ಚಿಕ್ಕಬಳ್ಳಾಪುರ: ಜಿಲ್ಲೆ ರಚನೆ ಮಾಡಿದ್ದು ಹೊರತುಪಡಿಸಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಶೂನ್ಯ ಎಂದು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ದೂರಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ಈ ಹಿಂದೆ ಜೆಡಿಎಸ್‌ನಲ್ಲಿದ್ದ ಮುಖಂಡರು ಈಗ ಡಾ.ಕೆ. ಸುಧಾಕರ್ ಜತೆ ಇದ್ದೇವೆ. ಕುಮಾರ ಸ್ವಾಮಿ ಅವರು ಜಿಲ್ಲೆ ರಚನೆ ಮತ್ತು ಜಕ್ಕಲಮಡುಗು ನೀರು ಕೊಟ್ಟಿದ್ದು ಬಿಟ್ಟರೆ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನೂ ನೀಡಲಿಲ್ಲ. ಡಾ.ಕೆ. ಸುಧಾಕರ್ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿದರು. ಸುಧಾಕರ್ ಅವರು ಕೋವಿಡ್ ನಿರ್ವಹಣೆಗೆ ಮಾಡಿದ ಕೆಲಸಗಳನ್ನು ರಾಷ್ಟ್ರವೇ ಒಪ್ಪಿತು ಎಂದರು.
ಜನ ಸೇವೆ ಮಾಡುವವರ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆ ಆಗಲಿಲ್ಲ. ಡಿಸಿಸಿ ಬ್ಯಾಂಕ್ ಪ್ರತ್ಯೇಕವಾಗಲಿಲ್ಲ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಕುಮಾರ ಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದರು. ರಾಮನಗರದ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದರು. ಆದರೆ ಚಿಕ್ಕಬಳ್ಳಾಪುರ ಅಭಿವೃದ್ಧಿಯ ವಿಚಾರದಲ್ಲಿ ಅವರ ಕೊಡುಗೆ ಏನೂ ಇಲ್ಲ ಎಂದರು.
ಚುನಾವಣೆ ಕಾರಣದಿಂದ ಈಗ ಸುಧಾಕರ್ ಬಗ್ಗೆ ಬಾಯಿಗೆ ಬಂದ0ತೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಯಾವ ಸ್ಥಿತಿಯಲ್ಲಿ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅವರಿಗೆ ಏಜೆಂಟರು ಸಿಗುತ್ತಾರೊ ಇಲ್ಲವೊ ಎನ್ನುವ ಸ್ಥಿತಿ ಇದೆ ಎಂದು ಟೀಕಿಸಿದರು.
ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್ ಮಾತನಾಡಿ, ಕೈಲಾಗದಿದ್ದವನು ಮೈ ಪರಚಿಕೊಂಡ ಎನ್ನುವಂತೆ ಕುಮಾರಸ್ವಾಮಿ ಆಡುತ್ತಿದ್ದಾರೆ. ರಾಮನಗರವನ್ನು ಜಿಲ್ಲೆ ಮಾಡಬೇಕಾಗಿತ್ತು. ಅದರ ಜತೆ ಚಿಕ್ಕಬಳ್ಳಾಪುರ ಸೇರಿಸಿಕೊಂಡರು. ಜಕ್ಕಲಮಡುಗು ಜಲಾಶಯದ ಬಗ್ಗೆ ಮೊದಲು ಮಾತು ಆರಂಭಿಸಿದ್ದು ಆರ್.ಎಲ್. ಜಾಲಪ್ಪ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಭಾಗದ ಯಾವುದೇ ಮುಖಂಡರನ್ಬು ನಿಗಮ ಮಂಡಳಿಗೆ ನೇಮಕ ಮಾಡಲಿಲ್ಲ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಎಷ್ಟು ಅನುದಾನ, ರಾಮನಗರ ಜಿಲ್ಲೆಗೆ ಎಷ್ಟು ಅನುದಾನವನ್ನು ನೀಡಿದ್ದಾರೆ ಎನ್ನುವ ಬಗ್ಗೆ ಕುಮಾರಸ್ವಾಮಿ ಅವರು ಅಲೋಕಿಸಬೇಕು. ಸುಧಾಕರ್ ಅವರ ಅಭಿವೃದ್ಧಿ ಕಾರ್ಯ ಸಹಿಸದ ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಸುಬ್ಬಾರೆಡ್ಡಿ, ಅಶ್ವತ್ಥಪ್ಪ, ಕೃಷ್ಣಪ್ಪ, ನಾರಾಯಣ ಸ್ವಾಮಿ, ಫಯಾಜ್, ಇಂತಿಯಾಜ್, ಮುನಿಕೃಷ್ಣ ಇತರರು ಗೋಷ್ಠಿಯಲ್ಲಿ ಇದ್ದರು.