Tuesday, 5th July 2022

ಸೈರಂದ್ರಿಗೆ ಕೀಚಕನ ಕಾಟ

ಕಳೆದ ವಾರಗಳಲ್ಲಿ: ಹನ್ನೆರಡು ವರುಷಗಳ ವನವಾಸದ ನಂತರ ಒಂದು ವರುಷದ ಅಜ್ಞಾತವಾಸಕ್ಕೆಂದು ವೇಷಗಳನ್ನು ಮರೆಸಿಕೊಂಡು ಹೊರಟ ಪಾಂಡವರು ದ್ರೌಪದಿ ಸಹಿತವಾಗಿ ವಿರಾಟರಾಯನಾಳ್ವಿಕೆಯ ಮತ್ಸ್ಯದೇಶಕ್ಕೆ ಬಂದು, ಒಬ್ಬೊಬ್ಬರೂ ಒಂದೊಂದು ವೇಷದಲ್ಲಿ ಬೇರೆ ಬೇರೆ ಸಮಯಗಳಲ್ಲಿ ವಿರಾಟರಾಯನನ್ನು ಭೇಟಿ ಮಾಡಿ, ಅವನನ್ನು ಮೆಚ್ಚಿಸಿ ಅವನ ಊಳಿಗದಲ್ಲುಳಿದರು. ಪಾಂಡವರೆಲ್ಲರೂ ಒಂದೇ ಕಡೆಯಿದ್ದರೂ ಪರಿಚಯವೇ ಇಲ್ಲದವರಂತೆ ವರ್ತಿಸುತ್ತ ಕಾಲ ಕಳೆಯುತ್ತಿದ್ದರು. ದುರ್ಯೋಧನನು ಪಾಂಡವರನ್ನು ಹೇಗಾದರೂ ಪತ್ತೆಮಾಡಬೇಕೆಂದು ಗೂಢಚಾರರನ್ನು ನಿಯಮಿಸಿದನಾದರೂ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ

ಪಾಂಡವರೆಲ್ಲರೂ ವೇಷವ ಮರೆಯಿಸಿ ಯಾರೂ ಅರಿಯದ ರೀತಿಯಲಿ
ವಿರಾಟರಾಯನ ಅರಮನೆಯಲ್ಲಿಯೆ ಉಳಿದರು ವಿಧವಿಧ ಕೆಲಸದಲಿ
ದ್ರೌಪದಿ ಅವರುಗಳೆದುರಲಿ ಸುಳಿಯುತ ತನ್ನ ಕಷ್ಟವನು ಮರೆಯುತ್ತ
ವಿರಾಟರಾಣಿಯ ಸೇವೆಯ ಮಾಡುತಲಿದ್ದಳು ಗಂಧವ ಸವರುತ್ತ
ಹೀಗೆಯೇ ಕಾಲ ಕಳೆಂತÀುುತಲಿರುತಿರೆ ಒಮ್ಮೆ ಸುಧೇಷ್ಣೆಯ ಸೋದರನು
ಕೀಚಕನೆನ್ನುವ ನಾಮಾಂಕಿತವನು ಹೊಂದಿದ ಸೇನಾನಾಯಕನು
ದ್ರೌಪದಿಯ ಕಂಡು ಆಸೆಯಪಟ್ಟನು ಲಜ್ಜೆಯಿರದ ಕಾಮಾತುರನು
ಅವಳನು ಪಡೆಯಲು ಎದುರಲಿ ಸುಳಿಯುತ ಹಲವು ಕಾಟ ಕೊಡತೊಡಗಿದನು
ಅಕ್ಕನ ಸೇವೆಯ ಮಾಡುತಲಿರುವಳು ಸೇವಕಿಯೆಂದೇ ಭಾವಿಸಿದ
ಸಕ್ಕರೆ ನಗುವಿನ ಸೈರಂದ್ರಿಯ ಮನ ಗೆಲ್ಲುವ ಛಲದಲಿ ಧಾವಿಸಿದ!
ಸುಧೇಷ್ಣೆ ಬಳಿಯಲಿ ಮನಸಿನ ಆಸೆಯ ನಾಚಿಕೆಯಿಲ್ಲದೆ ತಿಳಿಸಿದನು
ಬೇಡವೆಂದರೂ ಕೇಳದೆ ದ್ರೌಪದಿ ಎದುರು ಬಂದು ಬಡಬಡಿಸಿದನು-
“ಎಲೈ ಭಾಮಿನಿಯೆ, ನಿನ್ನ ಯೌವನವು ವ್ಯರ್ಥವಾಗುತಿದೆ ಸುಖಪಡದೆ
ಅಡವಿಯಲ್ಲಿ ಅರಳಿರುವ ಹೂವಿನಂತಿರುವೆ ಯಾರಿಗೂ ವಶವಿರದೆ
ರಾಣಿಯಂತೆ ನಿನ್ನನ್ನು ಮೆರೆಸುವೆನು ನನ್ನ ವಶಕೆ ನೀ ಬಂದುಬಿಡು
ದಾಸನಾಗಿಯೇ ಸೇವೆ ಮಾಡುವೆನು ಸ್ವರ್ಗಸುಖವನ್ನು ನನಗೆ ಕೊಡು”
ಅಂಗಲಾಚುತ್ತ ಅವಳ ಬೇಡಿದನು ಕರುಣೆಯ ತೋರುವಳವಳೆಂದು
ಸಂಗ ಬಯಸಿ ಬಹಿರಂಗವಾಗಿಯೇ ಕೇಳಿದ ತನ್ನವಳಾಗೆಂದು!
ಕೀಚಕ ಕಾಟವ ತಡೆಯಲು ಆಗದೆ ದ್ರೌಪದಿ ನುಡಿದಳು ಕಿವಿಮಾತು-
“ರಾಣಿ ಸೋದರನೆ, ಹೀನನಾಗದೆಲೆ ಕೇಳು ಹೇಳುವೆನ್ನಯ ಮಾತು
ನಾನು ಸೇವಕಿಯು ಹೀನಕುಲದವಳು ಏತಕೆ ನನ್ನಲಿ ಈ ಮೋಹ
ನನ್ನಯ ಪಾಡಿಗೆ ಸುಮ್ಮನೆ ಬಿಟ್ಟಿರು, ಬೇಡ ಈ ಪರಿಯ ಸ್ತ್ರೀಮೋಹ
ನನ್ನ ಹಿಂದೆ ಗಂಧರ್ವನು ಇರುವನು ಅವನ ನೋಟಕ್ಕೆ ಸಿಗಬೇಡ
ದುಷ್ಟ ಮನಸಿನಲಿ ಆಸೆಯಪಡುತಲಿ ನೀನು ತೊಂದರೆಯ ಪಡಬೇಡ”
ದ್ರೌಪದಿ, ಕೀಚಕಬುದ್ಧಿಗೆ ಒಳ್ಳೆಯ ಮದ್ದು ಕೊಟ್ಟು ಹೇಳಿರಲಂದು
ಕೀಚಕ ಆಸೆಯ ಅದುಮಿಡಲಾಗದೆ ಅಕ್ಕ ಸುಧೇಷ್ಣೆಯ ಬಳಿ ಬಂದು||

ಕೇಳಿದನÀವಳನು- “ಅಕ್ಕಾ, ಬೇಡುವೆ ಸೈರಂದ್ರಿಯ ವಶಮಾಡಿಕೊಡು
ಅವಳನು ಮೋಹಿಸಿ ಮತಿಗೆಟ್ಟಿರುವೆನು ನನ್ನರಮನೆಯೆಡೆ ಕಳಿಸಿಕೊಡು”
ರಾಣಿ ಸುಧೇಷ್ಣೆಯು ತಮ್ಮನ ಮಾತನು ಆಲಿಸಿ ಭಯವನು ತಾಳಿದಳು
ತನಗೆ ಗೊತ್ತಿರುವ ಸಂಗತಿಯೆಲ್ಲವ ಹೆದರಿಕೆಯಿಂದಲಿ ಹೇಳಿದಳು-
“ಅವಳು ನಂಬಿರುವ ಗಂಧರ್ವನು ಬಲು ಶಕ್ತಿಶಾಲಿಯಾಗಿಹನಂತೆ
ಅವಳ ತಂಟೆಗಾರಾದರೂ ಬಂದರೆ ಅವರ ಬಡಿದು ಕೊಲ್ಲುವನಂತೆ
ಬೆಂಕಿಯ ಸಂಗವು ಒಳ್ಳೆಯದಲ್ಲ ಅವಳ ಅಸೆಯನು ಮರೆತುಬಿಡು
ರಾಣಿವಾಸದಲಿ ರತಿಯರು ಇರುವರು ಬೇಕಾದವರನು ಕರೆದುಬಿಡು”
ಆದರೆ ಕೀಚಕ ಒಪ್ಪದೆ ಅವಳನು ಕಳಿಸಿಕೊಡೆನ್ನುತ ಕಾಡಿದನು
ನಂಬಿದ ತನ್ನನು ನಿರಾಶೆಗೊಳಿಸದೆ ಆಸೆಯ ತೀರಿಸೆ ಬೇಡಿದನು
ರಾಣಿಯು ಒಪ್ಪುತ ಸಂಜೆಯ ಸಮಯಕೆ ಕಳುಹುವೆನೆನ್ನುತ ಹೇಳಿದಳು
ಆದರೂ ಮನದಿ ಅಂಜಿಕೆಯಾಗಲು ಹೇಗೋ ಧೈರ್ಯವ ತಾಳಿದಳು||

ಕಾಮಾತುರನಿಗೆ ಕಣ್ಣುಗಳಿದ್ದರೂ ಎದುರಲಿ ಏನೂ ಕಾಣಿಸದು
ಕಾಮದ ಬಯಕೆಯು ಕೈಮೀರುತ್ತಿರೆ ಕೇಳುವ ಕಿವಿಯೂ ಕೇಳಿಸದು
ಕಾಮುಕನಾದರೆ ಭಯವೂ ಲಜ್ಜೆಯು ಹತ್ತಿರ ಸುಳಿಯದೆ ಓಡುವುದು
ಕಾಮದ ಮುಂದುಳಿದೆಲ್ಲವೂ ಗೌಣ ಕಾಮುಕತೆಯು ಮೆರೆದಾಡುವುದು||

ಸಂಜೆಗೆ ದ್ರೌಪದಿ ಬಂದಿರಲವಳನು, ಕೀಚಕ ಮಂದಿರದಲಿ ಹೋಗಿ
ತಣ್ಣನೆ ಪಾನಕ ಕೊಡುವರು ಅದನ್ನು ತಂದುಕೊಡೆಂದಳು ತನಗಾಗಿ
ಒಡತಿಯ ಮಾತನು ಮೀರಲು ಆಗದೆ ಮೆಲ್ಲಗೆ ಹೊರಟಳು ಸಂಜೆಯಲಿ
ನಡಗುವ ಎದೆಯಲಿ ಒಳಗಡಿಯಿಟ್ಟಳು ಮನಸಿನ ದುಗುಡಕೆ ಅಂಜುತಲಿ
ಕೂಡಲೆ ಕೀಚಕ ಅವಳನು ಹಿಡಿದನು ಹುಲ್ಲೆಯ ಹಿಡಿಯುವ ಹುಲಿಯಂತೆ
ದ್ರೌಪದಿ ಹೆದರಿಕೆಯಿಂದಲಿ ಹೊರಗಡೆ ಓಡುತ ಬಂದಳು ಬಲವಂತೆ
ಮಧುಪಾನದಿ ಮೈಮರೆತಿಹ ಖೂಳನು ಅಟ್ಟಿಸಿ ಬಂದನು ಅವಳನ್ನು
ರಾಜಮಂದಿರದಿ ಅಟ್ಟಾಡಿಸುತಲಿ ಮುಟ್ಟುತ ಹಿಡಿದನು ಹೆರಳನ್ನು
ವಿರಾಟರಾಯನು ನೋಡಿದರೂನು ನೋಡದೆ ಪಕ್ಕಕೆ ತಿರುಗಿದನು
ಧರ್ಮನು ಕೂಡ ಜೊತೆಯಲ್ಲಿದ್ದನು ಏನೂ ಹೇಳದೆ ಕೊರಗಿದನು
ಪಾಕಶಾಲೆಯಲಿ ಅಡುಗೆಯ ಮಾಡುವ ಭೀಮನು ಅವರನು ನೋಡಿದನು
ಕೂಡಲೆ ಹೊರಗಡೆ ಬಂದವ ಅವನನು ಮುಗಿಸುವ ಯೋಚನೆ ಮಾಡಿದನು
ಧರ್ಮನು ಕಣ್ಣಲಿ ಭೀಮನ ತಡೆಯುತ ತಾಳ್ಮೆಯ ವಹಿಸಲು ಹೇಳಿದನು
ಪಾತ್ರೆಯ ಕುದಿಯಲಿ ತಾನೂ ಕುದಿಯುತ ಭೀಮನು ತಾಳ್ಮೆಯ ತಾಳಿದನು
ದ್ರೌಪದಿ ಹೇಗೋ ತಪ್ಪಿಸಿಕೊಂಡಳು ಪಾಪಿ ಕೀಚಕನ ಕೈಯಿಂದ
ರಾಣಿ ಮಂದಿರಕೆ ರಭಸದಿ ಓಡುತ ಒಳಗೆ ಸೇರಿದಳು ಭಯದಿಂದ
ಕೀಚಕ ನಿರಾಸೆಯಿಂದಲಿ ಹೊರಟನು ತನ್ನ ಮಂದಿರಕೆ ಕೆರಳುತ್ತ
ಎಲ್ಲಿ ಹೋಗುವಳು ಮತ್ತೆ ಸಿಕ್ಕುವಳು ಎಂದು ಮನದಲ್ಲಿ ಸಿಡುಕುತ್ತ
ಸೈರಂದ್ರಿಯು ಕೀಚಕನ ಕೈಯಿಂದ ಪಾರಾಗುವುದಾದರೂ ಹೇಗೆ?
ಎಂಬ ಚಿಂತೆಯಲಿ ದಿನವ ನೂಕಿದಳು ಕುದಿಯುತಿತ್ತು ಮನಸಿನ ಬೇಗೆ