ತುಮಕೂರು: ಎಳೆಯ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು, ಮಹಿಳೆಯರ ಮೇಲೆ ಹಿಂಸಾತ್ಮಕ ಕೃತ್ಯಗಳು ಘಟಿಸುತ್ತಿರುವುದು ನಾಗರಿಕ ಸಮಾಜದಲ್ಲಿ ಅತ್ಯಂತ ಆತಂಕಕಾರಿ ವಿಷಯಗಳು ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷ ರಾದ ಎಂ.ಸಿ.ಲಲಿತ ಕಳವಳ ವ್ಯಕ್ತಪಡಿಸಿದರು.
ಮಹಿಳಾ ದೌರ್ಜನ್ಯ ವಿರೋಧಿ ದಿನದ ಅಂಗವಾಗಿ ವರದಕ್ಷಿಣೆ ವಿರೋಧಿ ವೇದಿಕೆ-ಸಾಂತ್ವನ ಕೇಂದ್ರದಲ್ಲಿ ಆಯೋಜಿಸಿದ್ದ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರಿಕತೆ ಹೆಚ್ಚಿದಂತೆ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗ ಬೇಕು. ಆದರೆ ದೌರ್ಜನ್ಯಗಳ ಸ್ವರೂಪ ಬದಲಾಗಿ ಹೆಚ್ಚಳ ಕಾಣುತ್ತಿರುವುದು ಅನಾಗರಿಕ ಸಂಸ್ಕೃತಿಯನ್ನು ಪ್ರತಿಪಾದಿಸು ವಂತಿದೆ. ವಯಸ್ಸಿನ ಇತಿಮಿತಿ ಇಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಂಘಟನಾತ್ಮಕವಾಗಿ ಪ್ರತಿಭಟಿಸುವ ಮನೋಭಾವ ಸಮಾಜದಲ್ಲಿ ಹೆಚ್ಚಬೇಕಿದೆ. ದೌರ್ಜನ್ಯಗಳ ವಿರುದ್ಧ ಎಲ್ಲ ಕಡೆ ಅರಿವು ಮೂಡಬೇಕಿದೆ ಎಂದರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ ಮಾಧ್ಯಮಗಳು ಮತ್ತು ಮೊಬೈಲ್ ಬಳಕೆ ಇಂದು ಯುವ ಜನತೆಯನ್ನು ಕೆಟ್ಟದಾರಿಗೆ ಕೊಂಡೊಯ್ಯುತ್ತಿವೆ. ಮಾಧ್ಯಮಗಳಲ್ಲಿ ಬರುವ ಚಿತ್ರಣಗಳು, ಸಾಮಾಜಿಕ ಜಾಲತಾಣದ ದೃಶ್ಯಗಳು ಯುವ ಜನತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಯುವ ಜನತೆ ಅಡ್ಡದಾರಿ ಹಿಡಿಯುತ್ತಿದ್ದು, ಅವರ ಕೃತ್ಯಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳು ಮತ್ತಷ್ಟು ಗಂಭೀರವಾಗಲಿವೆ ಎಂದರು.
ಲೇಖಕಿ ಸಿ.ಎಲ್.ಸುನಂದಮ್ಮ ಮಾತನಾಡಿ ಬಹಳಷ್ಟು ದೌರ್ಜನ್ಯಗಳು ಸಂಬಂಧಿಗಳಿಂದಲೇ ಘಟಿಸುತ್ತಿವೆ. ವಿಶ್ವಸಂಸ್ಥೆಯ ವರದಿಯಲ್ಲಿಯೇ ಇದನ್ನು ಉಲ್ಲೇಖಿಸಲಾಗಿದೆ. ಮಹಿಳೆಗೆ ದುಡಿಮೆ ಇದ್ದರೂ ಶೋಷಣೆ ತಪ್ಪಿಲ್ಲ. ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮೊಬೈಲ್ ಗೀಳಿನಿಂದ ಮಕ್ಕಳು, ಪೋಷಕರು ಹೊರಬರಬೇಕು ಎಂದರು.
ಮಮತ ರವಿಕುಮಾರ್ ಮಾತನಾಡಿ ಸುಶಿಕ್ಷಿತರು, ಹಣಬಲವುಳ್ಳವರು ತಪ್ಪು ಮಾಡಿ ಕಾನೂನಿನ ಮಾರ್ಗ ಹಿಡಿಯುತ್ತಾರೆ. ಹಣದ ಮೂಲಕ ನ್ಯಾಯ ದೊರಕಿಸಿಕೊಳ್ಳುತ್ತಾರೆ. ಆದರೆ ಆರ್ಥಿಕವಾಗಿ ಸಬಲರಿಲ್ಲದವರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹವರ ಪರವಾಗಿ ಸಂಘ ಸಂಸ್ಥೆಗಳು ನಿಲ್ಲಬೇಕು. ಅಂತಹ ನೊಂದವರ ಪರವಾಗಿ ಸಾಂತ್ವನ ಕೇಂದ್ರಗಳು ಹಾಗೂ ಸಂಘ ಸಂಸ್ಥೆಗಳು ಇವೆ ಎಂಬುದನ್ನು ತಿಳಿಸಬೇಕು ಎಂದರು.
ಗೀತಾ ನಾಗೇಶ್ ಮಾತನಾಡಿ ಹಾಸ್ಟೆಲ್‌ಗಳು ಸೇರಿದಂತೆ ಸಮಾಜದಲ್ಲಿ ವಿವಿಧ ಪ್ರದೇಶಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂಬುದನ್ನು ಇತ್ತೀಚಿನ ಕೆಲವು ಬೆಳವಣಿಗೆಗಳು ತೋರಿಸಿಕೊಟ್ಟಿವೆ. ಇವುಗಳ ವಿರುದ್ಧ ಜಾಗೃತರಾಗಬೇಕು ಎಂದರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ನಿವೃತ್ತ ಸಂರಕ್ಷಣಾಧಿಕಾರಿ ಜಯಲಕ್ಷ್ಮ ಮಾತನಾಡಿ ಕುಟುಂಬದೊಳಗೆ ಕೆಲವು ಸಂದರ್ಭಗಳಲ್ಲಿ ಮಹಿಳೆ ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ, ನ್ಯಾಯ ದೊರಕಿಸಿಕೊಳ್ಳಲು ಆಕೆ ಎಷ್ಟು ಕಷ್ಟ ಪಡಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
ರಾಜೇಶ್ವರಿ ಚಂದ್ರಶೇಖರ್, ಪಾರ್ವತಮ್ಮ, ಗಂಗಲಕ್ಷ್ಮಿ ಪ್ರಹ್ಲಾದ ಇತರರು ಮಾತನಾಡಿದರು. ಸಾಂತ್ವನ ಕೇಂದ್ರದ ಸಮಾ ಲೋಚಕಿ ರಾಧಮ್ಮ ಇತರರು ಉಪಸ್ಥಿತರಿದ್ದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಕಾರ್ಯಕ್ರಮ ನಿರೂಪಿಸಿ ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಂರಕ್ಷಣಾಧಿಕಾರಿ ಜಯಲಕ್ಷ್ಮ ಅವರನ್ನು ಸನ್ಮಾನಿಸಲಾಯಿತು.