Wednesday, 5th October 2022

ಸಾಹಿತ್ಯ ಸಮ್ಮೇಳನ- ವಿವಿಧ ಸಮಿತಿಗಳ ಸಭೆ ನಡೆಸಿ ಮೂರು ದಿನದೊಳಗೆ ವಿವರ ಸಲ್ಲಿಕೆಗೆ ಸೂಚನೆ

 

ಹಾವೇರಿ; 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಮಿತಿಗಳ ಸಭೆ ನಡೆಸಿ ಮೂರು ದಿನದೊಳಗಾಗಿ ಸಮಿತಿವಾರು ಕಾರ್ಯಯೋಜನೆ ಹಾಗೂ ಖರ್ಚು ವೆಚ್ಚಗಳ ವಿವರನ್ನು ಸಲ್ಲಿಸುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಸಿದ ಅವರು, ತಮ್ಮ ಸಮಿತಿಗೆ ನೇಮಕಗೊಂಡು ಸದಸ್ಯರನ್ನು ಸಂಪರ್ಕಿಸಿ ತುರ್ತಾಗಿ ಸಭೆ ನಡೆಸಲು ಸೂಚಿಸಿದರು.

ಸಮ್ಮೇಳನಕ್ಕೆ ಸಮಯಾವಕಾಶ ಕಡಿಮೆ ಇರುವುದರಿಂದ ತ್ವರಿತವಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ವಿವಿಧ ಸಮಿತಿಗಳ ಸದಸ್ಯಕಾರ್ಯದರ್ಶಿಗಳು ಉಪಸ್ಥಿತರಿದ್ದರು.