Saturday, 23rd November 2024

ವಿವಾದಗಳು ಮಮತೆಯ ಸುಳಿಯಂತೆ…

ದಾಸ್ ಕ್ಯಾಪಿಟಲ್‌

dascapital1205@gmail.com

ನೇರವಾಗಿ ವಿಚಾರಕ್ಕೆ ಬರುತ್ತೇನೆ. ‘ಕಾಂತಾರ’ ಚಲನಚಿತ್ರ ಬಿಡುಗಡೆಯಾಯಿತು. ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಜನರು ಕಣ್ತುಂಬಿಕೊಂಡರು, ಹಿಂಡುಹಿಂಡಾಗಿ ಟಾಕೀಸಿಗೆ ಹೋಗಿ ಚಿತ್ರವನ್ನು ವೀಕ್ಷಿಸಿದರು. ಹೀಗೆ ನೋಡುವುದಕ್ಕೆ ಜನರಲ್ಲಿಯೇ ಹಲವು ಕಾರಣಗಳಿವೆ.

‘ಭೂತಾರಾಧನೆ ಹಿಂದೂಧರ್ಮದ ಭಾಗವಲ್ಲ’ ಎಂದು ಚಿತ್ರನಟ ಚೇತನ್ ಹೇಳುವವ ರೆಗೂ ‘ಕಾಂತಾರ’ದ ಓಟ ಸಹಜವಾಗೇ ಇತ್ತು, ನಂತರದಲ್ಲಿ ಅದನ್ನು ನೋಡುವವರ ಸಂಖ್ಯೆ ಏರತೊಡಗಿತು ಎಂಬುದನ್ನು ಒಪ್ಪಿಕೊಳ್ಳಲು ಯಾವ ಅಡ್ಡಿಯೂ ಇಲ್ಲವೇನೋ! ಈಗ ‘ಕಾಂತಾರ’ದ ಜತೆ ‘ಹೆಡ್ ಬುಷ್’ ಸಿನಿಮಾ ಕೂಡ ಓಡುತ್ತಿದೆ. ಹೀಗೆ ಚಿತ್ರಗಳು ಜನಪ್ರೀತಿ ಗಳಿಸಿ ಓಡುವಾಗ ಪ್ರೇಕ್ಷಕರ ಮನಸ್ಸಲ್ಲಿ ಇದು ಸ್ಪರ್ಧೆಯೇನೋ ಎಂಬ ಪ್ರಜ್ಞೆ ಹುಟ್ಟಿಕೊಳ್ಳಬಾರದು. ಏಕೆಂದರೆ, ಚಲನಚಿತ್ರಗಳು ಮೌಲ್ಯಗಳನ್ನು ಪ್ರತಿನಿಧಿಸುತ್ತಲೇ ಹಣವನ್ನೂ ಹುಟ್ಟಿಸುತ್ತವೆ.

ಮೌಲ್ಯಗಳನ್ನು ಪ್ರತಿನಿಧಿಸುವಲ್ಲಿ ವ್ಯತ್ಯಯಗಳಿರಬಹುದು. ಆಫ್ ಕೋರ್ಸ್ ಇದ್ದೇ ಇರುತ್ತದೆ. ಇದು ಸಹಜವಾದದ್ದು ಕೂಡ. ಇವುಗಳಲ್ಲೇ ಸ್ಪರ್ಧೆಯಾದರೆ ಮೌಲ್ಯಗಳಿರುವುದಿಲ್ಲ. ಮನರಂಜನೆಯ ಮಾಧ್ಯಮವಾಗಿ ಮುದಗೊಳ್ಳುವುದಾದರೆ ಮೌಲ್ಯ ಗಳನ್ನು ಹುಡುಕಿಕೊಳ್ಳಬಹುದು. ಆದರೆ ಎರಡು ಚಿತ್ರಗಳನ್ನು ಅಥವಾ ಕಥೆಗಳನ್ನು ಯಾವ ದೃಷ್ಟಿಯಿಂದಲೂ ತುಲನೆ ಮಾಡುವುದು ಸಹಜವೂ ಅಲ್ಲ, ಸೂಕ್ತವೂ ಅಲ್ಲ, ಆರೋಗ್ಯಯುತವೂ ಅಲ್ಲ. ಒಂದು ಸಿನಿಮಾವನ್ನು ಹೆಚ್ಚು ಜನ ನೋಡಿದ್ದಾ ರೆಂದ ಮಾತ್ರಕ್ಕೆ ಅದು ಹೆಚ್ಚು ಮೌಲ್ಯಗಳನ್ನು ಹೊಂದಿರಲೇಬೇಕು ಎಂದೇನಿಲ್ಲ.

ಕಡಿಮೆ ಜನ ನೋಡಿದರೆಂದ ಮಾತ್ರಕ್ಕೆ ಮೌಲ್ಯಗಳೇ ಇಲ್ಲವೆಂಬ ತೀರ್ಮಾನವೂ ಸಲ್ಲ. ಅಷ್ಟಕ್ಕೂ ಮೌಲ್ಯಗಳ ಸ್ವೀಕಾರದ ಮನೋಭಾವ ಬದಲಾಗಿದೆ. ಬೌದ್ಧಿಕವಾಗಿ, ಮಾನಸಿಕವಾಗಿ, ಸಾಂಸ್ಕೃತಿಕವಾಗಿ, ವೈಚಾರಿಕವಾಗಿ ತಲೆಮಾರುಗಳ ನಡುವೆ ಅಂತರ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಮೌಲ್ಯಗಳ ಸ್ವೀಕಾರದ ಪ್ರಜ್ಞೆಗಳೂ ಬದಲಾಗಿವೆ. ಈ ದೃಷ್ಟಿಯಲ್ಲಿ ‘ಕಾಂತಾರ’ ಗೆದ್ದಿದೆ.

ತಲೆಮಾರುಗಳ ನೆಲೆಯ ಪ್ರಜ್ಞೆಗಳನ್ನು ಗಮನಿಸಿ ಹೇಳುವುದಾದರೆ ‘ಹೆಡ್ ಬುಷ್’ ಕೂಡ ಗೆದ್ದಿದೆ. ಹಾಗೆಂದರೆ ಹೆಚ್ಚು ಹಣ
ಮಾಡಿದೆ ಎಂದರ್ಥವಲ್ಲ. ಚಿತ್ರವೊಂದನ್ನು ನೋಡಿದ ಮೇಲೆ ಅದು ಏಕಾಂತದಲ್ಲೂ ನಮ್ಮನ್ನು ವೈಚಾರಿಕವಾಗೋ ಸಾಂಸ್ಕೃ ತಿಕ ವಾಗೋ ಬೌದ್ಧಿಕವಾಗೋ ಕಾಡಬೇಕು. ಚಿತ್ರನಟ ಚೇತನ್ ಮಾತಾಡಿದ್ದು ಚಿತ್ರದ ಗೆಲುವಿನ ಬಗ್ಗೆಯಲ್ಲ, ಅಭೂತಪೂರ್ವ ವಾದುದನ್ನು ಸೃಷ್ಟಿಸಿದೆ ಎಂಬರ್ಥದಲ್ಲೂ ಅಲ್ಲ. ‘ಭೂತಾರಾಧನೆ ಹಿಂದೂ ಸಂಸ್ಕೃತಿಯದ್ದಲ್ಲ’ ಎಂಬ ಪರಿಕಲ್ಪನೆಯ ಬಗ್ಗೆ ಮಾತ್ರ. ಇದು ಬೇರೆಯದೇ ಆದ ಪರಿಧಿಯನ್ನು ಹೊಂದಿರುವ ಚರ್ಚಾವಿಷಯ. ಸಿನಿಮಾದೊಳಗಿನ ವಿಚಾರವನ್ನು ಹೊರಗೆ ನಿಂತು ಮಾತಾಡುವಾಗ ವೈಚಾರಿಕ ಹಿನ್ನೆಲೆಯಲ್ಲಿ ವಿಚಾರದ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾ ಪ್ರಭುತ್ವದ ಆಧಾರಸ್ತಂಭ ಎಂಬ ಹಿನ್ನೆಲೆಯಲ್ಲಿ ಚೇತನ್ ಮಾತಾಡಿದ್ದನ್ನು ಗಮನಿಸಬೇಕು.

ಈ ವಿಚಾರದ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನದತ್ತ ಮೂಲಭೂತ ಹಕ್ಕೂ ಹೌದು, ಧ್ಯೇಯವೂ ಹೌದು. ಇದನ್ನು ದಮನಿ ಸುವ ಅಥವಾ ಪುರಸ್ಕರಿಸುವ ಒಟ್ಟೂ ಪ್ರಜ್ಞೆಗಳು ಬಯಸುವುದು ಸಮಾನತೆಯ ಮುಕ್ತ ಸಮಾಜವನ್ನೇ ಹೊರತು ಬೇರೇನನ್ನಲ್ಲ. ಭಾರತದ ವೈಚಾರಿಕ ಜೀವಂತಿಕೆ ಇರುವುದು ಇದರಲ್ಲಿಯೇ ಎಂಬುದನ್ನು ಮರೆಯುವಂತಿಲ್ಲ.

ರಾಷ್ಟ್ರೀಯತೆಗೆ ವಿರೋಧವೆನಿಸುವ ಅಥವಾ ಧಕ್ಕೆ ತರುವ ಹೇಳಿಕೆಗಳನ್ನು ಕೊಟ್ಟೂ ದಕ್ಕಿಸಿಕೊಳ್ಳುವ ಅವಕಾಶವಿರುವುದು ಭಾರತದಲ್ಲಿ ಮಾತ್ರ ಎಂಬುದನ್ನು ಸೂಕ್ಷ್ಮವಾಗಿಸಿಕೊಂಡರೆ ಮೂಲಭೂತ ಹಕ್ಕಿನ  ಶಕ್ತಿ-ಸಾಮರ್ಥ್ಯವನ್ನು ಅರ್ಥೈಸಿಕೊಳ್ಳ ಬಹುದು. ‘ಭೂತಾರಾಧನೆಯ ವಿಚಾರದಲ್ಲಿ ರಿಷಬ್ ಶೆಟ್ಟಿ ವೈಚಾರಿಕತೆ ಮೆರೆದಿದ್ದಾರೆ.

ಅವರೊಬ್ಬ ವಿಚಾರವಾದಿ’ ಎಂಬ ಲಲಿತಾ ನಾಯಕ್ ಹೇಳಿಕೆ ಚೇತನ್ ಅವರ ವೈಚಾರಿಕತೆಗಿಂತಲೂ ಮಹತ್ವ ಪಡೆಯುತ್ತದೆ. ಆದರೆ, ವಿಚಾರದ ಅಭಿವ್ಯಕ್ತಿಯು ಕೀಳುಮಟ್ಟದ ಅಭಿರುಚಿಯನ್ನು ಹೊಮ್ಮಿಸಬಾರದು. ದೇಶದ ಪ್ರಧಾನಿಯ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವ ಪ್ರಯತ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಮ ನೀಚತನ ಎನಿಸಿಬಿಡುತ್ತದೆ. ‘ಕಾಂತಾರ’ವನ್ನು ಮೆಚ್ಚಿ ಹೊಗಳುತ್ತಲೇ ಭೂತಾರಾಧನೆಯು ಹಿಂದೂ ಸಂಸ್ಕೃತಿಯಲ್ಲ ಎಂಬುದೇ ವಿಚಾರವಾಗಿದ್ದರೆ ಚೇತನ್ ಅವರ ವೈಚಾರಿಕತೆಗೆ ಪರ-ವಿರೋಧಗಳು ಹುಟ್ಟಿಕೊಳ್ಳುತ್ತವೆ. ಇದು ಸಹಜವೇ ಆಗಿದೆ. ಆದರೆ ಹಾಗೆ ಹೇಳುತ್ತ ‘ಕಾಂತಾರ’ವನ್ನು ಹೀಗಳೆಯುವುದು ಉಚಿತವಲ್ಲ. ಅಂಥ ಕೆಲಸವನ್ನೇನೂ ಚೇತನ್ ಮಾಡಿಲ್ಲ ಎಂಬುದು ಅವರ ಮಾತು ಗಳಿಂದ ಸ್ಪಷ್ಟವಾಗುತ್ತದೆ.

ಮಾತಿನ ಧ್ವನಿಯನ್ನು ಅರ್ಥೈಸಿ ಈ ಮಾತನ್ನು ಹೇಳುತ್ತಿದ್ದೇನೆ, ಅಷ್ಟೆ! ಆದರೆ, ‘ಹೆಡ್ ಬುಷ್’ ಸಿನಿಮಾದಲ್ಲಿ ಕರಗಕ್ಕೆ ಅವಮಾನ ವಾಯಿತೆಂದು ಆ ಚಿತ್ರದ ನಿರ್ಮಾಪಕ ಮತ್ತು ನಾಯಕ ನಟನ ಭಾವಚಿತ್ರವನ್ನು ಸಾರ್ವಜನಿಕ ಸ್ಥಳದಲ್ಲಿ ಸುಡುವುದು ನಾಗರಿಕ ಸಮಾಜದ ಲಕ್ಷಣವಲ್ಲ. ‘ಜುಜುಬಿ ಕರಗ’ ಎಂಬ ಮಾತಿಗೆ ಪ್ರತಿಯಾಗಿ ನಟ ಧನಂಜಯ ಅವರು ‘ಕರಗದ ಹೆಚ್ಚುಗಾರಿಕೆಯೇನು (ಆಫ್ ಕೋರ್ಸ್ ಕರಗದ ಮಹಿಮೆ, ನಂಬಿಕೆಯನ್ನು ಯಾರಿಂದಲೂ ದಮನಿಸಲು ಸಾಧ್ಯ ವಿಲ್ಲವೆಂಬ ಮಾತು ಬೇರೆ) ಎಂಬು ದನ್ನು ನಾವು ಚಿತ್ರದಲ್ಲಿ ತೋರಿಸಿದ್ದೇವೆ’ ಎಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದು ಗಮನಾರ್ಹ.

ಹೀಗಿರುವಾಗ ಪ್ರತಿಭಟನೆ, ವಿರೋಧ ಹೂಡುವ ಮೊದಲು ನಾಗರಿಕ ಸಂವೇದನೆಗಳನ್ನು ಮರೆಯಬಾರದು. ಹಾಗೆ ಮರೆತು ವ್ಯವಹರಿಸಿದರೆ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ, ಆಗ ಕಾನೂನನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆ ಹುಟ್ಟಿಕೊಳ್ಳುತ್ತದೆ. ಒಂದು ಸಿನಿಮಾ ಇಂಥದ್ದನ್ನು ಹುಟ್ಟಿಸಲಾರದು, ಹುಟ್ಟಿಸಬಾರದು. ಅಗ್ನಿ ಶ್ರೀಧರ್ ಹೇಳುವುದು ಇದನ್ನೇ! ಅಷ್ಟಕ್ಕೂ ಸೆನ್ಸಾರ್ ಮಂಡಳಿ ಅನುಮತಿಸಿದ ಚಿತ್ರವೊಂದರ ಬಗ್ಗೆ ಅಪಸ್ವರ ಏಳುವುದು, ಅದಕ್ಕಾಗಿ ಪರ-ವಿರೋಧಗಳ ಪ್ರಜ್ಞೆಗಳು ಬೊಬ್ಬಿಡುವುದು ಯಾವ ಸಮಾಜಕ್ಕೂ ಆರೋಗ್ಯಯುತವಲ್ಲ.

‘ನಾನು ಮೆಚ್ಚಿದ ನಟನನ್ನು ಕೀಳಾಗಿ ತೋರಿಸಿದ್ದೀರಿ; ಚಿತ್ರವನ್ನೇ ಬ್ಯಾನ್ ಮಾಡಿ’ ಎಂದು ಯಾರೋ ಒಬ್ಬ ವಿರೋಧಿಸಿದರೆ ಮುಂದೆ ಚಿತ್ರವನ್ನು ಮಾಡುವುದೇ ಕಷ್ಟವಾದೀತು! ಮೇಲಾಗಿ, ಪ್ರತಿಯೊಂದಕ್ಕೂ ಹೀಗೆ ಆರೋಪಿಸುವ, ವಿರೋಧಿಸುವ, ಪ್ರತಿಭಟಿಸುವ, ಅನಾಗರಿಕತೆಯಿಂದ ವರ್ತಿಸುವ ಮತ್ತು ವಿವಾದ ಹುಟ್ಟುಹಾಕಿ ಭಂಜಿಸುವ ಪ್ರವೃತ್ತಿಯು ಜನರ ಮನಸ್ಸಲ್ಲಿ ‘ನಕಾರಾತ್ಮಕ ಆಕೃತಿ’ಯನ್ನು ಮೂಡಿಸಲಾರದು. ಬದಲಿಗೆ ಸಕಾರಾತ್ಮಕ ದೃಷ್ಟಿಕೋನದಲ್ಲಿ ಚಿತ್ರವನ್ನು ನೋಡುವುದಕ್ಕೆ ಪ್ರೇರೇಪಿಸುತ್ತದೆ.

ನೆನಪಿಸಿಕೊಳ್ಳಿ: ಎಸ್. ಎಲ್. ಭೈರಪ್ಪ ಅವರ ‘ಆವರಣ’ ಕೃತಿಯ ಕುರಿತು ಯು. ಆರ್. ಅನಂತಮೂರ್ತಿಯವರು ‘ಅದೊಂದು ಕಾದಂಬರಿಯೇ ಅಲ್ಲ’ ಎನ್ನುವ ಮೂಲಕ ತಮ್ಮ ಅಸಹನೆ ಹೊರಗೆ ಹಾಕುವವರೆಗೆ ಎಷ್ಟು ಜನ ‘ಆವರಣ’ವನ್ನು ಕೊಂಡು ಓದಿ
ದ್ದರೋ ಗೊತ್ತಿಲ್ಲ. ಆ ಹೇಳಿಕೆ ಹೊಮ್ಮಿದ ಮೇಲೆ ‘ಆವರಣ’ದ ಓದುಗರ ಸಂಖ್ಯೆ ಮತ್ತು ಮಾರಾಟ ಹೆಚ್ಚಿದ್ದನ್ನು ಅಲ್ಲಗಳೆಯು ವಂತಿಲ್ಲ.

ತಮ್ಮ ಹೇಳಿಕೆಯಿಂದ ಕನ್ನಡದಲ್ಲಿ ಕಾದಂಬರಿ ಓದುಗರ ಸಂಖ್ಯೆ ಹೆಚ್ಚಿದ್ದು ‘ಆವರಣ’ದ ಮಟ್ಟಿಗೆ ಸತ್ಯವೆನಿಸಿದ್ದನ್ನು ಪ್ರಾಯಶಃ ಅನಂತಮೂರ್ತಿಯವರೂ ಅಲ್ಲಗಳೆಯುತ್ತಿರಲಿಲ್ಲವೇನೋ! ಮೋದಿಯವರನ್ನು ‘ಸಾವಿನ ದಳಿ’ ಎಂದು ಗಂಟಲುನರ ಕಿತ್ತುಹೋಗುವಷ್ಟು ಕೂಗಿಕೊಂಡಾಗಲೇ ಈ ದೇಶದ ಜನ ಮೋದಿಗೆ ಬೆಂಬಲವಾಗಿ ನಿಂತರು, ಈಗಲೂ ನಿಂತಿದ್ದಾರೆ. ಒಪ್ಪಂದ ದಂತೆ ೨೦ ತಿಂಗಳ ಅಧಿಕಾರಾವಧಿ ಮುಗಿಸಿದ ಜೆಡಿಎಸ್, ರಾಜ್ಯಾಡಳಿತದ ಅಧಿಕಾರವನ್ನು ಬಿಜೆಪಿಗೆ ಅಂದು ಹಸ್ತಾಂತರಿಸಿದ್ದಿದ್ದರೆ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರ ರಚನೆಯಾಗುತ್ತಿರಲಿಲ್ಲವೇನೋ!

ಆ ಒಂದು ತಪ್ಪಿನಿಂದ ‘ವಚನಭ್ರಷ್ಟ’ ಎಂಬ ಕಳಂಕವನ್ನು ಜೆಡಿಎಸ್ ಇಂದಿಗೂ ಹೊತ್ತು ತಿರುಗುವಂತಾಗಿದೆ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗವೋ ಅಲ್ಲವೋ ಎಂಬುದನ್ನು ಜನ ಚಿಂತಿಸಲಾರರು. ಒಂದು ಜನಾಂಗದ ಆಚರಣೆ, ನಂಬಿಕೆ, ಸಂಪ್ರದಾಯವನ್ನು ಅಲ್ಲಗಳೆಯುವ, ಹೀಗಳೆಯುವ ಪ್ರಜ್ಞೆ ಜನಸಾಮಾನ್ಯರಲ್ಲಿ ಬರಲಾರದು. ನಂಬುತ್ತಾರೋ ಅನುಸರಿಸು ತ್ತಾರೋ ಎಂಬುದು ಬೇರೆಯದೇ ಪ್ರಶ್ನೆ!

ಏಕೆಂದರೆ, ಜನರಿಗೆ ನಿತ್ಯಬದುಕಿನಲ್ಲಿ ಅಂಥ ಪ್ರಜ್ಞೆಯ ಅಗತ್ಯವೂ ಇರುವುದಿಲ್ಲ, ಆದರೆ ಅದನ್ನು ತೆರೆಯಲ್ಲಿ ನೋಡುವುದಕ್ಕೆ ಯಾವ ಅಭ್ಯಂತರವೂ ಇರುವುದಿಲ್ಲ. ‘ಕಾಂತಾರ’ದ ಒಟ್ಟು ಪ್ರಸ್ತುತಿಯೇ ಈ ಬಗೆಯzದ್ದರಿಂದ ಜನರು ಅದನ್ನು ನೋಡಲು ಮನಸ್ಸು ಮಾಡಿದರು.

ಆಲೋಚಿಸಿ ನೋಡಿ: ಸಿನಿಮಾದ ನಾಟಕದ ಅಭಿನಯಿಸುವ ನಟಿಯ ಮೈಮೇಲಿನ ಬಟ್ಟೆಯ ಪ್ರಮಾಣ ನಮ್ಮ ನಮ್ಮ ಮನೆಯ ಹೆಣ್ಣುಮಕ್ಕಳ ಮೈಮೇಲಿದ್ದರೆ ಉರಿದುಬೀಳುವ ನಾವು ತೆರೆಮೇಲೆ ಕಾಣುವ ನಟಿಯರ ಬಗ್ಗೆ ಏನೂ ಅಂದುಕೊಳ್ಳುವುದಿಲ್ಲ. ಕಣ್ತುಂಬ ನೋಡಿ ಕಣ್ತಂಪು ಮಾಡಿಕೊಂಡು ಖುಷಿಪಡುತ್ತೇವೆ. ಆದರೆ, ಒಳಮನಸ್ಸು ಬೇರೆಯದೇ ಕೋನದಲ್ಲಿ ಯೋಚಿಸುತ್ತಿರು ತ್ತದೆ. ‘ಇದೆಲ್ಲ ಮನುಷ್ಯಸಹಜ ದೌರ್ಬಲ್ಯಗಳು’ ಎಂದು ನಮ್ಮನ್ನು ನಾವೇ ಸಮರ್ಥಿಸಿಕೊಂಡುಬಿಡುತ್ತೇವೆ, ಇದು ದುರಂತ ವೆಂದು ನಮಗನಿಸುವುದೇ ಇಲ್ಲ!

ಹಾಗೆಯೇ, ಈ ಭೂತಾರಾಧನೆಯನ್ನು ನೋಡಿ ಮೆಚ್ಚಿ ಹೊಗಳುವವರೂ ಇzರೆ, ಭಯಭಕ್ತಿ ಅಭಿವ್ಯಕ್ತಿಸಿ ನಂಬಿ ನಡೆದುಕೊಳ್ಳು ವವರೂ ಇದ್ದಾರೆ. ಯಾವ ಭಾವವಿಲ್ಲದೆ ನೋಡಿಕೊಂಡು ಸುಮ್ಮನೆ ಇರೋರೂ ಇದ್ದಾರೆ. ಯಾವುದನ್ನೂ ನಂಬದೆ ಒಳಗೊಳಗೇ ಅಪಹಾಸ್ಯ ಮಾಡುವವರೂ ಇದ್ದಾರು! ಆದರೆ ಯಾರೂ ಇದು ಹಿಂದೂ ಧರ್ಮದ್ದಾ ಅಥವಾ ಇನ್ಯಾವುದೇ ಧರ್ಮದ್ದಾ ಅಂತ
ತಲಾಶೆಗೆ ತೊಡಗಲಾರರು. ಜನಸಾಮಾನ್ಯರು ಅಂಥ ವೈಚಾರಿಕ ಕಾಯಿಲೆಗೆ ಬೀಳುವುದಿಲ್ಲ, ಅದರ ಅನಿವಾರ್ಯತೆಯೂ ಅವರಿಗಿರುವುದಿಲ್ಲ.

ಹಾಗೆ ‘ಹೆಡ್ ಬುಷ್’ ನೋಡಿ ಕರಗದ ಬಗ್ಗೆ ಯಾರೂ ಯಾವ ದೃಷ್ಟಿಕೋನವನ್ನೂ ಕೆಟ್ಟದಾಗಿ ಹೊಂದಲು ಸಾಧ್ಯವಿಲ್ಲವೆಂದೇ ಎನಿಸಿ ಧನಂಜಯ್ ಅವರು ಆ ಸನ್ನಿವೇಶದ ಒಟ್ಟು ನಿರ್ಮಿತಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು. ಆ ವೇಳೆ ಮಾತು ಆದಷ್ಟೂ ಕಡಿಮೆ ಯಿರಬೇಕು. ಧನಂಜಯ್ ಮಾಡಿದ್ದೂ ಅದನ್ನೇ. ನೇರವಾಗಿಯೇ ವಿಷಯವನ್ನು ಸ್ಪಷ್ಟಪಡಿಸಿದರು, ಎಲ್ಲಿಯೂ ಅನಾಗರಿಕರಂತೆ ವರ್ತಿಸಲಿಲ್ಲ. ಮುಕ್ತಚರ್ಚೆಗೆ ತಾನು ಯಾವತ್ತೂ ಸಿದ್ಧ ಎಂದು ಮತ್ತೆ ಮತ್ತೆ ಹೇಳುತ್ತಲೇ, ನಟನೊಬ್ಬನ ಅರ್ಹತೆಯೆಂದೇ ಭಾವಿಸ ಬಹುದಾದ ಸಹನೆಯ ಒಟ್ಟೂ ಮಿತಿಯ ಸಾಮರ್ಥ್ಯವನ್ನು ಅಭಿವ್ಯಕ್ತಿಸಿದರು.

ರಿಷಭ್ ಶೆಟ್ಟಿಯವರದ್ದೂ ಇಂಥದೇ ಅಭಿವ್ಯಕ್ತಿ. ರಾಗದ್ವೇಷರಹಿತ ಭಾವದಿಂದ ವರ್ತಿಸುವುದು ನಟರಿಗೆ ಅಷ್ಟು ಸುಲಭ ಸಾಧ್ಯ ವಲ್ಲದ ಮಾತು! ಒಬ್ಬ ನಟನಾಗಿ ಗಳಿಸುವ ಜನಪ್ರಿಯತೆಯ ಹುಚ್ಚು, ಅದು ಕೊಡುವ ಮದ, ಹಣದಿಂದ ಹುಟ್ಟುವ ದರ್ಪ,
ಕೀರ್ತಿ-ಪ್ರಸಿದ್ಧಿಯ ಹಿಂದೆ ಅಡರಿಕೊಳ್ಳುವ ಅತಿರೇಕದ ವರ್ತನೆಗಳು ಇವರೀರ್ವರನ್ನೂ ಕಾಡಲಿಲ್ಲ ಈವರೆಗೆ! ಪ್ರಾಯಶಃ ಅವರಿಗೆ ಗೊತ್ತಿರಬೇಕು- ವಿವಾದಗಳು ಮಮತೆಯ ಸುಳಿಯಂತೆ ಎಂದು!