Friday, 18th June 2021

ಕೋವಿಡ್ ನಿಯಂತ್ರಣಕ್ಕಾಗಿ ನಿತ್ಯವೂ 5000 ಕೋವಿಡ್ ಟೆಸ್ಟ್‌

ಚಿಕ್ಕನಾಯಕನಹಳ್ಳಿ : ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯು ಸಾಕಷ್ಟು ಲಭ್ಯವಿದ್ದು, ಸರಕಾರದಿಂದ ಹೆಚ್ಚಿನದಾಗಿ ಕೋವಿಡ್ ಲಸಿಕೆ ದೊರೆಯುತ್ತಿದೆ. ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ನಿತ್ಯವೂ 5000 ಕೋವಿಡ್ ಟೆಸ್ಟ್‌’ಗಳ ಗುರಿಯನ್ನು ಹೊಂದಲಾಗಿದೆ ಎಂದು ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಕೆ.ಬಿ.ಕ್ರಾಸ್‌ನ ಮ್ಯಾಪ್ ಗಾರ್ಮೆಂಟ್ಸ್ ಉಚಿತವಾಗಿ ನೀಡಿದ ಪಿಪಿಇ ಕಿಟ್ ಮತ್ತು ಸರ್ಜಿಕಲ್ ಮಾಸ್ಕ ಗಳನ್ನು ಸ್ವೀಕರಿಸಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರ ಮಾಡಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ದಿನಕ್ಕೆ ಕನಿಷ್ಠ 5000 ಜನರ ಕೋವಿಡ್ ಪರೀಕ್ಷೆ ಮಾಡುವ ಗುರಿ ಹೊಂದಿದ್ದು ಶಿರಾ, ಪಾವಗಡ, ಚಿ.ನಾ.ಹಳ್ಳಿ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಕೋವಿಡ್ ಪರೀಕ್ಷೆಯು ಚುರುಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಜೆಗಳ ಹಿತಾಸಕ್ತಿಗಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಸರಕಾರ ಇದನ್ನು ಅಭಿಯಾನದಂತೆ ಆರಂಭಿಸಿ ಎಲ್ಲಾರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ, ಇದಕ್ಕಾಗಿ ಲಸಿಕೆಯನ್ನು ಸಾಕಷ್ಟು ಸಂಗ್ರಹಿಟ್ಟು ಕೊಳ್ಳಲಾಗುತ್ತಿದೆ ಎಂದರು.

ಲಸಿಕೆಯನ್ನು ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ತಪ್ಪು ಮಾಹಿತಿ ಮತ್ತು ವದಂತಿಗಳಿಗೆ ಕಿವಿ ಗೊಡದೆ ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು. ಮ್ಯಾಪ್ ಗಾರ್ಮೆಂಟ್ಸ್ ನಲ್ಲಿ ಕೆಲಸ ನಿರ್ವ ಹಿಸುತ್ತಿರುವ ಸುಮಾರು ೩೦೦೦ ಸಾವಿರ ನೌಕರರು ಲಸಿಕೆ ಪಡೆಯಬೇಕಾಗಿದ್ದು ಅವರಿಗೆಲ್ಲ ಸರಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದರು. ಪಟ್ಟಣ ಸೇರಿದಂತೆ ತಾಲ್ಲೂಕಿದ್ಯಂತ ನಡೆಯುತ್ತಿರುವ ೪೫ ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ಒಂದನೆ ಲಸಿಕಾ ಅಭಿಯಾನವನ್ನು ಎಲ್ಲರೂ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ತಹಸೀಲ್ದಾರ್ ತೇಜಸ್ವೀನಿ ಮಾತನಾಡಿ ಒಂದೇ ದಿನದಲ್ಲಿ ತಾಲ್ಲೂಕಿನಲ್ಲಿ 900 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು ಕೋವಿಡ್ ಪರೀಕ್ಷೆಗಳನ್ನು ಮುಂದುವರಿಸಲಾಗುತ್ತಿದೆ. ಪ್ರಸ್ತುತ ತಾಲ್ಲೂಕಿನಲ್ಲಿ ಶೇ 7.5 ರಷ್ಟು ಕೋವಿಡ್ ಇದೆ ಎಂದು ತಿಳಿಸಿ ದರು.

ಮ್ಯಾಪ್ ಗಾರ್ಮೆಂಟ್ಸ್ನ ವ್ಯವಸ್ಥಾಪಕ ನರಸಿಂಹ ಮೂರ್ತಿ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು ಎರಡು ಸಾವಿರ ಜನರು ನಮ್ಮ ಸಂಸ್ಥೆಗೆ ಕೆಲಸಕ್ಕೆ ಬರುತ್ತಾರೆ. ಅಂದರೆ 2000 ಸಾವಿರ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ. ತಾಲ್ಲೂಕಿನ ಜನರ ಸೇವೆಯಲ್ಲಿ ಆರೋಗ್ಯ ಇಲಾಖೆ ಕಾರ್ಯ ನಿರತವಾಗಿದೆ. ವೈದ್ಯರು ಹಾಗು ಸಿಬ್ಬಂದಿಗಳಿಗೆ ಅನಕೂಲವಾಗುವ ದೃಷ್ಟಿಯಿಂದ ಪಿಪಿಇ ಕಿಟ್ ಹಾಗು ಮಾಸ್ಕ್ಗಳನ್ನು ನೀಡಲಾಗುತ್ತಿದೆ ಎಂದರು.

ಈ ವೇಳೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಶಂಕರ್, ಸಹಾಯಕ ವ್ಯವಸ್ಥಾಪಕ ವಿಜಯ್ ಅಂಜನ್, ಕೈಗಾರಿಕಾ ವ್ಯವಸ್ಥಾಪಕ ನಾಗೇಂದ್ರ, ತಾ.ವೈದ್ಯಾಧಿಕಾರಿ ನವೀನ್, ಪಿಎಸ್‌ಐ ಹರೀಶ್ ಸೇರಿದಂತೆ ಮುಂತಾದವರಿದ್ದರು.

Leave a Reply

Your email address will not be published. Required fields are marked *