Wednesday, 11th December 2024

ಕೆಲಸ ಮಾಡಿಲ್ಲದಿರುವುದರಿಂದ ಕ್ಷೇತ್ರ ಹುಡುಕಾಟದಲ್ಲಿದ್ದಾರೆ: ಮಾಜಿ ಸಿಎಂ ಯಡಿಯೂರಪ್ಪ ವ್ಯಂಗ್ಯ

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದಂತಹ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಏಕೆ ಹೋಗುತ್ತಾರೆ ಎಂಬುದು ತಿಳಿಯುತ್ತಿಲ್ಲ. ಬಹುಶಃ ಕ್ಷೇತ್ರದಲ್ಲಿ ಏನು ಕೆಲಸ ಮಾಡಿಲ್ಲದ ಕಾರಣ ಬೇರೆ ಕ್ಷೇತ್ರ ಹುಡುಕುತ್ತಿರಬಹುದು ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಅಲ್ಲಿ ಗೆಲ್ಲುವ ವಿಶ್ವಾಸವಿಲ್ಲ ಎಂದು ಅನಿಸುತ್ತದೆ ಅದಕ್ಕಾಗಿ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಕೋಲಾರವಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಾಗಲಿ ನಿಲ್ಲಲಿ ಅದು ಅವರಿಗೆ ಬಿಟ್ಟಿದ್ದು ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ನಾನು ಇಷ್ಟಪಡುವುದಿಲ್ಲ ಎಂದರು. ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯನ್ನೇ ಮಾಡಿಸಿರ ಲಿಲ್ಲ. ಎಲ್ಲರಿಗೂ ಮುಖ್ಯಮಂತ್ರಿಗಳು ಪತ್ರ ಬರೆದು ಬರಬೇಕು ಎಂದು ವಿನಂತಿ ಮಾ ಡಿದ್ದಾರೆ. ಎಸ್.ಎಂ.ಕೃಷ್ಣ ಸೇರಿ ಎಲ್ಲರಿಗೂ ಮುಖ್ಯಮಂತ್ರಿಗಳು ದೂರವಾಣಿ  ಮಾಡಿ ವಿನಂತಿಸಿದ್ದಾರೆ. ಅದರಂತೆ ದೇವೇಗೌಡರಿಗೂ ದೂರವಾಣಿ ಕರೆ ಮಾಡಿದ್ದಾರೆ. ಅನಗತ್ಯವಾಗಿ ಗೊಂದಲದ ಚರ್ಚೆಗಳಾಗುತ್ತಿವೆ. ಕುಮಾರಸ್ವಾಮಿ ಅವರು ವಾಸ್ತವತೆ ತಿಳಿದುಕೊಳ್ಳಲಿ ಎಂದು ವಿನಂತಿ ಮಾಡುತ್ತೇನೆ ಎಂದರು.
ಕೋಲಾರ ಕ್ಷೇತ್ರ ಸೇಫಲ್ಲ : ಸಚಿವ ಮಾಧುಸ್ವಾಮಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಸೇಫಲ್ಲ ಅವರು ಚಿಕ್ಕನಾಯಕನಹಳ್ಳಿಗೆ ಬಂದರೆ ನಾನು ಸ್ವಾಗತಿಸುತ್ತೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕ್ಷೇತ್ರ ಆಯ್ಕೆ ಅವರಿಗೆ ಬಿಟ್ಟ ವಿಚಾರ. ಹಾಲಿ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವುದು ಕಷ್ಟ ಎಂದು ಅವರಿಗೆ ಅನಿಸಿದೆ. ಹಾಗಾಗಿ ಮತ್ತೆ ಆ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಕ್ಷೇತ್ರ ಆಯ್ಕೆಗೆ ಹೊರಟಿದ್ದಾರೆ. ಅವರು ಚಿಕ್ಕನಾಯಕನಹಳ್ಳಿಗೆ ಬಂದರೆ ನಾನು ಸ್ವಾಗತಿಸುತ್ತೇನೆ. ಅವರು ಬಂದರೆ ಕುಸ್ತಿಯನ್ನಾದರೂ ಆಡಬಹುದು ಎಂದರು. ಬಸವಣ್ಣನವರ ಪ್ರತಿಮೆಗಳು ಬೇಕಾದಷ್ಟು ಆಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಮೆಗಳನ್ನು ಮಾಡುತ್ತೇವೆ. ಬಸವಣ್ಣನವರು ಪ್ರವಾದಿ ಅದಕ್ಕೆ ಜಾತಿ ಸೋಕು ತರಲು ಇಷ್ಟವಿಲ್ಲ ಎಂದರು. ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ಅವರಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳೇ ಅವರಿಗೆ ಆಹ್ವಾನ ನೀಡಿದ್ದಾರೆ. ಏಕೆ ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದರು.
ವಿನಾಶದ ಅಂಚಿಗೆ ಕಾಂಗ್ರೆಸ್ ಪಕ್ಷ ; ವಿಜಯೇಂದ್ರ
ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಹೇಳುತ್ತಾರೆ. ದೇಶದಲ್ಲಿ ವಿನಾಶದ ಅಂಚಿಗೆ ಕಾಂಗ್ರೆಸ್ ಪಕ್ಷ ಸಾಗುತ್ತಿದೆ. ರಾಜ್ಯದಲ್ಲಿಯೂ ಸಹ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅವನತಿ ಹೊಂದುತ್ತಿದೆ. ಟಿಪ್ಪುಸುಲ್ತಾನ್ ಪ್ರತಿಮೆ ನಿರ್ಮಾಣ ಘೋಷಣೆ ಇದಕ್ಕೆ ಮುನ್ಸೂಚನೆ ಎಂದು ವಿಜಯೇಂದ್ರ ಹೇಳಿದರು. ಟಿಪ್ಪು ಪ್ರತಿಮೆ ಸ್ಥಾಪನೆ ಕಾಂಗ್ರೆಸ್ಸಿಗರ ಮನೋಭಾವ ತೋರುತ್ತದೆ. ಇದಕ್ಕೆ ರಾಜ್ಯದ ಜನತೆ ಉತ್ತರಿಸುತ್ತಾರೆ. ವೀರಶೈವ, ಲಿಂಗಾಯತ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಇದರಲ್ಲಿ ಬೇರೆ ಅರ್ಥ ಇಲ್ಲ ಎಂದರು. ನಾನು ಸಹರಾಜ್ಯದೆಲ್ಲಡೆ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ, ತಂದೆಯವರು ಶಿಕಾರಿಪುರದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ. ಅದರೆ, ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿದರೂ ನಾನು ಬದ್ದ. ಯಡಿಯೂರಪ್ಪನವರು ಚುನಾವಣೆ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ ಅದರೆ, ರಾಜಕಾರಣದಿಂದ ಅಲ್ಲ ಎಂದರು.
ಮುಂದಿನ ಸಿಎಂ ವಿಜಯೇಂದ್ರ : ಯಡಿಯೂರಿಗೆ ವಿಜಯೇಂದ್ರ ಆಗಮಿಸಿದಾಗ ನೆರೆದಿದ್ದ ನೂರಾರು ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆ ಕೂಗಿದರು.