Saturday, 14th December 2024

ಪ್ರತಿ ಪತ್ರಿಕಾಲಯವೂ ಒಂದೊಂದು ವಿಶ್ವವಿದ್ಯಾಲಯವಿದ್ದಂತೆ !

ಯಶೋ ಬೆಳಗು

yashomathy@gmail.com

ಬ್ರಿಟಿಷರಿಂದ ಭಾರತೀಯರು ಸ್ವತಂತ್ರರಾದ ನಂತರ ದೇಶದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರಲಾಲ
ನೆಹರುರವರ 59ನೇ ಜನ್ಮದಿನವನ್ನು ಮಕ್ಕಳ ಹಕ್ಕು, ವಿದ್ಯೆ ಹಾಗೂ ಯೋಗಕ್ಷೇಮದ ದೃಷ್ಟಿಯಿಂದ ಮಕ್ಕಳ ದಿನಾಚರಣೆ ಯನ್ನಾಗಿ ಆಚರಿಸುವಂತೆ ಘೋಷಿಸಿದ್ದು ಮಕ್ಕಳೆಡೆಗೆ ಅವರಿಗಿದ್ದ ಅಪಾರ ಕಾಳಜಿಯನ್ನು ತೋರಿಸುತ್ತದೆ.

ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಹೀನರಾಗಿರುವ ಮಕ್ಕಳ ಮೇಲೆ ನಡೆಯುವ ನಿರಂತರ ದೌರ್ಜನ್ಯವನ್ನು ತಡೆಗಟ್ಟುವು ದಕ್ಕೋಸ್ಕರ ಸಾಕಷ್ಟು ಕಾನೂನುಗಳನ್ನು ಸರಕಾರ ಜಾರಿಗೊಳಿಸಿದೆ. ವಿದ್ಯೆ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಮಗುವೊಂದು ಕಲಿತರೆ ದೇಶವೊಂದು ಪ್ರಗತಿಯತ್ತ ನಡೆದಂತೆ! ಕೇವಲ ವಿದ್ಯೆಯೊಂದಿದ್ದರೆ ಆಗದು, ಸಂಸ್ಕಾರದ ಜತೆಗೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾದ ಆರೋಗ್ಯಕರ ಬೆಳವಣಿಗೆಯೂ ಬೇಕು.

ವಿಪರ್ಯಾಸವೆಂದರೆ ಇಂದು ಸರಕಾರಿ ಶಾಲೆಗಳು ಹೆಸರಿಗೆ ಮಾತ್ರ ಶಾಲೆಗಳಾಗಿ ಉಳಿದುಕೊಂಡು, ನಗರಗಳಲ್ಲಿ ವಿದ್ಯೆಯೊಂದು ವ್ಯಾಪಾರದಂತಾಗಿದೆ. ಪ್ರತಿಭಾವಂತ ಮಕ್ಕಳು ತಮ್ಮ ಆಸಕ್ತಿಯ ವಿಷಯಗಳಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದಲಾಗದೆ ಇದ್ದುದರ ತೃಪ್ತಿ ಪಟ್ಟುಕೊಳ್ಳುವಂಥ ಸ್ಥಿತಿಯಲ್ಲಿ ನರಳುತ್ತಿದ್ದರೆ ಮತ್ತೆ ಕೆಲವರು ವಿದೇಶಗಳತ್ತ ದಾಪುಗಾಲಿಕ್ಕುತ್ತಿದ್ದಾರೆ.

ಸಾಲದೆಂಬಂತೆ ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವನ್ನೂ ಪರ್ಸೆಂಟೇಜಿನ ಮೂಲಕವೇ ಅಳೆಯಲಾರಂಭವಾಗಿದ್ದು, ಶೇ. 99ರಷ್ಟು ಅಂಕ ಗಳಿಸಿದರೆ ಮಾತ್ರ ಒಳ್ಳೆಯ ಕಾಲೇಜಿನಲ್ಲಿ ಅಡ್ಮಿಷನ್ ಸಿಗುವುದೆಂಬ ಆತಂಕದಿಂದ ಪೋಷಕರಿಂದಲೇ ಅತಿಯಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಮಕ್ಕಳು. ಮೈಕೈ ಮೇಲೆ ಬರೆಗಳು ನೀಲಿಗಟ್ಟುವಂತೆ ಹೊಡೆದು ಬಡಿದು ಕಲಿಯಲು ಕೂರಿಸುತ್ತಾರೆ. ದೈಹಿಕ ಬೆಳವಣಿಗೆಗೆ ಅಗತ್ಯವಿರುವ ಆಟ-ಓಟಗಳೆಲ್ಲಕ್ಕೂ ತಡೆಯೊಡ್ಡಿ ಪುಸ್ತಕದ ಹುಳುವನ್ನಾಗಿ ಮಾಡಲು ಯತ್ನಿಸುತ್ತಾರೆ. ಇಷ್ಟೊಂದು ವೈವಿಧ್ಯವಿರುವ ದೇಶದಲ್ಲಿ ಅದ್ಯಾಕೆ ವಿದ್ಯೆ ಮಾತ್ರ ಏಕರೀತಿಯಲ್ಲಿದೆ ಅನ್ನುವ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತಿರುತ್ತದೆ.

ಪ್ರತಿಯೊಂದು ಮಗುವೂ ಭಿನ್ನ. ಅದರ ಗ್ರಹಿಕೆ, ಕಲಿಯುವ ರೀತಿ, ಪ್ರಸ್ತುತ ಪಡಿಸುವ ವಿಧಾನ ಎಲ್ಲವೂ ಭಿನ್ನ. ಒಂದೇ ಸಮಯ ದಲ್ಲಿ ಒಬ್ಬ ಶಿಕ್ಷಕ/ಶಿಕ್ಷಕಿ ನೂರು ಬಗೆಯ ಮಕ್ಕಳಿಗೆ ಪಾಠ ಮಾಡಿದಾಗ ಏಕರೀತಿಯಾದ ಫಲಿತಾಂಶವನ್ನು ಬಯಸುವುದು ಎಷ್ಟರ ಮಟ್ಟಿಗೆ ಸರಿ? I am good in economics, but not in maths ಎಂದು ಸಾಕಷ್ಟು ಬಾರಿ ರವಿ ಹೇಳುತ್ತಿದ್ದು ದನ್ನು ಕೇಳಿದ್ದೇನೆ. ‘ಅಪ್ಪನ ಅಂಕೆಯಿಲ್ಲದೆ ಬೆಳೆಯುತ್ತಿದ್ದ ಮಗ ಪೋಲಿ ಹುಡುಗರ ಸಹವಾಸಕ್ಕೆ ಬಿದ್ದುಬಿಡುತ್ತಾ ನೆಂಬ ಆತಂಕದಿಂದ ಮೈಸೂರಿ ನಲ್ಲಿದ್ದ ತನ್ನ ಹಿರಿಯ ಸೋದರನ ಮಗನ ಮನೆಗೆ ಬಿಟ್ಟುಹೋದಳು ಅಮ್ಮ. ಅಲ್ಲಿ ಬೆಳಗಿನ ಜಾವವೇ ಎದ್ದು ನೀರಿನ ತೊಟ್ಟಿಗೆ ಕೊಡಗಟ್ಟಲೇ ನೀರು ತಂದು ತುಂಬಿಸಬೇಕಿತ್ತು. ಅದೇ ಸಮಯದಲ್ಲಿ ಮಾವ ಕೇಳುತ್ತಿದ್ದ ಪಠ್ಯದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಲಿಲ್ಲವೆಂದರೆ ಬರೆ ಬರುವಂತೆ ಹೊಡೆಯುತ್ತಿದ್ದರು, ತಲೆಯ ಮೇಲೆ ತಣ್ಣೀರು ಸುರಿಯು ತ್ತಿದ್ದರು.

ಅದನ್ನು ಸಹಿಸಲಾಗದೆ, ಅಮ್ಮನಿಗೆ ಬಂದು ಕರೆದುಕೊಂಡು ಹೋಗುವಂತೆ ಗೋಗರೆದೆ. ನನ್ನ ಮೈಮೇಲೆದ್ದಿದ್ದ ಬರೆಗಳನ್ನು ಕಂಡು ಇನ್ನೆಲ್ಲಿಗೂ, ಯಾರ ಮನೆಗೂ ಕಳಿಸುವುದಿಲ್ಲ. ನೀನೇ ಚೆನ್ನಾಗಿ ಓದಿಕೋ ಎಂದು ಕಣ್ಣೀರು ಹಾಕುತ್ತಲೇ ಕರೆದುಕೊಂಡು ಹೋದಳು…’ ಎಂದು ಹೇಳುವಾಗೆಲ್ಲ ಅವರು ಅನುಭವಿಸಿದ ಬಾಲ್ಯದ ಬವಣೆಗಳೆಲ್ಲ ಕಣ್ಣಮುಂದೆ ಬಂದು ಯಾವುದೇ
ಕಾರಣಕ್ಕೂ ನಮ್ಮ ಮಗನಿಗೆ ಇದೆಲ್ಲ ದುರ್ಘಟನೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದುಕೊಳ್ಳುತ್ತ ಆದಷ್ಟೂ ಅವನ ಆರೋಗ್ಯಕರ ಬೆಳವಣಿಗೆಯತ್ತ ಗಮನ ಹರಿಸುತ್ತಿದ್ದೆ.

ಆದರೆ ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತೆಂಬುದು ನನ್ನ ಅರಿವಿಗೆ ಬರದೇಹೋಯಿತು. ಹೀಗೆಲ್ಲ ಅಂದುಕೊಳ್ಳುತ್ತಲೇ ದಿನಪತ್ರಿಕೆ ಓದುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಜಾಹೀರಾತು. ಕೂಡಲೇ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಫೋನಾಯಿಸಿದೆ. ಹಿಂದಿನಂತೆ ಅದಕ್ಕೆ ಮೈಸೂರಿಗೇ ಹೋಗಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಜತೆಗೆ ಕಾಂಟ್ಯಾಕ್ಟ್ ಕ್ಲಾಸ್‌ಗಳು ಕೂಡ ಆನ್‌ಲೈನ್‌ನಲ್ಲಿಯೇ ಲಭ್ಯವಿರುವುದರಿಂದ ಹೆಚ್ಚು ಅನುಕೂಲವಾಯಿತು.

ಸತತ 24 ವರ್ಷ ಪತ್ರಿಕೆಯೊಂದಿಗೆ, ಪತ್ರಕರ್ತನೊಂದಿಗೆ, ಬರಹಗಾರನೊಂದಿಗೆ ಬದುಕು ಹಂಚಿಕೊಂಡಿದ್ದರಿಂದ ಪತ್ರಿಕೋ ದ್ಯಮದಲ್ಲಿ ಇನ್ನಷ್ಟು ಕಲಿಯಬೇಕೆಂಬ ಆಸಕ್ತಿಯಿಂದ ೧ ವರ್ಷದ ಪತ್ರಿಕೋದ್ಯಮದ ಡಿಪ್ಲಮೋ ಕೋರ್ಸಿಗೆ ದಾಖಲಾಗಿದ್ದೇನೆ. ‘ಪ್ರತಿಯೊಂದು ಪತ್ರಿಕಾ ಕಚೇರಿಯೂ ಒಂದೊಂದು ವಿಶ್ವವಿದ್ಯಾಲಯವಿದ್ದಂತೆ. ಅದರ ಒಳ- ಹೊರನೋಟ ಗಳನ್ನೆಲ್ಲ ಸಾಕಷ್ಟು ಸಮೀಪದಿಂದ ಕಂಡವಳಾದ್ದರಿಂದ ನಿನಗೆ ಅದರ ಬಗ್ಗೆ ಓದುವ ಅಗತ್ಯವೇ ಇಲ್ಲ.

ಆದರೂ ಸರ್ಟಿಫಿಕೇಟಿಗೆ ಅದರದೇ ಆದ ಮೌಲ್ಯವಿರುವುದರಿಂದ ಕಲಿತದ್ದನ್ನೆಲ್ಲ ಥಿಯರಿಯ ರೂಪದಲ್ಲಿ ಓದಬೇಕಷ್ಟೆ’ ಎನ್ನುತ್ತ ಕೈಗೆ ಕೊಟ್ಟ ಸ್ವಯಂಬೋಧನಾ ಸಾಮಗ್ರಿ ಹಿಡಿದು ಕುತೂಹಲದಿಂದ ಪುಟಗಳನ್ನು ತಿರುವಿ ಹಾಕಿದಾಗ ಕಣ್ಣಿಗೆ ಬಿದ್ದದ್ದು ‘ಅಂಕಣ ಬರಹಗಳು’ ಅನ್ನುವ ಅಧ್ಯಾಯ. ಅಂಕಣ ಬರಹಗಳ ಅರ್ಥ, ವ್ಯಾಪ್ತಿ, ಪ್ರಕಾರಗಳು ಹಾಗೂ ವರದಿಗಾರರಿಗೂ, ಅಂಕಣ ಬರಹ ಗಾರರಿಗೂ ಇರುವ ವ್ಯತ್ಯಾಸ, ಸ್ವಾತಂತ್ರ್ಯ ಎಲ್ಲವನ್ನೂ ಓದುತ್ತ ಓದುತ್ತ ಆಸಕ್ತಿ ಇಮ್ಮಡಿಯಾಗುತ್ತಲೇ ಹೋಯಿತು.

ಇದಕ್ಕಾಗಿ 1 ವರ್ಷ ಕಾಯಬೇಕಾ? ತಿಂಗಳಿಗೊಂದು ಪರೀಕ್ಷೆ ಇಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವಾ? ಅನಿಸಿತಾದರೂ ಕೊಟ್ಟಷ್ಟೂ ಬೆಳೆಯುವ ಆಸೆಗೆ ಮಿತಿಯೇ ಇಲ್ಲ ಅಂದುಕೊಳ್ಳುತ್ತ ಒಮ್ಮೆ ಇಡೀ ಕರ್ನಾಟಕದಲ್ಲಿ ಅದೆಷ್ಟು ಪತ್ರಿಕೆಗಳಿವೆ, ಅದರ ಇತಿಹಾಸ, ವರ್ತಮಾನಗಳನ್ನು ತಿಳಿದುಕೊಳ್ಳಬೇಕು. ಹಾಗೆಯೇ ಎಷ್ಟು ಪುಸ್ತಕದಂಗಡಿಗಳಿವೆ, ಎಷ್ಟು ಗ್ರಂಥಾಲಯಗಳಿವೆ ಅನ್ನುವುದನ್ನೂ ತಿಳಿಯಬೇಕು. ಏಕೆಂದರೆ ನಾನೀಗ ಕೇವಲ ಬರಹಗಾರಳಲ್ಲ, ಅಂಕಣಕಾರಳಲ್ಲ, ಪತ್ರಕರ್ತೆಯಾಗುವವಳು. ಪ್ರಕಾಶಕಿಯಾಗು ವವಳು, ಅದರ ಮೂಲಕ ಮಹಿಳಾ ಉದ್ಯಮಿಯಾಗುವವಳು ಅಂದುಕೊಳ್ಳುವಾಗ ಬೆನ್ನುತಟ್ಟಲು ಯಾವ ಜನ್ಮದ ಋಣದ ಫಲವೋ? ಎನ್ನುವಂತೆ ಹಿಂದೆಯೇ ನಿಂತಿದ್ದರು ಶಶಿಕಲಾ ವಸದ್.

‘ಹೇಗೂ ಬಂದಿದ್ದೀವಿ. ಒಮ್ಮೆ ಸ್ನೇಹಾ ಬುಕ್‌ಹೌಸ್‌ನ ಮಾಲೀಕ ಬಿ. ಪರಶಿವಪ್ಪನವರನ್ನು ಮಾತಾಡಿಸಿಕೊಂಡು ಹೋಗೋಣ’ ಎಂದಾಗ ಆಯ್ತು ಎಂದು ಒಪ್ಪಿಗೆಯಿತ್ತರು. ಶ್ರೀನಗರದ ಅವರ ಪುಟ್ಟ ಪುಸ್ತಕದಂಗಡಿಗೆ ಕಾಲಿಟ್ಟಾಗ ರಾಶಿರಾಶಿ ಪುಸ್ತಕಗಳ ನಡುವೆ ಅದೇ ಮಂದಹಾಸದ ನಗೆಯೊಂದಿಗೆ ಎದುರಾದವರು ಅರ್ಚನಾ ಉಡುಪರ ತಂದೆ ಶ್ರೀನಿವಾಸ ಉಡುಪರು!

ಬಹುಶಃ 1998-99ರ ಕಾಲದಲ್ಲಿ ಬನಶಂಕರಿಯ ಮಾಸ್ಟರ್ ಹಿರಣ್ಣಯ್ಯನವರ ಒಡೆತನದ ಕಟ್ಟಡದಲ್ಲಿದ್ದ ಕರ್ನಾಟಕ ಬ್ಯಾಂಕಿ ನಲ್ಲಿ ಅವರ ಅಳಿಯ ಛಾಯಾಪತಿ ಬ್ಯಾಂಕ್ ಮ್ಯಾನೇಜರಾಗಿದ್ದರು. ಬ್ಯಾಂಕ್ ವ್ಯವಹಾರಗಳಿಗೆಂದು ಹೋಗುತ್ತಿದ್ದಾಗ ಅ
ಕಾರ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ ಉಡುಪರ ಪರಿಚಯವಾಗಿತ್ತು. ಯಾವುದೇ ದಿನಗಳಲ್ಲಿ ಅಲ್ಲಿಗೆ ಹೋದರೂ, ಅನ್ಯಬ್ಯಾಂಕು ಗಳಂತೆ ಸಿಡುಕದ, ಒರಟು ಮಾತಾಡದ ಆತ್ಮೀಯ ವಾತಾವರಣವಿರುತ್ತಿತ್ತು. ಹೀಗಾಗಿ ಒಂದು ರೀತಿಯ ಖುಷಿಯಿಂದಲೇ ಹೋಗುವ ಮನಸ್ಸಾಗುತ್ತಿತ್ತು.

ಜತೆಗೆ ಅವರಿಗೆ ಹಾಡುವ ಹವ್ಯಾಸವೂ ಇದ್ದದ್ದು, ಸೋನು ನಿಗಮ್‌ರ ‘ಸರೆಗಮಪ ಟಿವಿ ಶೋ’ನಲ್ಲಿ ಅವರ ಮಗಳು ಅರ್ಚನಾ ಭಾಗವಹಿಸಿ ವಿಜೇತಳಾಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ರವಿಯನ್ನು ಸದಾ ‘ಚಿಕ್ಕಪ್ಪ ಚಿಕ್ಕಪ್ಪ’ ಎನ್ನುತ್ತ ಪ್ರೀತಿಯಿಂದ ಮಾತನಾಡಿಸು ತ್ತಿದ್ದುದು ಎಲ್ಲವೂ ಕಣ್ಣೆದುರಿಗೆ ಬಂದಂತಾಯ್ತು. ಭೇಟಿಯಾಗಿ ಸಾಕಷ್ಟು ವರ್ಷಗಳೇ ಕಳೆದುಹೋಗಿದ್ದವು. ‘ನನ್ನ ಗನನ್ನು ನೀವಿನ್ನೂ ನೋಡೇ ಇಲ್ಲ’ ಅಂದೆ. ಅದಕ್ಕವರು ‘ಹೌದು. ಆದರೆ ಅವನು ಥೇಟ್ ಅಪ್ಪನಂತೆಯೇ ಇದ್ದಾನೆ.

ನೀವು ಹಾಕುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ನೋಡುತ್ತಿರುತ್ತೇನೆ. ನಾನು ನಿಮ್ಮನ್ನು ಆಗ ನೋಡಿದ್ದಕ್ಕೂ ಈಗ ನೋಡು
ತ್ತಿರುವುದಕ್ಕೂ ನಡುವೆ ನೀವು ಸಾಕಷ್ಟು ಬದಲಾಗಿದ್ದೀರಿ’ ಎಂದರು. ‘ಆದರೆ ನೀವು ಮಾತ್ರ ಹಾಗೇ ಇದ್ದೀರಿ ಸರ್. ಚೂರೂ ಬದಲಾಗಿಲ್ಲ’ ಎಂದು ನಗೆಯಾದೆವು. ಬಿಬಿಸಿ ಪಬ್ಲಿಕೇಷನ್ ಆರಂಭಿಸಿದ ಸಮಯದಲ್ಲಿ ರವಿ ಬೆಳಗೆರೆಯವರ ‘ಮಧುಮಿತಾ ಶುಕ್ಲಾ ಹತ್ಯೆ’, ವೀಣಾ ಬನ್ನಂಜೆಯವರ ‘ಸತ್ಯಕಾಮರೊಂದಿಗೆ ಸಾವಿರದ ದಿನಗಳು’, ಶಶಿಕಲಾ ವಸದ್ ಅವರ ‘ಇದ್ದೇನಯ್ಯಾ ಇಲ್ಲ
ದಂತೆ’, ಸ್ವಾಮಿ ಗೌಡರ ‘ಕೋಟೆ ಕಟ್ಟಿ ಮೆರೆದೋರೆಲ್ಲ’, ಯುಧಿಷ್ಠರರ ‘ರವಿಯಿಸಂ’, ಹಾಗೂ ಉದಯ ಮರಕಿಣಿಯವರ ಒಂದು ಪುಸ್ತಕವನ್ನು (ಹೆಸರು ನೆನಪಿಲ್ಲ) ಬಿಡುಗಡೆ ಮಾಡಿದ್ದೆವು.

ಎಲ್ಲ ಪುಸ್ತಕಗಳ ನಡುವೆ ಶಶಿಕಲಾ ವಸದ್ ಹಾಗೂ ವೀಣಾ ಬನ್ನಂಜೆಯವರ ಸುಮಾರು ಐದಾರು ನೂರು ಪ್ರತಿಗಳು ಡಿಸ್ಟ್ರಿಬ್ಯೂಟ್ ಆಗದೆ ಹಾಗೇ ಉಳಿದುಹೋಗಿದ್ದವು. ಸಾಹಿತ್ಯ ಪ್ರಕಾಶನದಲ್ಲಿ ವೀಣಾ ಬನ್ನಂಜೆ ಯವರ ಪುಸ್ತಕ 2ನೇ ಮುದ್ರಣ ವನ್ನು ಕಂಡಿತು. ಹೀಗಾಗಿ ಅವರಿಗೇ ಉಳಿದ ಪುಸ್ತಕಗಳನ್ನೂ ಕೊಟ್ಟುಬಿಡೋಣವೆನ್ನುವ ಆಲೋಚನೆಯಲ್ಲಿದ್ದಾಗ ನಿಡಸಾಲೆ ಪುಟ್ಟಸ್ವಾಮಯ್ಯನವರ ನಿರ್ಮಾಣದ ‘ಅಗ್ನಿವರ್ಷ’ ಚಿತ್ರವೀಕ್ಷಣೆಯ ಸಂದರ್ಭದಲ್ಲಿ ಪರಿಚಯವಾದವರು ಸ್ನೇಹ ಬುಕ್‌ಹೌಸಿನ ಪರಶಿವಪ್ಪನವರು. ಹೇಗಿದ್ದರೂ ಹತ್ತಿರವಿದ್ದಾರೆ.

ಇವರಿಗೇ ಕೊಟ್ಟುಬಿಡೋಣವೆಂದುಕೊಂಡು ಮಾತಾಡಿದಾಗ ಸಂತೋಷದಿಂದಲೇ ಒಪ್ಪಿಗೆ ನೀಡಿದ್ದರು. ಆದರೆ ಪುಸ್ತಕಗಳ ಮಹಾಸಾಗರದಲ್ಲಿ ನಮ್ಮ ಪುಸ್ತಕಗಳು ತಳ ಸೇರಿಬಿಟ್ಟರೆ ಅನ್ನುವ ಭಯವಾಗಿ ‘ಇಡೀ ಬೆಂಗಳೂರಿನಲ್ಲಿ ಒಟ್ಟು ಎಷ್ಟು ಪುಸ್ತಕ ದಂಗಡಿಗಳಿವೆ? ನಾವೇ ಅವರಿಗೆ ಡಿಸ್ಟ್ರಿಬ್ಯೂಟ್ ಮಾಡಿದರೆ ಹೇಗೆ?’ ಎಂದಾಗ ‘ಅಗತ್ಯವಾಗಿ ಮಾಡಿ, ಅದಕ್ಕೆ ಬೇಕಾದ ನೆರವು ಖಂಡಿತ ಒದಗಿಸುತ್ತೇನೆ’ ಎಂದಾಗ ಖುಷಿಯಾದರೂ ನನ್ನಿಂದ ನಿಜಕ್ಕೂ ಇದು ಸಾಧ್ಯವಾ? ಅನ್ನುವ ಅನುಮಾನ ಕಾಡತೊಡಗಿ ದಾಗ ಅದನ್ನು ಗ್ರಹಿಸಿದವರಂತೆ ಅವರು ‘”To get more success we must meet more people. ಒಂದು YES ಉಲ್ಲೇಖ ಸಿಗಬೇಕೆಂದರೆ ನಾವು ಸಾಕಷ್ಟು NOನ್ನು ಹಾದುಹೋಗಬೇಕಾಗುತ್ತದೆ.

ಎಲ್ಲದಕ್ಕೂ ಸಿದ್ಧರಾಗಿರಿ ಅಷ್ಟೆ. ನಿರಂತರ ಪರಿಶ್ರಮದ ಫಲ ಖಂಡಿತ ಸಿಕ್ಕೇ ಸಿಗುತ್ತದೆ’ ಎಂದಾಗ, ಹಾಗಾದರೆ ‘ರವಿ ಬೆಳಗೆರೆ ಪ್ರಕಾಶನ’ದ ಮೂಲಕ ಪುಸ್ತಕಗಳನ್ನು ಹೊರತರುತ್ತೇನೆ ಎಂದುಕೊಳ್ಳುತ್ತ ಎದ್ದುಬಂದೆ. ನವೆಂಬರ್ 14 ಮಕ್ಕಳ ನಗುವಿನ ನಡುವೆ ರವಿ ಬೆಳಗೆರೆ ಪ್ರಕಾಶನವೆಂಬ ಮಗುವೂ ನಗುತ್ತದೆ. ಸತ್ಯವಾನನನ್ನು ಮಹಾನ್ ಪತಿವ್ರತೆಯಾದ ಸಾವಿತ್ರಿ ಯಮನ ಪಾಶದಿಂದ ಬದುಕಿಸಿಕೊಂಡು ಬಂದಳಂತೆ. ಆದರೆ ಅಕ್ಷರಲೋಕದಲ್ಲಿ ಈ ಯಶೋಮತಿ, ರವಿಬೆಳಗೆರೆಯನ್ನು ಪ್ರಕಾಶನದ ಮೂಲಕ ಮತ್ತೆ ಜೀವಂತಗೊಳಿಸುತ್ತಿದ್ದಾಳೆ ಅಂದುಕೊಂಡಾಗ ಈ ಬದುಕಿಗೊಂದು ಸಾರ್ಥಕತೆಯ ಭಾವ!

ಎಂದಿನಂತೆ ನಿಮ್ಮೆಲ್ಲರ ಹಾರೈಕೆಯೊಂದು ಜತೆಗಿರಲಿ ಸದಾ!