Friday, 13th December 2024

ಏನಿದು ಮತದಾರರ ಪಟ್ಟಿ ಪರಿಷ್ಕರಣೆ ವಿವಾದ

ಚುನಾವಣೆ ಸಮೀಸುತ್ತಿದ್ದಂತೆ ರಾಜಕೀಯ ಕೆಸರೆರಚಾಟವೂ ಜೋರಾ ಗುತ್ತದೆ. ಆಡಳಿತ ಪಕ್ಷ ಏನೇ ಮಾಡಿದರೂ  ಅದರಲ್ಲೊಂದು ದೋಷ ಕಂಡು ಹುಡುಕಿ ವಿರೋಧಿಸುವುದು ಪ್ರತಿಪಕ್ಷಗಳ ಜಾಯಮಾನವಾದರೆ, ದೋಷವಿದ್ದರೂ ಸಮರ್ಥಿಸಿಕೊಳ್ಳುವುದು ಆಡಳಿತ ಪಕ್ಷ ಸಹಜ ನಡೆಯಾಗಿರುತ್ತದೆ.

ಈಗ ಹೊಸದಾಗಿ ಸದ್ದು ಮಾಡುತ್ತಿರುವುದು ಬೆಂಗಳೂರಿನ ೨೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿರುವ ಸರಕಾರದ ಉಪಕ್ರಮ. ಚುನಾವಣೆ ಆಯೋಗವು ಕಾಲಕಾಲಕ್ಕೆ ನಡೆಸುವ ನಿಯಮಿತ ಕಾರ್ಯ ಇದಾಗಿದ್ದರೂ, ಆಡಳಿತಾರೂಢ ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ಕೊಡಿಸಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಜಾಗೃತಿ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಅದು ಮತದಾರರ ಮಾಹಿತಿ ಕಳವಿಗೆ ಯತ್ನಿಸುತ್ತಿದೆ ಎಂಬುದು ಆರೋಪ. ಬೆಂಗಳೂರಿನ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಇದಕ್ಕೆ ನೇರ ಹೊಣೆಯೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಕೂಡ ಇದಕ್ಕೆ ಧ್ವನಿಗೂಡಿಸಿ, ಮುಖ್ಯಮಂತ್ರಿಗಳ ವಿರುದ್ಧ ಎಫ್ ಐಆರ್ ದಾಖಲಾಗಬೇಕು, ಅವರ ಬಂಧನವಾಗಬೇಕು, ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಖಾಸಗಿ ಸಂಸ್ಥೆ ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದು
ಅರ್ಜಿ ಹಾಕಿದ ಮರುದಿನವೇ ಯಾವುದೇ ಜಾಹೀರಾತು ನೀಡದೆ ಖಾಸಗಿ ಸಂಸ್ಥೆಗೆ ಅನುಮತಿ ನೀಡಲಾಯಿತು. ಜನರ ಮಾಹಿತಿ ಪಡೆಯಲು ತಮ್ಮ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದಾರೆ.

ಕಾನೂನಿನ ಪ್ರಕಾರ ಸರಕಾರಿ, ಅರೆ ಸರಕಾರಿ ಸಿಬ್ಬಂದಿ ಹೊರತಾಗಿ ಬೇರೆಯವರು ಬಿಎಲ್‌ಒ ಆಗಲು ಸಾಧ್ಯವಿಲ್ಲ ಎಂಬುದು ಈ ಮುಖಂಡರ ವಾದ. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಸಿ.ಎನ್, ಚುನಾವಣೆ ಆಯೋಗ ನಡೆಸುವ ಈ ಪ್ರಕ್ರಿಯೆಯಲ್ಲಿ ಸರಕಾರದ ಪಾತ್ರವಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ರಾಜಕೀಯ ಆರೋಪಗಳು, ಸಮರ್ಥನೆಗಳು ಏನೇ ಇರಲಿ, ಮತದಾರರ ಮಾಹಿತಿಗಳು ಸೋರಿಕೆಯಾಗದಂತೆ ಆಯೋಗ
ಮುನ್ನೆಚ್ಚರಿಕೆ ವಹಿಸುವುದು ಅಪೇಕ್ಷಣೀಯ.