Friday, 13th December 2024

Kangana Ranaut: ʼಎಮರ್ಜೆನ್ಸಿʼ ಚಿತ್ರ ಬಿಡುಗಡೆಗಾಗಿ ಕೋರ್ಟ್‌ ಮೆಟ್ಟಿಲೇರಲೂ ಸಿದ್ದ; ಕಂಗನಾ ಗುಡುಗು

Kangana Ranaut

ನವದೆಹಲಿ: ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ, ಸಂಸದೆ ಕಂಗನಾ ರಾಣಾವತ್‌ (Kangana Ranaut) ಸದ್ಯ ತಮ್ಮ ಮುಂಬರುವ ಚಿತ್ರ ʼಎಮರ್ಜೆನ್ಸಿʼ (Emergency)ಯ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಜೀವನವನ್ನಾಧರಿಸಿದ ಈ ಸಿನಿಮಾಕ್ಕೆ ಸ್ವತಃ ಕಂಗನಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೈಲರ್‌ ಮೂಲಕ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದ್ದು, ಈಗಾಗಲೇ ಒಂದಷ್ಟು ಮಂದಿ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೀಗ ಕಂಗನಾ ರಾಣಾವತ್‌ ಮಾತನಾಡಿ ಚಿತ್ರ ಬಿಡುಗಡೆಗಾಗಿ ಕೋರ್ಟ್‌ ಮೆಟ್ಟಿಲೇರಲು ಸಿದ್ದ ಎಂದು ಘೋಷಿಸಿದ್ದಾರೆ.

ʼʼಸೆನ್ಸಾರ್‌ ಮಂಡಳಿ ತಮ್ಮ ʼಎಮರ್ಜೆನ್ಸಿʼ ಸಿನಿಮಾವನ್ನು ವೀಕ್ಷಿಸಿದೆ. ಆದರೆ ಇನ್ನೂ ಪ್ರಮಾಣ ಪತ್ರ ನೀಡಿಲ್ಲ. ಒಂದುವೇಳೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಿದ್ದರೆ ಕೋರ್ಟ್‌ ಮೊರೆ ಹೋಗುತ್ತೇನೆʼʼ ಎಂದು ತಿಳಿಸಿದ್ದಾರೆ. ಚಿತ್ರವನ್ನು ಸೆಪ್ಟೆಂಬರ್‌ 6ರಂದು ತೆರೆಗೆ ತರುವುದಾಗಿ ಕಂಗನಾ ಈಗಾಗಲೇ ಘೋಷಿಸಿದ್ದಾರೆ. ʼʼಅಂದೇ ಚಿತ್ರ ತೆರೆ ಕಾಣಲಿದೆ ಎನ್ನುವ ವಿಶ್ವಾಸವಿದೆʼʼ ಎಂದು ತಿಳಿಸಿದ್ದಾರೆ.

“ಸೆನ್ಸಾರ್ ಮಂಡಳಿಯಿಂದಲೂ ಸಾಕಷ್ಟು ಸಮಸ್ಯೆ ಎದುರಾಗಿದೆ. ಎಲ್ಲ ಅಡೆ ತಡೆ ಮೀರಿ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ನನಗಿದೆ. ಚಿತ್ರದ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ.  ಆದರೆ ಈಗ ಅವರು ನನಗೆ ಪ್ರಮಾಣಪತ್ರವನ್ನೇ ನೀಡುತ್ತಿಲ್ಲ” ಎಂದು ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರವನ್ನು ರಕ್ಷಿಸಲು ಕಠಿಣ ಹೋರಾಟಕ್ಕೂ ಸಿದ್ದ ಎಂದು ಅವರು ಹೇಳಿದ್ದಾರೆ. “ಚಿತ್ರವು ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಅದಕ್ಕಾಗಿ ಹೋರಾಡಲು ನಾನು ನಿರ್ಧರಿಸಿದ್ದೇನೆ. ನನ್ನ ಚಿತ್ರವನ್ನು ರಕ್ಷಿಸಲು ನ್ಯಾಯಾಲಯದ ಮೊರೆ  ಹೋಗಲು ನಿರ್ಧರಿಸಿದ್ದೇನೆ. ಒಬ್ಬ ವ್ಯಕ್ತಿಯಾಗಿ ನನ್ನ ಹಕ್ಕನ್ನು ಉಳಿಸಲು ಹೋರಾಟ ನಡೆಸುತ್ತೇನೆ. ಯಾರಿಂದಲೂ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ.  ಬೆದರಿಕೆಗಳಿಂದ ನಮ್ಮನ್ನು ಹೆದರಿಸಲು ಅಸಾಧ್ಯ” ಎಂದು ಅವರು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಪೊಲೀಸರ ಮೊರೆ ಹೋದ ಕಂಗನಾ

ʼಎಮರ್ಜೆನ್ಸಿʼ ಸಿನಿಮಾ ಮಾಡಿದ್ದಕ್ಕೆ ಸೋಷಿಯಲ್‌ ಮೀಡಿಯಾದ ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಪೊಲೀಸರ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಒಂದು ವೇಳೆ ಈ ಚಿತ್ರ ಬಿಡುಗಡೆಯಾದರೆ ನೀವು ಸರ್ದಾರರಿಂದ ಚಪ್ಪಲಿ ಏಟು ಪಡೆಯುತ್ತೀರಿ. ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಹೋದರರು ಚಪ್ಪಲಿಗಳೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅವರು ಪೊಲೀಸರಿಗೆ ದೂರು ನೀಡಿ ರಕ್ಷಣೆಗಾಗಿ ಮೊರೆ ಹೋಗಿದ್ದಾರೆ.

ಕಂಗನಾ ರಾಣಾವತ್‌ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಅನುಪಮ್‌ ಖೇರ್‌, ಶ್ರೇಯಸ್‌ ತಲ್ಪಾಡೆ, ಮಹಿಮಾ ಚೌಧರಿ ಮತ್ತಿತರರು ನಟಿಸಿದ್ದಾರೆ.