃ ಎಲ್ಲರಿಗೂ ಗೊತ್ತಿರುವ ವಿಷಯವಿದು. ಇದನ್ನು ಗಮನದಲ್ಲಿರಿಸಿಕೊಂಡೇ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಈಗ ಇರುವುದು ಇದೊಂದೇ ಮಾರ್ಗ ಎಂಬುದೂ ಗೊತ್ತು. ಇಟಲಿ ಮೊದಲಾದ ದೇಶಗಳು ಆರಂಭದಲ್ಲಿ ಮುಂಜಾಗ್ರತೆ ಕೈಗೊಳ್ಳದ ಕಾರಣ ಈಗ ಅಲ್ಲಿ ಏನಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯುರೋಪಿನ ಅನೇಕ ರಾಷ್ಟ್ರಗಳು ಇದರ ದುಷ್ಪರಿಣಾಮವನ್ನು ಅನುಭವಿಸುತ್ತಿವೆ.

ಲಾಕ್‌ಡೌನ್‌ನ ಅರ್ಥ ಮನೆಬಿಟ್ಟು ಹೋಗಬಾರದು ಎಂದು. ಏಕೆಂದರೆ ಹೊರಹೋದರೆ ಸೋಂಕು ತಗುಲುವ, ಹರಡುವ ಸಾಧ್ಯತೆ ಮತ್ತು ಅಪಾಯ ಹೆಚ್ಚು. ಆದರೆ ನಮ್ಮಲ್ಲಿ ಏನಾಗುತ್ತಿದೆ ಅಂದರೆ ಇದರ ಪರಿವೆಯೇ ಇಲ್ಲದಂತೆ ಜನರು ತಿರುಗಾಡುತ್ತಿದ್ದಾರೆ. ಪ್ರಯಾಣ ಮಾಡಬೇಡಿ ಎಂದರೂ ಕೇಳದೆ ಊರಿಂದ ಊರಿಗೆ ಹೋಗುತ್ತಿದ್ದಾರೆ. ಬೇಕಾದ್ದು ಬೇಡವಾದುದನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ವಾಟ್‌ಸ್‌‌ಆಪ್, ಫೇಸ್‌ಬುಕ್ ಮೊದಲಾದ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಸಂದೇಶಗಳು ಹರಿದಾಡುತ್ತಿವೆ. ಎಲ್ಲರೂ ವೈದ್ಯರಾಗುತ್ತಿದ್ದಾರೆ. ಲಾಕ್‌ಡೌನ್ ಘೋಷಿಸಿದ ಬಳಿಕ ಕರ್ಫ್ಯೂೂ ಥರದ ವಾತಾವರಣ ನಿರ್ಮಾಣವಾಗಿದೆ. ಅನೇಕ ಪೊಲೀಸರೂ ಇದೇ ಚಾನ್‌ಸ್‌ ಅನ್ನುವಂತೆ ಹೊರಗೆ ಬಂದವರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ. ಇದರ ಅರ್ಥ ಎಲ್ಲೋ ಒಂದು ಕಡೆ ನಾವೆಲ್ಲ ಸೂಕ್ಷ್ಮತೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ಸುಶಿಕ್ಷಿತರು, ದೊಡ್ಡ ದೊಡ್ಡ ಮನುಷ್ಯರು ಎನಿಸಿಕೊಂಡವರು ಅಶಿಕ್ಷಿತರಂತೆ, ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಯಾವ ಸಲಹೆ ಸೂಚನೆಗಳನ್ನೂ ಪಾಲಿಸುತ್ತಿಲ್ಲ. ಅಜ್ಞಾನಿಗಳು ಎಂದು ಯಾರನ್ನು ಕರೆಯುತ್ತೇವೆಯೋ ಅವರೇ ವಾಸಿ.

ಇಷ್ಟೆಲ್ಲ ಹೇಳುತ್ತಿರುವುದಕ್ಕೆೆ ಕಾರಣ ಇದೆ. ಇಡೀ ಜಗತ್ತು ಕರೋನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಅವೆಲ್ಲ ಬಹುತೇಕ ಮುಂದುವರಿದ, ಸುಸಂಸ್ಕೃತ ದೇಶಗಳು. ಜನಸಂಖ್ಯೆಯೂ ಕಡಿಮೆ. ಆದರೆ ಅಂಥ ರಾಷ್ಟ್ರಗಳೇ ಹತೋಟಿಗೆ ಪರದಾಡುತ್ತಿವೆ. ಬ್ರಿಟನ್ ಪ್ರಧಾನಿ, ಆರೋಗ್ಯ ಸಚಿವ, ರಾಜಕುಮಾರ, ಕೆನಡಾ ಪ್ರಧಾನಿಯ ಪತ್ನಿ, ಅನೇಕ ಸೆಲೆಬ್ರಿಟಿಗಳು ಕರೋನಾ ಸೋಂಕಿತರಾಗಿದ್ದಾರೆ. ಇಂಥ ಮಹಾಮಾರಿಯ ಮುಂದೆ ನಾವೆಲ್ಲ ತೃಣಮಾತ್ರರು, ಅಸಹಾಯಕರು ಎಂಬುದನ್ನು ಇದು ತೋರಿಸುತ್ತದೆ. ಇನ್ನು ಕರೋನಾದ ಉಗಮಸ್ಥಾನ ಚೀನಾ. ಅಲ್ಲಿಂದಲೇ ಇದು ಎಲ್ಲೆಡೆ ಹಬ್ಬಿ ಇದು ಸಾಂಕ್ರಾಮಿಕ ಪಿಡುಗಾಗಿದೆ. ಅದೂ ದೊಡ್‌ಡ್‌ ದೇಶ. ವಿಸ್ತೀರ್ಣ, ಜನಸಂಖ್ಯೆಯಲ್ಲಿ ನಮಗಿಂತ ದೊಡ್ಡದು. ಈ ವಿಷಯದಲ್ಲಿ ನಾವು ನಮ್ಮ ಪರಿಸ್ಥಿತಿಯನ್ನು ಚೀನದೊಂದಿಗೆ ಹೋಲಿಸಿಕೊಳ್ಳಬಹುದು. ಅಂದರೆ ಚೀನದಂತೆ ನಮ್ಮಲ್ಲೂ ಕರೋನಾ ಸೋಂಕು ದೇಶದ ತುಂಬ ವ್ಯಾಪಿಸಿದರೆ ಗತಿ ಏನು? ಆದರೆ ಈ ವಿಚಾರದಲ್ಲಿ ನಮಗೂ, ಅದಕ್ಕೂ ಒಂದು ಬಹುಮುಖ್ಯವಾದ ವ್ಯತ್ಯಾಸವಿದೆ. ಅದೇನೆಂದರೆ ಚೀನಾದಲ್ಲಿ ಕಾನೂನು ಕಟ್ಟಳೆಗಳು ಬಿಗಿಯಾಗಿವೆ. ಅವರಲ್ಲಿ ಛಲವಿದೆ. ಅದಕ್ಕಿಿಂತ ಹೆಚ್ಚಾಗಿ ಅಲ್ಲಿ ಏನು ನಡೆಯುತ್ತಿದೆ ಎಂಬುದು ಹೊರಜಗತ್ತಿಗೆ ಗೊತ್ತಾಗದು. ಅವರು ಹೇಳಿದ್ದನ್ನು ಕೇಳಬೇಕು ಹಾಗೂ ನಂಬಬೇಕು. ಅಥವಾ ಸೋರಿಕೆಯಾದ ಮಾಹಿತಿಯಿಂದ ಪರಿಸ್ಥಿತಿಯನ್ನು ಅಂದಾಜು ಮಾಡಬಹುದು. ಆದರೆ ನಮ್ಮ ದೇಶ ಹಾಗಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳಂತೆ ಸಣ್ಣ ದೇಶವೂ ಅಲ್ಲ, ಚೀನಾದಂತೆ ಕಟ್ಟುನಿಟ್ಟೂ ಇಲ್ಲ. ಅಮೆರಿಕದಲ್ಲಿ ಆಗಿದ್ದೂ ಇದೇ. ಜನರು ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಪಾಲಿಸಲಿಲ್ಲ.

ಹೀಗೆ ದೊಡ್ಡ ದೇಶವಾದ ಕಾರಣ ನಿಯಂತ್ರಣ ಕಷ್ಟ ಎಂಬುದು ಒಂದು ಕಡೆಯಾದರೆ, ನಮ್ಮ ಸಾಮಾಜಿಕ – ಆರ್ಥಿಕ ಪರಿಸ್ಥಿತಿ ಮತ್ತು ಸಮಸ್ಯೆಗಳು ಈ ಕೆಲಸವನ್ನು ಇನ್ನಷ್ಟು ಜಟಿಲಗೊಳಿಸಿವೆ. ಲಾಕ್‌ಡೌನ್‌ನಿಂದಾಗಿ ಜನಜೀವನ ಬಹುತೇಕ ಸ್ತಬ್ಧವಾಗಿದೆ. ವ್ಯಾಪಾರ ವಹಿವಾಟು ಬಂದಾಗಿದೆ. ಸಣ್ಣಪುಟ್ಟ ವ್ಯಾಪಾರ, ಕೂಲಿ- ದಿನಗೂಲಿ ಮಾಡುವವರಿಗೆ ಕೆಲಸವಿಲ್ಲದೆ ಆದಾಯ ಇಲ್ಲವಾಗಿದೆ. ಬಡವರು ತುತ್ತು ಊಟಕ್ಕೂ ಪರದಾಡುವಂತಾಗಿದೆ. ಮನೆಯಲ್ಲೇ ಇರಿ ಎಂದು ಹೇಳುವುದು ಸುಲಭ. ಹೇಳದೆ ಗತ್ಯಂತರವೂ ಇಲ್ಲ. ಆದರೆ ಮನೆಯಲ್ಲೇ ಉಳಿದರೆ, ಕೋಟ್ಯಂತರ ಸಂಖ್ಯೆಯ ಬಡವರಿರುವ ನಮ್ಮ ದೇಶದಲ್ಲಿ ಅಂಥವರ ಪಾಡೇನು ಎಂಬುದನ್ನು ಯೋಚಿಸಬೆಕಾಗುತ್ತದೆ. ಲಾಕ್‌ಡೌನ್ ಘೋಷಿಸಿದ ಸಂದರ್ಭ ನಾಳೆಯಿಂದ ಎಲ್ಲ ಬಂದ್ ಎಂದು ಘೊಷಿಸಲಾಯಿತು. ಆದರೆ ಅಷ್ಟು ಮಾಡಿದರೆ ಸಾಕೆ? ಅಗತ್ಯ ವಸ್ತುಗಳ ಪೂರೈಕೆ ಹೇಗೆ? ಬೇರೆ ದೇಶಗಳಲ್ಲಿ ಲಾಕ್‌ಡೌನ್‌ನ ವ್ಯಾಖ್ಯಾನ, ಅರ್ಥ ಮತ್ತು ಅನುಷ್ಠಾನ ಬೇರೆಯದೇ ಆದ ರೀತಿಯಲ್ಲಿದೆ. ಉದಾಹರಣೆಗೆ ಜರ್ಮನಿಯಲ್ಲಿ ಯಾರೂ, ಯಾವುದೇ ಕಾರಣಕ್ಕೂ ಹೊರಬರುವಂತಿಲ್ಲ. ನಿರ್ದಿಷ್ಟ ಸಮಯದಲ್ಲಿ ಜನರು ಅಂಗಡಿಗೆ ಬಂದು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಂದು ಆ ಸಮಯದಲ್ಲಿ ಎಲ್ಲರೂ ಒಟ್ಟಿಗೇ ನುಗ್ಗುವಂತಿಲ್ಲ. ಒಬ್ಬೊಬ್ಬರು ಅಥವಾ ಒಂದು ಗುಂಪಿಗೆ ಒಂದು ದಿನ, ಒಂದು ಸಮಯ ನಿಗದಿಯಾಗಿರುತ್ತದೆ. ಆ ಟೈಮಿನಲ್ಲಿ ಅವರು ಬಂದು ಹೋಗುತ್ತಾರೆ. ಗೊಂದಲವಿಲ್ಲ, ಗಲಿಬಿಲಿ ಇಲ್ಲ, ಗಡಿಬಿಡಿ ಇಲ್ಲ. ಆದರೆ ನಮ್ಮಲ್ಲಿ ಈ ವ್ಯವಸ್ಥೆ ಎಲ್ಲಿದೆ? ಇದ್ದರೂ ಯಾರು ಪಾಲಿಸುತ್ತಾರೆ? ಎಲ್ಲರೂ ನುಗ್ಗುವವವರೇ. ಒಂದು ವಾರದ ಲಾಕ್‌ಡೌನ್ ಎಫೆಕ್‌ಟ್‌ ಒಂದೆರಡು ಗಂಟೆಯಲ್ಲಿ ಎಕ್ಕುಟ್ಟಿ ಹೋಗುತ್ತದೆ.
ಗಮನಿಸಬೇಕಾದ ಇನ್ನೊೊಂದು ಬಹುಮುಖ್ಯ ಅಂಶವಿದೆ. ಕೂಲಿ, ಕೆಲಸ ಅರಸಿ ಜನರು ಬೇರೆ ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಉದಾಹರಣೆಗೆ ಬೆಂಗಳೂರಿಗೆ ಬಿಹಾರ, ಪಶ್ಚಿಮ ಬಂಗಾಳ ಹೀಗೆ ಎಲ್ಲೆೆಡೆಯಿಂದ ಕೆಲಸಕ್ಕೆ ಬರುತ್ತಾರೆ. ನಮ್ಮ ಉತ್ತರ ಕರ್ನಾಟಕ ಭಾಗದಿಂದ ಲಕ್ಷಾಂತರ ಜನರು ಗೋವಾ, ಮಹಾರಾಷ್ಟ್ರಗಳಲ್ಲಿ ದುಡಿಮೆ ಮಾಡುತ್ತಿರುತ್ತಾರೆ. ಈಗ ಲಾಕ್‌ಡೌನ್‌ನಿಂದಾಗಿ ಅವರಿಗೆ ಕೆಲಸವಿಲ್ಲ, ಕೂಲಿ, ಸಂಬಳವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರೇನು ಮಾಡಬೇಕು? ಲಾಕ್‌ಡೌನ್‌ನಿಂದಾಗಿ ಯಾರೂ ಎಲ್ಲೂ ಹೋಗಬಾರದು ಎಂಬ ಕಟ್ಟಪ್ಪಣೆ. ಬಸ್ ಮತ್ತಿತರ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದರೆ ಅವರು ಅನಿವಾರ್ಯವಾಗಿ ನಡೆದುಕೊಂಡೇ ತಮ್ಮ ಊರಿಗೆ ಹೊರಟಿದ್ದಾರೆ. 300-400 ಕೀ.ಮೀ. ದೂರನಡೆಯುವುದೆಂದರೆ ಹುಡುಗಾಟವೇ ? ಜತೆಗೆ ಪೊಲೀಸರ ಕಾಟ ಬೇರೆ. ಅವರ ಬೈಗುಳ, ಲಾಠಿ ರುಚಿ ನೋಡಬೇಕು. ಆದರೆ ಪೊಲೀಸರಿಗೂ ಅದು ಅನಿವಾರ್ಯ ಇರಬಹುದು. ಇವರಿಗೂ ಇದು ಅನಿವಾರ್ಯ. ಈ ದೃಶ್ಯ ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿದೆ. ದಿಲ್ಲಿ ಮತ್ತಿತರ ಕಡೆಗಳಿಂದ ತಮ್ಮ ತವರಿಗೆ ಹಿಂಡು ಹಿಂಡಾಗಿ ನಡೆದುಕೊಂಡೇ ಹೊರಟಿರುವ ಜನರನ್ನು ಕಂಡು ಕರುಳು ಚುರುಕ್ ಎನ್ನುತ್ತದೆ. ಹಾಗೆಂದು ಲಾಕ್‌ಡೌನ್ ಮಾಡುವುದು ತಪ್ಪಾ? ಖಂಡಿತ ತಪ್ಪಲ್ಲ. ಆದರೆ ಆದರೆ ಅದರ ಸಾಮಾಜಿಕ, ಆರ್ಥಿಕ ಪರಿಣಾಮಗಳನ್ನು ಅಂದಾಜಿಸಿ ಅದನ್ನು ಪರಿಹರಿಸುವ ದೃಷ್ಟಿ ಬೇಕಾಗುತ್ತದೆ. ಈ ಚಿತ್ರಣವನ್ನು ಅಮೆರಿಕದಲ್ಲಿ ಕಾಣಲಿಕ್ಕಿಲ್ಲ. ಚೀನಾದಲ್ಲಿ ಇರಬಹುದು, ಇರಲಿಕ್ಕಿಲ್ಲ. ಆದರೆ ನಮಗೆ ಗೊತ್ತಂತೂ ಆಗುವುದಿಲ್ಲ. ಆದರೆ ನಮ್ಮಲ್ಲಿ ಈ ಸಮಸ್ಯೆ ಇದೆ. ಬೇರೆ ದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ವಿಶೇಷ ವಿಮಾನಗಳ ಮೂಲಕ ಕರೆತರುತ್ತೇವೆ. ಆದರೆ ನಮ್ಮವರೇ ಆದ, ಬಡಜನರನ್ನು ಅವರವರ ಊರಿಗೆ ಸುರಕ್ಷಿತವಾಗಿ ತಲುಪಿಸುವುದು ನಮಗಾಗದೇ? ಅಥವಾ ಅದು ನಮ್ಮ ಆದ್ಯತೆ ಆಗಬೇಡವೇ? ಹೀಗೂ ಯೋಚಿಸೋಣ. ನಾವೆಷ್ಟೇ ಲಾಕ್‌ಡೌನ್ ಮಾಡಿದರೂ ಈ ಜನರು ತಮ್ಮ ಊರುಗಳಿಗೆ ತೆರಳುತ್ತಾಾರೆ. ಮಾರ್ಗ ಮಧ್ಯೆೆ ಅವರಿಂದ ಉಂಟಾಗಬಹುದಾದ ಸೋಂಕಿಗೆ ಜವಾಬ್ದಾಾರರಾರು? ಅದರ ಬದಲು ಅವರನ್ನು ಸೂಕ್ತ ಮುನ್ನೆೆಚ್ಚರಿಕೆಯಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆೆ ಮಾಡುವುದು ಸರಕಾರದ ಕರ್ತವ್ಯ. ನಮ್ಮ ಕರ್ನಾಟಕದ ಜನರೂ ಗಡಿಭಾಗದಲ್ಲಿ ಬಂದು ಕುಳಿತಿದ್ದಾಾರೆ. ಅವರನ್ನು ದರಕಾರು ಮಾಡುವವರೇ ಇಲ್ಲ.

ಇದು ಗುಳೆಯ ಸಮಸ್ಯೆೆಯಾದರೆ ಊರಲ್ಲೇ ಇರುವ ಬಡವರದು ಇನ್ನೊೊಂದು ಸಮಸ್ಯೆೆ. ಅವರಿಗೆ ಕೆಲಸವೂ ಇಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅವರಿಗೆ ಊಟ ಒದಗಿಸುವವರು ಯಾರು? ಅವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕೆ? ಇದು ನಮ್ಮ ಸಾಮಾಜಿಕ ಹೊಣೆಗಾರಿಕೆಯಲ್ಲವೆ? ಹಾಗೆಯೇ ಸದ್ಯಕ್ಕೆ ನಮ್ಮ ದೇಶದಲ್ಲಿ ಇಟಲಿ, ಸ್ಪೇನ್‌ನಂಥ ಪರಿಸ್ಥಿತಿ ಇಲ್ಲ. ಹಾಗೆ ಆಗುವುದೂ ಬೇಡ. ಆದರೆ ನಮ್ಮ ಬೇಜವಾಬ್ದಾರಿತನದಿಂದಲೋ, ಸರಕಾರದ ಅಸಮರ್ಪಕ ಕ್ರಮಗಳಿಂದಲೋ ಅಥವಾ ಎರಡೂ ಕಾರಣದಿಂದಾಗಿಯೋ ಪರಿಸ್ಥಿತಿ ಉಲ್ಬಣಿಸಿದರೆ ಅದನ್ನು ಎದುರಿಸುವ ಶಕ್ತಿ ಸಾಮರ್ಥ್ಯ, ಸಿದ್ಧತೆ ನಮ್ಮಲ್ಲಿ ಇದೆಯೇ? ಏಕೆಂದರೆ ಮೊದಲೇ ನಮ್ಮದು ದೊಡ್ಡ ದೇಶ. ಇದಕ್ಕೆ ದೊಡ್ಡ ಮಟ್ಟದ ಸಿದ್ಧತೆ ಬೇಕಾಗುತ್ತದೆ. ಆದರೆ ಹಾಗೆಂದು ಕೈಕಟ್ಟಿ ಕುಳಿತುಕೊಳ್ಳಲಾಗದು. ಈಗಿನಿಂದಲೇ ಸೂಕ್ತ ವ್ಯವಸ್ಥೆೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳು, ವೈದ್ಯರು ಮತ್ತಿತರ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು, ಇತ್ಯಾದಿಗಳನ್ನು ಒದಗಿಸುವುದು ಸಣ್ಣ ಕೆಲಸವಲ್ಲ. ಮಾಸ್‌ಕ್‌‌ಗಳು, ಟಿಷ್ಯೂ ಪೇಪರ್ ಹಾಗೂ ಸ್ಯಾನಿಟೈಸರ್‌ಗಳನ್ನೇ ಸರಿಯಾಗಿ ಪೂರೈಸಲು ನಮಗೆ ಆಗುತ್ತಿಲ್ಲ. ಹೀಗಾಗಿ ಇದೊಂದು ದೊಡ್ಡ ಸವಾಲು.
ಈ ಸಂದಿಗ್ಧ ಸಮಯದಲ್ಲಿ ಬೇರೆ ಎಲ್ಲದರ ಜತೆಗೆ ಸರಕಾರ ಹಾಗೂ ಸಾರ್ವನಿಕರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದು ಅಗತ್ಯ ಹಾಗೂ ಬಹುಮುಖ್ಯ.
__________________________________________——–
ಲಾಕ್‌ಡೌನ್‌ನಿಂದ ಬಡಬಗ್ಗರು ಡೌನ್ ಆಗಿದ್ದಾರೆ
ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿದ್ದಾರೆ
ಈಗ ಬೇಕಿಲ್ಲ ನಿಂದನೆ, ಬೋಧನೆ
ತೋರಬೇಕು ಸಾಮಾಜಿಕ ಹೊಣೆ
ಕರೋನಾ ಸೋಲಲಿ, ಮಾನವೀಯತೆ ಗೆಲ್ಲಲಿ

………………………………………………………………