Tuesday, 21st March 2023

ಸೈಬರ್ ಕ್ರೈಂ ಅಧಿಕಾರಿಗಳು ಎಚ್ಚರಿಯಿಂದಿರಬೇಕು: ಮುಖ್ಯಯೋಜನಾಧಿಕಾರಿ ಬಾಲರಾಜು

ತುಮಕೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು ಅಧಿಕಾರಿ, ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಾಲರಾಜು ತಿಳಿಸಿದರು.

ಮೈಸೂರು ಆಡಳಿತ ತರಬೇತಿ ಸಂಸ್ಥೆ, ಬೆಂಗಳೂರು ಇ-ಆಡಳಿತ ಕೇಂದ್ರ ಮತ್ತು ಜಿಲ್ಲಾ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ************ಸಾಮಾರ್ಥ್ಯಾಭಿವೃದ್ಧಿ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ “ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ” ಕುರಿತು ಗ್ರುಪ್ ಎ ವೃಂದದ ಅಧಿಕಾರಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಇಲಾಖೆಗಳಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಈ ಬಗ್ಗೆ ಅಧಿಕಾರಿ, ಸಿಬ್ಬಂದಿಗಳಿಗೆ ಅರಿವು ಮೂಡಿಸ ಬೇಕೆಂದರಲ್ಲದೆ ತಂತ್ರಜ್ಞಾನ ಬಳಸಿಕೊಂಡು ಕಚೇರಿ ಕೆಲಸಗಳನ್ನು ಶೀಘ್ರವಾಗಿ ಮಾಡಿ ಮುಗಿಸುವ ಬಗ್ಗೆಯೂ ತಿಳಿದುಕೊಳ್ಳ ಬೇಕೆಂದು ಸಲಹೆ ನೀಡಿದರು.

ಬೆಂಗಳೂರಿನ ಉತ್ಕೃಷ್ಟತಾ ಸೈಬರ್ ಕೇಂದ್ರದ ಯೋಜನಾ ವ್ಯವಸ್ಥಾಪಕಿ ವಿಭಾ ಚಕ್ರಾಲ ಮಾತನಾಡಿ ಸೈಬರ್ ಅಪರಾಧಿಗಳು ಅನಾಮಿಕರಾಗಿರುವುದರಿಂದ ಸೈಬರ್ ಮೂಲಕ ಅಪರಾಧ ಎಸಗುವುದು ಸುಲಭ. ಇದರಿಂದ ಮುಗ್ಧವಾಗಿ ಅಂತರ್ಜಾಲವನ್ನು ಬಳಸುವವರು ವಂಚನೆಗೊಳಗಾಗುತ್ತಿದ್ದಾರೆ. ಇಂಥವರಿಗೆ ಕಾನೂನಿನ ಭದ್ರತೆ ಒದಗಿಸುವಂತಾಗಬೇಕೆಂದು ತಿಳಿಸಿದರಲ್ಲದೆ ಸೈಬರ್ ಸುರಕ್ಷತೆ, ಅರಿವು ಮತ್ತು ಸೈಬರ್ ಅಪರಾಧ ತಡೆಗಟ್ಟುವಿಕೆ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್.ಐ.ಸಿ) ಅಧಿಕಾರಿ ಅಜೇಯ್ ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಇ-ಆಡಳಿತದ ಪರಿಕಲ್ಪನೆ/ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ನೆರವಿನಿಂದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ಪಾವತಿ ಹಾಗೂ ಮತ್ತಿತರ ಸರ್ಕಾರಿ ಸೇವೆಗಳನ್ನು ಒದಗಿಸು ತ್ತಿರುವ ಬಗ್ಗೆ ತಿಳಿಸಿದರು.

ಇ-ಆಡಳಿತ ಕೇಂದ್ರದ ಹಿರಿಯ ಬೋಧಕಿ ಶೃತಿ ಕೆ.ಎಸ್. ಕರ್ನಾಟಕ ಇ-ಆಡಳಿತದ ಪ್ರಮುಖ ಯೋಜನೆಗಳ ಬಗ್ಗೆ ಚರ್ಚಿಸಿದರು.
ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಚಾರ್ಯರು/ಉಪಪ್ರಾಚಾರ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!