Tuesday, 17th May 2022

ಖಾಸಗಿ ಕಾಲೇಜಿನ 32 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು

#covid

ಕೋಲಾರ: ಕೋಲಾರದ ಖಾಸಗಿ ಕಾಲೇಜಿನ 32 ವಿದ್ಯಾರ್ಥಿಗಳಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ತಪಾಸಣೆಯಲ್ಲಿ ತಿಳಿದು ಬಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಸೋಂಕು ತಗುಲಿದ ವಿದ್ಯಾರ್ಥಿಗಳೆಲ್ಲ ಕೇರಳದವರು ಎಂದು ಗೊತ್ತಾಗಿದೆ. ಬುಧವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಒಂದೇ ದಿನದಲ್ಲಿ 55 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 46339ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 13 ಸೋಂಕಿತರು ಗುಣಮುಖರಾಗಿದ್ದರೆ, ಜಿಲ್ಲೆಯಲ್ಲಿ ಈವರೆಗೂ 45510 ಸೋಂಕಿತರು ಗುಣಮುಖರಾಗಿದ್ದು, 206 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ 7 ದಿನ ಕಡ್ಡಾಯ ಸಾಂಸ್ಥಿಕ ದಿಗ್ಬಂಧನ ವಿಧಿಸುವ ನಿಯಮ ದಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗಿತ್ತು.

ನರ್ಸಿಂಗ್, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು 72 ಗಂಟೆಗಳ ಹಿಂದೆ ಪರೀಕ್ಷಿಸಿದ RT-PCR ನೆಗೆಟಿವ್ ವರದಿ ಸಾಕಾಗುತ್ತದೆ. ವಿದ್ಯಾರ್ಥಿಗಳ ಹೊರತಾಗಿ ಕೇರಳದಿಂದ ಆಗಮಿಸುವ ಪ್ರತಿಯೊಬ್ಬರಿಗೂ 7 ದಿನ ಸಾಂಸ್ಥಿಕ ದಿಗ್ಬಂಧನ ಹಾಗೂ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ವಾರಾಂತ್ಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಪರೀಕ್ಷೆಗಾಗಿ ಪ್ರಯಾಣಿಸುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿರುತ್ತದೆ.