Saturday, 14th December 2024

ಪರಿಶಿಷ್ಠ ಪಂಗಡಗಳ ಕಲ್ಯಾಣಕ್ಕೆ ಬಿಜೆಪಿ ಕಂಕಣಬದ್ಧ

ಕಲ್ಯಾಣ ಕಂಕಣ

ಸಿದ್ದರಾಜು

ಪರಿಶಿಷ್ಟ ಪಂಗಡಗಳು ಜನಸಂಖ್ಯೆಯ ದೃಷ್ಟಿಯಿಂದ ಸಿಂಹಪಾಲನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ವಸಾಹತುಶಾಹಿಗಳ ಕಾಲದಲ್ಲಿ ಒಂದು ಬಗೆಯ ಪ್ರಹಾರಕ್ಕೊಳಗಾದ ಪರಿಶಿಷ್ಟ ಪಂಗಡಗಳು ಸ್ವತಂತ್ರ ಭಾರತದ ರಾಜಕಾರಣದಲ್ಲೂ ನ್ಯಾಯವನ್ನು ಪಡೆಯಲಿಲ್ಲ ಎನ್ನುವುದು ವಾಸ್ತವ.

ನಮ್ಮ ಸಮಾಜವು ಜೀವಂತವಾದ ಹಲವು ಸಮುದಾಯಗಳ ಒಂದು ಒಕ್ಕೂಟ. ಇಂಥ ಸಮುದಾಯಗಳ ಲೆಕ್ಕ ಹಿಡಿದುಕೊಂಡು ಹೋದರೆ, ಇವುಗಳ ಸಂಖ್ಯೆ ನೂರಾರಿವೆ. ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿರುವ ಈ ಸಮುದಾಯಗಳು ನಮ್ಮ ಸಮಾಜದ
ಸಂಸ್ಕೃತಿ, ನಂಬಿಕೆಗಳು, ಜಾನಪದ, ಹಬ್ಬ-ಹರಿದಿನಗಳು, ಭಾಷೆಯ ಹತ್ತುಹಲವು ಉಪಭಾಷೆಗಳು, ಸಂಪ್ರದಾಯಗಳೆಲ್ಲವೂ ತಲೆಮಾರಿನಿಂದ ತಲೆಮಾರಿಗೆ ದಾಟುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ.

ಇಂಥ ಸಮುದಾಯಗಳಲ್ಲಿ ನಮ್ಮಲ್ಲಿರುವ ಪರಿಶಿಷ್ಟ ಪಂಗಡಗಳ ಪಾಲು ದೊಡ್ಡದು. ಪರಿಶಿಷ್ಟ ಪಂಗಡಗಳು ಜನಸಂಖ್ಯೆಯ ದೃಷ್ಟಿಯಿಂದ ಸಿಂಹಪಾಲನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ವಸಾಹತುಶಾಹಿಗಳ ಕಾಲದಲ್ಲಿ ಒಂದು ಬಗೆಯ ಪ್ರಹಾರಕ್ಕೊಳಗಾದ ಪರಿಶಿಷ್ಟ ಪಂಗಡಗಳು ಸ್ವತಂತ್ರ ಭಾರತದ ರಾಜಕಾರಣ ದಲ್ಲೂ ನ್ಯಾಯವನ್ನು ಪಡೆಯಲಿಲ್ಲ ಎನ್ನುವುದು ವಾಸ್ತವ.

ಏಕೆಂದರೆ, ಇಂಥ ಪಂಗಡಗಳನ್ನು ಯಥಾಸ್ಥಿತಿಯ ಇಟ್ಟಿದ್ದು ಈ ನೆಲದ ನಿಜವಾದ ಪ್ರತಿನಿಧಿಗಳಾದ ಪರಿಶಿಷ್ಟ ಪಂಗಡಗಳಿಗೆ
ಮಾಡಿದ ವಂಚನೆಯಲ್ಲದೆ ಬೇರೇನೂ ಅಲ್ಲ. ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಇಲ್ಲಿಯವರೆಗಿನ ರಾಜಕೀಯ ಸ್ಥಿತಿಗತಿ ಗಳು ಕೇವಲ ವೋಟ್‌ಬ್ಯಾಂಕ್ ಆಗಿ ನೋಡಿಕೊಂಡು ಬಂದಿದ್ದು ದೇಶದ ದುರಂತಗಳಂದು.

ಸ್ಥಿತ್ಯಂತರವೆಂಬಂತೆ ಈ ಸಮುದಾಯಗಳ ರಚನಾತ್ಮಕ ಸಬಲೀಕರಣಕ್ಕಾಗಿ ಅವು ಯಾವತ್ತೂ ಒಂದು ಒಳ್ಳೆಯ ಕಾರ್ಯಕ್ರಮ ವನ್ನು ರೂಪಿಸಲಿಲ್ಲ, ಈ ಸಮುದಾಯಗಳ ಜನರಲ್ಲಿ ಒಂದು ವಿಶ್ವಾಸವನ್ನು ಮೂಡಿಸಲಿಲ್ಲ, ಅವರನ್ನು ಅಭಿವೃದ್ಧಿಯ ಮುಖ್ಯ ವಾಹಿನಿಗೆ ಕರೆತರಲಿಲ್ಲ. ಬದಲಿಗೆ, ಕಣ್ಣಿಗೆ ಮಣ್ಣೆರಚುವಂಥ ಘೋಷಣೆಗಳ ಕಾಲಹರಣವಾಗಿದೆಯಷ್ಟೆ. ಆದರೆ, 2014ರ ನಂತರ ಪರಿಶಿಷ್ಟ ಪಂಗಡಗಳನ್ನೂ ಒಳಗೊಂಡಂತೆ ದೇಶದೆಡೆ ಹೊಸ ಮನ್ವಂತರ ಶುರುವಾಗಿದೆ.

ನಿಜ ಹೇಳಬೇಕೆಂದರೆ, ನಮ್ಮ ಪರಿಶಿಷ್ಟ ಪಂಗಡಗಳು ಮಹರ್ಷಿ ವಾಲ್ಮೀಕಿಯ ಸಂತತಿಗೆ ಸೇರಿದಂಥವು ಎನ್ನುವ ಪರಂಪರೆಯನ್ನು ಪುನಃ ಮುನ್ನೆಲೆಗೆ ತಂದಿದ್ದು ಬಿಜೆಪಿ! ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಸಂಖ್ಯೆ ದೊಡ್ಡದಿದೆ. ಇವುಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಶ್ರೇಯೋಭಿವೃದ್ಧಿಗಳಿಗೆ ಅರ್ಥಪೂರ್ಣ ಉಪಕ್ರಮಗಳನ್ನು ಕೈಗೊಂಡರೆ ಮಾತ್ರ ನವಕರ್ನಾಟಕ ನಿರ್ಮಾಣದ ಕನಸು ನನಸಾಗುತ್ತದೆ ಎನ್ನುವುದು ಬಿಜೆಪಿಯ ನಂಬಿಕೆಯಾಗಿದೆ.

ಏಕೆಂದರೆ, ಸರಕಾರವೊಂದು ಇದೆಲ್ಲವೂ ಆಗುವಂಥ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ರೂಪಿಸುವುದನ್ನು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದಾಗ ಮಾತ್ರ ಇದು ಸಾಧ್ಯ. ಇಲ್ಲದೆ ಹೋದರೆ, ತಾತ್ಕಾಲಿಕ ಲೆಕ್ಕಾಚಾರಗಳಲ್ಲಿ ಅಥವಾ ತಕ್ಷಣದ ಜನಪ್ರಿಯತೆಯಲ್ಲಿ ಎಲ್ಲವೂ ಕಳೆದುಹೋಗುತ್ತವಷ್ಟೆ. ಸಾಮಾಜಿಕ ಬದ್ಧತೆಯೂ ಮೇಳೈಸಿರುವ ಅಭಿವೃದ್ಧಿಕೇಂದ್ರಿತ
ರಾಜಕಾರಣದ ಸಂಸ್ಕೃತಿಯ ಮೇಲೆ ನಂಬಿಕೆ ಬೆಳೆಸಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ ಎನ್ನುವುದೂ ಅಷ್ಟೇ ಸತ್ಯ. ಇಲ್ಲದೆ ಹೋದರೆ, ಪರಿಶಿಷ್ಟ ಪಂಗಡಗಳ ಆರ್ಥಿಕ ಪ್ರಗತಿ ಅಸಂಭವವಾಗಿಯೇ ಉಳಿದುಬಿಡುತ್ತದೆ.

ರಾಜ್ಯದಲ್ಲಿ ಕಳೆದ ೩ ವರ್ಷಗಳಿಂದ ಮತ್ತು ಕೇಂದ್ರದಲ್ಲಿ ಕಳೆದ ೮ ವರ್ಷಗಳಿಂದ ನಿಷ್ಕಳಂಕ ಆಡಳಿತ ನಡೆಸುತ್ತಿರುವ
ಬಿಜೆಪಿಯ ಡಬಲ್ ಎಂಜಿನ್ ಸರಕಾರವು ಈ ನಿಟ್ಟಿನಲ್ಲಿ ಹತ್ತುಹಲವು ಹೆಜ್ಜೆಗಳನ್ನು ಇಟ್ಟಿದ್ದು, ಹೊಸ ಚರಿತ್ರೆಯನ್ನೇ ನಿರ್ಮಿಸಿದೆ ಎನ್ನುವುದು ಹೆಗ್ಗಳಿಕೆಯ ಸಂಗತಿಯಾಗಿದೆ. ಉದಾಹರಣೆಗೆ, ಮೀಸಲಾತಿಯ ವಿಚಾರವನ್ನೇ ನೋಡಬಹುದು. ಹಿಂದಿನ ಸರಕಾರವು ಪರಿಶಿಷ್ಟ ಪಂಗಡಗಳ ಉದ್ಧಾರದ ಬಗ್ಗೆ ದೊಡ್ಡದೊಡ್ಡ ಮಾತುಗಳನ್ನೇ ಆಡುತ್ತಿತ್ತು. ಆದರೆ, ಯಥಾಪ್ರಕಾರ ಒಂದು ಸಮಿತಿಯನ್ನು ರಚಿಸಿ, ಎಂದಿನಂತೆ ಅ ವಿರಮಿಸಿತು. ಏಕೆಂದರೆ, ಅಂದು ಅಧಿಕಾರದಲ್ಲಿದ್ದ ಪಕ್ಷಗಳಿಗೆ ಈ ಸಮಾಜದ ಬಗೆಗಿದ್ದದ್ದು
ನೈಜ ಕಳಕಳಿಯಲ್ಲ; ಅದೇನಿದ್ದರೂ ಮೊಸಳೆ ಕಣ್ಣೀರು.

ಆದರೆ, ಬಿಜೆಪಿ ಮಾತ್ರ ಇದಕ್ಕೆ ಬೇಕಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತ ಬಂದಿದೆ. ಹೀಗಾಗಿ, ಪರಿಶಿಷ್ಟ ಪಂಗಡಗಳಿಗೆ ಕೊಡುವ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಈಗ ಚಾಲ್ತಿಯಲ್ಲಿರುವ ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸಬೇಕು ಎನ್ನುವ ಶಿ-ರಸನ್ನು ನಾವು ಪ್ರಾಮಾಣಿಕವಾಗಿ ಅಂಗೀಕರಿಸಿದ್ದೇವೆ. ಇದು ಈ ಸಮುದಾಯಗಳ ಉತ್ತರೋತ್ತರ ಅಭಿವೃದ್ಧಿಗೆ ಭದ್ರಬುನಾದಿ ಹಾಕಿ, ಮನ್ವಂತರವನ್ನು ಸೃಷ್ಟಿಸಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ದೀರ್ಘಕಾಲದವರೆಗೆ ಪರಿಶಿಷ್ಟ ಪಂಗಡಗಳ ಪಾಲಿಗೆ ಅಭಿವೃದ್ಧಿಯೆನ್ನುವುದು ಒಂದು ಬಗೆಯಲ್ಲಿ ಕಣ್ಕಟ್ಟಿನಂತಾಗಿ ಹೋಗಿತ್ತು. ಇದನ್ನು ಗಮನಿಸಿದ ರಾಜ್ಯ ಬಿಜೆಪಿ ಸರಕಾರವು ಈ ಸಮುದಾಯಗಳ ಕಲ್ಯಾಣವನ್ನು ಸಾಧಿಸಲೆಂದೇ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿತು. ಇಷ್ಟೇ ಅಲ್ಲ, 2019-20 ಮತ್ತು 2022-23ರ ನಡುವೆ ರಾಜ್ಯ ಬಿಜೆಪಿ ಸರಕಾರವು ‘ಟ್ರೈಬಲ್ ಸಬ್‌ಪ್ಲ್ಯಾನ್’ ಉಪಯೋಜನೆಯ ಅಡಿಯಲ್ಲಿ 32,905 ಕೋಟಿ ರುಪಾಯಿಗಳಿಗೂ ಹೆಚ್ಚು ಹಣವನ್ನು ಒದಗಿಸಿದೆ.

ಅದರಲ್ಲೂ 2021-22ನೇ ಸಾಲೊಂದರ 7,522.20 ಕೋಟಿ ರು.ಗಳನ್ನು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರಕಾರವು ಪರಿಶಿಷ್ಟ ಪಂಗಡಗಳ ಒಳಿತಿಗಾಗಿ ವಿನಿಯೋಗಿಸಿದೆ. ಮೊದಲೇ ಹೇಳಿದ ಹಾಗೆ, ಸಾಮಾಜಿಕ ಸಬಲೀಕರಣ ನಮ್ಮ ಮುಂದಿರುವ ಒಂದು ದಾರಿ; ಹಾಗೆಯೇ, ಶೈಕ್ಷಣಿಕ ಉನ್ನತಿಯನ್ನು ಸಾಧ್ಯವಾಗಿಸುವುದು ದೀರ್ಘಕಾಲೀನ ಪರಿಣಾಮವನ್ನು ಉಂಟುಮಾಡು ವಂಥ ಪರಿಣಾಮಕಾರಿ ಹಾದಿ. ಬಿಜೆಪಿ ಸರಕಾರ ಇದನ್ನು ಮನಗಂಡಿದ್ದು, 2021-22ನೇ ಸಾಲಿನಲ್ಲಿ ಎಸ್ಟಿ ಸಮುದಾಯಗಳ 3.06 ಲಕ್ಷ ಮಕ್ಕಳಿಗೆ 37.89 ಕೋಟಿ ರು.ಗಳಷ್ಟು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ನೇರವಾಗಿ ಖಾತೆಗಳಿಗೆ ವರ್ಗಾಯಿಸಿದೆ.

ಹಾಗೆಯೇ, 96 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 75.42 ಕೋಟಿ ರು.ಗಳನ್ನು ಇದೇ ಬಾಬತ್ತಿಗೆ ವಿನಿಯೋಗಿಸಿದೆ. ಇದರ ಫಲಗಳು ಮುಂದಿನ ದಿನಗಳಲ್ಲಿ ನಿಚ್ಚಳವಾಗಿ ಕಾಣಲಿವೆ. ಇವುಗಳ ಜತೆಗೆ ಪರಿಶಿಷ್ಟ ಪಂಗಡಗಳ 887 ಪ್ರತಿಭಾವಂತರಿಗೆ ದೆಹಲಿ,
ಹೈದರಾಬಾದ್ ಮತ್ತು ರಾಜ್ಯದ ಒಳಗಿರುವ ಅನೇಕ ತರಬೇತಿ ಕೇಂದ್ರಗಳಲ್ಲಿ ಐಎಎಸ್/ಐಪಿಎಸ್ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬೇಕು.

ಸಿದ್ಧಿಗಳು, ತಳವಾರ ಮತ್ತು ಪರಿವಾರ, ಬೆಟ್ಟ ಕುರುಬ ಸಮುದಾಯಗಳು ಎಷ್ಟೋ ವರ್ಷಗಳಿಂದಲೂ ತಮ್ಮನ್ನು ‘ಪರಿಶಿಷ್ಟ ಪಂಗಡ’ವೆಂದು ಪರಿಗಣಿಸಬೇಕು ಎಂದು ಹೋರಾಡುತ್ತಿದ್ದವು. ಅವುಗಳ ಈ ದನಿಯನ್ನು ಆಲಿಸಿದ್ದು ಡಬಲ್ ಎಂಜಿನ್ ಬಿಜೆಪಿ ಸರಕಾರ ಮಾತ್ರ! ಇದರಂತೆ, ರಾಜ್ಯ ಬಿಜೆಪಿ ಸರಕಾರದ ನಿರಂತರ ಅನುಸರಣ ಕಾರ್ಯ ಮತ್ತು ಕೇಂದ್ರದಲ್ಲಿರುವ ನರೇಂದ್ರ ಮೋದಿಯವರ ಸಾರಥ್ಯದ ಸರಕಾರದ ಸ್ಪಂದನಶೀಲತೆಯಿಂದಾಗಿ ಈ ಮೂರು ಸಮುದಾಯಗಳಿಗೂ ಈಗ ಎಸ್.ಟಿ. ಸ್ಥಾನಮಾನ
ನೀಡಲಾಗಿದೆ.

ಇಷ್ಟೇ ಅಲ್ಲ, ಉತ್ತರಕನ್ನಡದ ಸಿದ್ದಿ ಜನಾಂಗಕ್ಕೆ ಸೇರಿದ ಶಾಂತಾರಾಮ ಸಿದ್ದಿ ಅವರಂತಹ ನಿಸ್ಪೃಹರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಬಿಜೆಪಿಯು ಪರಿಶಿಷ್ಟ ಪಂಗಡಗಳ ಏಳಿಗೆಯ ಬಗ್ಗೆ ತನಗಿರುವ ಕಳಕಳಿಯು ನೈಜವಾದುದು ಎನ್ನುವುದನ್ನು ಸಾಬೀತುಪಡಿಸಿದೆ. ಇಂಥ ಸಂಕಲ್ಪವನ್ನಾಗಲಿ, ಕಾರ್ಯಸಿದ್ಧಿಯನ್ನಾಗಲಿ ಬೇರೆ ಪಕ್ಷಗಳಿಂದ ಎಂದಾದರೂ
ನಿರೀಕ್ಷಿಸಲು ಸಾಧ್ಯವೇ? ಬಿಜೆಪಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರದ ಪ್ರಥಮ ಪ್ರಜೆಯಾಗಿ ಒಡಿಶಾದ
ಬುಡಕಟ್ಟು ಮೂಲದವರಾದ ದ್ರೌಪದಿ ಮುರ್ಮು ಅವರನ್ನು ತನ್ನ ನೇತೃತ್ವದ ಎನ್.ಡಿ.ಎ ಒಕ್ಕೂಟದ ಅಧಿಕೃತ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿತು.

ಇದರಲ್ಲಿಯೂ ಬಿಜೆಪಿಯ ಸಮತ್ವದ ಕಳಕಳಿಯನ್ನು ಕಾಣಬಹುದಾಗಿದೆ. ಅಂತೆಯೇ ಇತರ ಪಕ್ಷಗಳ ನಿಸ್ತೇಜ ಮತ್ತು ಸತ್ವಹೀನ ರಾಜಕೀಯದ ಕುರುಹು ಇದಾಗಿದೆ; ಏಕೆಂದರೆ ಸಮತ್ವದ ನೆಲೆಯಲ್ಲಿ ನಂಬಿಕೆ ಇರುವಂತಿದ್ದರೆ ಯಾವ ಪಕ್ಷವೂ ದ್ರೌಪದಿ ಮುರ್ಮು ಅವರ ವಿರುದ್ಧ ತನ್ನ ಅಭ್ಯರ್ಥಿಯನ್ನೇ ಹಾಕಬಾರದಿತ್ತು, ಇರಲಿ. ಅದರೊಟ್ಟಿಗೆ, ಮುರ್ಮು ಅವರ ಆಯ್ಕೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಕಳಕಳಿಯನ್ನು ಪ್ರದರ್ಶಿಸಿದರೆ, ನಮ್ಮದೇ ರಾಜ್ಯದಲ್ಲಿ ನೋಡುವುದಾದರೆ, ಮೈಸೂರು ಮಹಾನಗರ ಪಾಲಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಮೀಸಲಾತಿ ಇರದಿದ್ದರೂ ಪರಿಶಿಷ್ಟ ಪಂಗಡದ ಶಿವಕುಮಾರ್ ಎಂಬು ವರನ್ನು ತನ್ನ ಮೇಯರ್ ಆಗಿ ಕಣಕ್ಕಿಳಿಸಿ ಗೆಲ್ಲಿಸಿತು ಬಿಜೆಪಿ.

ಈ ಎಲ್ಲ ಆಯಾಮಗಳಲ್ಲೂ ಹಲವು ಮಜಲುಗಳಾಗಿ ಪರಿಶಿಷ್ಟ ಪಂಗಡಗಳ ಬಗೆಗೆ ಅಕ್ಕರಾಸ್ಥೆ ಹೊಂದಿದ್ದು, ಅವರ ಉದ್ಧಾರ ಕ್ಕಾಗಿ ಅವಿರತವಾಗಿ ಶ್ರಮಿಸಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಕನಸನ್ನು ನನಸು ಮಾಡು ತ್ತಿರುವುದು ಬಿಜೆಪಿ ಮಾತ್ರ ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತದೆ.

(ಲೇಖಕರು ವಿಧಾನ ಪರಿಷತ್‌ನ ಮಾಜಿ ಸದದ್ಯರು, ಮತ್ತು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ)