Friday, 30th September 2022

ಸೋಂಕು ನಿವಾರಣ ಮಾರ್ಗಕ್ಕರ ಶಾಸಕ ತಿಪ್ಪಾರೆಡ್ಡಿ ಚಾಲನೆ

ಚಿತ್ರದುರ್ಗ:

ಕೋವಿಡ್-19 ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸಿದ್ಧಪಡಿಸಲಾಗಿರುವ ಸೋಂಕು ನಿವಾರಕ ಮಾರ್ಗಕ್ಕೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,
ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಪ್ರತಿ ನಿತ್ಯ ತರಕಾರಿ ಸಂತೆ ನಡೆಸಲಾಗುತ್ತಿದ್ದು, ಹಾಗಾಗಿ ಇಲ್ಲಿಗೆ ನಿತ್ಯವೂ ವ್ಯಾಪಾರಿಗಳು, ಗ್ರಾಹಕರು ಸೇರಿದಂತೆ ಸಾವಿರಾರೂ ಜನ ಆಗಮಿಸುತ್ತಾರೆ. ಹಾಗಾಗಿ ನಗರಸಭೆ ಹಾಗೂ ಜಿಲ್ಲಾಡಳಿತ ಹಲವು ಮುನ್ನಚ್ಚರಿಕೆ ಕ್ರಮಗಳ ಜೊತೆಗೆ ಸೋಂಕು ನಿವಾರಕ ಮಾರ್ಗ ಅಳವಡಿಕೆ ಮಾಡಿ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ವಹಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ಹೆಚ್ಚಿನ ಜನರು ಸೇರುವ ತರಕಾರಿ ಮಾರುಕಟ್ಟೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸೋಂಕು ನಿವಾರಕ ಅಳವಡಿಕೆ ಮಾಡಲಾಗಿದೆ. ಇದೊಂದು ಹೊಸ ಪ್ರಯೋಗವಾಗಿದ್ದು, ನಗರದ ವಿವಿಧೆಡೆ ಇಂತಹ ಸೋಂಕು ನಿವಾರಕ ಮಾರ್ಗಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿ ಬೇಕು ಎಂದು ಶಾಸಕರು ತಿಳಿಸಿದರು.

80 ಸಾವಿರ ವೆಚ್ಚದಲ್ಲಿ ನಿರ್ಮಾಣ: ಸೋಂಕು ನಿವಾರಕ ಮಾರ್ಗವನ್ನು ಸ್ಟೈನ್‍ಲೆಸ್ ಸ್ಟೀಲ್‍ನಲ್ಲಿ ನಿರ್ಮಾಣ ಮಾಡಲಾಗಿದ್ದು, 80 ಸಾವಿರ ರೂ. ವೆಚ್ಚದಲ್ಲಿ ಸ್ಥಳೀಯವಾಗಿ ತಯಾರು ಮಾಡಲಾಗಿದೆ. ಈ ಸೋಂಕು ನಿವಾರಕ ಮಾರ್ಗವು 10 ಅಡಿ ಉದ್ದ, 5 ಅಡಿ ಅಗಲ, 10 ಅಡಿ ಎತ್ತರವಿದೆ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆರಂಭಗೊಂಡಿರುವ ಮಾರುಕಟ್ಟೆಗೆ ಪ್ರವೇಶಿಸುವ ಪ್ರತಿ ವ್ಯಾಪಾರಿಗಳು ಹಾಗೂ ಗ್ರಾಹಕರು ಸೇರಿದಂತೆ ಪ್ರತಿಯೊಬ್ಬರಿಗೂ ಕೊರೊನಾ ವೈರಸ್ ಹರಡುವಿಕೆ ತಡೆಯಲು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬರು ಕೈಗಳನ್ನು ಮೇಲೆತ್ತಿಕೊಂಡು ಸೋಕು ನಿವಾರಕ ಮಾರ್ಗದಲ್ಲಿ ಹಾದು ಹೋಗಬೇಕು. ಮುಂಜಾನೆ 3.00 ರಿಂದ ಬೆಳಗಿನ ಜಾವ 8.00 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಬಿಡಿಎ ಆಯುಕ್ತ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಜಶೇಖರ್, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜ್ ಸೇರಿದಂತೆ ಮತ್ತಿತರರು ಇದ್ದರು.
-0-

ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ವೆಂಟಿಲೇಟರ್ ಹೆಚ್ಚುವರಿ ಪೂರೈಕೆಗೆ ಎಂಎಲ್‍ಸಿ ರಘು ಆಚಾರ್ ಮನವಿ

ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸೋಂಕಿನಿಂದಾಗಿ ಪ್ರಾಣಾಪಾಯ ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ವೆಂಟಿಲೇಟರ್ ಸೌಲಭ್ಯ ಹೆಚ್ಚಿಸಬೇಕು. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಕೇವಲ 2 ವೆಂಟಿಲೇಟರ್‍ಗಳು ಮಾತ್ರ ಇವೆ. ಹೀಗಾಗಿ ಜಿಲ್ಲಾಸ್ಪತ್ರೆಗೆ ಹೆಚ್ಚುವರಿಯಾಗಿ 05 ವೆಂಟಿಲೇಟರ್‍ಗಳ ಅವಶ್ಯಕತೆ ಇದೆ. ಇದನ್ನು ಕೂಡಲೇ ಮಂಜೂರು ಮಾಡುವಂತೆ ವಿಧಾನಪರಿಷತ್ ಸದಸ್ಯ ರಘು ಆಚಾರ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಇವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಈ ನಿಟ್ಟಿನಲ್ಲಿ ಕೂಡಲೆ ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
-0-

ಕಾರ್ಮಿಕರಿಗೆ ಬಾಡಿಗೆ ಹಣಕ್ಕಾಗಿ ಒತ್ತಾಯಿಸುವಂತಿಲ್ಲ

ಚಿತ್ರದುರ್ಗ

ಕೋವಿಡ್ 19 ವೈರಸ್ ಕಾರಣದಿಂದ ಉಂಟಾಗಿರುವ ಲಾಕ್‍ಡೌನ್ ನಿಂದಾಗಿ ವಲಸೆ, ಇತರೆ ಎಲ್ಲ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ 6434/2020 ರ ಏ. 3 ರನ್ವಯ ಯಾವುದೇ ಕಾರ್ಮಿಕರು ತೊಂದರೆಗೆ ಒಳಗಾಗಬಾರದು ಎನ್ನುವ ಉದ್ದೇಶದಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ.
ಹೀಗಾಗಿ ವಲಸೆ ಮತ್ತು ಇತರೆ ಕಾರ್ಮಿಕರಿಗೆ ಬಾಡಿಗೆ ನೀಡಿರುವ ಕಟ್ಟಡ ಮಾಲೀಕರು ಕಾರ್ಮಿಕರಿಗೆ ಬಾಡಿಗೆ ಹಣಕ್ಕಾಗಿ ಒತ್ತಾಯಿಸಬಾರದು ಹಾಗೂ ತೊಂದರೆ ನೀಡುವಂತಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ ತಿಳಿಸಿದ್ದಾರೆ.