ದಾವಣಗೆರೆ: ಮಂಗಳವಾರ ಹಿಜಾಬ್ ವಿವಾದ ದಾವಣಗೆರೆ ಜಿಲ್ಲೆಗೆ ಹಬ್ಬಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಬಾಬ್ ಮತ್ತು ಕೇಸರಿ ಶಾಲು ವಿವಾದ ಗಲಾಟೆಗೆ ಕಾರಣವಾಯಿತು. ಇದರಿಂದಾಗಿ ಕಾಲೇಜಿಗೆ ಒಂದು ದಿನ ರಜೆ ಘೋಷಿಸಲಾಯಿತು.
ಹಿಜಾಬ್ಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಸಹ ಅರ್ಜಿ ಸಲ್ಲಿಕೆಯಾಗಿದೆ.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಬ್ಬಿದೆ. ಸಮವಸ್ತ್ರದ ಜೊತೆಗೆ ಹಿಜಾಬ್ ಬೇಕು, ಬೇಡ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಕೇಸರಿ ಶಾಲು, ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದರು. ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು. ಪೊಲೀಸರು ಮೈಕ್ಗಳಲ್ಲಿ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಿಜಾಬ್ ಮತ್ತು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಕೇಸರಿ ಶಾಲು ತೊಟ್ಟು ಬಂದಿದ್ದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಹಿಜಾಬ್ ಧರಿಸಿದವರು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.
ವಿದ್ಯಾರ್ಥಿಗಳ ಜೊತೆಗೆ ಹಲವಾರು ಜನರು ಸಹ ಕಾಲೇಜಿಗೆ ಬಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಆಗ ಪೊಲೀಸರು ಸ್ಥಳಕ್ಕೆ ಆಗಮಿಸಿ ದರು. ಪೊಲೀಸರು ಲಾಠಿ ತೋರಿಸಿ ವಿದ್ಯಾರ್ಥಿಗಳನ್ನು ಚದುರಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಶ್ರುವಾಯು ಪ್ರಯೋಗ ಮಾಡಲಾಯಿತು.
ಹಿಜಾಬ್, ಕೇಸರಿ ಶಾಲು ವಿವಾದ ತಾರಕ್ಕೇರಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.