Tuesday, 21st March 2023

ವಿಜಯಪುರ ಜಿಲ್ಲೆ: 88 ಗ್ರಾಮ ಪಂಚಾಯ್ತಿಗಳಿಗೆ ನಾಳೆ ಚುನಾವಣೆ

ವಿಜಯಪುರ: ಇಂಡಿ ಉಪ ವಿಭಾಗದ ಇಂಡಿ, ಚಡಚಣ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲ್ಲೂಕುಗಳ 94 ಗ್ರಾಮ ಪಂಚಾಯ್ತಿ ಗಳ ಪೈಕಿ 88 ಗ್ರಾಮ ಪಂಚಾಯ್ತಿಗಳಿಗೆ ಡಿ.27 (ಭಾನುವಾರ) ರಂದು ಮತದಾನ ನಡೆಯಲಿದೆ.

ಒಟ್ಟು 1628 ಸ್ಥಾನಗಳಿಗೆ ನಡೆಯುವ ಚುನಾವಣಾ ಕಣದಲ್ಲಿ 4250 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 119 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 4 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಅಲ್ಲದೇ, ಆರು ಗ್ರಾಮ ಪಂಚಾಯ್ತಿಗಳಿಗೆ ವಿವಿಧ ಕಾರಣಕ್ಕೆ ಚುನಾವಣೆ ನಡೆಯುತ್ತಿಲ್ಲ.

2,83,186 ಪುರುಷ, 2,62,424 ಮಹಿಳಾ, 45 ಇತರೆ ಹಾಗೂ 484 ಸೇವಾ ಮತದಾರರು ಸೇರಿದಂತೆ ಒಟ್ಟು 5,45,655 ಜನರು ಮತದಾರರ ಪಟ್ಟಿಯಲ್ಲಿದ್ದಾರೆ. 113 ಸೂಕ್ಷ್ಮ, 89 ಅತಿ ಸೂಕ್ಷ್ಮ, 582 ಸಾಧಾರಣ ಸೇರಿದಂತೆ ಒಟ್ಟು 784 ಮತಗಟ್ಟೆಗಳನ್ನು ತೆರೆಯ ಲಾಗಿದೆ. 99 ಚುನಾವಣಾಧಿಕಾರಿಗಳು, 108 ಸಹಾಯಕ ಚುನಾವಣಾಧಿಕಾರಿಗಳು, 43 ಸೆಕ್ಟರ್‌ ಅಧಿಕಾರಿಗಳು, 4 ಎಂಸಿಸಿ ಟೀಂ ಹಾಗೂ 1118 ಪೊಲೀಸ್‌ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಶುಕ್ರವಾರವೇ ಮತಪೆಟ್ಟಿಗೆ, ಬ್ಯಾಲೆಟ್‌ ಪೇಪರ್‌ ಸೇರಿದಂತೆ ಚುನಾವಣಾ ಪರಿಕರಗಳೊಂದಿಗೆ ಮಸ್ಟರಿಂಗ್‌ ಕೇಂದ್ರಗಳಿಂದ ಆಯಾ ಮತಗಟ್ಟೆಗೆ ತೆರಳಿದ್ದು, ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿದೆ. ವಿಜಯಪುರ ಉಪ ವಿಭಾಗದ ಎಂಟು ತಾಲ್ಲೂಕುಗಳ ವ್ಯಾಪ್ತಿ ಯಲ್ಲಿ ಡಿ.22ರಂದು ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಇಂಡಿ ಉಪ ವಿಭಾಗದ ನಾಲ್ಕು ತಾಲ್ಲೂಕುಗಳಲ್ಲಿ ಎರಡನೇ ಹಂತದ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಹಳ್ಳಿಗಳಲ್ಲಿ ಚುನಾವಣೆ ಚರ್ಚೆ ಬಿರುಸುಗೊಂಡಿದೆ. ಡಿ.30ರಂದು ಮತ ಎಣಿಕೆ ನಡೆಯಲಿದ್ದು, ಸೋಲು-ಗೆಲುವು ತಿಳಿಯಲಿದೆ.

error: Content is protected !!