Thursday, 11th August 2022

ಸರಕಾರ ಮೃತರಿಗೆ 25 ಲಕ್ಷ ಪರಿಹಾರ ನೀಡಬೇಕು: ಮಾಜಿ ಸಿಎಂ ಕುಮಾರಸ್ವಾಮಿ

ತುಮಕೂರು : ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಸರಕಾರ 25 ಲಕ್ಷ ರು ಪರಿಹಾರ ನೀಡ ಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದುರಂತಕ್ಕೆ ಸಾರಿಗೆ ಇಲಾಖೆಯ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯವೇ ಕಾರಣ. ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳ ಜೀವಗಳು ಬಲಿಯಾಗಿವೆ. ಮುಖ್ಯಮಂತ್ರಿಗಳು ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮೊತ್ತದ ಪರಿಹಾರ ಘೋಷಿಸ ಬೇಕು. ಮೃತ ಕುಟುಂಬಗಳ ಜೀವನೋಪಾಯಕ್ಕೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಗಾಯಾಳುಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಿಸಬೇಕು. ತಾಲೂಕಿನ ಶೇ.25 ಗ್ರಾಮಗಳಿಗೆ ಬಸ್ ಇಲ್ಲ. ಪಾವಗಡ ಹಿಂದುಳಿ ದಿರುವ ಗಡಿ ತಾಲೂಕಾಗಿದೆ. ಈ ಭಾಗದ ಜನರು ಸೂಕ್ತ ಸಾರಿಗೆ ಸವಲತ್ತು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ಕೂಡಲೇ ಈ ಎಲ್ಲ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಕಲ್ಪಿಸ ಬೇಕು ಎಂದು ಆಗ್ರಹಿಸಿದರು.

ಅಪಘಾತಕ್ಕೀಡಾದ ಬಸ್‌ನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಬಸ್‌ನ ಟಾಪ್ ಮೇಲೂ ಜನ ಕೂತಿದ್ದರು. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜನ ಹೆಚ್ಚಿದ್ದರೂ ಈ ಮಾರ್ಗದಲ್ಲಿ ಬಸ್‌ಗಳ ಸಂಚಾರ ಸರಿಯಾಗಿಲ್ಲ. ಸಾರಿಗೆ ಅಧಿಕಾರಿಗಳ ಉಪೇಕ್ಷೆ ಖಂಡನೀಯ. ಇದು ಅನಾಹುತಕ್ಕೆ ಕಾರಣವಾಗಿದೆ. ದುರಂತಕ್ಕೆ ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯದ ಜತೆಗೆ ಪಾವಗಡದಲ್ಲಿ ಬಸ್ ಡಿಪೋ ಇದ್ದರೂ ಸೂಕ್ತ ಬಸ್ ವ್ಯವಸ್ಥೆ ಮಾಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪೇಕ್ಷೆಯೂ ಎದ್ದು ಕಾಣುತ್ತದೆ. ಸರಕಾರ ಸೂಕ್ತ ತನಿಖೆ ನಡೆಸಿ ಕರ್ತವ್ಯಲೋಪ ಎಸಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಮಾಜಿ ಶಾಸಕ ತಿಮ್ಮರಾಯಪ್ಪ, ಆಂಜಿನಪ್ಪ, ನಾಗರಾಜು, ಬೆಳ್ಳಿ ಲೋಕೇಶ್, ಮಧು ಇತರರಿದ್ದರು.