ಮುಂಬೈ: ರೂಪಾಯಿ ಮಂಗಳವಾರ ತುಸು ಚೇತರಿಸಿಕೊಂಡಿದೆ. ಇಂದಿನ ಫೋರೆಕ್ಸ್ ಮಾರುಕಟ್ಟೆಯಲ್ಲಿ ಪ್ರತೀ ಡಾಲರ್ಗೆ 80.53 ರೂಪಾಯಿಯಂತೆ ವಹಿವಾಟಾಗುತ್ತಿತ್ತು.
ರೂಪಾಯಿ ಬಹುತೇಕ 70 ಪೈಸೆಗೂ ಅಧಿಕವಾಗಿ ಮೌಲ್ಯ ಹೆಚ್ಚಿಸಿಕೊಂಡಿದೆ. ಸೋಮವಾರ ಕೂಡ ರೂಪಾಯಿ 80.52 ದರದಲ್ಲಿ ಆರಂಭ ಕಂಡಿತ್ತು. ಸಂಜೆಯ ವೇಳೆ ಮತ್ತೆ 81 ರೂ ಗಡಿ ಆಚೆ ಕುಸಿದು ಹೋಗಿತ್ತು.
ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷಿಸಿದಷ್ಟು ತೀವ್ರ ಮಟ್ಟದಲ್ಲಿಲ್ಲ. ಅಲ್ಲಿನ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡದಿದ್ದರೂ ಕನಿಷ್ಠ ತೀವ್ರ ಮಟ್ಟದಲ್ಲಿ ಏರಿಕೆ ಮಾಡುವುದಿಲ್ಲ ಎಂಬುದು ಬಹುತೇಕ ಖಾತ್ರಿ ಇದೆ. ಈ ಹಿನ್ನೆಲೆಯಲ್ಲಿ ಡಾಲರ್ ಹಿಂದೆ ಮುಗಿಬೀಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಪರಿಣಾಮವಾಗಿ ರೂಪಾಯಿ ಸೇರಿದಂತೆ ವಿವಿಧ ಕರೆನ್ಸಿಗಳು ಡಾಲರ್ ಎದುರು ಬಲವೃದ್ಧಿಸಿಕೊಳ್ಳುತ್ತಿವೆ. ಮುಂದೆಯೂ ಇದೇ ಟ್ರೆಂಡ್ ಮುಂದುವರಿಯಬಹುದು. ಇನ್ನೊಂದು ವಾರದೊಳಗೆ ರೂಪಾಯಿ ಮೌಲ್ಯ 80ರ ಮಟ್ಟಕ್ಕಿಂತ ಕೆಳಗೆ ಇಳಿಯುವ ನಿರೀಕ್ಷೆ ಇದೆ.
ಇದೇ ವೇಳೆ ಷೇರುಪೇಟೆಯ ಇಂದಿನ ವಹಿವಾಟು ತೂಗುಯ್ಯಾಲೆಯಂತೆ ಹೊಯ್ದಾಡುತ್ತಿದೆ. ಮಂಗಳವಾರ ಉತ್ತಮ ಆರಂಭ ಪಡೆದಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ನಂತರ ಕುಸಿತ ಕಂಡಿತು.
ನಿಫ್ಟಿ ಸೂಚ್ಯಂಕ 45 ಅಂಕಗಳಷ್ಟು ವೃದ್ಧಿ ಕಂಡಿತು. ಎಲ್ಐಸಿ ಸೇರಿದಂತೆ ಕೆಲ ಪ್ರಮುಖ ಷೇರುಗಳು ನಿರೀಕ್ಷೆಯಂತೆ ಬೆಳವಣಿಗೆ ಸಾಧಿಸಿವೆ. ಎಲ್ಐಸಿಗೆ ಎರಡನೇ ತ್ರೈಮಾಸಿಕದಲ್ಲಿ ಭಾರೀ ಲಾಭ ಸಿಕ್ಕಿದ್ದು ಷೇರುಪೇಟೆಯಲ್ಲೂ ಪ್ರತಿಫಲಿಸುತ್ತಿದೆ.
ಎಲ್ಐಸಿ ಜೊತೆಗೆ ಟಾಟಾ ಸ್ಟೀಲ್, ಪವರ್ಗ್ರಿಡ್, ಮಹೀಂದ್ರ ಅಂಡ್ ಮಹೀಂದ್ರ, ಇಂಡಸ್ಇಂಡ್ ಬ್ಯಾಂಕ್, ಹಿಂಡಾಲ್ಕೋ, ಅಪೋಲೋ ಹಾಸ್ಪಿಟಲ್ಸ್, ಜೆಎಸ್ಡಬ್ಲ್ಯೂ ಸ್ಟೀಲ್ ಮೊದಲಾದ ಕಂಪನಿಗಳ ಷೇರು ವೃದ್ಧಿಸಿವೆ.
ಸೆನ್ಸೆಕ್ಸ್ 169.02 ಅಂಕಗಳನಷ್ಟು ಕುಸಿತ ಕಂಡು 61,464.80 ಮಟ್ಟ ತಲುಪಿದೆ. ನಿಫ್ಟಿ ಕೂಡ 40 ಅಂಕಗಳಿಗೂ ಹೆಚ್ಚು ಕುಸಿತ ಕಂಡು 18,288.25 ಮಟ್ಟದಲ್ಲಿದೆ.