Friday, 29th November 2024

ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಸಹಕಾರ ಅಗತ್ಯ: ಸಿಇಒ ವಿದ್ಯಾಕುಮಾರಿ

ತುಮಕೂರು: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯವಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯ ಎಲ್ಲಾ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ಕುಸ್ತಿಯಂತ ಕ್ರೀಡೆಗಳಿಗೆ ಉತ್ತೇಜನ ನೀಡ ಬೇಕಾಗಿದೆ. ಹಾಗೆಯೇ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿಯಿಂದ ತೊಡಗಿಕೊಳ್ಳಬೇಕು ಎಂದರು.
ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಪಾಲ್ಗೊಂಡಾಗ ಮಾತ್ರ ಕ್ರೀಡೆಯ ನೈಜತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಖೋಖೋ ಪುರುಷ-ಮಹಿಳೆ ಪಂದ್ಯಾವಳಿ, ಕಬಡ್ಡಿ ಪುರುಷ-ಮಹಿಳೆ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಜಿಲ್ಲೆಯ 10 ತಾಲ್ಲೂಕು ಗಳಿಂದ 40 ತಂಡಗಳು ಭಾಗವಹಿಸಿ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.
ಗ್ರಾಮೀಣ ಕ್ರೀಡಾಕೂಟ ಯಶಸ್ವಿಗೆ ಸಹಕರಿಸಿದ ಜಿಲ್ಲಾಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ಹೇಳಿದರು.
ವಿಜೇತ ತಂಡಗಳು: ಪುರುಷರ ಕಬಡ್ಡಿಯಲ್ಲಿ ಕುಣಿಗಲ್ ಪ್ರಥಮ, ತಿಪಟೂರು ದ್ಪಿತೀಯ, ಪಾವಗಡ ಮತ್ತು ಮಧುಗಿರಿ ತೃತೀಯ ಸ್ಥಾನ ಪಡೆದುಕೊಂಡಿದ್ದರೆ, ಮಹಿಳೆಯ ಕಬಡ್ಡಿ ಪಂದ್ಯಾವಳಿಯಲ್ಲಿ ಕುಣಿಗಲ್ ತಂಡ ಪ್ರಥಮ, ಗುಬ್ಬಿ ದ್ವಿತೀಯ, ಕೊರಟಗೆರೆ ಮತ್ತು ತಿಪಟೂರು ತಂಡಗಳು ತೃತೀಯ ಸ್ಥಾನ ಪಡೆದು ವಿಜೇತವಾಗಿವೆ.
ಪುರುಷರ ಖೋಖೋ ಪಂದ್ಯಾವಳಿಯಲ್ಲಿ ಪಾವಗಡ ತಂಡ ಪ್ರಥಮ, ತುಮಕೂರು ದ್ವಿತೀಯ, ಗುಬ್ಬಿ ಮತ್ತು ಕುಣಿಗಲ್ ತಂಡಗಳು ತೃತೀಯ ಸ್ಥಾನ ಹಾಗೂ ಮಹಿಳೆಯರ ಖೋಖೋ ಪಂದ್ಯಾವಳಿಯಲ್ಲಿ ಕುಣಿಗಲ್ ಪ್ರಥಮ, ಗುಬ್ಬಿ ದ್ವಿತೀಯ ಹಾಗೂ ತುಮಕೂರು-ಕೊರಟಗೆರೆ ತೃತೀಯ ಸ್ಥಾನ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾದ ಕೆ. ನಾಗರಾಜು, ವಾಲಿಬಾಲ್ ತರಬೇತುದಾರರಾದ ಪ್ರದೀಪ್, ಇಸ್ಮಾಯಲ್ ಹಾಗೂ ಎಲ್ಲಾ ತಾಲ್ಲೂಕಿನ ಇಓಗಳು ಉಪಸ್ಥಿತರಿದ್ದರು.