Friday, 27th May 2022

ತಾಜ್ ಮಹಲ್ ಹಿಂದಿನ ಸತ್ಯಾಸತ್ಯತೆ ಏನು ?

ವಿಶ್ಲೇಷಣೆ

ಮಾರುತೀಶ್ ಅಗ್ರಾರ

ಷಹಜಹಾನ್‌ನ ದುರಾಡಳಿತದ ಬಗ್ಗೆ ಹಾಗೂ ತಾಜ್ ಮಹಲ್ ನಿರ್ಮಾಣದ ಹಿಂದಿರುವ ಸತ್ಯಾಸತ್ಯತೆಗಳ ಬಗ್ಗೆ ತುಂಬಾ ವಸ್ತುನಿಷ್ಠವಾಗಿ ಸಂಶೋಧನೆ ನಡೆಸಿ ಅನೇಕ ವಿಚಾರಗಳನ್ನು ಪಿ.ಎನ್. ಓಕ್ ಅವರು ಬಯಲಿಗೆಳೆದಿದ್ದಾರೆ. ಅವರ ಪ್ರಕಾರ ತಾಜ್ ಮಹಲ್ ನಿರ್ಮಾಣಕ್ಕೂ ಪೂರ್ವದಲ್ಲಿ ಅದೊಂದು ವೈದಿಕ ದೇವಾಲಯವಾಗಿತ್ತು. ಇದು ಅವರ ಬಲವಾದ ವಾದ.

ಭಾರತೀಯ ಇತಿಹಾಸದ ಕಾಲ ಗರ್ಭದಲ್ಲಿ ಅದೆಷ್ಟೋ ಸತ್ಯಗಳು ಹುದುಗಿಕೊಂಡಿವೆ. ನಮ್ಮನ್ನು ಆಳಲು ಬಂದ ಅನೇಕ ಪಾಶ್ಚಿಮಾತ್ಯ ಆಕ್ರಮಣಕಾರರು ಭಾರತೀಯ ಅಸ್ಮಿತೆಯ ಮೇಲೆ ದಾಳಿ ಮಾಡಿ ಅದರ ಮೇಲೆ ತಮ್ಮ ಅಸ್ತಿತ್ವದ ಕೋಟೆ ನಿರ್ಮಿಸಿದ್ದು ದುರ್ದೈವ. ಮೊಘಲರ ಆಕ್ರಮಣವಂತು ಭಾರತೀಯ ಸಂಸ್ಕೃತಿಯ ಮೇಲೆ ನಡೆದ ವಿಧ್ವಂಸಕ ದಾಳಿ.

ಬಾಬರ್, ಖಿಲ್ಜಿ, ಘೋರಿ, ಘಜ್ನಿ, ಅರ್ಕ್ಬರ್, ಔರಂಗಜೇಬ್ ಇವರುಗಳ ಟಾರ್ಗೆಟ್ ಹಿಂದೂಧರ್ಮವೇ ಆಗಿತ್ತು. ಹಾಗಾಗಿ ಇವರುಗಳ ಆಡಳಿತದಲ್ಲಿ ಲಕ್ಷಾಂತರ ಹಿಂದೂ ದೇವಾಲಯಗಳು ನಾಶವಾದವು, ಅದೆಷ್ಟೋ ಹಿಂದೂ ರಾಜರ ಅರಮನೆಗಳು ಮೊಘಲರ ಮಹಲ್‌ ಗಳಾದವು, ಲೆಕ್ಕವಿಲ್ಲದಷ್ಟು ಹಿಂದೂಗಳ ಮತಾಂತರ, ಮಂದಿರ ಒಡೆದು ಆ ಜಾಗದಲ್ಲಿ ಮಸೀದಿ, ದರ್ಗಾಗಳು ತಲೆ ಎತ್ತಿದವು.

ಇದಕ್ಕೆ ಕಾರಣ ಹಿಂದೂ ದೇವಾಲಯಗಳನ್ನು ಕೆಡವಿ ಅದರ ಮೂಲ ಜಾಗದಲ್ಲಿ ಮೊಘಲ ರು ಮಸೀದಿಗಳನ್ನು ನಿರ್ಮಿಸಿದ್ದು. ಅದೇ ರೀತಿ ಅನೇಕ ಇತಿಹಾಸಕಾರರು ಹೇಳುವ ಪ್ರಕಾರ ಜಗತ್ತಿನ ಅದ್ಭುತಗಳಂದು ಎನಿಸಿಕೊಂಡಿರುವ ತಾಜ್ ಮಹಲ ನಿರ್ಮಾಣ ಗೊಂಡಿರುವುದು ಕೂಡ ಹಿಂದೂ ದೇವಾಲಯವೊಂದರ ನಾಶದ ಮೇಲೆಯೇ ಎಂಬುದು ಇತಿಹಾಸಕಾರರ ವಾದ.

ಪ್ರಸಿದ್ಧ ಇತಿಹಾಸಕಾರ ಪಿ.ಎನ್. ಓಕ್ ಅವರು ಬರೆದ The Taj Mahal is Tejo Mahalaya ಎನ್ನುವ ಪುಸ್ತಕದಲ್ಲಿ ತಾಜ್ ಮಹಲ್ ಷಹಜಹಾನನ ಹೆಂಡತಿ ಮುಮ್ತಾಜಳ ಗೋರಿಯಲ್ಲ; ಅದು ವೈದಿಕ ದೇವಾಲಯ, ಅಲ್ಲಿ ಈಶ್ವರನನ್ನು ಪೂಜಿಸಲಾಗುತ್ತಿತ್ತು ಎಂದಿದ್ದಾರೆ.
ಹಾಗಾಗಿ ಅದನ್ನು ನಮ್ಮ ಪೂರ್ವಜರು ‘ತೇಜೋ ಮಹಾಲಯ’ ಎಂಬ ಹೆಸರಿನಿಂದ ಕರೆಯುತ್ತಿದ್ದರು ಎಂದೂ ಸಹ ಓಕ್ ಅಭಿಪ್ರಾಯ ಪಟ್ಟಿದ್ದಾರೆ. ಇರಲಿ, ಓಕ್ ಅವರು ಸಂಶೋಧನೆ ನಡೆಸಿ ಸಂಗ್ರಹಿಸಿರುವ ಮಾಹಿತಿಗಳನ್ನು ಮತ್ತೆ ನೋಡೋಣ.

ಅದಕ್ಕೂ ಮುನ್ನ 17ನೇ ಶತಮಾನದ ಇತಿಹಾಸದ ಕಡೆ ಕಣ್ಣಾಡಿಸಿದರೆ ಆಗ್ರಾದಲ್ಲಿರುವುದು ತಾಜ್ ಮಹ? ಅಥವಾ ಅದರ ಮೂಲ ತೇಜೋ ಮಹಾಲಯವೋ? ಎಂಬುದರ ವಿವರಣೆ ಸಿಗುತ್ತದೆ. ಮೊಘಲ್ ದೊರೆ ಜಹಾಂಗೀರ್ ನಂತರ ಮಗನಾದ ಷಹಜಹಾನನ
ಆಳ್ವಿಕೆ ಭಾರತದಲ್ಲಿ ಆರಂಭವಾಗುತ್ತದೆ. ಅಂದರೆ 1627 ರಿಂದ 1658 ರವರೆಗೆ ಹೆಚ್ಚು ಕಡಿಮೆ ಮೂವತ್ತು ವರ್ಷಗಳ ಕಾಲ ಷಹಜಹಾನ್ ಆಡಳಿತ ನಡೆಸಿದ್ದ. ಈ ಕಾಲಘಟ್ಟದಲ್ಲಿ ಜೈಪುರದ ರಜಪೂತ ರಾಜ ಜೈಸಿಂಗ್ ಹೆಚ್ಚು ಪ್ರಖ್ಯಾತಿ ಗಳಿಸಿದ್ದ ರಾಜನಾಗಿದ್ದ. ಈತ ತನ್ನ ಹತ್ತನೇ ವಯಸ್ಸಿನಲ್ಲಿಯೇ ರಜಪೂತರ ಮುಖ್ಯಸ್ಥನಾಗಿ ನೇಮಕವಾಗಿದ್ದ ಪ್ರತಿಭಾವಂತ.

ಜೈಸಿಂಗ್‌ನ ಆಡಳಿತದಲ್ಲಿ ಅಂಬರ್ ಸಾಮ್ರಾಜ್ಯ ಅತ್ಯಂತ ಪ್ರಸಿದ್ಧಿ ಪಡೆದ ಹಾಗೂ ಶ್ರೀಮಂತ ಸಾಮ್ರಾಜ್ಯವಾಗಿತ್ತು. ಹಾಗಾಗಿ ಅನೇಕರ ಕಣ್ಣು ಈ ಸಾಮ್ರಾಜ್ಯದ ಮೇಲೆ ಬೀಳುತ್ತದೆ. ಸಹಜವಾಗಿ ಅಂಬರ್ ಸಾಮ್ರಾಜ್ಯ ಸಾಕಷ್ಟು ದಾಳಿಗಳನ್ನು ಎದುರಿಸಬೇಕಾಗುತ್ತದೆ. ಆದರೆ ಯಾವ ಸಂದರ್ಭದಲ್ಲೂ ಅಂಬರ್ ಸಾಮ್ರಾಜ್ಯ ವಿರೋಧಿಗಳ ಕಪಿಮುಷ್ಠಿಗೆ ಒಳಗಾಗುವುದಿಲ್ಲ. ಅದೊಮ್ಮೆ ರಾಜ ಜೈಸಿಂಗ್‌ನ ಕಮಾಂಡರ್ ಆಗಿದ್ದ ಖಾನ್ ಜಹಾನ್ ಲೋದಿ ಎಂಬಾತ ತನ್ನ ಆಫ್ಘನ್ ಅನುಯಾಯಿಗಳೊಂದಿಗೆ ಜೈಪುರದ ಮೇಲೆ ಬಂಡಾಯವೆದ್ದು ಜೈಸಿಂಗನ ಮೇಲೆಯೇ ಯುದ್ಧ ಸಾರುತ್ತಾನೆ.

ಆದರೆ ಚಾಣಾಕ್ಷನಾಗಿದ್ದ ಜೈಸಿಂಗ್, ಖಾನ್ ಜಹಾನ್ ಲೋದಿಯ ಒಳಸಂಚನ್ನು ಮೊದಲೇ ತಿಳಿದುಕೊಂಡು ತನ್ನ ಸ್ವಂತ ಸೈನ್ಯದಿಂದ ಲೋದಿಯ ಹೆಡೆಮುರಿ ಕಟ್ಟುತ್ತಾನೆ. ನಂತರ ಜೈಸಿಂಗ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತ ಆಗ್ರಾದಲ್ಲಿ ನೆಲೆಯೂರುತ್ತಾನೆ. ಆ ದಿನಗಳಲ್ಲಿ ಆಗ್ರಾವು ಆಗ್ರಾ, ಜೈಪುರ ಮತ್ತು ದೆಹಲಿಯನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭೂಭಾಗವಾಗಿತ್ತು. ಹಾಗಾಗಿ ರಜಪೂತ ರಿಗೆ ಆಗ್ರಾ ಒಂದು ರೀತಿಯಲ್ಲಿ ತವರು ಮನೆಯಂತಾಗಿತ್ತು.

ರಾಜ ಜೈಸಿಂಗರ ತಂದೆ ರಾಜ ಮಹಾ ಸಿಂಗರು ಅದಾಗಲೇ ಈ ಭಾಗಗಳಲ್ಲಿ ಸಾಕಷ್ಟು ದೇವಸ್ಥಾನಗಳನ್ನು ನಿರ್ಮಿಸಿದ್ದರು. ಆದರೆ ಮೊಘಲರ ಆಕ್ರಮಣದ ನಂತರ ಆಗ್ರಾದ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಕೆಲ ಹಿಂದೂ ದೇವಾಲಯಗಳನ್ನು ಮೊಘಲ್ ದೊರೆಗಳು ನಾಶ ಮಾಡಿದರು. ಆದರೆ ಅಕ್ಬರ್ ಮತ್ತು ಜಹಾಂಗೀರ್‌ನ ಕ್ರೂರ ದೃಷ್ಟಿ ಆಗ್ರಾದ ಪ್ರಸಿದ್ಧ ಈಶ್ವರ ದೇವಾಸ್ಥಾನದ ಮೇಲೆ
ಬಿದ್ದಿರಲಿಲ್ಲ. ಜಹಾಂಗೀರ್ ಒಬ್ಬ ಇಸ್ಲಾಂ ದೊರೆಯಾದರು ಬಾಬರ್, ಘಜ್ನಿ, ಘೋರಿಗಳ ರೀತಿ ಹಿಂದೂ ಧರ್ಮದ ಕಡು ವೈರಿಯಾಗಿರಲಿಲ್ಲ ಎಂಬುದು ನೆನಪಿಡಬೇಕು.

ಹಾಗಾಗಿ ಆತನ ಆಡಳಿತದಲ್ಲಿ ಹಿಂದೂ ಧರ್ಮದ ಮೇಲೆ ದಾಳಿಗಳು ನಿರಂತರವಾಗಿರಲಿಲ್ಲ. ಈ ಕಾರಣದಿಂದಲೇ ಜಹಾಂಗೀರ್‌ನ ಕಾಲದಲ್ಲಿ ಆಗ್ರಾದ ಈಶ್ವರ ದೇವಾಲಯ ನಾಶವಾಗದೆ ಇದ್ದದ್ದು ಎನ್ನಬಹುದು. ಆಗಿನಿಂದಲೇ ರಾಜ ಜೈಸಿಂಗ್‌ನ ಆಳ್ವಿಕೆಯಲ್ಲಿ ರಜಪೂತರು ಪ್ರತಿನಿತ್ಯ ಈ ಈಶ್ವರ ದೇವಾಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಈ ದೇವಸ್ಥಾನದ ಉಸ್ತುವಾರಿಯನ್ನು ಸ್ವತಃ ರಾಜ ಜೈಸಿಂಗ್‌ರೇ ವಹಿಸಿಕೊಂಡಿದ್ದರು. ಈ ಈಶ್ವರನ ದೇವಸ್ಥಾನವನ್ನು ರಜಪೂತರು ‘ತೇಜೋ ಮಹಾಲಯ’ವೆಂದು ಸಹ ಕರೆಯುತ್ತಿ
ದ್ದರು ಎನ್ನುವುದು ಇತಿಹಾಸದ ದಾಖಲೆಗಳಲ್ಲಿ ನಮೂದಾಗಿದೆ.

ಮುಂದೆ ಷಹಜಹಾನ್ ಅಧಿಕಾರಕ್ಕೆ ಬಂದಾಗ ರಾಜ ಜೈಸಿಂಗ್ ಮತ್ತು ಷಹಜಹಾನ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕಾಣಿಸಿ ಕೊಂಡ ಪರಿಣಾಮ ಷಹಜಹಾನನಿಂದ ಅನೇಕ ತೊಂದರೆಗಳನ್ನು ಜೈಸಿಂಗ್ ಅನುಭವಿಸಬೇಕಾಗಿ ಬಂತು. ಆಗ ಷಹಜಹಾನ್‌ನ ಕಣ್ಣು ಸುಂದರವಾದ ಈಶ್ವರ ದೇವಸ್ಥಾನದ ಮೇಲೆ ಬೀಳುತ್ತದೆ. ಈ ದೇವಾಲಯವನ್ನು ಜೈಸಿಂಗರಿಂದ ಕಿತ್ತುಕೊಳ್ಳಬೇಕೆಂದು ಷಹಜಹಾನ್ ತೀರ್ಮಾನಿಸುತ್ತಾನೆ. ಆದರೆ ದೇವಾಲಯವನ್ನು ಜೈಸಿಂಗರಿಂದ ಕಿತ್ತುಕೊಳ್ಳುವುದು ಸುಲಭ ಸಾಧ್ಯವಾಗದೆ ಷಹಜಹಾನ್ ಅನೇಕ ಬಾರಿ ಪರಿತಪಿಸುತ್ತಾನೆ.

ಆದರೂ ಹಠ ಬಿಡದ ಷಹಜಹಾನ್ ಸಾಕಷ್ಟು ಒಳಸಂಚುಗಳನ್ನು ಹೂಡಿ ಜೈಸಿಂಗರಿಂದ ಈಶ್ವರ ದೇವಾಲಯವನ್ನು ಕಿತ್ತುಕೊಂಡು ಮತಾಂಧತೆ ಮೆರೆಯುತ್ತಾನೆ. 1629ರಲ್ಲಿ ದೇವಾಲಯ ಷಹಜಹಾನನ ನಿಯಂತ್ರಣಕ್ಕೆ ಒಳಪಡುತ್ತದೆ. ಆದರೆ ಷಹಜಹಾನ್ ಈ ಈಶ್ವರ
ದೇವಸ್ಥಾನವನ್ನು ತನ್ನ ವಶಕ್ಕೆ ಪಡೆದ ನಂತರ ಮುಂದೇನಾಯಿತು ಎಂಬುದರ ಬಗ್ಗೆ ಎಲ್ಲಿಯೂ ಸ್ಪಷ್ಟತೆ ಇಲ್ಲ. ಆದರೆ ಇತಿಹಾಸಕಾರರು ಹೇಳುವ ಪ್ರಕಾರ ಷಹಜಹಾನ್ ಜೈಸಿಂಗರಿಂದ ಈಶ್ವರ ದೇವಾಲಯವನ್ನು ಕಿತ್ತುಕೊಂಡು ನಂತರ ಅದನ್ನು ಕೆಡವಿ ಆ ಜಾಗದಲ್ಲಿ ಭವ್ಯವಾದ ಕಟ್ಟಡವನ್ನು ನಿರ್ಮಿಸಿ ಅದನ್ನು ತಾಜ್ ಮಹಲ್ ಎಂದು ಕರೆದು ನಮ್ಮ ಮುಂದಿಟ್ಟಿದ್ದು ದುರಂತವೇ ಸರಿ ಎಂದಿದ್ದಾರೆ.

ಷಹಜಹಾನ್‌ನ ಈ ದುರಾಡಳಿತದ ಬಗ್ಗೆ ಹಾಗೂ ತಾಜ್ ಮಹಲ್ ನಿರ್ಮಾಣದ ಹಿಂದಿರುವ ಸತ್ಯಾಸತ್ಯತೆಗಳ ಬಗ್ಗೆ ತುಂಬಾ ವಸ್ತುನಿಷ್ಠ ವಾಗಿ ಸಂಶೋಧನೆ ನಡೆಸಿ ಅನೇಕ ವಿಚಾರಗಳನ್ನು ಪಿ.ಎನ್. ಓಕ್ ಅವರು ಬಯಲಿಗೆಳೆದಿದ್ದಾರೆ. ಅವರ ಪ್ರಕಾರ ತಾಜ್ ಮಹಲ್ ನಿರ್ಮಾಣಕ್ಕೂ ಪೂರ್ವದಲ್ಲಿ ಅದೊಂದು ವೈದಿಕ ದೇವಾಲಯವಾಗಿತ್ತು. ಇದಕ್ಕೆ ಪೂರಕವೆಂಬಂತೆ ಸಾಕಷ್ಟು ವಿಚಾರಗಳನ್ನು ಓಕ್ ಅವರು ನಮ್ಮ ಮುಂದಿಡುತ್ತಾರೆ. ಅದರ ಪ್ರಕಾರ, ನ್ಯೂಯಾರ್ಕ್‌ನ ಪ್ರೋಫೆಸರ್ ಮಾರ್ವಿನ್ ಮುಲ್ಲರ್ ಅವರು ತಾಜ್ ಮಹಲ್ ಕಟ್ಟಡದ ನದಿ ದಡದ ಕಡೆ ಇರುವ ಬಾಗಿಲಿನ ಅವಶೇಷಗಳನ್ನು ಕಾರ್ಬನ್ ಟೆಸ್ಟ್‌ಗೆ ಒಳಪಡಿಸಿದಾಗ ಆದರ ಅವಶೇಷಗಳು ತಾಜ್ ಮಹಲಿನ ಕಾಲ ಕ್ಕಿಂತ ಮುನ್ನೂರು ವರ್ಷ ಹಳೆಯದು ಎಂದು ಖಚಿತ ಪಡಿಸಿವೆ.

ಓಕ್ ಅವರು ಸಂಶೋಧನೆ ನಡೆಸಿ ದಾಖಲಿಸಿರುವ ಮಾಹಿತಿ ಪ್ರಕಾರ, ಮುಮ್ತಾಜಳ ಸಾವಿನ ಕೇವಲ 7 ವರ್ಷಗಳ ನಂತರ ಅಂದರೆ 1638ರಲ್ಲಿ ಯುರೋಪ್ ಪ್ರವಾಸಿಗನೊಬ್ಬ ಆಗ್ರಾಕ್ಕೆ ಭೇಟಿ ನೀಡಿದ್ದ. ಆತ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಪ್ರವಾಸ ಹಾಗೂ ಸ್ಥಳದ ಬಗ್ಗೆ ಹಾಗೂ ಜನ-ಜೀವನದ ಬಗ್ಗೆ ವಿವರಣೆ ನೀಡಿದ್ದಾನೆ. ಆದರೆ ಎಲ್ಲಿಯೂ ಆತ ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಉಲ್ಲೇಖಿಸಿಲ್ಲ. ಅಂದರೆ ಅಂದಿನ ದಿನಗಳಲ್ಲಿ ಆ ಜಾಗದಲ್ಲಿ ತಾಜ್ ಮಹಲ್ ಎಂಬ ಕಟ್ಟಡವೇ ಇರಲಿಲ್ಲ ಎಂದಾಯ್ತಲ್ಲ ಎನ್ನುತ್ತಾರೆ ಓಕ್. ಇಷ್ಟೇ ಅಲ್ಲದೇ ಷಹಜಹಾನ್ ತನ್ನ ಬಾದಶಹನಾಮದಲ್ಲಿ ರಾಜ ಜೈಸಿಂಗರಿಂದ ಸುಂದರವಾದ ಕಟ್ಟಡವೊಂದನ್ನು ಪಡೆದಿರುವ ಬಗ್ಗೆ ಉಖಗಳಿವೆ.

ಸೋಜಿಗದ ಸಂಗತಿಯೆಂದರೆ ಷಹಜಹಾನನ ಬಾದಶಹನಾಮವನ್ನು ಒಳಗೊಂಡಂತೆ ಆತನ ಪೂರ್ವಾಪರ ಇತಿಹಾಸವನ್ನು ತಡಕಾಡಿ ದರೆ ಎಲ್ಲಿಯೂ ಕೂಡ ತನ್ನ ಹಾಗೂ ಮುಮ್ತಾಜಳ ನಡುವಿನ ಪ್ರೇಮ ಕಥೆಯ ಬಗ್ಗೆ ಒಂದಿನಿತು ಮಾಹಿತಿಗಳು ಲಭ್ಯವಿಲ್ಲ. ಅಂದರೆ ಷಹಜಹಾನ್ ಮುಮ್ತಾಜ್ ಎನ್ನುವ ಮಹಿಳೆಯನ್ನು ಮದುವೆಯಾಗಿರಬಹುದು. ಆದರೆ ಅವರದು ನಿಜವಾಗಿಯೂ ನಾವು-ನೀವು ಅಂದು ಕೊಂಡ ರೀತಿ ಸಂಪ್ರೀತಿ ತುಂಬಿಕೊಂಡಿದ್ದ ಸಂಸಾರವಾಗಿರಲಿಲ್ಲ. ಜತೆಗೆ ಅವರದ್ದು ಮಹೋನ್ನತವಾದ ಪ್ರೇಮಕಥೆ ಎನ್ನುವುದೇ
ಒಂದು ಕಪೋಲಕಲ್ಪಿತ ಎನ್ನುತ್ತದೆ ಇತಿಹಾಸ. ಟೊಳ್ಳು ಇತಿಹಾಸಕಾರರು ಬೇಕಂತಲೇ ವೈಭವೀಕರಿಸಿದ್ದಾರೆ ಎನ್ನುವುದು ಕೂಡ ಕೆಲವರ ವಾದ.

ಇಷ್ಟೇ ಅಲ್ಲದೆ ಓಕ್ ಅವರು ತಾಜ್ ಮಹಲ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಸೂಕ್ಷ್ಮ ವಿಷಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಅದೇ ನೆಂದರೆ, ತಾಜ್ ಮಹಲ್ ಕಟ್ಟಡದ ಅನೇಕ ಭಾಗಗಳು ಹಿಂದೂ ಧರ್ಮದ ಶೈಲಿಯಲ್ಲಿಯೇ ಇವೆ ಹಾಗೂ ತಾಜ್ ಮಹಲ್‌ನ ಒಳ ಗೋಡೆಗಳ ಮೇಲೆ ಓಂ ಸಂಕೇತವೂ ಇರುವುದರಿಂದ ಅದು ನಿಜವಾಗಿಯೂ ವೈದಿಕ ದೇವಾಲಯವೇ ಆಗಿದೆ ಎನ್ನುವುದು ಓಕ್ ಅವರ ಖಚಿತ ಅಭಿಪ್ರಾಯ.

ವಿಪರ್ಯಾಸವೆಂದರೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಪಿ.ಎನ್. ಓಕ್ ಅವರು ತುಂಬಾ ವಸ್ತುನಿಷ್ಠವಾಗಿ ಸಂಶೋಧನೆ ನಡೆಸಿ ಬರೆದಿದ್ದ ದಿ ತಾಜ್ ಮಹಲ ಪುಸ್ತಕದ ಮಾರಾಟವನ್ನು ನಿಷೇಧಿಸಿದ್ದಲ್ಲದೇ ಅದರ ಮುದ್ರಣವನ್ನು ಸ್ಥಗಿತಗೊಳಿಸಿತು. ತಾಜ್
ಮಹಲ್‌ನ ಒಳಗಡೆ ಕೆಲವೊಂದು ರಹಸ್ಯ ಕೋಣೆಗಳಿದ್ದು ಅವುಗಳನ್ನು ಈಗಲೂ ಕೂಡ ಬಂದ್ ಮಾಡಲಾಗಿದೆ. ಇದರ ಕುರಿತಾಗಿ ಕೆಲ ಪಂಡಿತರು, ಹಿಂದೂ ಮುಖಂಡರು, ಇತಿಹಾಸ ವಿಶ್ಲೇಷಕರು ಹೇಳುವ ಪ್ರಕಾರ ತಾಜ್ ಮಹಲಿನ ಒಳಗಿರುವ ರಹಸ್ಯ ಕೊಠಡಿಗಳಲ್ಲಿ ವೈದಿಕ ದೇವಾಲಯದ ಕುರುಹುಗಳಿವೆಯಾದರೂ ರಾಜಕೀಯ ಕಾರಣಕ್ಕಾಗಿ ಯಾರೂ ಕೂಡ ಅದರ ರಹಸ್ಯ ಭೇದಿಸುವ ಕೆಲಸಕ್ಕೆ ಕೈ
ಹಾಕಿಲ್ಲ ಎನ್ನುವುದು ದೌರ್ಭಾಗ್ಯವೇ ಸರಿ ಎನ್ನುತ್ತಾರೆ.

ಈಗ ಇದಕ್ಕೆ ಸಂಬಂಧಿಸಿದಂತೆ ಡಾ. ರಜನೀಶ್ ಸಿಂಗ್ ಎನ್ನುವ ವ್ಯಕ್ತಿಯೊಬ್ಬರು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠಕ್ಕೆ ಅರ್ಜಿ ಯೊಂದನ್ನು ಹಾಕಿದ್ದು, ತಾಜ್ ಮಹಲ್ ಒಳಗಡೆ ಇರುವ ಕೆಲವು ರಹಸ್ಯ ಕೋಣೆಗಳ ಪರಿಶೀಲನೆ ಮಾಡಲು ನ್ಯಾಯಾಲಯ ಅನುಮತಿ ಕೊಟ್ಟರೆ ತಾಜ್ ಮಹಲ್‌ನ ಸತ್ಯಾಸತ್ಯತೆ ಹಾಗೂ ಅದರ ಬಗ್ಗೆ ಇರುವ ಕೆಲವು ಗೊಂದಲಗಳಿಗೆ ತೆರೆ ಎಳೆದಂತಾಗುತ್ತದೆ ಎಂದಿದ್ದಾರೆ. ಈ ಬಗ್ಗೆ ಲಖನೌ ಪೀಠ ಏನು ತೀರ್ಮಾನ ಕೈಗೊಳ್ಳುವುದೋ ಕಾದುನೋಡಬೇಕಿದೆ.